ರಾಜಕೀಯಕ್ಕೆ ಅತ್ತಿಗೆ ಗೀತಾ ಶಿವರಾಜ್‌ಕುಮಾರ್, ಏನ್ ಹೇಳಿದ್ರು ಪುನೀತ್ ರಾಜ್‌ಕುಮಾರ್!
geetha shivarajkumar and puneeth rajkumar ನಟ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಬಿವೈ ರಾಘವೇಂದ್ರ ಎದುರಾಳಿಯಾಗಿದ್ದಾರೆ.
ಬೆಂಗಳೂರು (ಏ.3): ರಾಜ್‌ಕುಮಾರ್ ರಾಜಕೀಯಕ್ಕೆ ಪ್ರವೇಶಿಸಿದ್ದರೆ, ಅವರು ಎಂದೋ ಕರ್ನಾಟಕದ ಸಿಎಂ ಆಗಿರುತ್ತಿದ್ದರು ಎನ್ನುವ ಮಾತುಗಳನ್ನು ಬಹಳ ಸಾರಿ ಕೇಳಿದ್ದೇವೆ. ಆದರೆ, ಅಭಿಮಾನಿಗಳನ್ನು ದೇವರೆಂದೇ ಕರೆದ ಡಾ.ರಾಜ್‌ಕುಮಾರ್ ರಾಜಕೀಯದಿಂದ ದೂರವೇ ಉಳಿದುಕೊಂಡಿದ್ದರು. ಅದೆಷ್ಟೇ ಒತ್ತಡ ಬಂದರೂ ರಾಜಕೀಯಕ್ಕೆ ಇಳಿಯುವ ಪ್ರಯತ್ನ ಮಾಡಿರಲಿಲ್ಲ. ಇನ್ನು ರಾಜ್‌ಕುಮಾರ್ ಅವರ ಮೂವರು ಪುತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಕೂಡ ರಾಜಕೀಯದಿಂದ ದೂರವೇ ಉಳಿದಿದ್ದರು. ಆದರೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ ಹಾಗೂ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಸಕ್ರಿಯ ರಾಜಕಾರಣದಲ್ಲಿದ್ದಾರೆ. 2014ರಲ್ಲಿ ಜೆಡಿಎಸ್ ಟಿಕೆಟ್‌ನಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಗೀತಾ ಶಿವರಾಜ್‌ಕುಮಾರ್ ಸೋಲು ಕಂಡಿದ್ದರು. ಈ ಬಾರಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇದರ ನಡುವೆ ರಾಜಕೀಯದಿಂದ ದೂರವುಳಿದ್ದ ರಾಜ್‌ಕುಮಾರ್ ಕುಟುಂಬದಲ್ಲೂ ಈಗ ರಾಜಕೀಯ ಚರ್ಚೆ ಆಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಪತ್ನಿಗೆ ಇತ್ತೀಚೆಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್ ಆಹ್ವಾನ ನೀಡಲಾಗಿತ್ತು. ಹಾಗೇನಾದರೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಪ್ಪಿದ್ದಲ್ಲಿ ಅವರು ರಾಜ್ಯಸಭಾ ಸದಸ್ಯರಾಗುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ, ರಾಜಕೀಯದಿಂದ ತಮ್ಮ ಕುಟುಂಬ ದೂರವೇ ಉಳಿದಿತ್ತು ಎನ್ನುವ ಕಾರಣ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಈ ಆಹ್ವಾನವನ್ನು ತಿರಸ್ಕರಿಸಿದ್ದರು.
ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ಗೀತಾ ಶಿವರಾಜ್‌ಕುಮಾರ್ ಅವರು ರಾಜಕೀಯಕ್ಕೆ ಬರುವ ಸುದ್ದಿಗಳ ನಡುವೆ ಅವರು ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದರು. ರಾಜಕೀಯಕ್ಕೆ ಗೀತಾ ಶಿವರಾಜ್‌ಕುಮಾರ್ ಅಂದರೆ ನಿಮ್ಮ ಅತ್ತಿಗೆ ಪ್ರವೇಶ ಪಡೆಯುತ್ತಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪುನೀತ್ ರಾಜ್‌ಕುಮಾರ್‌ಗೆ ಪ್ರಶ್ನೆ ಕೇಳಲಾಗಿತ್ತು.
ಈ ಹಂತದಲ್ಲಿ ಪುನೀತ್ ರಾಜ್‌ಕುಮಾರ್, 'ಅಭಿಪ್ರಾಯ ಕೊಡೋಕೆ ನಾನು ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿಲ್ಲ.ಬಟ್ ಆದರೂ, ಅತ್ತಿಗೆಯವರು ರಾಜಕೀಯಕ್ಕೆ ಇಳಿಯುತ್ತಿದ್ದಾರೆ. ಇದು ಅವರ ಕುಟುಂಬದ ವಿಚಾರ. ಮೊದಲನೆಯದಾಗಿ ನಾನು ಅವರಿಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡುತ್ತೇನೆ. ಇನ್ನೊಂದು ರೀತಿಯಲ್ಲಿ ಹೇಳಬೇಕು ಅಂದರೆ, ನಮ್ಮ ಕುಟುಂಬಕ್ಕೂ ರಾಜಕೀಯಕ್ಕೂ ತುಂಬಾ ದೂರ. ನಾನಂತೂ ಪಾಲಿಟಿಕ್ಸ್‌ಗೆ ಇಳಿಯೋದಿಲ್ಲ. ಸೋ ಅವರಿಚ್ಚೆಯಿಂದ ಅವರು ರಾಜಕೀಯಕ್ಕೆ ಇಳಿದಿದ್ದಾರೆ. ನೋ ಪ್ರಾಬ್ಲಮ್. ಐ ಥಿಂಕ್ ಇದು ಅವರ ವೈಯಕ್ತಿಕ ಆಯ್ಕೆ' ಎಂದು ಪುನೀತ್ ವಿನಮ್ರವಾಗಿಯೇ ಹೇಳಿದ್ದರು.
ವಿಚ್ಛೇದಿತ ನಿರ್ಮಾಪಕನ ಜೊತೆ ಪುನೀತ್ ರಾಜ್‌ಕುಮಾರ್ ಸಿನಿಮಾದ ನಟಿಯ ಮದುವೆ?
ಗೀತಾ ಶಿವರಾಜ್‌ಕುಮಾರ್ ರಾಜಕೀಯಕ್ಕೆ ಇಳಿದಿರುವುದರ ಬಗ್ಗೆ ಅವರ ಪತಿ ಶಿವರಾಜ್‌ಕುಮಾರ್ ಈಗಾಗಲೇ ಹಲವು ಸ್ಪಷ್ಟನೆಗಳನ್ನು ನೀಡಿದ್ದಾರೆ. ರಾಜಕೀಯ ಹಿನ್ನಲೆಯ ಕುಟುಂಬದಿಂದ ಬಂದಿರುವ ಗೀತಾ ಶಿವರಾಜ್‌ಕುಮಾರ್ ರಾಜಕೀಯಕ್ಕೆ ಇಳಿದಿದ್ದರಲ್ಲಿ ತಪ್ಪಿಲ್ಲ ಎಂದು ಮಾತನಾಡಿದ್ದರು. ಆದರೆ, ಈಗ ಪುನೀತ್ ರಾಜ್‌ಕುಮಾರ್ ಅವರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಗೀತಾ ಶಿವರಾಜ್‌ಕುಮಾರ್ ಅವರ ನಿರ್ಧಾರ ತಪ್ಪು ಎಂದು ಟೀಕೆ ಮಾಡಲಾಗುತ್ತಿದೆ. ಇತ್ತೀಚೆಗೆ ಬಿಜೆಪಿಯ ಮಾಜಿ ಶಾಸಕ ಹರತಾಳು ಹಾಲಪ್ಪ ಕೂಡ, ಗೀತಾ ಶಿವರಾಜ್‌ಕುಮಾರ್ ರಾಜಕೀಯಕ್ಕೆ ಇಳಿಯುವ ಮೂಲಕ ರಾಜ್‌ಕುಮಾರ್ ಕುಟುಂಬದ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದರು.
ಹೊಸ ಆಡಿ ಕ್ಯೂ7 ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಇದು ಅಪ್ಪು ನೆಚ್ಚಿನ ಕಾರು!