ಪುನೀತ್ ಮನೆಗೆ ಹೋಗಬೇಕಾದವ್ರು ತಪ್ಪಿ ರಾಘಣ್ಣನ ಮನೆಗೆ ಹೋದ್ವಿ, ಆಮೇಲೇನಾಯ್ತು ?
- ಗರುಡ ಗಮನ ವೃಷಭ ವಾಹನ ತಂಡದೊಂದಿಗೆ ಶೇರ್ ಚಾಟ್ - ಚಿಟ್ ಚಾಟ್
- ಅಪ್ಪು ಮನೆಗೆ ಹೋಗೋ ಬದಲು ಹೋಗಿದ್ದು ರಾಘಣ್ಣನ ಮನೆಗೆ, ನಂತರ ಏನಾಯ್ತ ?
ಸುಕನ್ಯಾ ಎನ್.ಆರ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ಶೇರ್ ಚಾಟ್ ಒಂದು ಎಂಬ ಸಾಮಾಜಿಕ ಜಾಲತಾಣವಾಗಿದ್ದು, ಕನ್ನಡ ಕಲಾವಿದರನ್ನು ಪ್ರೋತ್ಸಾಹಿಸುವ ಹಾಗೂ ಪ್ರೇಕ್ಷಕರ ಮತ್ತು ಕಲಾವಿದರ ನಡುವೆ ಸಂಬಂಧವನ್ನ ಗಟ್ಟಿ ಮಾಡುವ ಸಲುವಾಗಿ ಶೇರ್ ಚಾಟ್ ತಂಡವು ಉತ್ತಮ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ.
ಪ್ರತಿದಿನ ಶೇರ್ ಚಾಟ್ ಮುಖಾಂತರ ಪರೋಕ್ಷವಾಗಿ ಕಲಾವಿದರನ್ನು ಉತ್ತೇಜಿಸುತ್ತಾ ನವೀನ ಆಲೋಚನೆಗಳೊಂದಿಗೆ ಹಾಜರಾಗುತ್ತಿದೆ. ಈ ತಂಡದೊಂದಿಗೆ ಆರ್ ಜೆ ವಿಕ್ಕಿ ಅವರು ಕೈ ಜೋಡಿಸಿ ಕಾರ್ಯಕ್ರಮನ್ನು ನಿರೂಪಿಸುತ್ತಾ ಸಿನಿ ಪ್ರಿಯರಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನಟರ ಜೊತೆ ನೇರವಾಗಿ ಸಂವಹನ ನಡೆಸುವ ಅವಕಾಶ ರೂಪಿಸಿಕೊಟ್ಟಿದ್ದಾರೆ.
ನವೆಂಬರ್ 13 ರಂದು ಶೇರ್ ಚಾಟ್ ತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಅಭಿಮಾನಿ ಬಳಗವನ್ನೆ ಸೃಷ್ಠಿಸಿದ ನಟ ರಾಜ್ ಬಿ.ಶೆಟ್ಟಿ, ಅವರ ನಿರ್ದೇಶನದ ಹಾಗೂ ಅವರೇ ನಟಿಸಿದ 'ಗರುಡ ಗಮನ ವೃಷಭ ವಾಹನ' ಚಿತ್ರ ಇದೇ 19 ರಂದು ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಶೇರ್ ಚಾಟ್ ಮುಖಾಂತರ ಪ್ರೇಕ್ಷಕರೊಂದಿಗೆ ನೇರವಾಗಿ ಮಾತುಕಥೆ ನಡೆಸಿ ಅನುಭವ ಹಂಚಿಕೊಂಡರು.
ಗರುಡ ಗಮನ ವೃಷಭ ವಾಹನ ಟ್ರೇಲರ್ ನ ಹಿನ್ನಲೆ ಗಾಯನ ಇಂಗ್ಲೀಷ್ ಧ್ವನಿಯನ್ನ ಒಳಗೊಂಡಿದೆ ಯಾಕೆ ? ಈ ಯೋಚನೆ ಹೇಗೆ ಬಂತು?
ಪ್ರತಿಯೊಬ್ಬ ನಿರ್ದೇಶಕ ಸಿನಿಮಾ ಮಾಡಬೇಕಾದರೆ ಜನ ಸಿನಿಮಾದಲ್ಲಿ ನಿರೀಕ್ಷಿಸುವುದನ್ನ ಒಬ್ಬ ನಟನಾಗಿ ಹಾಗೂ ನಿರ್ದೇಶಕನಾಗಿ ಕೊಡಬೇಕು ಎಂಬ ಉದ್ದೇಶ ಹೊಂದಿರುತ್ತಾನೆ. ವ್ಯತಿರಿಕ್ತ ಹಾಗೂ ಪೂರಕ ಎರಡೂ ಒಂದಕ್ಕೊಂದು ವಿರುದ್ಧವಾಗಿದ್ದರೂ, ಜೊತೆಗೇ ಊಹಿಸಿಕೊಂಡಾಗ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಹಾಗಾಗಿ ಈ ಟ್ರೈಲರ್ ಮಾಡುವಾಗ ಕಾಣಿಸುವ ದೃಶ್ಯ ಸ್ಥಳೀಯವಾಗಿ ಕಂಡರೂ ಅದೆಲ್ಲವೂ ಬೆರೆತಾಗ ಒಳ್ಳೆ ಅನುಭವ ಕೊಡುತ್ತದೆ. ಆ ಅನುಭವವೇ ಈ ಸಿನಿಮಾ. ಹಾಗೆಯೇ ಸಿನಿಮಾದ ಅನುಭವವನ್ನೇ ಈ ಟ್ರೈಲರ್ ಒಳಗೊಂಡಿದೆ.
ಶಿವ ಪಾತ್ರ ರಾಜ್ ಅವರ ಮೇಲೆ ಬೀರಿದ ಪ್ರಭಾವವೇನು?
ನನ್ನನ್ನು ಮೊದಲ ಸಿನಿಮಾದಿಂದಲೂ ಕಂಡಂತಹ ಅನೇಕರಿಗೆ ನನ್ನಲ್ಲಿ ತಿಳಿದ ವಿಷಯಗಳು ನಗು ಹಾಗೂ ತಾಳ್ಮೆ. ಶಿವ ಪಾತ್ರದಲ್ಲಿ ನಟಿಸಿದ ನಂತರ ಚಿತ್ರೀಕರಣ ಮುಗಿದು ಎರಡು ತಿಂಗಳುಗಳಾದರೂ ಆ ಪಾತ್ರದಿಂದ ಹೊರ ಬಂದಿರಲಿಲ್ಲ.
ರಿಷಬ್ ಶೆಟ್ಟಿ ಅವರನ್ನು ಹರಿ ಪಾತ್ರಕೆ ಆಯ್ಕೆ ಮಾಡಲು ಕಾರಣವೇನು?
ಈ ಚಿತ್ರದಲ್ಲಿ ಬರುವ ಶಿವ ಪಾತ್ರದ ಹಾಗೆ ಹರಿ ಪಾತ್ರವೂ ಪ್ರಮುಖವಾದದ್ದು. ಬದಲಾವಣೆ ಮನುಷ್ಯ ಜೀವನದ ಒಂದು ತತ್ವ. ಹರಿಯು ಬದಲಾಗುತ್ತಾ ಇರುತ್ತಾನೆ. ಆ ಪಾತ್ರವೂ ಬದಲಾಗುತ್ತಾ ಇರುತ್ತದೆ. ಆದರೆ ಶಿವ ಬದಲಾಗುವುದೇ ಇಲ್ಲ. ರಿಷಬ್ ಶೆಟ್ಟಿ ಮುಖ ಯಾವ ಪಾತ್ರಕ್ಕೂ ಸೈ. ಎಲ್ಲಾ ಪಾತ್ರಗಳೂ ಅವರನ್ನ ಆವರಿಸಿಕೊಳ್ಳುತ್ತದೆ. ಈ ಕಾರಣಕ್ಕೆ ರಿಷಬ್'ನ ಆಯ್ಕೆ ಮಾಡಿದೆ.
ಪ್ರೇಕ್ಷಕರು ಕಂಡಂತಹ ರಾಜ್ ಹಲವಾರು ಚಿತ್ರಗಳಲ್ಲಿ ಮೃದು ಸ್ವಭಾವದ ವ್ಯಕ್ತಿಯಾಗಿ ನಟಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ವಿರುದ್ಧವಾಗಿದೆ ಯಾಕೆ?
ಒಬ್ಬ ಕಲಾವಿದ ತನ್ನನ್ನು ಎಲ್ಲ ಪಾತ್ರಗಳಿಗೂ ಅರ್ಪಿಸಿಕೊಂಡಿರುತ್ತಾನೆ. ಆಗ ಮಾತ್ರ ಕಲಾವಿದನಾಗಿದ್ದಕ್ಕೂ ಸಾರ್ಥಕ ಭಾವ ಮೂಡುವುದು. ಒಂದೇ ಪಾತ್ರಕ್ಕೆ ಸೀಮಿತನಾಗಿರಬಾರದು. ಕಲಾವಿದನಾದವನಿಗೆ ಎಲ್ಲಾ ಪಾತ್ರಗಳಲ್ಲೂ ಅಭಿನಯಿಸಲು ಸಾಧ್ಯವಿದೆ.
ಪುನೀತ್ ಅವರ ಜೊತೆ ಕಳೆದ ಕ್ಷಣಗಳ ಅನುಭವ?
ನಾನು ಕಂಡ ದೊಡ್ಮನೆ ಮಗನ ದೊಡ್ಡತನ, ಅವರು ನನ್ನ ಚಿತ್ರ ನೋಡಿ ಭೇಟಿ ಮಾಡಲು ಮನೆಗೆ ಕರೆದಿದ್ದರು. ನಾವು ಅಪ್ಪು ಮನೆಗೆ ಹೋಗುವ ಬದಲು ರಾಘವೇಂದ್ರ ರಾಜ್ ಕುಮಾರ್ ಅವರ ಮನೆಗೆ ಹೋಗಿದ್ದೆವು. ಯಾರು - ಏನು ಎಂದು ಏನನ್ನೂ ಕೇಳದೆ ಮೊದಲು ಕುಡಿಯಲು ಜ್ಯೂಸ್ ಕೊಟ್ಟರು. ಆನಂತರ ವಿಚಾರಿಸಿದರು. ಈ ಗುಣದಿಂದಲೇ ಕರ್ನಾಟಕದ ಜನ ಅವರನ್ನು ದೊಡ್ಮನೆ ಮಕ್ಕಳು ಎಂದು ಕರೆಯುತ್ತಾರೆ ಎಂಬುದನ್ನ ಕಣ್ಣಾರೆ ಕಂಡಿದ್ದೇನೆ. ಆನಂತರ ಪುನೀತ್ ಅವರ ಮನೆಗೆ ಹೋದೆವು. ಪ್ರೀತಿಯಿಂದ ಸ್ವಾಗತಿಸಿ, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಂದು ಮೊಟ್ಟೆಯ ಕಥೆ ಮೆಚ್ಚಿ ಚಿತ್ರವನ್ನ ಅವರೇ ಪ್ರಚಾರ ಮಾಡಿ ಪಿ.ಆರ್. ಕೆ ಬ್ಯಾನರ್ ಅಡಿಯಲ್ಲಿ ಮಾಯ ಬಜಾರ್ ಸಿನಿಮಾವನ್ನೂ ಮಾಡಿದ್ದಾರೆ. ಅಪ್ಪು ಇಲ್ಲ ಅಂತ ಎಂದಿಗೂ ಭಾವಿಸುವುದಿಲ್ಲ. ನಾವು ಮಾಡುವ ಸಿನಿಮಾಗಳಲ್ಲಿ ಅವರನ್ನು ಎಂದಿಗೂ ನೆನಪು ಮಾಡಿಕೊಳ್ಳುತ್ತೇವೆ.