ಡಾ.ರಾಜ್‌ಕುಮಾರ್ ಅವರೊಂದಿಗಿನ ನೆನಪನ್ನು ನಟ ಮುಖ್ಯಮಂತ್ರಿ ಚಂದ್ರು ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಬಿಡದಿಗೆ ಹೋಗುವಾಗ, ದಾರಿಯಲ್ಲಿನ ಹೋಟೆಲ್‌ನಲ್ಲಿ ಇಡ್ಲಿ, ವಡೆ ತಿಂದಿದ್ದ ರಾಜ್‌ಕುಮಾರ್, ಆ ವಿಷಯವನ್ನು ಪಾರ್ವತಮ್ಮನಿಗೆ ಹೇಳದಂತೆ ಚಂದ್ರುಗೆ ಹೇಳಿದ್ದರು. ಬಿಡದಿಯಲ್ಲೂ ಊಟ ಸಿದ್ಧವಿದ್ದರೂ, ರಾಜ್‌ಕುಮಾರ್ ಎಲ್ಲರನ್ನೂ ಮ್ಯಾನೇಜ್ ಮಾಡಿ, ಸ್ವಲ್ಪ ಉಪ್ಪಿಟ್ಟು ತಿಂದು ಸಮಾಧಾನ ಮಾಡಿದರು.

ಡಾ.ರಾಜ್​ಕುಮಾರ್ ಮತ್ತು ಪಾರ್ವತಮ್ಮಾ ರಾಜ್​ಕುಮಾರ್​ ಕಣ್ಮರೆಯಾಗಿ ವರ್ಷಗಳೇ ಗತಿಸಿಹೋಗಿವೆ. ಈಗ ಈ ಜೋಡಿ ಏನಿದ್ದರೂ ನೆನಪು ಮಾತ್ರ. ಆದರೆ ಡಾ.ರಾಜ್​ಕುಮಾರ್​ ಅವರ ಬಗ್ಗೆ ಇಂದಿಗೂ ಹಿರಿ-ಕಿರಿಯ ನಟರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಸಿನಿಮಾ, ನಟನೆ ಎಂದು ಯಾರ ಬಾಯಲ್ಲಿ ಬಂದರೂ ಅಲ್ಲಿ ಮೊದಲ ಹೆಸರು ಡಾ.ರಾಜ್​ ಅವರದ್ದೇ ಆಗಿರುತ್ತದೆ. ಕನ್ನಡ ಸಿನಿಮಾ ಲೋಕಕ್ಕೆ ಹೊಸ ದಿಕ್ಕನ್ನು ತೋರಿಸಿದವರಲ್ಲಿ ಇವರು ಪ್ರಮುಖರು. ಇಂದಿನ ಬಹುತೇಕ ಚಿತ್ರಗಳು ಜನರ ಮನಸ್ಸಿನಲ್ಲಿ ನಾಲ್ಕೈದು ವರ್ಷ ನೆಲೆಯೂರಿದ್ದರೆ ಅದುವೇ ದೊಡ್ಡದು ಎನ್ನಿಸುವಂತೆ ಆಗಿದೆ. ಆದರೆ ಡಾ.ರಾಜ್​ಕುಮಾರ್​ ಅವರ ಅಭಿನಯದ ಬ್ಲ್ಯಾಕ್​ ಆ್ಯಂಡ್ ವೈಟ್​ ಯುಗದಿಂದ ಹಿಡಿದು ಅವರ ಕೊನೆಯ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅವರ ಡೈಲಾಗ್​, ಹಾಡುಗಳು ಅಬ್ಬಾ ಒಂದೇ... ಎರಡೇ... ಅಂಥ ಅಪರೂಪದ ಕಲಾವಿದ ಡಾ.ರಾಜ್​.

ಇದೀಗ ಡಾ.ರಾಜ್​ಕುಮಾರ್​ ಅವರ ಕೀಟಲೆಯ ಪ್ರಸಂಗವೊಂದನ್ನು ನೆನಪಿಸಿಕೊಂಡಿದ್ದಾರೆ ಅವರ ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಟ 'ಮುಖ್ಯಮಂತ್ರಿ' ಚಂದ್ರು. ಕಲಾ ಮಾಧ್ಯಮ ಯುಟ್ಯೂಬ್​ ಚಾನೆಲ್​ ಜೊತೆ ಮಾತನಾಡಿದ ಅವರು, ಅಂದು ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಪಾರ್ವತಮ್ಮನವರಿಗೆ ಈ ವಿಷಯವನ್ನು ಹೇಳಬೇಡ ಎಂದು ತಮಗೆ ಡಾ.ರಾಜ್​ ತಾಕೀತು ಮಾಡಿದ್ದ ಪ್ರಸಂಗವನ್ನು ಅವರು ಹೇಳಿದ್ದಾರೆ. 

ಡಾ.ರಾಜ್​ಗೂ ಇತ್ತು ಸ್ಮೋಕಿಂಗ್​ ಚಟ: ಆ ರಾತ್ರಿ ನಡೆದ ಸ್ವಾರಸ್ಯಕರ ಘಟನೆ ನೆನಪಿಸಿಕೊಂಡ 'ಮುಖ್ಯಮಂತ್ರಿ' ಚಂದ್ರು

ಅದೇನೆಂದರೆ, 'ಅದೊಂದು ದಿನ ಶೂಟಿಂಗ್​ಗೆ ಹೋಗುವ ಸಂದರ್ಭದಲ್ಲಿ, ಬಿಡದಿಗೆ ಹೋಗಬೇಕಿತ್ತು. ಅಲ್ಲಿ ತಿಂಡಿ-ಅಡುಗೆ ಎಲ್ಲವೂ ರೆಡಿ ಇತ್ತು. ಆದರೆ ರೋಡ್​ಸೈಡ್​ನಲ್ಲಿ ಇರುವ ಹೋಟೆಲ್​ ಒಂದರಲ್ಲಿ ಇಡ್ಲಿ, ವಡಾ, ಚಿತ್ರನ್ನಾ ಡಾ.ರಾಜ್​ಕುಮಾರ್​ ಅವರಿಗೆ ಬಹಳ ಹಿಡಿಸಿತ್ತು. ಇದೇ ಕಾರಣಕ್ಕೆ ಡ್ರೈವರ್​ಗೆ ಆ ಹೋಟೆಲ್​ ಬಳಿ ನಿಲ್ಲಿಸುವಂತೆ ಹೇಳಿದ್ರು. ಆಗ ನಾನು ಬಿಡದಿಯಲ್ಲಿಯೇ ಎಲ್ಲಾ ವ್ಯವಸ್ಥೆ ಇರತ್ತಲ್ಲಪ್ಪಾ ಅಂದೆ. ಅದಕ್ಕೆ ರಾಜ್​ ಅವರು ಅದು ಇರತ್ತೆ ಬಿಡಪ್ಪಾ, ಇದು ಸಕತ್​ ಟೇಸ್ಟ್​ ಇರುತ್ತೆ ಎಂದರು. ಆಮೇಲೆ ಡ್ರೈವರ್​ನ ಕಳಿಸಿ ನನಗೆ, ಅವರಿಗೆ ಮತ್ತು ಡ್ರೈವರ್​ಗೆ ಸೇರಿಸಿ ಎರಡೆರಡು ತಟ್ಟೆ ಇಡ್ಲಿ, ವಡೆ ಮತ್ತು ಚಿತ್ರಾನ್ನ ಪಾರ್ಸೆಲ್​ ಮಾಡಿಸಿದ್ರು. ಆಮೇಲೆ ಮಣ್ಣಿನ ರೋಡ್​ ಬಂದಾಗ, ಚಿಕ್ಕ ಮೋರಿಯ ಸಮೀಪ ಹೋಗಿ ಇಲ್ಲಿ ತಿಂದರೆ ಬೇಜಾರು ಇಲ್ಲ ತಾನೇ ಎಂದರು. ನಾನು ಅಡ್ಡಿಲ್ಲ ಎಂದೆ. ಆಮೇಲೆ ಎಲ್ಲರೂ ಅಲ್ಲೇ ತಿಂದ್ವಿ' ಎನ್ನುತ್ತಲೇ ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಚಂದ್ರು ಅವರು. 

'ದೊಡ್ಡ ದೊಡ್ಡ ಇಡ್ಲಿ ತಿಂದೇ ಸುಸ್ತಾಗಿ ಹೋಗಿದ್ದೆ. ಆದರೂ ಅವರು ಬಿಡಲಿಲ್ಲ. ಎಲ್ಲವನ್ನೂ ತಿನ್ನಿಸಿದ್ರು. ಆಮೇಲೆ ಬಿಡದಿ ಕಡೆ ಹೊರಟ್ವಿ. ದಾರಿ ಮಧ್ಯೆ ಅವರು ನನಗೆ ಗುಟ್ಟಾಗಿ, ನೋಡಪ್ಪಾ, ನಾವಿಲ್ಲಿ ಏನೂ ತಿಂದೇ ಇಲ್ಲ ಎಂದರು. ನನಗೆ ಆಶ್ಚರ್ಯ ಆಯ್ತು. ಬಳಿಕ ರಾಜ್​ ಅವರೇ, ನೋಡಿ ಇಲ್ಲಿ ತಿಂದದ್ದನ್ನು ಪಾರ್ವತಿ ಬಳಿ ಹೇಳಬೇಡಿ, ನಾವು ಇಲ್ಲಿ ಏನೂ ತಿಂದಿಲ್ಲ ಅಷ್ಟೇ ಎಂದರು. ಅದು ಸರಿ ಅಲ್ಲಿ ತಿಂಡಿ ಕೊಟ್ರೆ ಏನು ಮಾಡೋದು ಎಂದು ಕೇಳಿದೆ. ಅದನ್ನೆಲ್ಲಾ ನಾನು ನೋಡಿಕೊಳ್ತೇನೆ ಬಿಡು ಎಂದು ಹೇಳಿ ಹೋದರು. ಕೊನೆಗೆ ಅಲ್ಲಿ ತಿಂಡಿ ಎಲ್ಲಾ ಸಿದ್ಧವಾಗಿತ್ತು. ಯಾರಾದ್ರೂ ತಂದುಕೊಟ್ಟು ಬಿಟ್ಟರೆ ಫುಲ್​ ಪ್ಲೇಟ್​ ಹಾಕಿಸಿಕೊಂಡು ಬರ್ತಾರೆ ಎಂದು ಪ್ಲ್ಯಾನ್ ಮಾಡಿದ ರಾಜ್​ಕುಮಾರ್​​ ಅವರೇ ಸನ್ನೆ ಮಾಡಿ ಲೈನ್​ನಲ್ಲಿ ನಿಲ್ಲುವಂತೆ ಹೇಳಿದ್ರು. ಕೊನೆಗೆ ಸ್ವಲ್ಪ ಸ್ವಲ್ಪ ಉಪ್ಪಿಟ್ಟು ಹಾಕಿಸಿಕೊಂಡು ತಿಂದಾಯಿತು. ಯಾರಿಗೂ ಡೌಟ್​ ಬರಬಾರದು ಎಂದು ರಾಜ್​ ಅವರು ಆ ಉಪ್ಪಿಟ್ಟನ್ನೆಲ್ಲಾ ತುಂಬಾ ಹೊಗಳಿ ಅಂತೂ ಮ್ಯಾನೇಜ್​ ಮಾಡಿದ್ರು' ಎಂದು ಹೇಳಿದ್ದಾರೆ.

ರಾಜ್​ಕುಮಾರರ ಮಟನ್​ ಚಾಪ್ಸ್​, ದರ್ಶನ್​ ಅಮ್ಮನ ಬಟಾಣಿ ಹಲ್ವಾ... ಅಂದಿನ ಘಟನೆ ನೆನೆದ ಸಿಹಿಕಹಿ ಚಂದ್ರು

YouTube video player