ವರನಟ ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಆಶಯದಂತೆ ಶುರುವಾದದ್ದು 'ಶಕ್ತಿಧಾಮ'. ಇಂಥ 'ಶಕ್ತಿಧಾಮ'ದ ಹೆಣ್ಣು ಮಕ್ಕಳಿಗಾಗಿಯೇ ಒಂದು ಶಾಲೆಯನ್ನು ಆರಂಭಿಸಬೇಕು ಎಂಬುದು 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್‌ ಕನಸಾಗಿತ್ತು. 

ವರನಟ ಡಾ. ರಾಜ್‌ಕುಮಾರ್ (Dr Rajkumar) ಮತ್ತು ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಅವರ ಆಶಯದಂತೆ ಶುರುವಾದದ್ದು 'ಶಕ್ತಿಧಾಮ'. ಸಾವಿರಾರು ಮಹಿಳೆಯರಿಗೆ ಆಶ್ರಯ ನೀಡಿ, ಅವರನ್ನು ಸಮಾಜದಲ್ಲಿ ಸಶಕ್ತರನ್ನಾಗಿ ಮಾಡಿದೆ ಈ 'ಶಕ್ತಿಧಾಮ' (Shakthidhama). ಮಹಿಳೆಯರ ಪುನರ್ವಸತಿ ಹಾಗೂ ಅಭಿವೃದ್ದಿ ಕೇಂದ್ರದಲ್ಲಿ ಬಡಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ವಿದ್ಯಾಭ್ಯಾಸದ ಜೊತೆ ವಸತಿ, ಊಟವನ್ನೂ ನೀಡಲಾಗುತ್ತಿತ್ತು. ಸುಮಾರು 150 ಅಧಿಕ ಹೆಣ್ಣು ಮಕ್ಕಳು ಈ ಶಕ್ತಿಧಾಮದಲ್ಲಿ ಇದ್ದಾರೆ. ಇಂಥ 'ಶಕ್ತಿಧಾಮ'ದ ಹೆಣ್ಣು ಮಕ್ಕಳಿಗಾಗಿಯೇ ಒಂದು ಶಾಲೆಯನ್ನು ಆರಂಭಿಸಬೇಕು ಎಂಬುದು 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್‌ (Puneeth Rajkumar) ಕನಸಾಗಿತ್ತು. 

ಆ ಕನಸನ್ನು ನನಸು ಮಾಡುವ ಹಾದಿಯಲ್ಲಿ ಇರುವಾಗಲೇ ಅವರು ನಮ್ಮನ್ನು ಅಗಲಿದರು. ಇದೀಗ ಪುನೀತ್ ಕನಸು ನನಸಾಗುವ ಸಮಯ ಬಂದಿದೆ. ಈ ವರ್ಷವೇ ಮೈಸೂರಿನಲ್ಲಿರುವ 'ಶಕ್ತಿಧಾಮ'ದಲ್ಲಿ ಶಾಲೆಯೊಂದು ತಲೆ ಎತ್ತಲಿದೆ. ಹೌದು! ಮೈಸೂರಿನಲ್ಲಿರುವ ಶಕ್ತಿಧಾಮದಲ್ಲಿ ಒಂದು ಶಾಲೆ ನಿರ್ಮಾಣ ಆಗಬೇಕು ಎಂದು ಪುನೀತ್ ರಾಜ್‌ಕುಮಾರ್ ಬಯಸಿದ್ದರು. ಡಾ.ರಾಜ್‌ಕುಮಾರ್ ಕುಟುಂಬ ನೋಡಿಕೊಳ್ಳುತ್ತಿದ್ದ ಈ ಶಕ್ತಿಧಾಮದಲ್ಲಿ ಶಾಲೆಯೊಂದು ಇದೀಗ ನಿರ್ಮಾಣಗೊಳ್ಳಲಿದ್ದು, ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಮಂಡಿಸಿದ ಬಜೆಟ್‌ನಲ್ಲಿ (Budget) ಶಕ್ತಿಧಾಮದಲ್ಲಿ ಶಾಲೆ ನಿರ್ಮಿಸಲು ಹಣಹಾಸಿನ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅತೀ ಶೀಘ್ರದಲ್ಲಿಯೇ ಅಪ್ಪು ಬಯಕೆಯಂತೆಯೇ 'ಶಕ್ತಿಧಾಮ'ದಲ್ಲಿ ಶಾಲೆಯೊಂದು ನಿರ್ಮಾಣಗೊಳ್ಳಲಿದೆ.

James 2022: ಮಾ.17ರಂದು ಏಕಕಾಲಕ್ಕೆ 5 ಭಾಷೆಯಲ್ಲಿ ಪುನೀತ್‌ ಸಿನಿಮಾ ಬಿಡುಗಡೆ

ಈ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಶಿವರಾಜ್‌ಕುಮಾರ್ (Shivarajkumar), 'ಶಕ್ತಿಧಾಮದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲು ಸರ್ಕಾರ ಮುಂದೆ ಬಂದಿರುವುದಕ್ಕೆ ಖುಷಿಯಾಗಿದೆ. ಶಕ್ತಿಧಾಮದಲ್ಲಿ ಈಗಾಗಲೇ ಜಾಗವಿದೆ. ನಮ್ಮ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಈ ಜಾಗವನ್ನು ಖರೀದಿ ಮಾಡಿದ್ದರು. ಸರ್ಕಾರದ ಈ ನಿರ್ಧಾರ ನಮಗೆ ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಮತ್ತಷ್ಟು ಶಕ್ತಿ ಕೊಟ್ಟಿದೆ' ಎಂದು ಶಿವಣ್ಣ ಟೈಮ್ ಆಫ್ ಇಂಡಿಯಾಗೆ ಹೇಳಿಕೆ ನೀಡಿದ್ದಾರೆ. ಇನ್ನು ಶಿವಣ್ಣ, ಅಪ್ಪು ನಿಧನದ ಬಳಿಕ ಶಿವರಾಜ್‌ಕುಮಾರ್ ಹಲವು ಬಾರಿ 'ಶಕ್ತಿಧಾಮ'ಕ್ಕೆ ಭೇಟಿ ನೀಡಿದ್ದು, ಅಲ್ಲಿನ ಮಕ್ಕಳೊಂದಿಗೆ ಆಟವಾಡಿದ್ದಾರೆ. ಶೂಟಿಂಗ್ ಸ್ಪಾಟ್‌ಗೂ ಕರೆದುಕೊಂಡು ಹೋಗಿದ್ದಾರೆ.



ಪಾರ್ವತಮ್ಮ ರಾಜ್‌ಕುಮಾರ್ ಅವರು ಅನಾಥ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆಂದೇ 1998ರಲ್ಲಿ ಈ ಶಕ್ತಿಧಾಮವನ್ನು ಸ್ಥಾಪಿಸಿದರು. ಇದೀಗ ಶಕ್ತಿಧಾಮಕ್ಕೆ 24 ವರ್ಷ ತುಂಬಿದ್ದು, ಇದೇ ಸಮಯದಲ್ಲಿ ಶಾಲೆಯು ಆರಂಭಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಶಾಲೆಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಸಹಾಯವು ಸಿಕ್ಕಿದೆ. ಪುನೀತ್ ರಾಜ್‌ಕುಮಾರ್ ಅವರು ಸಾಕಷ್ಟು ಧನ ಸಹಾಯ ಮಾಡಿದ್ದರು. ತಮ್ಮ ಸಂಭಾವನೆಯ ಒಂದಷ್ಟು ಭಾಗವನ್ನು ಶಕ್ತಿಧಾಮಕ್ಕೆ ನೀಡುತ್ತಿದ್ದರು. ಶಾಲೆ ಆರಂಭವಾದ ಮೇಲೆ ಶಕ್ತಿಧಾಮದ ಮಕ್ಕಳ ಜೊತೆಗೆ ಹೊರಗಿನ ಮಕ್ಕಳಿಗೂ ದಾಖಲಾತಿ ನೀಡುವ ಕುರಿತು ಚಿಂತನೆ ನಡೆಸಲಾಗಿದೆ.

BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್‌ ರಾಜ್‌ಕುಮಾರ್‌ ಸ್ಮರಣೆ

ಇನ್ನು ಪುನೀತ್ ರಾಜ್‌ಕುಮಾರ್ 'ಶಕ್ತಿಧಾಮ'ಕ್ಕೆ ತಮ್ಮದೇ ಆದಂತಹ ರೀತಿಯಲ್ಲಿ ಸಹಾಯ ಮಾಡಿದ್ದರು. ಕನ್ನಡದ ಕೋಟ್ಯಧಿಪತಿಯ ಮೊದಲ ಸರಣಿಯಲ್ಲಿ ಗೆದ್ದಿದ್ದ 18 ಲಕ್ಷ ಹಣವನ್ನು ಶಕ್ತಿಧಾಮಕ್ಕೆ ನೀಡಿದ್ದರು. ಪ್ರತಿವರ್ಷ ಶಕ್ತಿಧಾಮಕ್ಕೆ ತಮ್ಮ ಸಂಪಾದನೆಯಲ್ಲಿ ಇಂತಿಷ್ಟು ಹಣವನ್ನು ಮೀಸಲಿಡುತ್ತಿದ್ದರು. ಸದ್ಯ ಅಪ್ಪು ನಿಧನದ ಬಳಿಕ ಈಗ ಅವರು ಕಂಡ ಕನಸು ನನಸಾಗುತ್ತಿದ್ದು, ಶಾಲೆ ಕಟ್ಟಡ ಕಟ್ಟುವ ಕೆಲಸ ಅತೀ ಶೀಘ್ರದಲ್ಲಿಯೇ ಆರಂಭ ಆಗುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಶಕ್ತಿಧಾಮದ ಮಕ್ಕಳ ಜೊತೆ ಶಿವರಾಜ್‌ಕುಮಾರ್ ದಂಪತಿ ಸಾಕಷ್ಟು ಸಮಯ ಕಳೆದಿದ್ದರು. ನಂದಿ ಬೆಟ್ಟಕ್ಕೆ ಸ್ವತಃ ಶಿವರಾಜ್‌ಕುಮಾರ್ ದಂಪತಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.