‘ಕಿರಾತಕ 2’ ಸಿನಿಮಾದ ಶೂಟಿಂಗ್‌ನ ಖರ್ಚು ವೆಚ್ಚಗಳನ್ನು ರಾಕಿಂಗ್‌ ಸ್ಟಾರ್‌ ಯಶ್‌ ಚಿತ್ರದ ನಿರ್ಮಾಪಕ ಜಯಣ್ಣ ಅವರಿಗೆ ಹಿಂತಿರುಗಿಸಿದ್ದಾರೆ. ತಮ್ಮಿಂದ ನಿರ್ಮಾಪಕರಿಗೆ ಅನ್ಯಾಯ ಆಗಬಾರದು ಎಂಬ ಅವರ ನಿಲುವಿಗೆ ಪ್ರಶಂಸೆ ವ್ಯಕ್ತವಾಗಿದೆ.

ಕಿರಾತಕ ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ಜಯಣ್ಣ, ‘ಯಶ್‌ ಕಿರಾತಕ 2 ಶೂಟಿಂಗ್‌ಗೆ ಖರ್ಚಾದ ಹಣಕ್ಕೆ ಎಕ್ಸ್‌ಟ್ರಾ ಹಣ ಸೇರಿಸಿ ಸೆಟಲ್‌ ಮಾಡಿದ್ದಾರೆ. ಕೆಜಿಎಫ್‌ ಸಿನಿಮಾ ಆರಂಭಕ್ಕೂ ಮೊದಲು 20 ದಿನಗಳ ಕಾಲ ಕಿರಾತಕ 2 ಶೂಟಿಂಗ್‌ ನಡೆದಿತ್ತು. ಆ ಬಳಿಕ ಅವರು ಕೆಜಿಎಫ್‌ನಲ್ಲಿ ಬ್ಯುಸಿ ಆದ ಕಾರಣ ಈ ಸಿನಿಮಾ ಶೂಟಿಂಗ್‌ಗೆ ಡೇಟ್ಸ್‌ ಹೊಂದಿಸಲು ಆಗಲಿಲ್ಲ. ಇದೀಗ ಕೆಜಿಎಫ್‌ 2 ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೂಟಿಂಗ್‌ ಮೊತ್ತಕ್ಕೆ ಇನ್ನೊಂದಿಷ್ಟುಹಣ ಸೇರಿಸಿ ವಾಪಾಸ್‌ ಮಾಡಿದ್ದಾರೆ. ಹಾಗಂತ ಇದು 13 ಕೋಟಿ ರು.ಗಳಷ್ಟುಬೃಹತ್‌ ಮೊತ್ತ ಅನ್ನೋದೆಲ್ಲ ಸುಳ್ಳು. 20 ದಿನದ ಶೂಟಿಂಗ್‌ಗೆ ಅಷ್ಟೆಲ್ಲ ಖರ್ಚಾಗೋದಿಲ್ಲ. ಅಲ್ಲದೇ ಯಶ್‌ ಅವರ ಬಳಿ ನಾನು ಇದೆಲ್ಲ ಬೇಡ, ನಿಮ್ಮಿಂದ ನಮಗೆ ಒಳ್ಳೆಯದಾಗಿದೆ ಅಂತಲೂ ಹೇಳಿದ್ದೆ. ಆದರೆ ಅವರೇ ನಿಮಗೆ ತೊಂದರೆ ಆಗೋದು ಬೇಡ ಅಂದು ಹಣ ಹಿಂದಿರುಗಿಸಿದ್ದಾರೆ’ ಎಂದರು.

‘ಯಶ್‌ ಹಣ ವಾಪಾಸ್‌ ಮಾಡಿದ ಮಾತ್ರಕ್ಕೆ ನಮ್ಮಿಬ್ಬರ ನಡುವಿನ ಬಾಂಧವ್ಯ ಹಾಳಾಗಿಲ್ಲ. ಅವರು ಕಿರಾತಕ 2 ಸಿನಿಮಾದಿಂದ ಆಚೆ ಹೋಗಿದ್ದಾರೆ ಎಂಬ ಅರ್ಥವೂ ಅಲ್ಲ. ಆದರೆ ಮಂಡ್ಯದ ನೇಟಿವಿಟಿ ಇರುವ ಈ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಚಿತ್ರವಾಗಿ ರೂಪಿಸುವುದು ಕಷ್ಟ. ಬೇರೆ ಭಾಷೆಗೆ ಡಬ್ಬಿಂಗ್‌ ಮಾಡಬಹುದಷ್ಟೇ. ಹೀಗಾಗಿ ಕಿರಾತಕ 2 ಸಿನಿಮಾದ ಸಾಧ್ಯಾಸಾಧ್ಯತೆ ಯಶ್‌ ಮೇಲೆ ನಿಂತಿದೆ. ಸದ್ಯ ಕಾಯುತ್ತಿದ್ದೇವೆ’ ಎಂದರು.

ಫೆಬ್ರವರಿ ಹೊತ್ತಿಗೆ ಶಿವಣ್ಣ-ರಿಷಬ್‌ ಸಿನಿಮಾ

‘ಶಿವಣ್ಣ-ರಿಷಬ್‌ ಕಾಂಬಿನೇಶನ್‌ನ ಹೊಸ ಸಿನಿಮಾದ ಟೈಟಲ್‌ ಶೀಘ್ರದಲ್ಲೇ ಘೋಷಣೆ ಆಗಲಿದೆ. ಜನವರಿ - ಫೆಬ್ರವರಿ ಹೊತ್ತಿಗೆ ಸಿನಿಮಾ ಸೆಟ್ಟೇರಲಿದೆ. ರಿಷಬ್‌ ಅವರ ‘ಕಾಂತಾರ’ ಸಿನಿಮಾ ಶೂಟಿಂಗ್‌ ಮುಗಿದ ಕೂಡಲೇ ಹೊಸ ಸಿನಿಮಾ ಶೂಟಿಂಗ್‌ ಶುರುವಾಗಲಿದೆ’ ಎಂದು ಜಯಣ್ಣ ಹೇಳಿದ್ದಾರೆ.