Asianet Suvarna News Asianet Suvarna News

ಒಬ್ಬರಿಗಾದ್ರೂ ನಾನು ಹೇಳಿದ್ದೇನೆಂದು ಅರ್ಥವಾಯ್ತಲ್ಲ, ಅಷ್ಟೇ ಸಾಕು: ರಿಷಬ್‌ ಶೆಟ್ಟಿ ಹೀಗೆ ಅಂದಿದ್ದೇಕೆ?

ಕನ್ನಡ ಇಂಡಸ್ಟ್ರಿ ತೊರೆಯುವ ಕುರಿತು ನಟ ರಿಷಬ್‌ ಶೆಟ್ಟಿ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡ ನೆಟ್ಟಿಗರೊಬ್ಬರು ನಟನಿಗೆ ಕ್ಷಮೆ ಕೋರಿದ್ದಾರೆ. ಆಗಿದ್ದೇನು? 
 

Netizen apologized to the actor Rishabh Shetty who misinterpreted his statement suc
Author
First Published Dec 1, 2023, 2:12 PM IST

ಕಾಂತಾರ ಸಿನಿಮಾ ಕರ್ನಾಟಕ, ಭಾರತ ಮಾತ್ರವಲ್ಲದೇ ಇದೀಗ ಅಂತರರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ. ಕಾಂತಾರಾ ಪ್ರೀಕ್ವಲ್‌ ಯಾವಾಗ ಬರುತ್ತದೆ ಎಂದು ಫ್ಯಾನ್ಸ್‌ ಕಾತರದಿಂದ ಕಾಯುತ್ತಿರುವ ನಡುವೆಯೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಕಾಂತಾರಾ ಮನ್ನಣೆ ಗಳಿಸಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ತಯಾರಾಗುವ ಚಿತ್ರ ಕೂಡ ಅಂತರರಾಷ್ಟ್ರೀಯ ಮಟ್ಟವನ್ನು ತಲುಪಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಿಷಬ್‌ ಶೆಟ್ಟಿ ಇದೀಗ  ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.  ಪರಭಾಷಿಕರು ಕನ್ನಡದ ಸಿನಿಮಾ ನೋಡುವ ದೃಷ್ಟಿಯೇ ಬೇರೆ ಮಾಡಿದ ಶ್ರೇಯಸ್ಸು ಕೂಡ ಇವರದ್ದು. ಕನ್ನಡದಲ್ಲಿ ಹಿಟ್‌ ಆಗುತ್ತಿದ್ದಂತೆಯೇ,   ಪರಭಾಷೆಗಳಿಂದ ರಿಷಬ್‌ ಶೆಟ್ಟಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಈ ಕುರಿತು ಅವರು ನೀಡಿದ್ದ ಹೇಳಿಕೆ ತಿರುವು ಮುರುವು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಿಕೊಂಡು ಎಡವಟ್ಟು ಮಾಡಲಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ರಿಷಬ್‌ ಶೆಟ್ಟಿಯವರು ಬೇರೆ ಭಾಷೆಗೆ ಹೋಗುತ್ತಾರೆಯೇ ಎಂದು ಎದುರಾಗಿದ್ದ ಪ್ರಶ್ನೆಗೆ ಉತ್ತರಿಸಿದ್ದ ಅವರು,  ನಾನು ಎಲ್ಲೂ ಹೋಗಲ್ಲ, ಕನ್ನಡದಲ್ಲೇ  ಮುಂದುವರಿಯುವೆ. ನನಗೀಗ ಕಾಂತಾರ ಸಿನಿಮಾ ಮೇಲಷ್ಟೇ ಗಮನ ಇದೆ, ಬೇರೆ ಭಾಷೆಗಳ ಸಿನಿಮಾಗಳ ಆಫರ್‌ ಸದ್ಯ ನೋಡುವುದಿಲ್ಲ. ನನ್ನದೇನಿದ್ದರೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಎಂದಿದ್ದ ರಿಷಬ್‌ ಶೆಟ್ಟಿಯವರು, ಕನ್ನಡವನ್ನೇ ಬೇರೆ ಕಡೆಗೆ ಒಯ್ಯುತ್ತೇನೆ ವಿನಾ ಸದ್ಯ ಪರಭಾಷೆಗಳಿಗೆ ಹೋಗುವುದಿಲ್ಲ ಎಂದಿದ್ದರು.

ಕಾಂತಾರಕ್ಕೆ ಅಂತರರಾಷ್ಟ್ರೀಯ ವಿಶೇಷ ಪ್ರಶಸ್ತಿ: ಶಂಕರ್​ನಾಗ್​ಗೆ ಸಮರ್ಪಿಸಿದ ರಿಷಬ್​ ಶೆಟ್ಟಿ

ಕನ್ನಡ ಸಿನಿಮಾ  ನನಗೆ ಭಾವನಾತ್ಮಕ ನಂಟು. ಕಾಂತಾರ ಸಿನಿಮಾ ಈ ಮಟ್ಟದಲ್ಲಿ ಹಿಟ್‌ ಆಗಿದ್ದಕ್ಕೆ ನನ್ನ ಕನ್ನಡಿಗರ ಕೊಡುಗೆ ಅದರಲ್ಲಿ ಅಪಾರ ಇದೆ. ಅವರಿಂದಲೇ ಅದು ಗಡಿ ದಾಟಿ ಸದ್ದು ಮಾಡಿದ್ದು. ಅದಾದ ಬಳಿಕ ಅವರೂ ಸಿನಿಮಾ ಮೆಚ್ಚಿಕೊಂಡರು. ಹಾಗಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾನು ಸದಾ ಚಿರಋಣಿ. ಒಂದು ಸಿನಿಮಾ ಹಿಟ್‌ ಆಗ್ತಿದ್ದಂತೆ, ಇಂಡಸ್ಟ್ರಿ ಬಿಟ್ಟು ಹೊರಟ ನೋಡು ಎಂಬ ಮಾತು ಬರಬಾರದು ಎಂದಿದ್ದ ನಟ, ನಾನು ಕನ್ನಡದ ಸಿನಿಮಾನೇ ಮಾಡ್ತಿನಿ. ಜಾಗತಿಕ ಮಟ್ಟದಲ್ಲಿ ಅದರ ಕಂಟೆಂಟ್‌ ಸಿದ್ಧಪಡಿಸಿ, ಬೇರೆ ಬೇರೆ ಭಾಷೆಗಳಿಗೆ ಡಬ್‌ ಮಾಡಿ ಬಿಡುಗಡೆ ಮಾಡುತ್ತೇವೆ ಎಂದಿದ್ದರು.

ಆದರೆ ಇವರ ಮಾತನ್ನು ಕೆಲವರಿಂದ ತಪ್ಪಾಗಿ ಅರ್ಥೈಸಿಕೊಳ್ಳಲಾಗಿತ್ತು. ನಾನು ಇತರರಂತೆ ಕನ್ನಡ ಇಂಡಸ್ಟ್ರಿ ತೊರೆಯುವುದಿಲ್ಲ ಎಂದು ರಿಷಬ್‌ ಶೆಟ್ಟಿ ಹೇಳಿರುವುದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಶೇರ್‌ ಮಾಡಿಕೊಂಡಿದ್ದು, ರಿಷಬ್‌ ಅವರ ವಿರುದ್ಧ ಅಪಸ್ವರ ಕೇಳಿಬಂದಿತ್ತು. ಆದರೆ ರಿಷಬ್‌ ಶೆಟ್ಟಿಯವರು ಹೇಳಿದ್ದೇನು ಎಂದು ಈಗ ಅವರಿಗೆ ಅರ್ಥವಾಗಿದೆ. Pushkar327 ಎಂಬ ಬಳಕೆದಾರರು ರಿಷಬ್‌ ಶೆಟ್ಟಿಯವರಲ್ಲಿ ಕ್ಷಮೆ ಕೋರಿದ್ದಾರೆ. ನಾನು ಅವರ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆ ಎಂದು ಕ್ಷಮೆ ಕೋರಿ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. @shetty_rishab ಅವರಿಗೆ ನನ್ನ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ ಇದು ಅವರು ನಿಜವಾಗಿ ಹೇಳಿದ್ದು. ಒಂದು ಹಿಟ್ ನೀಡಿದ ನಂತರ ಉದ್ಯಮವನ್ನು ತೊರೆಯುವ ವ್ಯಕ್ತಿ ಎಂದು ಕರೆಯಲು ಅವರು ಬಯಸುವುದಿಲ್ಲ ಎಂದು. ಆದರೆ  "ನಾನು ಇತರರಂತೆ ಕನ್ನಡ ಇಂಡಸ್ಟ್ರಿ ತೊರೆಯುವುದಿಲ್ಲ" ಎಂದು ಅವರು ಹೇಳಿಲ್ಲ. ಎರಡಕ್ಕೂ ತುಂಬಾ ವ್ಯತ್ಯಾಸವಿದೆ ಎಂದಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ರಿಷಬ್‌ ಶೆಟ್ಟಿಯವರು,  ಪರವಾಗಿಲ್ಲ,  ಅಂತಿಮವಾಗಿ ಯಾರೋ ಒಬ್ಬರು ನಾನು ಹೇಳಲು ಉದ್ದೇಶಿಸಿರುವುದನ್ನು ಅರ್ಥಮಾಡಿಕೊಂಡರಲ್ಲ. ಅದೇ ಸಮಾಧಾನ ಎಂದಿದ್ದಾರೆ. 

Latest Videos
Follow Us:
Download App:
  • android
  • ios