IRS ಅಧಿಕಾರಿ ಜತೆ ತಗ್ಲಾಕ್ಕೊಂಡ್ರೆ ‘ನಮ್ಮ ಯಜಮಾನ್ರು’ ನಟಿ ಈ ವಿಡಿಯೋ ಶೇರ್ ಮಾಡೋದಾ?
ಕಂದಾಯ ಇಲಾಖೆಯ ಅಧಿಕಾರಿಯ ಜೊತೆ ನಿಕಟ ಸಂಪರ್ಕ ಹೊಂದಿ ಸಿಕ್ಕಿಬಿದ್ದಿರೋ ಬಹುಭಾಷಾ ನಟಿ ನವ್ಯಾ ನಾಯರ್ ಅವರು, ಇದೀಗ ಎರಡು ವಿಡಿಯೋಗಳನ್ನು ಶೇರ್ ಮಾಡಿ ಸಕತ್ ಸುದ್ದಿಯಾಗುತ್ತಿದ್ದಾರೆ.
ಕನ್ನಡದ ‘ಗಜ’, ‘ದೃಶ್ಯ’, ‘ದೃಶ್ಯ 2’, ‘ನಮ್ಮ ಯಜಮಾನ್ರು’ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿರುವ ನವ್ಯಾ ನಾಯರ್ ಈಗ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ಸಹ ನಾಯಕಿಯಾಗಿ ನಟಿಸಿರೋ ಈ ಬಹುಭಾಷಾ ತಾರೆ ಕಂದಾಯ ಇಲಾಖೆಯ ಅಧಿಕಾರಿ (IRS Officer) ಜೊತೆ ಸಿಕ್ಕಿಬಿದ್ದಿದ್ದು ಪಡಬಾರದ ಕಷ್ಟ ಪಡುವಂತಾಗಿದೆ. ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾಗಿರುವ ಅಧಿಕಾರಿ ಸಚಿನ್ ಸಾವಂತ್ ಜತೆ ನವ್ಯಾ ನಾಯರ್ ಹೆಸರು ಥಳಕು ಹಾಕಿಕೊಂಡಿದೆ. ಸಚಿನ್ ಸಾವಂತ್ ಎಂಬ ಅಧಿಕಾರಿ ಇತ್ತೀಚೆಗಷ್ಟೇ ಆಸ್ತಿ ಕಬಳಿಕೆ ಮಾಡಿದ ಆರೋಪದಲ್ಲಿ ಇಡಿ ಅವರನ್ನು ಬಂಧಿಸಿತ್ತು. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಚಿನ್ ಸಾವಂತ್ ಅವರನ್ನು ಬಂಧಿಸಲಾಗಿದೆ. ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಜೂನ್ 27ರಂದು ಲಖನೌದಲ್ಲಿ ಅವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದ ವಿಚಾರಣೆಗೆ ನಟಿ ನವ್ಯಾಗೆ ಇಡಿ ನೋಟಿಸ್ ನೀಡಿದ್ದು ಹಾಜರಾಗುವಂತೆ ಹೇಳಿದೆ. ಆದ್ದರಿಂದ ಇವರ ಮೇಲೆ FIR ಆಗುವ ಸಾಧ್ಯತೆಗಳೂ ಇವೆ.
ಈ ಆಘಾತದ ನಡುವೆಯೇ ನಟಿ ನವ್ಯಾ, ಎರಡು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ಮಾತ್ರವಲ್ಲದೇ ನವ್ಯಾ ಅದ್ಭುತ ಶಾಸ್ತ್ರೀಯ ನೃತ್ಯಗಾತಿ ಕೂಡ ಹೌದು. ಅದೇ ವಿಡಿಯೋವನ್ನು ನಟಿ ಈಗ ಶೇರ್ ಮಾಡಿಕೊಂಡಿದ್ದಾರೆ. ನೃತ್ಯದಲ್ಲಿಯೇ ಹಲವು ಬಗೆಯ ಮದ್ದು ಇದೆ ಎನ್ನುತ್ತಾರೆ. ಆತಂಕವನ್ನು ಕಳೆಯಲು ನೃತ್ಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ. ಆದ್ದರಿಂದ ನಟಿ ಕೂಡ ಈ ತಲೆಬಿಸಿಯ ನಡುವೆಯೇ ತಮ್ಮ ಶಾಸ್ತ್ರೀಯ ನೃತ್ಯದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು, ನೋವಿನಲ್ಲಿದ್ದಾಗಲೂ ಡ್ಯಾನ್ಸ್ ಮಾಡಿ, ಹೋರಾಟದ ಸಮಯದಲ್ಲೂ ಡ್ಯಾನ್ಸ್ ಮಾಡಿ ಮತ್ತು ನಿಮ್ಮ ರಕ್ತದ ಕಣ ಕಣದಲ್ಲೂ ಡ್ಯಾನ್ಸ್ ಮಾಡಿ ಎಂಬ ಶೀರ್ಷಿಕೆ (Caption) ನೀಡಿದ್ದಾರೆ. ಇದೇ ವೇಳೆ ಅವರು ಶೇರ್ ಮಾಡಿರುವ ಇನ್ನೊಂದು ವಿಡಿಯೋದಲ್ಲಿ ಬಿಳಿ ಬಟ್ಟೆಯಲ್ಲಿ ಅವರು ಮಿಂಚುತ್ತಿದ್ದಾರೆ. ಪ್ರತಿಯೊಂದು ಹೃದಯವು ಅನೇಕ ಗಾಯಗಳನ್ನು ಮರೆಮಾಡುತ್ತದೆ ಮತ್ತು ಅದು ಎಂದಿಗೂ ರಕ್ತಸ್ರಾವ ಆಗುವುದಿಲ್ಲ ಎಂದಿದ್ದಾರೆ. ಇಂಥ ಗಂಭೀರ ವಿಷಯದಲ್ಲಿಯೂ ಡ್ಯಾನ್ಸ್ ಮಾಡೋದ ವಿಡಿಯೋ ಬೇಕಿತ್ತಾ? ಇದರಿಂದ ಏನು ಸಾಧಿಸಲು ಹೊರಟಿರುವಿರಿ ಎಂದು ಟ್ರೋಲಿಗರು ಪ್ರಶ್ನಿಸುತ್ತಿದ್ದಾರೆ.
ಕಂದಾಯ ಅಧಿಕಾರಿ ಜೊತೆ ಸಿಕ್ಕಿಬಿದ್ದ ‘ನಮ್ಮ ಯಜಮಾನ್ರು’ ನಟಿ: ಇಡಿ ತೆಕ್ಕೆಯಲ್ಲಿ ನವ್ಯಾ!
ಇನ್ನು ಈ ಅಕ್ರಮ ಪ್ರಕರಣದ ಕುರಿತು ಹೇಳುವುದಾದರೆ, ನವ್ಯಾ ಮಾತ್ರವಲ್ಲದೆ ಅವರ ಮಗನ ಬರ್ತ್‌ಡೇ (Birthday) ನೆಪದಲ್ಲಿ ಚಿನ್ನದ ಒಡವೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಸಚಿನ್ ಎಂಬ ಆರೋಪವೂ ಇದೆ. ನವ್ಯಾ ಜತೆಗೆ ನಿಕಟ ಸಂಬಂಧವನ್ನೂ ಹೊಂದಿದ್ದರ ಬಗ್ಗೆ ಇಬ್ಬರ ನಡುವಿನ ಫೋನ್ ಕರೆ ಸಂಭಾಷಣೆಗಳೂ ಇಡಿ ಬಳಿ ಸಿಕ್ಕಿವೆ. ನಟಿಯನ್ನು ಭೇಟಿಯಾಗಲು ಸಚಿನ್ ಅವರು 8 ರಿಂದ 10 ಬಾರಿ ಕೊಚ್ಚಿಗೆ ಹೋಗಿದ್ದರು ಎಂದು ವರದಿಯಾಗಿದೆ. ವಾಟ್ಸ್ಆ್ಯಪ್ ಮೆಸೆಜ್‌ಗಳನ್ನೂ ತನಿಖಾಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕೊಚ್ಚಿಯಲ್ಲಿ ನವ್ಯಾ ಹಾಗೂ ಸಚಿನ್ ಒಂದೇ ಅಪಾರ್ಟ್ಮೆಂಟ್ನ ನಿವಾಸಿಗಳಾಗಿದ್ದು ನೆರೆ ಹೊರೆಯವರಾಗಿದ್ದರು. ನವ್ಯಾ, ಕೆಲವು ಬಾರಿ ಸಚಿನ್ರನ್ನು ಗುರುವಾಯೂರು ದೇವಾಲಯಕ್ಕೂ ಕರೆದೊಯ್ದಿದ್ದರು. ಇಡಿ ಆರೋಪದಂತೆ, ಸಚಿನ್, ಚಿನ್ನಾಭರಣೆ ಸೇರಿದಂತೆ ಕೆಲವು ದುಬಾರಿ ವಸ್ತುಗಳನ್ನು ನವ್ಯಾಗೆ ಉಡುಗೊರೆಯಾಗಿ ನೀಡಿದ್ದಾರೆ.