ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’ ಚಿತ್ರದ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದೆ. ಮುಂಗಡ ಬುಕ್ಕಿಂಗ್ ಆರಂಭವಾಗಿದೆ.
ಏಪ್ರಿಲ್ 1ರಂದು ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರದ ಟ್ರೇಲರ್ ನೋಡಿಯೇ ಒಂದು ಒಳ್ಳೆಯ ಕತೆ ಇರುವ ಸಿನಿಮಾ ಇದು ಎಂದು ಈಗಾಗಲೇ ಅಪ್ಪು ಅಭಿಮಾನಿಗಳು ಹಾಗೂ ಪ್ರೇಕ್ಷಕರು ಬಲವಾಗಿ ನಂಬಿದ್ದಾರೆ. ಇವರ ನಂಬಿಕೆಯನ್ನು ಹುಸಿ ಮಾಡದಂತೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಕೂಡ ಚಿತ್ರವನ್ನು ಗಟ್ಟಿಕತೆಯ ಮೇಲೆ ರೂಪಿಸಿದ್ದಾರಂತೆ.
ಸಕ್ಕರೆ ನಾಡಲ್ಲಿ ಪುನೀತ್‌ಗೆ ಸಿಕ್ತು ಅಭಿಮಾನಿಗಳು ಅಪ್ಪುಗೆ!
ವಿಶೇಷ ಎಂದರೆ ರಾಜ್ಯದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳದಲ್ಲಿ ‘ಯುವರತ್ನ’ ತೆರೆಗೆ ಬರುತ್ತಿದೆ. ಜತೆಗೆ ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯಗಳಲ್ಲಿ 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಯುವರತ್ನ’ ಹೆಸರಿನಲ್ಲೇ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದ್ದೆ. ಎಸ್ ಎಸ್ ತಮನ್ ಸಂಗೀತ, ಪ್ರಕಾಶ್ ರೈ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು, ಡಾಲಿ ಧನಂಜಯ್ ಡೈಲಾಗ್‌ಗಳಿಂದ ಟಾಲಿವುಡ್‌ನಲ್ಲೂ ಚಿತ್ರದ ಮೇಲೆ ಸಾಕಷ್ಟುನಿರೀಕ್ಷೆಗಳು ಹುಟ್ಟಿಕೊಂಡಿವೆ. ಎರಡೂ ಭಾಷೆಗಳಲ್ಲಿ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಿನಿಮಾ ರಿಲೀಸ್‌ಗೆ ಚಿತ್ರಮಂದಿರಗಳು ಸಜ್ಜಾಗಿವೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹರಸಬೇಕೆಂದು ಕೋರುತ್ತೇನೆ. - ಸಂತೋಷ್ ಆನಂದರಾಮ್, ನಿರ್ದೇಶಕ
ಲಾಕ್‌ಡೌನ್ ನಂತರ ಬಿಡುಗಡೆಯಾಗುತ್ತಿರುವ ಮತ್ತೊಂದು ಬಿಗ್ ಬಜೆಟ್ ಸ್ಟಾರ್ ನಟನ ಸಿನಿಮಾ ಇದಾಗಿದ್ದು, ಈಗಾಗಲೇ ಬುಕ್ ಮೈ ಶೋ ಮೂಲಕ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ. ಮುಂಗಡ ಬುಕ್ಕಿಂಗ್‌ನಲ್ಲೂ ‘ಯುವರತ್ನ’ ಸಿನಿಮಾ ಒಂದು ಹೆಜ್ಜೆ ಮುಂದಿದೆ. ರಾಜ್ಯದಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಏಪ್ರಿಲ್ 1ರಂದು ಬೆಳಗ್ಗೆ 6 ಗಂಟೆಗೆ ಚಿತ್ರದ ಮೊದಲ ಶೋ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ‘ಚಿತ್ರಮಂದಿರಗಳು ಬುಕ್ಕಿಂಗ್ ಆಗುತ್ತಿವೆ. ರಾಜ್ಯದಲ್ಲಿ 10 ಜಿಲ್ಲೆಗಳಲ್ಲಿ ಯುವ ಸಂಭ್ರಮ ಮಾಡಿದ್ದು, ಟಾಲಿವುಡ್‌ನಲ್ಲೂ ಸಿನಿಮಾ ಪ್ರಚಾರ ಮಾಡಿರುವ ಕಾರಣಕ್ಕೆ ಚಿತ್ರದ ಮೇಲೆ ಸಾಕಷ್ಟುನಿರೀಕ್ಷೆ ಹುಟ್ಟಿಕೊಂಡಿದೆ. ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ನಮ್ಮ ನಿರೀಕ್ಷೆಯಂತೆ ಚಿತ್ರವನ್ನು ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ನೋಡಲಿದ್ದಾರೆ’ ಎಂದು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಭರವಸೆ ವ್ಯಕ್ತಪಡಿಸುತ್ತಾರೆ.
