Asianet Suvarna News Asianet Suvarna News

ಉತ್ತರ ಕನ್ನಡದಲ್ಲಿ ಪುನೀತ್‌ ಹೆಜ್ಜೆ: ಫ್ಯಾನ್ಸ್‌ಗೆ ಬರಸಿಡಿಲಿನಂತಾದ ಅಪ್ಪು ಅಗಲಿಕೆ

*  ಉತ್ತರ ಕನ್ನಡ ಜಿಲ್ಲೆಯುದ್ದಕ್ಕೂ ಹೆಜ್ಜೆ ನೆನಪು ಹಸಿರಿರುವಾಗಲೆ ಪುನೀತ್‌ ಮರೆಯಾಗಿದ್ದಾರೆ
*  ದಾಂಡೇಲಿ, ಜೋಯಿಡಾ ಕಾಡಿನಲ್ಲಿ ಹೆಜ್ಜೆ ಹಾಕಿದ್ದ ಪುನೀತ್‌
*  ಶಿರಸಿ ಕಾಂಗ್ರೆಸ್‌ ಜಿಲ್ಲಾ​ಧ್ಯ​ಕ್ಷ​ರಿಗೆ ಆಪ್ತ​ನಾ​ಗಿದ್ದ ಪುನೀ​ತ್‌
 

Puneeth Rajkumar Huge Fan Follwers in Uttara Kannada grg
Author
Bengaluru, First Published Oct 30, 2021, 7:36 AM IST

ವಸಂತಕುಮಾರ್‌ ಕತಗಾಲ

ಕಾರವಾರ(ಅ.30): ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌, ಜೋಯಿಡಾದ ಕಗ್ಗಾಡಿನಲ್ಲಿ ಪಕ್ಷಿ ವೀಕ್ಷಣೆ, ಅಭಿಮಾನಿಯ ಮನೆಯಂಗಳದಲ್ಲಿ ಊಟ, ಸುಗ್ಗಿ ಕುಣಿತದ ತಂಡದೊಂದಿಗೆ ಸಂಭ್ರಮ. ಜಿಲ್ಲೆಯುದ್ದಕ್ಕೂ ಹೆಜ್ಜೆ ಹಾಕಿದ ನೆನಪು ಹಸಿರಿರುವಾಗಲೆ ಪುನೀತ್‌ ರಾಜಕುಮಾರ್‌(Puneeth Rajkumar) ಮರೆಯಾಗಿದ್ದಾರೆ.

ಜಿಲ್ಲೆಯುದ್ದಕ್ಕೂ ಅವರ ಅಭಿಮಾನಿಗಳಿದ್ದಾರೆ(Fans). ಅವರು ಬಂದಾಗ ಅವರೊಂದಿಗೆ ಸೆಲ್ಫಿ(Selfie), ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟವರಿದ್ದಾರೆ. ಅವರ ಬಂಧು ಬಳಗ ಇದೆ. ಅಪ್ಪು(Appu) ನಿಧನ ಎಲ್ಲರಿಗೂ ಬರಸಿಡಿಲೆರಗಿದಂತಾಗಿದೆ.

2020ರ ನವೆಂಬರ್‌ನಲ್ಲಿ ಸಾಕ್ಷ್ಯಚಿತ್ರಕ್ಕಾಗಿ ಆಗಮಿಸಿದ ಅವರು ದಾಂಡೇಲಿ(Dandeli), ಜೋಯಿಡಾ(Joida) ಕಾಡಿನಲ್ಲಿ(Forest) ಹೆಜ್ಜೆ ಹಾಕಿದ್ದಾರೆ. ಕಾಳಿ ನದಿಯ(Kali River) ಉಗಮ ಸ್ಥಾನ ಪಾತಾಗುಡಿ, ಡಿಗ್ಗಿ, ಡೇರಿಯಾ ಮತ್ತಿತರ ಕಡೆ ಚಾರಣ ಮಾಡಿದ್ದಾರೆ. ಅಲ್ಲಿನ ಜನರೊಂದಿಗೆ ಬೆರೆತಿದ್ದಾರೆ. ಕುಣಬಿ ಜನಾಂಗದ ಸುಗ್ಗಿ ಕುಣಿತದ ತಂಡದೊಂದಿಗೆ ನಿಂತು ಖುಷಿಪಟ್ಟಿದ್ದಾರೆ.

ಪುನೀತ್‌ಗೂ-ಹುಬ್ಳಿಗೂ ಅವಿನಾಭಾವ ನಂಟು: ಸಿದ್ಧಾರೂಢರ ಮೇಲೆ ಅಪ್ಪುಗೆ ಅಪಾರ ಭಕ್ತಿ

ನರಸಿಂಹ ಛಾಪಖಂಡ ಅವರ ಹನಿ ಪಾರ್ಕ್ಗೆ ಭೇಟಿ ನೀಡಿ ಜೇನುತುಪ್ಪವನ್ನು ಸವಿದಿದ್ದಾರೆ. 3-4 ಗಂಟೆಗಳ ಕಾಲ ಹಾರ್ನಬಿಲ್‌ಗಳನ್ನು ನೋಡುತ್ತ ತದೇಕಚಿತ್ತದಿಂದ ಕುಳಿತಿದ್ದರು. ಜೋಯಿಡಾ ಹಾಗೂ ದಾಂಡೇಲಿಯಲ್ಲಿ 10 ದಿನಗಳ ಕಾಲ ಹಾಕಿದ ಹೆಜ್ಜೆಗಳು, ಭೇಟಿಯಾದ ಜನರಿಗೆ ಲೆಕ್ಕವಿಲ್ಲ.

ತಮ್ಮ ಕಾಡುಮನೆಗೆ ಬಂದು ಹರ್ಬಲ್‌ ಟೀ ಕುಡಿದು, ಜೇನುತುಪ್ಪ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಜೋಯಿಡಾ, ದಾಂಡೇಲಿ ಕಾಡಿನ ಬಗ್ಗೆ ತುಂಬಾ ಪ್ರಶಂಸಿಸಿದ್ದರು. ಅವರು ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ ಎಂದು ಕಾಡುಮನೆ ಕಾಟೇಜ್‌ ಮಾಲೀಕ ನರಸಿಂಹ ಛಾಪಖಂಡ ಹೇಳುತ್ತಾರೆ.

ಡಾಕ್ಯುಮೆಂಟರಿಯೊಂದಕ್ಕಾಗಿ(Documentary) ಫೆ. 7, 2021ರಂದು ಮುರ್ಡೇಶ್ವರ(Murdeshwar) ಬಳಿಯ ನೇತ್ರಾಣಿ ದ್ವೀಪಕ್ಕೆ ಬಂದು ದಿನವಿಡಿ ಸ್ಕೂಬಾ ಡೈವಿಂಗ್‌, ಜಲಸಾಹಸ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಎರಡು ದಿನಗಳ ಕಾಲ ಮುರ್ಡೇಶ್ವರದಲ್ಲೇ ತಂಗಿದ್ದರು. ಮುರ್ಡೇಶ್ವರ ದೇವರಿಗೂ ಪೂಜೆ ಸಲ್ಲಿಸಿದ್ದರು. ನಮ್ಮ ರಾಜ್ಯದ ಹೆಮ್ಮೆಯ ಸ್ಕೂಬಾ ಡೈವಿಂಗ್‌ ತಾಣ ನೇತ್ರಾಣಿ ಎಂದು ನೇತ್ರಾಣಿ ಅಡ್ವೆಂಚರ್ಸ್‌ನ ಗಣೇಶ ಹರಿಕಂತ್ರ ಅವರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ್ದರು. ದೇವಾಲಯದ ಆಡಳಿತ ಮಂಡಳಿ ಆಗ ಪುನೀತ್‌ ಅವರನ್ನು ಗೌರವಿಸಿತ್ತು. ಉತ್ತರ ಕನ್ನಡದ(Uttara Kannada) ಕಾಡು, ಕಡಲು, ವನ್ಯಜೀವಿಗಳು, ಜನಾಂಗಗಳು, ದೇವಾಲಯಗಳು ಹೀಗೆ ಎಲ್ಲವುಗಳ ಬಗ್ಗೆ ಪುನೀತ್‌ ರಾಜಕುಮಾರ್‌ ಒಲವಿತ್ತು. ಇಲ್ಲಿನ ಮಧುರ ಕ್ಷಣಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದರು.

'ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ನಮನ ಹೋಗಿ ಬನ್ನಿ' ಭಟ್ಟರ ಸಾಲು

ಮುರ್ಡೇಶ್ವರಕ್ಕೆ 8 ತಿಂಗಳ ಹಿಂದೆ ಆಗಮಿಸಿದ್ದಾಗ ನಮ್ಮ ಮನೆಯಿಂದ ಊಟ, ತಿಂಡಿ ಕೊಂಡೊಯ್ದಿದ್ದೆ. ಖುಷಿ ಖುಷಿಯಿಂದ ಮಾತನಾಡಿ ಬಂದೆ. ಅದೇ ನಮ್ಮಿಬ್ಬರ ಕೊನೆಯ ಭೇಟಿಯಾಗಲಿದೆ ಅಂದುಕೊಂಡಿರಲಿಲ್ಲ. ಎರಡು ವರ್ಷಗಳ ಹಿಂದೆ ನಮ್ಮ ಮನೆಗೆ ಆಗಮಿಸಿದ್ದರು. ಅವರ ನಿಧನದಿಂದ ತುಂಬ ನೋವಾಗಿದೆ ಎಂದು ಪುನೀತ್‌ ರಾಜಕುಮಾರ್‌ ಅವರ ಸಂಬಂಧಿ ಭೀಮಣ್ಣ ನಾಯ್ಕ ತಿಳಿಸಿದ್ದಾರೆ. 

ಶಿರಸಿ ಕಾಂಗ್ರೆಸ್‌ ಜಿಲ್ಲಾ​ಧ್ಯ​ಕ್ಷ​ರಿಗೆ ಆಪ್ತ​ನಾ​ಗಿದ್ದ ಪುನೀ​ತ್‌

ಶುಕ್ರವಾರ ನಿಧನ ಹೊಂದಿದ ಖ್ಯಾತ ನಟ ಪುನೀತ್‌ ರಾಜ್‌ ಕುಮಾರ್‌ ಅವರಿಕೆ ಕಾಂಗ್ರೆಸ್‌(Congress) ಜಿಲ್ಲಾಧ್ಯಕ್ಷ, ನಗರದ ಭೀಮಣ್ಣ ನಾಯ್ಕ ಅವರ ಕುಟುಂಬ ಆಪ್ತವಾಗಿತ್ತು.

ನಟ ಶಿವರಾಜ್‌ ಕುಮಾರ್‌(Shivarajkumar) ಅವರಿಗೆ ಭೀಮಣ್ಣ ನಾಯ್ಕ ಸಂಬಂಧಿಯೂ ಹೌದು. ಹೀಗಾಗಿ, ಭೀಮಣ್ಣ ಕುಟುಂಬಕ್ಕೆ ಪುನೀತ್‌ ರಾಜ್‌ಕುಮಾರ್‌ ಅವರ ಬಳಕೆ ಇತ್ತು. ಅಲ್ಲದೇ, ಯಲ್ಲಾಪುರ ರಸ್ತೆಯಲ್ಲಿ ಭೀಮಣ್ಣ ನಾಯ್ಕ ನಿರ್ಮಿಸುತ್ತಿರುವ ನೂತನ ಹೋಟೆಲ್‌ ಉದ್ಘಾಟನೆ ಪುನೀತ್‌ ಅವರಿಂದಲೇ ಮಾಡಿಸಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ.

ಪುನೀತ್‌ ನಿಧ​ನಕ್ಕೆ ಸಚಿವ ಶಿವ​ರಾಮ ಹೆಬ್ಬಾರ ಸಂತಾ​ಪ

ಕನ್ನಡ ಚಿತ್ರರಂಗದ ಖ್ಯಾತ ಪ್ರತಿಭಾವಂತ ಯುವ ನಾಯಕ ನಟ, ಕನ್ನಡಿಗರ ಕಣ್ಮಣಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಗಲಿಕೆಯ ವಿಷಯ ತಿಳಿದು ಮನಸ್ಸಿಗೆ ಅತೀವ ನೋವುಂಟಾಗಿದೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಮೇರು ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕೆಯಿಂದಾಗಿ ಕನ್ನಡ ನಾಡಿಗೆ ಹಾಗೂ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಅಭಿಮಾನಿಗಳ ಪ್ರೀತಿಯ ಅಪ್ಪು ನೇತ್ರದಾನ ಮಾಡುವ ಮೂಲಕ ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬ ವರ್ಗದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಪ್ರಾರ್ಥಿಸಿದ್ದಾರೆ.

ಪುನೀತ್‌ ಅಗಲಿಕೆಗೆ ಶಾಸಕಿ ರೂಪಾಲಿ ನಾಯ್ಕ ಸಂತಾಪ

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಕಾಲಿಕವಾಗಿ ನಿಧನರಾಗಿರುವುದು ತೀವ್ರ ನೋವಿಗೆ ಕಾರಣವಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ(Roopali Naik) ಸಂತಾಪ(Condolences) ಸೂಚಿಸಿದ್ದಾರೆ.
ಅವರ ಅಗಲುವಿಕೆಯಿಂದ ನಮ್ಮ ನಾಡು, ಚಿತ್ರರಂಗಕ್ಕೆ ಅಪಾರ ಹಾನಿ ಉಂಟಾಗಿದೆ. ನಮ್ಮ ನೆಲ, ಜಲ, ನಾಡು, ನುಡಿಯ ಬಗ್ಗೆ ಅಪಾರ ಕಾಳಜಿ ಇರುವ ಅವರು ಈ ನಾಡಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios