Asianet Suvarna News Asianet Suvarna News

ಗುಳೇ ಹೋದ ಕಾರ್ಮಿಕರ ಮಕ್ಕಳ ಶಿಕ್ಷಣ ಸುಧಾರಣೆಗೆ ಅಪ್ಪು ನೆರವು

*  ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದಾಗ ಅಪ್ಪು ಪ್ರೋತ್ಸಾಹ 
*  ಧಾರವಾಡದ ತಹಸೀಲ್ದಾರ ರೇಣುಕಾ ಅಪ್ಪು ಮೆಲುಕು
*  ಪುನೀತ್ ನಿಧನಕ್ಕೆ ಶ್ರದ್ಧಾಂಜಲಿ
 

Puneeth Rajkumar Help to Migrant Workers Children Education grg
Author
Bengaluru, First Published Oct 30, 2021, 2:52 PM IST
  • Facebook
  • Twitter
  • Whatsapp

ಯಾದಗಿರಿ(ಅ.30):  ತೆರೆಯ ಮೇಲಷ್ಟೇ ಅಲ್ಲ, ತೆರೆಮರೆಯಲ್ಲೂ ಅಪ್ಪುವಿಗೆ ಬಡವರ ಕಾಳಜಿ ಸದಾ ಇದ್ದದ್ದೇ. ಕನ್ನಡದ ಕೋಟ್ಯಧಿಪತಿ(Kannadada Kotyadhipati) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಹುತೇಕ ಸ್ಪರ್ಧಾಳುಗಳು ಕೋಟ್ಯಧಿಪತಿಯಾಗದಿದ್ದರೂ, ಪುನೀತ್ ಅವರ ಆದರ್ಶಗಳ ಮೆಚ್ಚಿಕೊಂಡು ಅವರ ಮುಗ್ಧತೆಗೆ ಮಾರುಹೋಗಿದ್ದು ಸುಳ್ಳೇನಲ್ಲ. 

"

ಈಗಿನ ಕಲ್ಯಾಣ ಕರ್ನಾಟಕ(Kalyana Karnataka) ಭಾಗದ (ಹೈದರಾಬಾದ್ ಕರ್ನಾಟಕ ಪ್ರದೇಶ) ಹಿಂದುಳಿದ ಜಿಲ್ಲೆಗಳ ಬಗ್ಗೆ ಅಪ್ಪುವಿಗೆ ಅಪಾರ ಕಾಳಜಿಯಿತ್ತು ಅನ್ನೋದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಅದರಲ್ಲೂ, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ(Yadgir) ಜಿಲ್ಲೆಗಳಿಂದ ಮಹಾನಗರಗಳತ್ತ ದುಡಿಯಲು ಗುಳೇ ಹೋಗುತ್ತಿದ್ದವರ ಬಗ್ಗೆ, ಅಂತಹ ಕಾರ್ಮಿಕರ ಮಕ್ಕಳ ಶಿಕ್ಷಣದ ಬಗ್ಗೆ ಅಪ್ಪುವಿಗೆ(Puneeth Rajkumar) ಅಪಾರ ಕಕ್ಕುಲತೆಯಿತ್ತು.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಚಾಮನಾಳದ, ಸದ್ಯ ಧಾರವಾಡದ(Dharwad) ತಹಸೀಲ್ದಾರರಾಗಿರುವ ಕೆ.ಎ.ಎಸ್ ಅಧಿಕಾರಿ ರೇಣುಕಾ ಇಂತಹ ಪ್ರಸಂಗಗಳ ಬಗ್ಗೆ ತಿಳಿಸಿದಾಗ, ಡಾ. ರಾಜ್ ಕುಟುಂಬದ(Dr Rajkumar Family) ಕುಡಿ ಪುನೀತ್ ಅವರ ಬಗ್ಗೆ ಹೆಮ್ಮೆ ಇಮ್ಮಡಿಸುವುದರಲ್ಲಿ ಸಂದೇಹವೇ ಇಲ್ಲ. 

ಅಂತಿಮ ದರ್ಶನಕ್ಕೆ ಜನಸಂದಣಿ ಹೆಚ್ಚಳ : ಅಪ್ಪು ಅಂತ್ಯಕ್ರಿಯೆ ನಾಳೆ

2013 ರಲ್ಲಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ, ಅಂದು ಕೆ.ಎ.ಎಸ್.(KAS) ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ರೇಣುಕಾ ಅವರಿಗೆ ಅಪ್ಪು ಅಗಲಿಕೆ ನಂಬಲು ಸಾಧ್ಯವಾಗುತ್ತಿಲ್ಲವಂತೆ. ಬೆಳಿಗ್ಗೆ ಇಂತಹುದ್ದೊಂದು ಸುದ್ದಿ ಹಬ್ಬುತ್ತಲೇ, ಸದಾ ಬ್ರೇಕಿಂಗ್ ಎಂದು ತೋರಿಸುವ ಮಾಧ್ಯಮಗಳ ಈ ಸುದ್ದಿ ಸುಳ್ಳಾಗಲಿ ಎಂದು ರೇಣುಕಾ ಪ್ರಾರ್ಥಿಸಿದರಂತೆ. ಆದರೆ, ಕಹಿ ಸುದ್ದಿ ಬರುತ್ತಲೇ, ಸ್ಮೃತಿಪಟಲ ಹಿಂದಿನ ದಿನಗಳ ಜಾರಿತು. ತೆರೆಮರೆಯಲ್ಲಿ ಅಪ್ಪುವಿನ ಸತ್ಕಾರ್ಯಗಳು ನೆನಲಿಗೆ ಬಂದವು. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆಂದು ಆಯ್ಕೆಯಾಗಿದ್ದ ರೇಣುಕಾ, ತಾಯಿ ಹಾಗೂ ಕಾಕಾ ಅವರೊಡನೆ ಚೆನ್ನೈಗೆ ತೆರಳಿದ್ದರಂತೆ. ಯಾವುದೇ ಹಮ್ಮು ಬಿಮ್ಮು ಪ್ರದರ್ಶಿಸದೆ, ತಾನೊಬ್ಬ ಖ್ಯಾತ ನಟ ಎಂಬ ಅಹಂ ಇಲ್ಲದೆ ಸಾಮಾನ್ಯರೊಂದಿಗೆ ಸಾಮಾನ್ಯರಂತೆ ಬೆರೆತು ಮಾತನಾಡಿದ ಅಪ್ಪು ಎಲ್ಲರ ಮನಸೂರೆಗೊಂಡಿದ್ದರು. 

ಮಕ್ಕಳಿಗೆ(Children) ಚೆನ್ನಾಗಿ ಶಿಕ್ಷಣ(Education) ನೀಡಬೇಕು, ಶಾರ್ಪ್ ಆಗಿರೋ ಇಂಥಾ ಅದರಲ್ಲೂ ಹೆಣ್ಮಕ್ಕಳಿಗೆ ಓದಿಸಿ ಒಳ್ಳೆ ಶಿಕ್ಷಣ ಕೊಡಿಸಬೇಕು ಎಂದು ರೇಣುಕಾರ ತಾಯಿ ಹಾಗೂ ಕಾಕಾ ಅವರ ಎದುರು ಹೇಳಿದ್ದ ಅಪ್ಪು, ಶಿಕ್ಷಣದ ಕಾಳಜಿಯನ್ನು ವ್ಯಕ್ತಪಡಿಸಿದ್ದರಂತೆ.

ಸ್ಪರ್ಧೆಯಲ್ಲಿ 6 ಲಕ್ಷ ರು.ಗಳ ಗೆದ್ದ ರೇಣುಕಾ ಅವರಿಗೆ ಐಎಎಸ್ ಪರೀಕ್ಷೆ(IAS Exam) ಪಾಸಾಗುವಾಸೆ. ಈ 6 ಲಕ್ಷದಲ್ಲಿ ಪ್ರಪಂಚ ನೋಡೋಕಾಗೋದಿಲ್ಲ, ಐಎಎಸ್ ತರಬೇತಿ ಅಥವಾ ಹೆಚ್ಚಿನ ಶಿಕ್ಷಣಕ್ಕೆ ನೆರವು ಬೇಕಿದ್ದರೆ ಕೇಳಿ ಎಂದು ರೇಣುಕಾರೊಂದಿಗೆ ಮಾತನಾಡಿದ್ದ ಅಪ್ಪು, ಡೌನ್ ಟು ಅರ್ಥ್(Down to Earth) ಮನುಷ್ಯ ಅನ್ನೋದನ್ನು ಪ್ರೂವ್ ಮಾಡಿದಂತಿತ್ತು.

ಮೈಸೂರಿನ ಅವರ ಶಕ್ತಿಧಾಮದ ಮೂಲಕ ಉದ್ಯೋಗ(Job) ಅಥವಾ ಶಿಕ್ಷಣ ಬಯಸಿದವರಿಗೆ ನೆರವು(Help) ನೀಡುವ ಬಗ್ಗೆ ಅಪ್ಪು ಯಾವಾಗಲೂ ಹೇಳುತ್ತಿದ್ದರಂತೆ. ರಾಜ್ಯಕ್ಕೆ ಬೆಳಕು ನೀಡುವ (ಶಾಖೋತ್ಪನ್ನ ವಿದ್ಯುತ್ ಕೇಂದ್ರ) ರಾಯಚೂರು(Raichur)s ಹಾಗೂ ಸುತ್ತಮುತ್ತಲ ಭಾಗದಿಂದ ದುಡಿಯಲು ಗುಳೇ ಹೋಗುತ್ತಿರುವ ಕಾರ್ಮಿಕರ ಮಕ್ಕಳ ಶಿಕ್ಷಣ ಹಾಗೂ ಅವರ ಜೀವನೋಪಾಯದ ಬಗ್ಗೆ ಕಾಳಜಿ ವಹಿಸುತ್ತಿದ್ದ ಪುನೀತ್, ಅವರ ನೆರವಿಗೆ ಮುಂದಾಗುತ್ತಿದ್ದ ಬಗ್ಗೆ ತಹಸೀಲ್ದಾರ ರೇಣುಕಾ ಮೆಲುಕು ಹಾಕಿದರು.

ಕಲಬುರಗಿ ಪಂಚಪ್ರಾಣ ಅಂದಿದ್ದ ಪುನೀತ್: ಅಪ್ಪು ನೆನೆದು ಕಣ್ಣೀರಾದ ಅಭಿಮಾನಿಗಳು

ಇದಾದ ಕೆಲವು ವರ್ಷಗಳ ನಂತರವೂ ತಮ್ಮನ್ನು ಮರೆಯದ ಅಪ್ಪು ಅವರ ಮಾತುಗಳು, ಶಿಕ್ಷಣದ ಬಗ್ಗೆ ಅವರ ಆಸಕ್ತಿ ಕಂಡಾಗ ಜನಪರ ಕಾಳಜಿಗೆ ಹಿಡಿದ ಕನ್ನಡಿಯಂತಿತ್ತು ಅಂತಾರೆ ರೇಣುಕಾ. ಮುಗ್ಧ ಮನಸ್ಸಿನ, ತೆರೆಮ ಮೇಲಷ್ಟೇ ಅಲ್ಲ, ತೆರೆಮರೆಯಲ್ಲೂ ಬಡವರ ಕಾಳಜಿಗೆ ಸದಾ ಧುಮುಕುತ್ತಿದ್ದ ಪುನೀತ್ ರಾಜಕುಮಾರ್ ಅವರ ಅಗಲಿಕೆ ನಿಜಕ್ಕೂ ಜೀವನದುದ್ದಕ್ಕೂ ನೋವಾಗಿ ಕಾಡುತ್ತದೆ ಎನ್ನುವ ರೇಣುಕಾ ಅವರ ಮಾತುಗಳಲ್ಲಿ ದು:ಖ ಉಮ್ಮಳಿಸಿದಂತಿತ್ತು.

ಪುನೀತ್ ನಿಧನಕ್ಕೆ ಶ್ರದ್ಧಾಂಜಲಿ

ಹುಣಸಗಿ ಪಟ್ಟಣದಲ್ಲಿ ಪುನೀತ್ ರಾಜ್‌ಕುಮಾರ ಅಭಿಮಾನಿಗಳ ಬಳಗದಿಂದ ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕನ್ನಡ ಚಿತ್ರರಂಗದ ಧ್ರುವತಾರೆಯಂತಿದ್ದ ಪುನೀತ್ ರಾಜಕುಮಾರ್ ಅಗಲಿಕೆಯಿಂದ ನಾಡಿನ ಕೋಟ್ಯಂತರ ಅಭಿಮಾನಿಗಳಿಗೆ ಹಾಗೂ ನಾಡಿಗೆ ಸಹಿಸಿಕೊಳ್ಳಲಾಗದ ಅನಿರೀಕ್ಷಿತ ಆಘಾತ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಾವು ಸಂಭವಿಸಿರುವುದು ಇಡೀ ಚಿತ್ರರಂಗಕ್ಕೆ ಮತ್ತು ನಾಡಿನ ಜನತೆಗೆ ತುಂಬಲಾರದ ನಷ್ಟವಾಗಿದೆ. 

ಎಷ್ಟೇ ಎತ್ತರಕ್ಕೆ ಬೆಳೆದರೂ ಯಾವುದೇ ಗರ್ವ, ಅಹಂಕಾರ ಇಲ್ಲದೇ ಅವರ ತಂದೆಯವರ ಹಾದಿಯಲ್ಲಿಯೇ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸದಾ ಅಭಿರುಚಿಯ ಸಿನಿಮಾಗಳನ್ನು ಮಾಡಿದ್ದಾರೆ. ಅವರ ಅಗಲಿಕೆಯಿಂದ ಇಡೀ ಕರುನಾಡೇ ದುಃಖದ ಮಡುವಿನಲ್ಲಿ ಮುಳುಗಿದೆ. ಅವರ ಕುಟುಂಬಕ್ಕೆ ಹಾಗೂ ಅವರ ಕೋಟ್ಯಂತರ ಅಭಿಮಾನಿಗಳಿಗೆ ಆ ಭಗವಂತ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಮಹೇಶ ಸ್ಥಾವರಮಠ, ಮಂಜು ಬಳಿ, ಸಿದ್ದಣ್ಣ ಮೇಲಿನಮನಿ ಕಂಬನಿ ಮಿಡಿದರು. ಮಲ್ಲು, ಅಂಬರೇಶ ಹಿರೇಮಠ್, ಮಂಜು ದೊರೆ, ಸಿದ್ದು ಬಳಿ, ರಾಜು ಬಳಿ, ವಿಶ್ವನಾಥ ಬಳಿ, ಗೌಡಪ್ಪಗೌಡ ಬಡಗೇರಾ, ರಾಘುಗೌಡ, ಮೌನೇಶ ಸೇರಿದಂತೆ ಇತರರಿದ್ದರು.
 

Follow Us:
Download App:
  • android
  • ios