ಕಾಂತಾರಕ್ಕೆ ಅಂತರರಾಷ್ಟ್ರೀಯ ವಿಶೇಷ ಪ್ರಶಸ್ತಿ: ಶಂಕರ್ನಾಗ್ಗೆ ಸಮರ್ಪಿಸಿದ ರಿಷಬ್ ಶೆಟ್ಟಿ
ಕಾಂತಾರ ಚಿತ್ರಕ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಸ್ಪೆಷಲ್ ಜ್ಯೂರಿ ಅವಾರ್ಡ್ ಸಿಕ್ಕಿದ್ದು, ಈ ಪ್ರಶಸ್ತಿಯನ್ನು ರಿಷಬ್ ಶೆಟ್ಟಿಯವರು ನಟ ಶಂಕರ್ನಾಗ್ ಅವರಿಗೆ ಅರ್ಪಣೆ ಮಾಡಿದ್ದಾರೆ.
ಗೋವಾದಲ್ಲಿ ನವೆಂಬರ್ 28ರಂದು ನಡೆದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ನಟ ರಿಷಬ್ ಶೆಟ್ಟಿ ಅವರು, ತೀರ್ಪುಗಾರರ ವಿಶೇಷ ಪ್ರಶಸ್ತಿ (ಸಿಲ್ವರ್ ಪೀಕಾಕ್ ಸ್ಪೆಷಲ್ ಜ್ಯೂರಿ ಅವಾರ್ಡ್) ಪಡೆದುಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ‘ಕಾಂತಾರ’ ಚಿತ್ರಕ್ಕೆ ಈ ಪ್ರಶಸ್ತಿ ದೊರೆತಿದ್ದು, ಇದನ್ನು ಅವರು ಸ್ವೀಕರಿಸಿದರು. ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಸ್ಪರ್ಧಿಸಿದ್ದವರು. ಅದರಲ್ಲಿ ಭಾರತದ ಮೂರು ಸಿನಿಮಾಗಳ ಪೈಕಿ ಕಾಂತಾರ ಕೂಡ ಒಂದಾಗಿತ್ತು. ಸಿಲ್ವರ್ ಪೀಕಾಕ್ ಸ್ಪೆಷಲ್ ಜ್ಯೂರಿ ಅವಾರ್ಡ್ ವಿಭಾಗದಲ್ಲಿ 'ಕಾಂತಾರ' ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಯು ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ.
ಈ ಪ್ರಶಸ್ತಿಯನ್ನು ನಟ ರಿಷಬ್ ಶೆಟ್ಟಿ ಅವರು, ತಮ್ಮ ನೆಚ್ಚಿನ ನಟ, ನಿರ್ದೇಶಕ ಶಂಕರ್ ನಾಗ್ ಅವರಿಗೆ ಅರ್ಪಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಿಷಬ್ ಶೆಟ್ಟಿ, ‘54ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಸ್ಪೆಷಲ್ ಜ್ಯೂರಿ ಅವಾರ್ಡ್ ದೊರಕಿದೆ. ಇದು ಎಂದೂ ಮರೆಯಲಾಗದ ಕ್ಷಣಗಳಲ್ಲಿ ಉಳಿದುಕೊಳ್ಳುತ್ತದೆ. ನನ್ನ ಸ್ಫೂರ್ತಿಯಾದ ಶಂಕರ್ ನಾಗ್ ಅವರಿಗೆ 1979ರಲ್ಲಿ ‘ಒಂದಾನೊಂದು ಕಾಲದಲ್ಲಿ’ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರಕಿತ್ತು. ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್ ದೊರೆತದ್ದು ಅತ್ಯಂತ ಸಂತಸ ನೀಡಿದೆ’ ಎಂದು ಬರೆದಿದ್ದಾರೆ.
ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದ ಕಾಂತಾರ ಪ್ರೀಕ್ವೆಲ್ ಟೀಸರ್: 24 ಗಂಟೆಯಲ್ಲಿ ಎಷ್ಟು ವಿವ್ಸ್?
‘ಕಾಂತಾರವನ್ನು ನೋಡಿ ಕನ್ನಡಿಗರು ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದೀರಿ. ಇದೀಗ ಕಾಂತಾರ ಒಂದನೇ ಅಧ್ಯಾಯಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮತ್ತೊಮ್ಮೆ ಉತ್ತಮವಾದ ಚಿತ್ರವನ್ನು ನೀಡಲು ಶ್ರಮಿಸುತ್ತೇನೆ. ಈ ನನ್ನ ಎಲ್ಲ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣರಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಆಭಾರಿ. ಈ ಪ್ರಶಸ್ತಿಯನ್ನು ನಾನು ಶಂಕರ್ ನಾಗ್ ಅವರಿಗೆ ಅರ್ಪಿಸುತ್ತಿದ್ದೇನೆ’ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ಕಾಂತಾರ, ಹಲವು ಭಾಷೆಗಳಿಗೆ ಡಬ್ ಆಗಿ, ತೆರೆಕಂಡಿತ್ತು. ಚಿತ್ರದಲ್ಲಿ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದರೆ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದರು. ಇದೀಗ 'ಕಾಂತಾರ' ಚಿತ್ರದ ಪ್ರೀಕ್ವೆಲ್ 'ಕಾಂತಾರ: ಅಧ್ಯಾಯ 1' ಚಿತ್ರದ ಕೆಲಸಗಳು ಆರಂಭವಾಗಿವೆ. ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಕಾಂತಾರ ಪ್ರೀಕ್ವೆಲ್ ಟೀಸರ್ ಹೊಸ ಸೆನ್ಸೇಷನ್ ಹುಟ್ಟಿಹಾಕಿದೆ. ಟೀಸರ್ ರಿಲೀಸ್ ಆದ 24 ಗಂಟೆಗಳಲ್ಲಿ1 2 ಮಿಲಿಯನ್ ವೀಕ್ಷಣೆ ಕಂಡು ಹೊಸ ದಾಖಲೆ ಬರೆದಿದೆ. ಯೂ ಟ್ಯೂಬ್ನಲ್ಲಿಯೂ ಹೊಸ ದಾಖಲೆ ಬರೆದಿದೆ. ಕೆಜಿಎಫ್ ನಂತರ ಈ ಮಟ್ಟಿಗೆ ಸೌಂಡ್ ಮಾಡಿದ ಮತ್ತೊಂದು ಟೀಸರ್ ಇಲ್ಲವೆ ಇಲ್ಲ. ಕಾಂತಾರ ಚಾಪ್ಟರ್ 1 ಟೀಸರ್ ಕುರಿತು ಗೂಗಲ್ ಇಂಡಿಯಾವು ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದೆ.
ಆನೆಗುಡ್ಡೆ ನನಗೆ ಅದೃಷ್ಟದ ಬಾಗಿಲು, ಕಾಂತಾರದ ಮುನ್ನುಡಿ ಹೇಳಲು ಹೊರಟಿದ್ದೇನೆ: ರಿಷಬ್ ಶೆಟ್ಟಿ