ಬೆಂಗಳೂರು (ಮಾ. 13):  ಕೋಡ್ಲು ರಾಮಕೃಷ್ಣ ನಿರ್ದೇಶನದ 90ರ ದಶಕದ ಸೂಪರ್‌ಹಿಟ್‌ ಚಿತ್ರ ‘ಉದ್ಭವ’. ಅನಂತ್‌ನಾಗ್‌ ನಟನೆಯ ಆ ಚಿತ್ರ ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾಗಳಲ್ಲಿ ಒಂದು. ಈಗ ಉದ್ಭವ ಚಿತ್ರದ ಎರಡನೇ ಭಾಗ ಶುರುವಾಗುತ್ತಿದೆ. ಆ ಚಿತ್ರಕ್ಕೆ ‘ಮತ್ತೆ ಉದ್ಭವ’ ಎಂದು ಹೆಸರಿಡಲಾಗಿದೆ. ಪ್ರಜ್ವಲ್‌ ದೇವರಾಜ್‌ ನಾಯಕರಾಗಿ ನಟಿಸುತ್ತಿದ್ದಾರೆ.

’ಕೆಜಿಎಫ್’ ದಾಖಲೆ ಮುರಿಯಲು ಸಿದ್ಧವಾಗಿದೆ ’ಯಜಮಾನ’

‘ಉದ್ಭವ’ ಬಿವಿ ವೈಕುಂಠರಾಜು ಅವರ ಕತೆಯನ್ನು ಆಧರಿಸಿದ ಸಿನಿಮಾ. ನಾಗತಿಹಳ್ಳಿ ಚಂದ್ರಶೇಖರ್‌ ಚಿತ್ರಕತೆ, ಸಂಭಾಷಣೆ ಬರೆದಿದ್ದರು. ಆ ಚಿತ್ರ ಸೂಪರ್‌ ಡ್ಯೂಪರ್‌ ಹಿಟ್‌ ಆಗಿತ್ತು. ಈಗ ಕೋಡ್ಲು ರಾಮಕೃಷ್ಣ ಆ ಚಿತ್ರದ ಸೀಕ್ವೆಲ್‌ ಶುರು ಮಾಡಿದ್ದಾರೆ. ‘ಉದ್ಭವ’ ಚಿತ್ರದಲ್ಲಿ ಅನಂತ್‌ನಾಗ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

‘ಮತ್ತೆ ಉದ್ಭವ’ ಚಿತ್ರದಲ್ಲಿ ಅನಂತ್‌ನಾಗ್‌ ಪಾತ್ರದ ಮಗನ ಪಾತ್ರದಲ್ಲಿ ಪ್ರಜ್ವಲ್‌ ನಟಿಸುತ್ತಿದ್ದಾರೆ. ಅನಂತ್‌ನಾಗ್‌ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅದಕ್ಕೆ ಬದಲಾಗಿ ಅನಂತ್‌ನಾಗ್‌ ಪಾತ್ರದಲ್ಲಿ ಅಚ್ಯುತ್‌ಕುಮಾರ್‌ ನಟಿಸಲಿದ್ದಾರೆ. ಪ್ರಜ್ವಲ್‌ ದೇವರಾಜ್‌ ಸದ್ಯ ವಿದೇಶದಲ್ಲಿರುವುದರಿಂದ ಅವರು ಸ್ವದೇಶಕ್ಕೆ ಮರಳಿದ ತಕ್ಷಣ ಶೂಟಿಂಗ್‌ ಶುರುವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ನಿತ್ಯಾನಂದ ಭಟ್‌ ನೇತೃತ್ವದ ಪೈಟ್‌ ಪ್ಯಾಂಥರ್ಸ್‌ ಕ್ರಿಯೇಟಿವ್‌ ಸಂಸ್ಥೆ. ನಿತ್ಯಾನಂದ ಭಟ್ಟರು ಈ ಹಿಂದೆ ಟಿಎನ್‌ ಸೀತಾರಾಮ್‌ ನಿರ್ದೇಶನದ ‘ಕಾಫಿತೋಟ’ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದರು.

ಸುಮಲತಾ ಅಂಬರೀಶ್ ಗೆ ರಾಕಿಂಗ್ ಸ್ಟಾರ್ ಸಾಥ್!

ಒಂದು ಕಲ್ಲಿಗೆ ದೇವರ ರೂಪ ಕೊಟ್ಟು ದೇವರು ಅಂತ ನಂಬಿಸಿ ದೇಗುಲ ಕಟ್ಟಿಜನರು ಬರುವಂತೆ ಮಾಡುವ ಕತೆಯನ್ನು ‘ಉದ್ಭವ’ ಚಿತ್ರ ಒಳಗೊಂಡಿತ್ತು. ಅನಂತ್‌ನಾಗ್‌ ಆ ಪಾತ್ರದಲ್ಲಿ ನಟಿಸಿದ್ದರು.