ನಟ ಪ್ರಕಾಶ್ ರಾಜ್ ತಮ್ಮ ಎರಡು ಮದುವೆಗಳ ಬಗ್ಗೆ ಎದ್ದಿರುವ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ತಾವು ಎಂದಿಗೂ ಹಿಂದೂಗಳ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಬ್ಬಿರುವ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಬೆಂಗಳೂರು: ನಟ ಪ್ರಕಾಶ್​ ರಾಜ್​ ಅವರಿಗೆ ಕಾಂಟ್ರವರ್ಸಿ ಮೂಲಕ ಫೇಮಸ್​ ಆಗುವುದು ಎಂದರೆ ಇನ್ನಿಲ್ಲದ ಖುಷಿ. ಸದಾ ಬಿಜೆಪಿ, ಕೇಂದ್ರ ಸರ್ಕಾರ, ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಲೇ ಇರುವಲ್ಲಿ ಇವರದ್ದು ಎತ್ತಿದ ಕೈ. ಹಿಂದೂಗಳ ವಿರುದ್ಧವೂ ಸಾಕಷ್ಟು ಚರ್ಚಾಸ್ಪದ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಇವರ ವಿರುದ್ಧ ಕೆಲವು ಕ್ರಿಮಿನಲ್​ ಕೇಸ್​ಗಳು ಕೂಡ ದಾಖಲಾಗಿವೆ. ಇವರ ಅಮ್ಮ ಮೃತಪಟ್ಟಾಗ ಅವರನ್ನು ಕ್ರೈಸ್ತ ಪದ್ಧತಿಯಂತೆ ಅಂತ್ಯಕ್ರಿಯೆ ಮಾಡಿದಾಗ, ಅವರು ಕ್ರೈಸ್ತರಾಗಿರುವ ಕಾರಣದಿಂದ ಹಿಂದೂಗಳ ವಿರುದ್ಧ ಮಾತನಾಡುತ್ತಿದ್ದಾರೆ ಎಂದೆಲ್ಲಾ ಚರ್ಚೆಯಾಗಿತ್ತು. ಹೀಗೆ ಒಂದಲ್ಲ, ಒಂದು ವಿಷಯದಲ್ಲಿ ಇವರು ಸದ್ದು ಮಾಡುತ್ತಲೇ ಇರುತ್ತಾರೆ.

ಇವರ ವಿರೋಧಿಗಳು ಇವರ ಎರಡೆರಡು ಮದುವೆಗಳ ಬಗ್ಗೆ ಸದಾ ಮಾತನಾಡುತ್ತಿರುವುದು ಇದ್ದೇ ಇದೆ. ಅಷ್ಟಕ್ಕೂ ಇದಾಗಲೇ ಕೆಲವು ಸೆಲೆಬ್ರಿಟಿಗಳು ಒಂದಕ್ಕಿಂತ ಹೆಚ್ಚು ಮದುವೆಯಾಗಿರುವುದು ಇದೆ. ಆದರೆ ಪ್ರಕಾಶ್​ ರಾಜ್​ (Prakash Raj) ಕಾಂಟ್ರವರ್ಸಿ ಮಾತನಾಡಿದಾಗಲೆಲ್ಲಾ ಇವರ ಮದುವೆಯನ್ನು ಎಳೆದು ತರಲಾಗುತ್ತದೆ. ಸದ್ಯ ಪ್ರಕಾಶ್ ರಾಜ್ ಮೂರು ಮಕ್ಕಳ ತಂದೆ. ಅವರು ತಮ್ಮ ಮೊದಲ ಪತ್ನಿ ಲಲಿತಾ ಕುಮಾರಿಗೆ ವಿಚ್ಛೇದನ ನೀಡಿದ ನಂತರ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರನ್ನು ಎರಡನೇ ಬಾರಿಗೆ ವಿವಾಹವಾದರು. 2009 ರಲ್ಲಿ ಪತ್ನಿಯಿಂದ ಬೇರ್ಪಟ್ಟ ಅವರು 2010 ರಲ್ಲಿ ತನಗಿಂತ 13 ವರ್ಷ ಚಿಕ್ಕವರಾದ ಪೋನಿ ವರ್ಮಾ ಅವರನ್ನು ವಿವಾಹವಾದರು. ಇಬ್ಬರಿಗೂ ವೇದಾಂತ ಎಂಬ ಮಗನಿದ್ದಾನೆ. ಹೀಗೆ ಒಟ್ಟೂ ಮೂವರು ಮಕ್ಕಳು.

ಪ್ರಕಾಶ್​ ರಾಜ್​ ಗರಂ

ಇದೀಗ ಇದರ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ವಲ್ಪ ಗರಂ ಆಗಿಯೇ ಮಾತನಾಡಿರುವ ಪ್ರಕಾಶ್​ ರಾಜ್​, ಹೌದು ನಾನು ಎರಡು ಮದ್ವೆಯಾಗಿದ್ದೇನೆ, ಏನಿವಾಗ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.ಮೊದನೆಯವಳ ಜೊತೆ 10 ವರ್ಷ ಸಂಸಾರ ಮಾಡಿದೆ. ಏಕೋ ಇಬ್ಬರ ನಡುವೆ ಹೊಂದಾಣಿಕೆ ಬರಲಿಲ್ಲ. ಅವಳನ್ನು ಕೇಳಿಯೇ ಬೇರೆಯಾಗಿದ್ದು, ನಂತರ ಇನ್ನೊಂದು ಮದುವೆಯಾದೆ. ಮೊದಲನೆಯ ಮದುವೆಯಿಂದ ಹುಟ್ಟಿರುವ ಇಬ್ಬರು ಹೆಣ್ಣುಮಕ್ಕಳು ಮತ್ತು ಎರಡನೆಯ ಮದ್ವೆಯಿಂದ ಹುಟ್ಟಿರೋ ಗಂಡು ಮಗ ಎಲ್ಲರೂ ಚೆನ್ನಾಗಿ ಆಡುತ್ತಾರೆ. ಎಲ್ಲರೂ ಎಲ್ಲರ ಬಳಿ ಹೋಗಿ ಬರುತ್ತಾರೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಹಾಗೆ ಮಾತೇ ಆಡಿಲ್ಲ

ನಾನು ಅಮ್ಮನ ವಿಧಿವಿಧಾನವನ್ನು ಕ್ರೈಸ್ತ ಪದ್ಧತಿಯಂತೆ ಮಾಡಿದಾಗ, ನಾನು ಹಿಂದೂ ವಿರೋಧಿ ಎಂದರು.ನಾನ್ಯಾವಾಗ ಹಿಂದೂಗಳ ವಿರುದ್ಧ ಮಾತನಾಡಿದ್ದೇನೆ, ಸಾಕ್ಷಿ ತಂದು ತೋರಿಸಿ ನೋಡೋಣ ಎಂದು ತಿರುಗೇಟು ನೀಡಿರೋ ಪ್ರಕಾಶ್​ ರಾಜ್​, ನಾನು ಯಾವತ್ತೂ ಹಿಂದೂಗಳ ವಿರುದ್ಧ ಮಾತನಾಡಿಯೇ ಇಲ್ಲ. ಸುಮ್ಮನೇ ಹುಟ್ಟುಹಾಕುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.