ಇದು ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ರಕ್ಷಿತ್ ಶೆಟ್ಟಿ ಬರೆದು ನಟಿಸಿ, ನಿರ್ದೇಶಿಸುತ್ತಿರುವ ಹೊಸ ಸಿನಿಮಾ. ಅಲ್ಲಿಗೆ ಎಂಟು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ. 

‘ಉಳಿದವರು ಕಂಡಂತೆ’ ಸಿನಿಮಾ ಪ್ರೇಮಿಗಳ ಮನಸ್ಸಲ್ಲಿ ಉಳಿದ ಸಿನಿಮಾ. ಆ ಸಿನಿಮಾದ ಗೊಂದಲ, ಪ್ರಶ್ನೆಗಳಿಗೆ ಈ ಸಿನಿಮಾದಲ್ಲಿ ಉತ್ತರ ಕೊಡುತ್ತೇನೆ ಎನ್ನುತ್ತಾರೆ ರಕ್ಷಿತ್ ಶೆಟ್ಟಿ. ಈ ಸಿನಿಮಾದಲ್ಲಿ ಎರಡು ಭಾಗ ಇದೆ. ಒಂದು ರಿಚ್ಚಿ ಪಾತ್ರದ ಕತೆ ಎಲ್ಲಿಂದ ಶುರುವಾಗುತ್ತದೆ ಅಲ್ಲಿಂದ ಉಳಿದವರು ಕಂಡಂತೆ ಸಿನಿಮಾ ಮುಗಿಯುವವರೆಗೆ. ಇನ್ನೊಂದು ಉಳಿದವರು ಕಂಡಂತೆ ನಂತರದ ಕತೆ.

ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದದ್ದು ತದನಂತರ. ‘ರಿಚರ್ಡ್ ಆ್ಯಂಟನಿ’ ಮುಂದಿನ ಅಲೆ. ನಿಮ್ಮ ಹೃದಯದ ದಡದಲ್ಲಿ ಜಾಗವಿರಲಿ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರೀಕರಣ ಮುಗಿಸಿ ‘ರಿಚರ್ಡ್ ಆ್ಯಂಟನಿ’ ಶುರುವಾಗುತ್ತದೆ. ಅದಕ್ಕೂ ಮೊದಲು ‘777 ಚಾರ್ಲಿ’ ಬಿಡುಗಡೆಯಾಗುತ್ತದೆ. -ರಕ್ಷಿತ್ ಶೆಟ್ಟಿ

ಬಹುತೇಕರು ನಿರೀಕ್ಷಿಸುವ ಹಾಗೆ ರಿಚ್ಚಿ ವಾಪಸ್ ಬರುತ್ತಿದ್ದಾನೆ. ಅದನ್ನು ಹೇಳಲೆಂದೇ ರಕ್ಷಿತ್ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಟೀಸರ್‌ನಲ್ಲಿ ರಿಚ್ಚಿಯ ಸಮಾಧಿ, ಅಲ್ಲಿ ಕಡಲ ರಾಜನ ಬಗ್ಗೆ ಮಾತನಾಡುವ ಬಾಲು ಪಾತ್ರಧಾರಿ ಅಚ್ಯುತ, ಪರಲೋಕದ ರಾಯಭಾರಿಯಂತೆ, ರಿಚ್ಚಿಯ ಸಮಾಧಿಯನ್ನು ಕುಕ್ಕುತ್ತಾ ಆತನ ಮರು ಆಗಮನದ ಸಂದೇಶ ಸಾರುತ್ತಿರುವ ಕಾಗೆ, ಕೆಲವು ಕಂಡಿದ್ದು, ಕೆಲವು ಕಾಣದ್ದು, ಉಳಿದವು ಅಂತೆ ಕಂತೆಗಳು ಮತ್ತು ಇತರ ಸುಳ್ಳುಗಳು ಎಂಬ ಹೇಳಿಕೆ, ಜೊತೆಗೆ ಇದು ಉಳಿದವರು ಕಂಡಂತೆ ಚಿತ್ರದ ಹಿಂದು ಮುಂದಿನ ಕತೆ ಎಂಬ ಸಂದೇಶ. ಇವೆಲ್ಲ ರಿಚ್ಚಿಯ ಜೀವನದ ಮತ್ತೊಂದು ಅಧ್ಯಾಯವನ್ನು ತೆರೆದಿಡುವ ಹಿಂಟ್ ನೀಡುತ್ತವೆ.

'ನನ್ನ ಕೆಲಸ ಮಾತಾಡುತ್ತಿದೆ, ದ್ವೇಷ ಸಾಧನೆ ನನಗೆ ಬೇಕಿಲ್ಲ'

ವಿಜಯ್ ಕಿರಗಂದೂರು ನಿರ್ಮಾಣ, ಕರಮ್ ಚಾವ್ಲಾ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.