Simple Suni ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ಜೂನ್ 26ಕ್ಕೆ ಬಿಡುಗಡೆಯಾಗುತ್ತಿದೆ. ಶೀಲಮ್, ಮೋಕ್ಷ ಕುಶಾಲ್, ಸಾತ್ವಿಕಾ ನಟಿಸಿರುವ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ನಟ ಮಾಧವನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿಂಪಲ್‌ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರವು ಇದೇ ಜೂನ್‌ 26ಕ್ಕೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಯಿತು. ಶೀಲಮ್‌, ಮೋಕ್ಷ ಕುಶಾಲ್‌, ಸಾತ್ವಿಕಾ ಚಿತ್ರದ ತಾರಾ ಜೋಡಿ. ವಿಭಿನ್ನವಾದ ಹಾಗೂ ಹಿತವಾಗಿರುವ ಪ್ರೇಮ ಕತೆಗಳ ಮೂಲಕ ಗುರುತಿಸಿಕೊಂಡಿರುವ ಸಿಂಪಲ್‌ ಸುನಿ ಅವರ ಈ ಚಿತ್ರದ ಮೇಲೂ ಪ್ರೇಕ್ಷಕರಿಗೆ ನಿರೀಕ್ಷೆ ಇದೆ. ಇತ್ತೀಚೆಗೆ ತಮಿಳು ನಟ ಮಾದವನ್‌ ಕೂಡ ಚಿತ್ರದ ದೃಶ್ಯಗಳನ್ನು ನೋಡಿ ಮೆಚ್ಚಿಕೊಂಡು ಶೀಲಮ್‌ ಅವರ ನಟನೆಗೂ ಅಭಿನಂದಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಂಪಲ್‌ ಸುನಿ, ‘ಒಂದು ಸರಳ ಪ್ರೇಮ ಕತೆಯ ನಂತರ ಬರುತ್ತಿರುವ ಮತ್ತೊಂದು ಅಚ್ಚುಕಟ್ಟಾದ ಪ್ರೇಮ ಕತೆಯ ಸಿನಿಮಾ ಇದು. ಇದು ನನ್ನ ಜೀವನದ ವಿಶೇಷ ಚಿತ್ರ. ನಾನು ಟ್ರೇಲರ್‌ ಚೆನ್ನಾಗಿ ಕಟ್ ಮಾಡುತ್ತೇನೆಂದು ಹೇಳುತ್ತಾರೆ. ಆದರೆ, ಈ ಚಿತ್ರಕ್ಕೆ ಟ್ರೇಲರ್‌ ಕಟ್‌ ಮಾಡಲು ಆಗುತ್ತಿಲ್ಲ. ಅದೇ ದೊಡ್ಡ ಸವಾಲು. ಏನೇ ಟ್ರೇಲರ್‌ ಕಟ್‌ ಮಾಡಿದರೂ ಚಿತ್ರದ ಕತೆ ಹೇಳಿದಂತೆ ಆಗುತ್ತದೆ. ಹೀಗಾಗಿ ಚಿತ್ರದ ಅರ್ಧ ಬಿಟ್ಟು ಉಳಿದರ್ಧ ಭಾಗದಲ್ಲಿ ಟ್ರೇಲರ್‌ ಕಟ್‌ ಮಾಡುವುದೇ ಸವಾಲು ಆಗಿದೆ. ಸಿನಿಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ನೀವು ಥಿಯೇಟರ್‌ನಲ್ಲಿಯೇ ನೋಡಬೇಕು’ ಎಂದರು.

ಪವಾಡ ಆಗಬೇಕು

ಶೀಲಮ್‌, ‘ನಿಮ್ಮ ಮುಂದೆ ಹೀರೋ ಆಗಿ ಬರುತ್ತಿರುವೆ. ಹೀರೋ ಎಂದರೆ ಪವಾಡ. ಯಾಕೆಂದರೆ ಎಲ್ಲರೂ ಹೀರೋ ಆಗಲು ಆಗುವುದಿಲ್ಲ. ಎಷ್ಟೇ ದುಡ್ಡಿದ್ದರು, ನಟನೆಯ ಸ್ಕಿಲ್ ಇದ್ದರೂ ಹೀರೋ ಆಗುವುದಿಲ್ಲ. ಎಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಅದು ಆಗಿದೆ’ ಎಂದರು. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ, ಗೋವಾ ರಮೇಶ್‌ ಚಿತ್ರದ ನಿರ್ಮಾಪಕರು. ಸಂತೋಷ್ ರೈ ಪಾತಾಜೆ ಕ್ಯಾಮೆರಾ, ಜೂಡಾ ಸ್ಯಾಂಡಿ ಸಂಗೀತ ಇದೆ.