ಮೈಸೂರು(ಜು.  19)  ಕನ್ನಡ ಸಿನಿಮಾರಂಗದ ಹಿರಿಯ ನಟಿ ಶಾಂತಮ್ಮ ನಿಧನರಾಗಿದ್ದಾರೆ. ಶಾಂತಮ್ಮ ಅವರಿಗೆ 95 ವರ್ಷ ವಯಸ್ಸಾಗಿತ್ತು . ಶನಿವಾರ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಕೊರೋನಾ ಪರಿಸ್ಥಿತಿ ಕಾರಣ ಮೈಸೂರಿನ ಮಗಳ ಮನೆಯಲ್ಲಿ ಶಾಂತಮ್ಮ ಇದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಹಿರಿಯ ನಟಿ ಸಾವನಪ್ಪಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಆದರೆ ಅವರ ಪುತ್ರ ಹೇಳುವ ಒಂದಷ್ಟು ವಿಚಾರಗಳು ಕೊರೋನಾದಿಂದ ಇಂದು ಉಂಟಾಗಿರುವ ದುಸ್ಥಿತಿಯನ್ನು ನಮ್ಮ ಮುಂದೆ ಇಡುತ್ತದೆ. ಅಮ್ಮನಿಗೆ 95 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ರೋಗವಿತ್ತು.. ಮರೆವಿನ ಖಾಯಿಲೆಯೂ ಇತ್ತು. ಹೀಗಾಗಿ ಬೆಂಗಳೂರಿನಿಂದ ಮೈಸೂರಿಗೆ ಕರೆಸಿಕೊಂಡಿದ್ದೆವು. ಶನಿವಾರ ರಾತ್ರಿ ತುಂಬಾ ಕಫ ಕಟ್ಟಿಕೊಂಡಿತ್ತು. ಆಸ್ಪತ್ರೆಗಳಲ್ಲೂ ಬೆಡ್ ಸಿಕ್ಕಿರಲಿಲ್ಲ‌. ಚಿಕಿತ್ಸೆ ಸಿಗದೆ ತುಂಬಾ ಸಮಸ್ಯೆ ಆಯಿತು.. ಸರಿಯಾದ ಸಮಯಕ್ಕೆ ಆಸ್ಪತ್ರೆ ಸಿಕ್ಕಿದ್ದರೇ.. ಅಮ್ಮ ಬದುಕುತ್ತಿದ್ರೇನೋ ಎಂದು ಪುತ್ರಿ ಸುಮಾ ನೊಂದು ನುಡಿಯುತ್ತಾರೆ.

ಸಾಯುವ ಸಂದರ್ಭದಲ್ಲೂ ಅಣ್ಣಾವ್ರ ಫ್ಯಾಮಿಲಿಯನ್ನು ನೆನಪಿಸಿಕೊಳ್ಳುತ್ತಿದ್ದರು.  ಅಪ್ಪು, ಶಿವಣ್ಣ, ರಾಘಣ್ಣ ಅಂತಾ ಕನವರಿಸುತ್ತಿದ್ದರು... ಅವರನ್ನು ನೋಡ್ಬೇಕು ಅನ್ನುತ್ತಿದ್ದರು.  ಮಗಳಾಗಿ ನನ್ನ ನೆನಪು ಅವರಿಗೆ ಇರಲಿಲ್ಲ.. ಅಣ್ಣಾವ್ರ ಫ್ಯಾಮಿಲಿಯನ್ನು ಅಷ್ಟಾಗಿ ಇಷ್ಟ ಪಡುತ್ತಿದ್ದರು ಎಂದು ಅಮ್ಮನ ಕೊನೆಯ ಕ್ಷಣಗಳ ಬಗ್ಗೆ ಪುತ್ರಿ ಹೇಳುತ್ತಾರೆ.

ಎಲ್ಲ ದಿಗ್ಗಜರ ಜತೆ ಅಭಿನಯಿಸಿದ್ದ ಶಾಂತಮ್ಮ ಇನ್ನಿಲ್ಲ

ರಜಿನಿಕಾಂತ್ ಎಂದರೇ ಅವರನ್ನೂ ಕಂಡರೆ ಇಷ್ಟ ಪಡುತ್ತಿದ್ದರು.  ಲಿಂಗ ಸಿನಿಮಾದ ಶೂಟಿಂಗ್ ಟೈಂನಲ್ಲಿ ಯಾವುದೇ ಗರ್ವವಿಲ್ಲದೇ ರಜಿನಿಕಾಂತ್ ಅವರು ಎಲ್ಲರ ಮುಂದೆ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು.. ಇದೆಲ್ಲವನ್ನೂ ಅಮ್ಮ ನೆನಪಿಸಿಕೊಳ್ಳುತ್ತಿದ್ದರು ಎಂದು ಹಿರಿಯ ನಟಿಯ ಪುತ್ರಿ ಹೇಳುತ್ತಾರೆ.

ಕೊರೊನಾ ಟೆಸ್ಟ ನಡೆಸಲಾಗಿದ್ದು ಫಲಿತಾಂಶ ಬಂದ ನಂತರ ಅಂತ್ಯಕ್ರಿಯೆ ಯೋಜನೆ ನಡೆಯಲಿದೆ ಎಂದು ತಿಳಿಸಿದ್ದಾರೆ.1956ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಶಾಂತಮ್ಮ ಡಾ.ರಾಜ್, ರಜಿನಿಕಾಂತ್, ವಿಷ್ಣುವರ್ಧನ್, ಅಂಬರೀಶ್, ಮಿಥುನ್ ಚಕ್ರವರ್ತಿ ಸೇರಿದಂತೆ ಸ್ಟಾರ್ ನಟರ ಜೊತೆಗೆ ನಟಿಸಿದ್ದರು. ಬಹುತೇಕ ಪೋಷಕ ಪಾತ್ರಗಳಾದ ಅಮ್ಮ, ಅಜ್ಜಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು.

ಚೆಂದವಳ್ಳಿಯ ತೋಟ, ಕೆಂಡದಮಳೆ, ಚಿನ್ನಾರಿ ಮುತ್ತ, ಬಾಂಬೆ ದಾದ,ಗಜೇಂದ್ರ, ಶೃತಿ, ಸಿರಿಗಂಧ, ಇಂದಿನ ಭಾರತ, ಲಾಕಪ್ ಡೆತ್, ರೂಪಾಯಿ ರಾಜ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಶಾಂತಮ್ಮ ಅವರು ರಂಗಭೂಮಿ ನಟಿ‌ ಬಿ.ಜಯಮ್ಮ ಅವರ ಸಂಬಂಧಿ.