ಮೆಟ್ರೋಗೆ ದನಿ ನೀಡುವಾಗ್ಲೇ ಟೈಮ್ ಬಾಂಬ್ ಇರೋದು ಗೊತ್ತಿತ್ತು, ವಿಗ್ ಧರಿಸಿದ್ಲು; ಅಪರ್ಣಾರ ನೆನೆದ ನಾಗರಾಜ್ ವಸ್ತಾರೆ
ಸಾವು ಸಮೀಪ ಇದ್ದರೂ, ವಿಗ್ ಧರಿಸಿ ನಮ್ಮ ಮೆಟ್ರೋಗೆ ದನಿ ನೀಡಲು ಹೋದ ನಟಿ, ನಿರೂಪಕಿ, ಕನ್ನಡತಿ ಅಪರ್ಣಾ ಅವರ ಬಗ್ಗೆ ನೆನಪಿಸಿಕೊಂಡಿದ್ದಾರೆ ಪತಿ ನಾಗರಾಜ್ ವಸ್ತಾರೆ.
ಅಪ್ಪಟ ಕನ್ನಡತಿ ಅಪರ್ಣಾ ಎಲ್ಲರನ್ನೂ ಅಗಲಿ ಆರು ತಿಂಗಳೇ ಗತಿಸಿ ಹೋಗಿವೆ. ಎರಡು ವರ್ಷಗಳಿಂದ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ತಮ್ಮೊಳಗೆ ಅಡಗಿಸಿಟ್ಟುಕೊಂಡು ಯಾರಿಗೂ ಹೇಳದೇ ಕಳೆದ ಜುಲೈ 11ರಂದು ಕಣ್ಮರೆಯಾಗಿ ಹೋಗಿದ್ದಾರೆ ಅಪರ್ಣಾ. ಇದನ್ನು ಕನ್ನಡಿಗರಿಗೆ ಇನ್ನೂ ಅರಗಿಸಿಕೊಳ್ಳಲು ಆಗದ ವಿಷಯವೇ. ಅದೆಷ್ಟೋ ಮಂದಿಯನ್ನು ಕಣ್ಣೀರಿನಲ್ಲಿ ತೇಲಿಸಿ ಹೋದರು ಈಕೆ. ಆ ನಗು, ಆ ಕಂಠಸಿಹಿ, ನಿರೂಪಣೆಯ ಮಾಧುರ್ಯ, ಕರ್ಕಶವಿಲ್ಲದೇ ಮೃದುವಾಗಿ ನಿರೂಪಿಸುವ ಪರಿ, ಆ ಶುದ್ಧ ಕನ್ನಡ... ಅಬ್ಬಾ... ಎನ್ನುವಂಥ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ ಅಪರ್ಣಾ. ಎರಡು ವರ್ಷಗಳಿಂದ ಕ್ಯಾನ್ಸರ್ ಎನ್ನುವ ಮಹಾಮಾರಿಯನ್ನು ದೇಹದಲ್ಲಿ ಇಟ್ಟುಕೊಂಡರೂ, ನೀವಿನ್ನು ಬದುಕುವುದು ಆರೇ ತಿಂಗಳು ಎಂದು ವೈದ್ಯರು ಹೇಳಿದ್ದರೂ ಬದುಕಿ ತೋರಿಸುತ್ತೇನೆ ಎಂದು ಎರಡು ವರ್ಷ ಸಾವನ್ನು ಕಣ್ಣೆದುರೇ ಇಟ್ಟುಕೊಂಡು ಬದುಕಿದ ಜೀವವಿದು. ಕಳೆದ ಆರು ತಿಂಗಳುಗಳಿಂದ ಸಾಯುವುದು ನಿಶ್ಚಿತ ಎಂದು ಗೊತ್ತಾದ ಮೇಲೂ ಅಪರ್ಣಾ ಅವರು ಬದುಕಿದ್ದ ಪರಿಯೇ ಅಪೂರ್ವವಾದದ್ದು.
ಅವರ ಬಗ್ಗೆ ಇದಾಗಲೇ ಹಲವಾರು ಘಟನೆಗಳನ್ನು ಅವರ ಪತಿ ನಾಗರಾಜ್ ವಸ್ತಾರೆ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಇದೀಗ ಅವರು ನಮ್ಮ ಮೆಟ್ರೋಗೆ ಅಪರ್ಣಾ ಅವರು ದನಿ ನೀಡುವ ಸಂದರ್ಭದಲ್ಲಿ ಆದ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ರಘುರಾಮ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಘಟನೆ ನೆನಪಿಸಿಕೊಂಡಿದ್ದಾರೆ. ನಮ್ಮ ಮೆಟ್ರೋಗೆ ದನಿ ನೀಡುವ ಸಂದರ್ಭದಲ್ಲಿಯೇ ಆಕೆಗೆಮೊದಲ ಹಂತದ ಕಿಮೋ ಥೆರಪಿ ಮುಗಿದಿತ್ತು. ವೈದ್ಯರು ಆರೇ ತಿಂಗಳು ಬದುಕುವ ಭರವಸೆ ನೀಡಿದ್ದರು. ಆಕೆಗೆ ತಾನು ಸಾಯುವುದು ತಿಳಿದಿತ್ತು. ಆದರೆ ಹೇಗಾದರೂ ಮಾಡಿ ತನ್ನ ಕೂದಲನ್ನು ಉಳಿಸಿಕೊಳ್ಳುವ ಹಂಬಲ ಇತ್ತು. ಆದರೆ ಒಂದನೇ ಬಾರಿ ಕಿಮೋ ಮಾಡಿದಾಗಲೇ ಆಕೆಯ ಪೂರ್ತಿ ಕೂದಲು ಹೊರಟು ಹೋಯಿತು.
ಪಾರ್ಕ್ನಲ್ಲಿ ಪೊಲೀಸಪ್ಪನ ಕೈಲಿ ಸಿಕ್ಕಾಕ್ಕೊಂಡಿದ್ವಿ! ಬೈಯೋಕೆ ಬಂದ ಆತ ಅಪರ್ಣಾಳನ್ನು ನೋಡಿ...
ಆಗ ಮೆಟ್ರೋದಿಂದ ಕರೆ ಬಂದಿತ್ತು. ಅವಳೇ ಮಾರುಕಟ್ಟೆಗೆ ಹೋಗಿ ತನಗೆ ಸೂಟ್ ಆಗುವ ಕೆಲವು ವಿಗ್‌ಗಳನ್ನು ಖರೀದಿಸಿ ಅದನ್ನು ಟ್ರೈ ಮಾಡಿ ಹಾಕಿಕೊಂಡಿದ್ದಳು. ಕೊನೆಗೆ ಅದಕ್ಕೆ ಅಡ್ಜಸ್ಟ್ ಆಗಿಬಿಟ್ಟಿದ್ದಳು. ಆದರೆ ಆ ಸಮಯದಲ್ಲಿ ತನ್ನೊಳಗೆ ಟೈಮ್ ಬಾಂಬ್ ಇರುವುದು ಅವಳಿಗೆ ತಿಳಿದಿತ್ತು. ಆದರೂ ಅವಳು ಮೆಟ್ರೋಗೆ ದನಿ ಕೊಡಲು ಹೋದಳು. ವೇದಿಕೆ ಮೇಲೆ ಹತ್ತುವ ಆಸೆ ಕ್ಯಾನ್ಸರ್ ಬಂದ ಮೇಲೆಯೂ ಅವಳಿಗೆ ಇತ್ತು ಎಂದಿದ್ದಾರೆ ನಾಗರಾಜ್. 2020ರ ಡಿಸೆಂಬರ್‍ನಲ್ಲಿಯೇ ಅವಳು ಬದುಕುವುದು ಆರು ತಿಂಗಳು ಎಂದು ವೈದ್ಯರು ಹೇಳಿರುವುದು ತಿಳಿದಿತ್ತು. ಆದರೂ ನನ್ನನ್ನೇ ಸಮಾಧಾನ ಮಾಡುತ್ತಿದ್ದಳು ಅವಳು ಎಂದಿದ್ದಾರೆ ನಾಗರಾಜ್.
ಯಾವಾಗ ಸಾವು ಬರುತ್ತದೆ ಎಂದೇ ಕಾಯುವ ಸ್ಥಿತಿಯೂ ಬಂದಿತ್ತು. ಆದರೆ ಅವಳು ಬದುಕುತ್ತೇನೆ ಎನ್ನುವ ಛಲ ಹೊತ್ತು ಇಪ್ಪತ್ತು ತಿಂಗಳು ಬದುಕಿದಳು. ಅವಳ ತೊಡೆ ಮತ್ತು ತಲೆಯಲ್ಲಿ ಇದ್ದ ಗಡ್ಡೆ ಏಕಾಏಕಿ ಎಚ್ಚೆತ್ತು ಸಿಡಿಯಿತು. ಟೈಮ್ ಜಾಸ್ತಿ ಇಲ್ಲ ಎನ್ನುವುದು ಅವಳಿಗೂ ತಿಳಿದು ಹೋಗಿತ್ತು. ಕೊನೆಯ ಘಳಿಗೆಯಲ್ಲಿ ತುಂಬಾ ಯಾತನೆ ಪಟ್ಟಳು. ಆಸ್ಪತ್ರೆಯಲ್ಲಿ ಇದ್ದಾಗಲೂ ನನ್ನ ಕೈ ಹಿಡಿದುಕೊಂಡು ನಿಮ್ಮನ್ನು ಬಿಟ್ಟುಹೋಗಲ್ಲ ಎಂದಳು ಎಂದು ಆ ದಿನಗಳ ನೆನೆದು ನಾಗರಾಜ್ ವಸ್ತಾರೆ ಭಾವುಕರಾಗಿದ್ದಾರೆ.
ಸಂಸ್ಕೃತ ಬಲ್ಲ ಬ್ರಾಹ್ಮಣ ಸುಂದರಿಯೇ ಬೇಕೆ? ನಿರೂಪಕಿ ಅಪರ್ಣಾ ವಿರುದ್ಧ ಸರ್ಕಾರಕ್ಕೆ ಇದೆಂಥ ದೂರು?