James 2022: ಮಾ.17ರಂದು ಏಕಕಾಲಕ್ಕೆ 5 ಭಾಷೆಯಲ್ಲಿ ಪುನೀತ್ ಸಿನಿಮಾ ಬಿಡುಗಡೆ
ಪುನೀತ್ ರಾಜ್‌ಕುಮಾರ್ ನಟನೆಯ ಬಹು ನಿರೀಕ್ಷಿತ ‘ಜೇಮ್ಸ್’ ಚಿತ್ರ ಇದೇ ಮಾರ್ಚ್ 17ರಂದು ಏಕಕಾಲಕ್ಕೆ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ.
ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ಬಹು ನಿರೀಕ್ಷಿತ ‘ಜೇಮ್ಸ್’ (James) ಚಿತ್ರ ಇದೇ ಮಾರ್ಚ್ 17ರಂದು ಏಕಕಾಲಕ್ಕೆ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ. ಹೊರ ದೇಶಗಳಲ್ಲೂ ‘ಜೇಮ್ಸ್’ ದರ್ಶನ ಆಗುತ್ತಿದೆ. ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಪುನೀತ್ ಇಲ್ಲದ ಪತ್ರಿಕಾಗೋಷ್ಟಿ. ವೇದಿಕೆಗೆ ಬಂದವರಿಗೆಲ್ಲ ‘ಫ್ರೇಮ್‌ನಲ್ಲಿ ಯಾರೋ ಮಿಸ್ ಆಗಿದ್ದಾರಲ್ಲ’ ಎನ್ನುವ ಭಾವ ಕಾಡುತ್ತಿತ್ತು.
ಶಿವರಾಜ್‌ಕುಮಾರ್ (Shivarajkumar) ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ದೇಶಕ ಚೇತನ್ ಕುಮಾರ್ (Chetan Kumar), ನಿರ್ಮಾಪಕ ಕಿಶೋರ್ ಪತ್ತಿಕೊಂಡ (Kishore Pathikonda), ಕಲಾವಿದರಾದ ಚಿಕ್ಕಣ್ಣ, ತಿಲಕ್, ಗಿರಿ, ಸಾಹಸ ನಿರ್ದೇಶಕ ರವಿವರ್ಮ, ಸಂಗೀತ ನಿರ್ದೇಶಕ ಚರಣ್ ರಾಜ್, ಕಲಾ ನಿರ್ದೇಶಕ ರವಿ ಸಂತೇಹಕ್ಲು... ಹೀಗೆ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕರು ಅಲ್ಲಿದ್ದರು. ವೇದಿಕೆ ಮೇಲೆ ಮಗುವಿನಂತೆ ನಗುತ್ತಿರುವ ಪುನೀತ್ ರಾಜ್‌ಕುಮಾರ್ ಅವರ ಫೋಟೋ ಇತ್ತು.
‘ಚಿತ್ರದ ನಾಯಕನೇ ಇಲ್ಲದೆ ಸಿನಿಮಾ ಬಿಡುಗಡೆ ಸಂಭ್ರಮ ಯಾವ ಕಲಾವಿದನಿಗೂ ಬಾರದಿರಲಿ’ ಎಂದಿದ್ದು ಚಿಕ್ಕಣ್ಣ. ‘ನಾನು ಪುನೀತ್ ಅವರ ಅಭಿಮಾನಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದೇನೆ’ ಎಂದು ಹೇಳಿದ್ದು ಕಿಶೋರ್ ಪತ್ತಿಕೊಂಡ. ‘ಜೇಮ್ಸ್ ಚಿತ್ರದ ಮೂಲಕ ನಾನು ಒಬ್ಬ ಹೀರೋಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದೇನೆ ಎಂದುಕೊಂಡೆ. ಆಮೇಲೆ ಗೊತ್ತಾಗಿದ್ದು, ದೇವರಿಗೆ ಆ್ಯಕ್ಷನ್ ಕಟ್ ಹೇಳಿದ್ದೇನೆ’ ಎಂದು ಭಾವುಕರಾಗಿ ಮಾತನಾಡಿದ್ದು ನಿರ್ದೇಶಕ ಚೇತನ್ ಕುಮಾರ್.
James 2022: ಪುನೀತ್ ರಾಜ್‍ಕುಮಾರ್ ಪವರ್‌ಪ್ಯಾಕ್ಡ್ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್
ಅನಂತರ ಶಿವಣ್ಣ ಕೈಗೆ ಮೈಕು ಬಂತು. ‘ಜೇಮ್ಸ್ ಸಿನಿಮಾ ಚೆನ್ನಾಗಿದೆ. ಡಬ್ಬಿಂಗ್‌ಗೆ ನನ್ನ ಧ್ವನಿ ಬೇಡ, ಅಪ್ಪು ರೀತೀ ಮಾತನಾಡೋ ಮಿಮಿಕ್ರಿ ಕಲಾವಿದರನ್ನು ಕರೆಸಿ ಡಬ್ ಮಾಡಿಸಿದರೆ ಆ ಕಲಾವಿದನಿಗೂ ಜೀವನ ಆಗುತ್ತದೆ ಎಂದು ಹೇಳಿದ್ದೆ. ಆದರೆ, ಅವರಿಗೆ ಅಪ್ಪು ಧ್ವನಿಯ ಕಲಾವಿದ ಸಿಗಲಿಲ್ಲ. ಕೊನೆಗೆ ನಾನೇ ಡಬ್ ಮಾಡಿದ್ದೇನೆ. ಅಪ್ಪು ಧ್ವನಿ ಅಭಿಮಾನಿಗಳಿಗೆ ಮಿಸ್ ಆಗಿದೆ ಅನ್ನೋ ಕೊರತೆ ಕಾಡಬಹುದು. ಚಿತ್ರವನ್ನು ಪುನೀತ್ ಇಲ್ಲ ಎನ್ನುವ ಕರುಣೆಯಿಂದಲೂ ನೋಡಬೇಕಾಗಿಲ್ಲ. ಆ ರೀತಿಯ ಯಾವ ರಿಯಾಯಿತಿಯೂ ಈ ಚಿತ್ರಕ್ಕೆ ಬೇಡ. ಅಪ್ಪು ಇದ್ದಾಗ ಹೇಗೆ ಸಿನಿಮಾ ನೋಡುತ್ತಿದ್ದೀರಿ, ಅದೇ ರೀತಿ ನೋಡಿ. ನಿಮಗೆ ಖುಷಿ ಆಗುತ್ತದೆ. ನಾನು ಕಲಾವಿದನಾಗಿ, ಪುನೀತ್ ಅಣ್ಣನಾಗಿ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಲ್ಲುತ್ತೇನೆ’ ಎಂದರು ಶಿವರಾಜ್ ಕುಮಾರ್.
ಹೊಸಪೇಟೆಯಲ್ಲಿ ಟ್ರೇಡ್‌ಮಾರ್ಕ್ ಹಾಡು ರಿಲೀಸ್: ‘ಜೇಮ್ಸ್’ ಚಿತ್ರದ ಟ್ರೇಡ್‌ಮಾರ್ಕ್ ಹಾಡು (Trademark Song) ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಸ್ವಾಗತ ದೊರಕಿದೆ. ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯ (Hosapete) ವಾಲ್ಮೀಕಿ ವೃತ್ತದಲ್ಲಿ ಲಿರಿಕಲ್ ಟ್ರೆಂಡ್ ಮಾರ್ಕ್ ವಿಡಿಯೋ ಅದ್ದೂರಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ವಿಡಿಯೋ ವೀಕ್ಷಿಸಿ ಜಯಘೋಷ ಮೊಳಗಿಸಿದರು. ಪರದೆಯ ಮೇಲೆ ಅಪ್ಪು ಅವರನ್ನು ನೋಡಿ ಭಾವುಕರಾದ ಘಟನೆಯೂ ನಡೆಯಿತು. ಕಿಚಿಡಿ ವಿಶ್ವ, ಜೋಗಿ ತಾಯಪ್ಪ ಈ ಕಾರ್ಯಕ್ರಮ ಆಯೋಜಿಸಿದ್ದರು.
'ಇದು ಕೇವಲ ಹಾಡು ಮಾತ್ರವಲ್ಲ ಇಡೀ ಅಭಿಮಾನಿಗಳ ಧ್ವನಿ #PowerStarLoveSon' ಎಂದು ತೋರಿಸುವ ಮೂಲಕ ಹಾಡು ಶುರು ಮಾಡಿದ್ದಾರೆ. 'ಇವರ ಬಗ್ಗೆ ಇಂಟ್ರಡಕ್ಷನ್ ಬೇಕಾ? ಇವರ ಬಗ್ಗೆ ಇನ್ಫಾರ್ಮೇಷನ್ ಬೇಕಾ? ಎಲ್ಲಾ ಹೇಳ್ತೀನಿ ಸೌಂಡ್ ಜಾಸ್ತಿ ಮಾಡೋಲೇ' ಎಂದು ಹಾಡು ಶುರುವಾಗಿದೆ. ಈ ಹಾಡಿನಲ್ಲಿ ಪವರ್ ಸ್ಟಾರ್ ಖದರ್, ಮಾಸ್ ಮತ್ತು ಕ್ಲಾಸಿ ಗುಣಗಳ ಬಗ್ಗೆ ವಿವರಿಸಲಾಗಿದೆ. ಇದೊಂದು ರೀತಿಯ ಪಾಪ್ ಹಾಡಾಗಿದ್ದು ಅಪ್ಪು ನಗು ಮುಖ ಎಲ್ಲರ ಗಮನ ಸೆಳೆದಿದೆ.
James 2022: ಪುನೀತ್ ನಟನೆಯ 'ಜೇಮ್ಸ್' ಮತ್ತಷ್ಟು ಅಪ್‌ಡೇಟ್ಸ್
ಇನ್ನು 'ಜೇಮ್ಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಪುನೀತ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶರತ್ ಕುಮಾರ್, ಶ್ರೀಕಾಂತ್, ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಸೇರಿದಂತೆ ದೊಡ್ಡ ತಾರಬಳಗ ಈ ಚಿತ್ರಕ್ಕಿದ್ದು, ಸ್ವಾಮಿ ಜೆ ಗೌಡ ಕ್ಯಾಮರಾ ಕೈಚಳಕ, ಚರಣ್ ರಾಜ್ ಸಂಗೀತ ಸಂಯೋಜನೆಯಿದೆ. ಕಿಶೋರ್ ಪತ್ತಿಕೊಂಡ ಚಿತ್ರವನ್ನು ನಿರ್ಮಿಸಿದ್ದಾರೆ.