ನಾನು ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ; ಜೀವನದ ಬಗ್ಗೆ ಅಪ್ಪು ಹೇಳಿದ್ದ ಮಾತು ಸಖತ್ ವೈರಲ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೀವನದ ಬಗ್ಗೆ ಹೇಳಿದ್ದ ಮಾತು ಮತ್ತೆ ವೈರಲ್ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪು ಶಾಶ್ವತ. ಅಪ್ಪು ದೈಹಿಕವಾಗಿ ಇಲ್ಲದಿದ್ದರೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಅಪ್ಪು ತಮ್ಮ ಸಾಮಾಜಿಕ ಕೆಲಸಗಳ ಮೂಲಕ, ಅವರ ನಡೆ, ನುಡಿ ಹಾಗೂ ಸಿನಿಮಾಗಳ ಮೂಲಕ ಕನ್ನಡಿಗರನ್ನು ಆವರಿಸಿಕೊಂಡಿದ್ದಾರೆ. ಸ್ಟಾರ್ ಮಗನಾಗಿದ್ದರೂ ಸ್ಟಾರ್ ಗಿರಿ ಪಕ್ಕಕ್ಕೆ ಇಟ್ಟು, ಶ್ರಮಿಸಿ, ಕಷ್ಟಪಟ್ಟು ಸ್ಟಾರ್ ಆಗಿ ಮೆರೆದವರು ಅಪ್ಪು. ಇತ್ತೀಚೆಗಷ್ಟೆ ಪವರ್ ಸ್ಟಾರ್ ಹುಟ್ಟುಹಬ್ಬ ಆಚರಿಸಲಾಯಿತು. ಅಪ್ಪು ಇಲ್ಲದೇ 2ನೇ ಜನ್ಮದಿನ ಆಚರಣೆ ಅದಾಗಿತ್ತು. ಬೇಸರದಲ್ಲೇ, ನೋವಿನಲ್ಲೇ ಅಭಿಮಾನಿಗಳು ಅಪ್ಪು ನೆನೆದು ಹುಟ್ಟುಹಬ್ಬ ಆಚರಿಸಿದರು. ರಕ್ತದಾನ, ಅನ್ನದಾನ ಮಾಡಿದರು.
ಪುನೀತ್ ರಾಜ್ ಕುಮಾರ್ ಫೋಟೋ, ವಿಡಿಯೋ ಶೇರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದರು. ಅಪ್ಪು ನೆನೆದು ಭಾವುಕರಾದರು. ಅಪ್ಪು ಅವರ ಅನೇಕ ವಿಡಿಯೋಗಳು ವೈರಲ್ ಆಗಿವೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಜೀವನದ ಬಗ್ಗೆ ಹೇಳಿದ್ದ ಮಾತು ಈಗ ಮತ್ತೆ ವೈರಲ್ ಆಗಿದೆ. ರಮೇಶ್ ಅರವಿಂದ್, 'ನಿಮ್ಮ ಜೀವನ ಹೇಗಿದೆ...' ಎಂದು ಕೇಳಿದ್ದಕ್ಕೆ ಅಪ್ಪು ಕೊಟ್ಟ ಉತ್ತರ ಅಭಿಮಾನಿಗಳ ಹೃದಯ ಗೆದ್ದಿತ್ತು. ಆ ಮಾತುಗಳು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಮತ್ತೆ ಮತ್ತೆ ಕೇಳಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ.
ಜೀವನದ ಬಗ್ಗೆ ಅಪ್ಪು ಹೇಳಿದ್ದು ಹೀಗೆ, 'ಅದ್ಭುತವಾಗಿದೆ ಸರ್. ಜೀವನ ಬರುವುದು ಒಂದೇ ಸಲ. ಕಡೆಯವರೆಗೂ ತುಂಬಾ ಖುಷಿಯಾಗಿ ಅನುಭವಿಸಿ. ನಮ್ಮ ಮೇಲೆ ಯಾಕೆ ಇಷ್ಟು ಪ್ರೀತಿ ವಿಶ್ವಾಸ ತೋರಿಸುತ್ತಾರೆ. ನಾವು ಯಾಕೆ ತೋರಿಸ್ತೀವಿ ಎಂದರೆ ಜೀವನ ಒಂದು ಕನ್ನಡಿ ಇದ್ದ ಹಾಗೆ, ನಾನು ಹೇಗೆ ಇರ್ತಿವೋ ಅದು ಹಾಗೆ ಇರುತ್ತದೆ. ನಾನು ನನ್ನ ಮನಸ್ಪೂರ್ತಿಯಾಗಿ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ' ಎಂದು ಹೇಳಿದ್ದರು. ಅಪ್ಪು ಅವರಿಂದ ಬಂದ ಈ ಮಾತುಗಳು ಪದೇ ಪದೇ ಕೇಳಬೇಕು ಎನಿಸುವಂತಿದೆ. ಅಪ್ಪು ಒಳ್ಳೆಯವರಿಗೂ ಕೆಟ್ಟವರಿಗೂ ಒಳ್ಳೆಯದನ್ನೇ ಬಯಸುತ್ತಿದ್ದರು. ಹಾಗಾಗಿಯೇ ಇಂದು ಅಭಿಮಾನಿಗಳು ಅವರನ್ನು ದೇವರಾಗಿ ಕಾಣುತ್ತಿದ್ದಾರೆ, ಪೂಜಿಸುತ್ತಿದ್ದಾರೆ, ಆರಾಧಿಸುತ್ತಾರೆ.
Puneeth Rajkumar; ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಿದ್ದೀನಿ; ಶಿವಣ್ಣ ಭಾವುಕ
ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅವರ ಸಮಾಧಿ ಬಳಿ ಅಪಾಸ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿದ್ದರು. ಸಮಾಧಿ ದರ್ಶನ ಪಡೆದು ಭಾವುಕರಾದರು. ಇನ್ನೂ ಕುಟುಂಬದವರು ಸಹ ಅಪ್ಪುಗೆ ಇಷ್ಟವಾದ ತಿನಿಸು ಇಟ್ಟು ಪೂಜೆ ಮಾಡಿದ್ದಾರೆ.ಇನ್ನೂ ವಿಶೇಷ ಎಂದರೆ ಹುಟ್ಟುಹಬ್ಬದ ದಿನ ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಯಿತು.
ಅಪ್ಪು ಕೊನೆಯದಾಗಿ ನಟಿಸಿದ್ದ ಗಂಧದ ಗುಡಿ ಸಾಕ್ಷ್ಯಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದು ಅಪ್ಪು ಕನಸಿನ ಚಿತ್ರವಾಗಿತ್ತು. ಪುನೀತ್ ನಿಧನದ ಬಳಿಕ ಈ ಸಾಕ್ಷ್ಯಚಿತ್ರ ರಿಲೀಸ್ ಆಗಿತ್ತು. ಅವರ ಮೊದಲ ಪುಣ್ಯತಿಥಿಗೂ ಒಂದು ದಿನ ಮುಂಚಿತವಾಗಿ ಚಿತ್ರಮಂದಿರಕ್ಕೆ ಬಂದಿತ್ತು. ಇದೀಗ ಅವರ ಹುಟ್ಟುಹಬ್ಬದ ಪ್ರಯುಕ್ತ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ‘ಗಂಧದ ಗುಡಿ’ಸ್ಟ್ರೀಮಿಂಗ್ ಆಗುತ್ತಿದೆ. ಇನ್ನು ಕೆಲವು ಚಿತ್ರಮಂದಿರಗಳಲ್ಲಿ ಅಪ್ಪು ನಟನೆಯ ಸೂಪರ್ ಹಿಟ್ ರಾಜಕುಮಾರ ಸಿನಿಮಾದ ಉಚಿತ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಅಭಿಮಾನಿಗಳು ಮತ್ತೊಮ್ಮೆ ಚಿತ್ರಮಂದಿರದಲ್ಲಿ ಅಪ್ಪು ಅವರನ್ನು ನೋಡಿ ಕಣ್ತುಂಬಿಕೊಂಡರು.