ಸ್ಯಾಂಡಲ್​​ವುಡ್​​ ಯುವರಾಜ , ಮಾಜಿ ಸಿಎಂ ಎಚ್‌​ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ರೇವತಿ ಕಲ್ಯಾಣಕ್ಕೆ ಕ್ಷಣಗಣನೇ ಆರಂಭವಾಗಿದೆ. ಇನ್ನೇನು ಇನ್ನೆರಡು ದಿನಗಳಷ್ಟೇ ಬಾಕಿ ಇದೆ. ಮತ್ತೊಂದೆಡೆ ಕೊರೋನಾ ಕಾಟದಿಂದ ದಿನಕ್ಕೊಂದು ವಿವಾಹ ಸ್ಥಳ ಬದಲಾಗುತ್ತಿದೆ.

ನಿಖಿಲ್‌ ಕುಮಾರಸ್ವಾಮಿ- ರೇವತಿ ಮದುವೆ ಮುಹೂರ್ತ ಫಿಕ್ಸ್‌; ಯಾರ್ಯಾರ್ ಬರ್ತಿದ್ದಾರೆ?

ಅಂದ್ಹಾಗೆ ಮದುವೆ ಎಲ್ಲಿ ನಡೆಯಲಿದೆ ಅನ್ನೋದಕ್ಕೆ ಉತ್ತರ ಸಿಕ್ಕಿರಲಿಲ್ಲ. ಮೊದಲಿಗೆ ಬೆಂಗಳೂರಿನ ಅರಮನೆ ಮೈದಾನ,  ಹರದನಹಳ್ಳಿಯ ದೇವಾಲಯದಲ್ಲಿ ಮದುವೆ ಎಂದು ನಿಶ್ಚಯಿಸಲಾಗಿತ್ತು. ನಂತರ ವಧು ರೇವತಿಯವರ ಮನೆಯಲ್ಲಿಯೇ ವಿವಾಹವೆಂದು ಹೇಳಲಾಗಿತ್ತು. ಇದೀಗ ಕೊನೆಗಳಿಗೆಯಲ್ಲಿ ಮತ್ತೆ ಸ್ಥಳ ಬದಲಾಗಿದೆ.

 ಸೆಂಟಿಮೆಂಟ್ ಮಾತ್ರ ಬಿಡಲೇ ಇಲ್ಲ ಎಚ್‌ಡಿಕೆ

ಹೌದು.. ಮಗನ ಮದ್ವೆ ಮಾಡಲು ಅಲ್ಲಿ-ಇಲ್ಲಿ ಅಂತ ಓಡಾಡುತ್ತಾ ಕೊನೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಾತ್ರ ಕರ್ಮಭೂಮಿ ರಾಮನಗರದೊಂದಿಗಿನ ಸೆಂಟಿಮೆಂಟ್ ಮಾತ್ರ ಬಿಡಲೇ ಇಲ್ಲ. ರಾಮನಗರದ ಪುಣ್ಯಭೂಮಿಯಲ್ಲೇ ಮದುವೆ ಎಂದು ನಿಶ್ಚಯಿಸಿದ್ದಾದ್ದು, ಕೊರೋನಾ ಕಾಟದಿಂದ ಸರಳಾತಿ ಸರಳವಾಗಿ ವಿವಾಹ ಮಹೋತ್ಸವ ನಡೆಸೋಕೆ ಎಚ್​​ಡಿಕೆ ಫ್ಯಾಮಿಲಿ ಮುಂದಾಗಿದೆ. 

ಎಚ್‌​ಡಿಕೆ ಫಾರ್ಮ್ ಹೌಸ್​​ನಲ್ಲಿ ಮದುವೆ..!

ನಿಖಿಲ್- ರೇವತಿ ಮದುವೆ ಮಹೋತ್ಸವ ನಡೆಯೋ ಸ್ಥಳದ ಕುರಿತು ಒಂದಷ್ಟು ಗೊಂದಲವಿತ್ತು. ಇದೀಗ ರಾಮನಗರದಲ್ಲೇ ಮದುವೆ ಸಮಾರಂಭ ನಡೆಸೋಕೆ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.‌ ರಾಮನಗರ ಬಳಿಯಿರೋ  ಕುಮಾರಸ್ವಾಮಿ ಅವರ ಕೇತಿಗನಹಳ್ಳಿ ತೋಟದ ಮನೆಯಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಈ ಮದುವೆಯಲ್ಲಿ ಎರಡು ಕುಟುಂಬಸ್ಥರು ಮಾತ್ರ ಇರಲಿದ್ದಾರೆ.

ಅವರವರ ಮನೆಯಲ್ಲೇ ಅರಿಶಿನ ಶಾಸ್ತ್ರ

ಅರಿಶಿನ ಶಾಸ್ತ್ರ ಗುರುವಾರ ವಧು-ವರರು ಅವರವರ ಮನೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಖ್ಯಾತ ಆಗಮಿಕರ ಮುಂದಾಳತ್ವದಲ್ಲಿ ನಿಖಿಲ್-ರೇವತಿ ಸಪ್ತಪದಿ ತುಳಿಯಲಿದ್ದಾರೆ. ಮದುವೆಯ ಶಾಸ್ತ್ರ ಸಂಪ್ರದಾಯಗಳು ಮುಗಿದ ನಂತರ ಸೊಸೆ ರೇವತಿಯನ್ನ ಶುಭ ಶುಕ್ರವಾರವೇ ಹೆಚ್ಡಿಕೆ ದಂಪತಿಗಳು ಮನೆಗೆ ತುಂಬಿಸಿಕೊಳ್ಳಲಿದ್ದಾರೆಂದು ತಿಳಿದುಬಂದಿದೆ.

 ನೋ ಎಂಟ್ರಿ...!

ಮದುವೆಗೆ ಹೆಚ್ಡಿಕೆ ಅತ್ಯಾಪ್ತ ರಾಜಕಾರಣಿಗಳಿಗೂ, ಅಧಿಕಾರಿಗಳಿಗೂ ಆಹ್ವಾನವಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಪೊಲೀಸ್ ಇಲಾಖೆಗೂ ಈಗಾಗಲೇ ಮಾಹಿತಿಯನ್ನ ನೀಡಿದ್ದಾರೆ. ಮದುವೆ ಸ್ಥಳಕ್ಕೆ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು, ಮಾಧ್ಯಮದವರು ಬಾರದಂತೆ ಈಗಾಗಲೇ  ಮನವಿ ಮಾಡಿದ್ದಾರೆ. ಇದರಿಂದ ನಿಖಿಲ್ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನ ಮಾಧ್ಯಮಗಳಿಗೆ ತಲುಪಿಸಲಾಗುವುದು ಎಂದು ಹೇಳಲಾಗಿದೆ.