ಯಾರು ಎಷ್ಟೇ ದೊಡ್ಡ ಪ್ರಶ್ನೆ ಕೇಳಿದರೂ ಅತಿ ಸಣ್ಣದಾಗಿ ಉತ್ತರಿಸುವ ಶಕ್ತಿ ಮತ್ತು ಛಾತಿ ಎರಡೂ ಇದೆ. ಆದರೆ ಸಿನಿಮಾ ವಿಷಯಕ್ಕೆ ಬಂದ್ರೆ ಎಲ್ಲವನ್ನೂ ಬಿಟ್ಟು ಕೆಲಸ ಮಾಡುತ್ತಾರೆ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಟ್ರೇಲರ್‌ ನೋಡಿದವರೆಲ್ಲಾ ವಲ್ಡ್‌ರ್‍ಕ್ಲಾಸ್‌ ದೃಶ್ಯಾವಳಿ ಇದೆ ಅಂತ ಮಾತನಾಡುತ್ತಿದ್ದಾರೆ ಅಂದರೆ ಅದಕ್ಕೆ ಮುಖ್ಯ ಕಾರಣ ಇವರೇ. ಮಾತು ಕಡಿಮೆ, ಕೆಲಸ ಜಾಸ್ತಿ ಎನ್ನುವಂತೆ ಇರುವ ಮಿಸ್ಟರ್‌ ಇಂಟ್ರಾವರ್ಟ್‌ ಹೆಸರು ಸಚಿನ್‌.

ಅವನೇ ಶ್ರೀಮನ್ನಾರಾಯಣ ಸಿನಿಮಾದ ನಿರ್ದೇಶಕ. ಹುಟ್ಟಿದ್ದು ಬೆಂಗಳೂರು. ತಂದೆ ರವಿಕುಮಾರ್‌. ತಾಯಿ ಪ್ರೇಮಕುಮಾರಿ. ಓದಿದ್ದು ಇಂಜಿನಿಯರಿಂಗ್‌. ಸಿನಿಮಾ ವ್ಯಾಮೋಹದಿಂದಾಗಿ ಎಡಿಟರ್‌ ಆದರು. ಈಗ ನಿರ್ದೇಶಕರಾಗಿದ್ದಾರೆ. ಮೊದಲ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಸಂಕೋಚ ಬದಿಗಿಟ್ಟು ಮಾತನಾಡಿದ್ದಾರೆ.

ಕಿರುತೆರೆ ನಟಿ ರಿಸೆಪ್ಷನ್‌ನಲ್ಲಿ ಮೋದಿ; ಸೆಲ್ಫಿ ಆಯ್ತು ವೈರಲ್!

ಪ್ಯಾನ್‌ ಇಂಡಿಯಾ ಸಿನಿಮಾ ನಿರ್ದೇಶನ ಮಾಡುತ್ತೇನೆ ಅಂದುಕೊಂಡಿದ್ರಾ?

ಗ್ರಾಫಿಕ್ಸ್‌, ವಿಎಫ್‌ಎಕ್ಸ್‌ ಇರುವ ಸಿನಿಮಾ ನಿರ್ದೇಶಿಸುವ ಕನಸಿತ್ತು. ಆದರೆ ಮೊದಲ ಸಿನಿಮಾದಲ್ಲೇ ಆ ಕನಸು ಈಡೇರುತ್ತದೆ ಎಂದುಕೊಂಡಿರಲಿಲ್ಲ. ಟ್ರೇಲರ್‌ ರೆಡಿಯಾದ ಮೇಲೆ ಒಮ್ಮೆ ನೋಡಿದೆ. ಇಷ್ಟುದೊಡ್ಡ ಸಿನಿಮಾ ಮಾಡಿದ್ದೇನಾ ಅಂತ ನನಗೇ ಅಚ್ಚರಿಯಾಗುತ್ತಿದೆ.

ಹೊಸ ಕಲರ್‌ ಟೋನ್‌ ಇದೆ, ಹೊಸ ವಾತಾವರಣ ಕಾಣಿಸುತ್ತಿದೆ, ಹೇಗೆ ಇದೆಲ್ಲಾ ಸಾಧ್ಯವಾಯಿತು?

ಈ ಸಿನಿಮಾ ಬರೆಯುವಾಗಲೇ ಈ ಸಿನಿಮಾದಲ್ಲಿ ಶೇ.75 ವಿಎಫ್‌ಎಕ್ಸ್‌ ಇರುತ್ತದೆ ಅಂತ ಗೊತ್ತಿತ್ತು. ಅದಕ್ಕೆ ತಕ್ಕಂತೆ ಪ್ಲಾನ್‌ ಮಾಡಿಕೊಂಡೆವು. ನನಗೆ ಕಲರ್‌ ಗ್ರೇಡಿಂಗ್‌ ಅಂದ್ರೆ ಮೊದಲಿನಿಂದಲೂ ಇಷ್ಟ. ಆದರೆ ಸಿನಿಮಾ ಶೂಟಿಂಗ್‌ ಆದಮೇಲೆ ನಮಗೆ ಬೇಕಾದಂತೆ ಕಲರ್‌ ಗ್ರೇಡಿಂಗ್‌ ಮಾಡಲು ಆಗುವುದಿಲ್ಲ. ನಾವು ಮೊದಲೇ ಪ್ಲಾನ್‌ ಮಾಡಬೇಕು.

ನೀವು ಪಬ್‌ ಸೀನ್‌ ನೋಡಿದರೆ ಒಂದೇ ಥರದ ಗೋಡೆ ಬಣ್ಣ, ನಾಯಕನ ಕಾಸ್ಟೂ್ಯಮ್‌, ವಾತಾವರಣ ಎಲ್ಲವೂ ಹೊಂದಿಕೊಳ್ಳುತ್ತದೆ. ನಾವು ಅದನ್ನೆಲ್ಲಾ ಯೋಜನೆ ಹಾಕಿಕೊಂಡಿದ್ದೆವು. ಇನ್ನು ವಿಎಫ್‌ಎಕ್ಸ್‌ ಮಾಡುವುದು ದೊಡ್ಡದಲ್ಲ. ವಿಎಫ್‌ಎಕ್ಸ್‌ ಅನ್ನು ವಿಎಫ್‌ಎಕ್ಸ್‌ ಅನ್ನಿಸುವಂತೆ ಮಾಡದೇ ಇರುವುದು ಸವಾಲು. ಟ್ರೇಲರ್‌ನಲ್ಲಿ ಕೌಬಾಯ್‌ ಕೃಷ್ಣ ಪಬ್‌ ನೋಡಿದ್ದೀರಿ. ಅದನ್ನು ಒಂದೇ ಗೋಡೆ ಇಟ್ಟುಕೊಂಡು ಚಿತ್ರೀಕರಿಸಿದ್ದೇವೆ. ಆದರೆ ನೋಡುಗರಿಗೆ ಗೊತ್ತಾಗದಂತೆ ಕಾಣಿಸಿದ್ದೇವೆ ಅನ್ನುವುದೇ ನನ್ನ ಖುಷಿ.

ಖುಷ್ಬು ಜೊತೆ ಚಿರಂಜೀವಿ ಸಖತ್ ಡ್ಯಾನ್ಸ್; ವಿಡಿಯೋ ವೈರಲ್

ಎಡಿಟರ್‌ ಆಗಿದ್ದವರು ನಿರ್ದೇಶಕರಾಗಿದ್ದು ಯಾಕೆ?

ಇಂಜಿನಿಯರಿಂಗ್‌ ಕಲಿಯುತ್ತಿದ್ದಾಗಲೇ ಅನಿಮೇಷನ್‌ ಕಲಿತೆ. ಸಿನಿಮಾ ವ್ಯಾಮೋಹ ಹುಟ್ಟಿಕೊಂಡಿತು. ಆ ಹೊತ್ತಿಗೆ ಸಿಂಪಲ್‌ ಸುನಿ ಸಿಕ್ಕರು. ಸಿಂಪಲ್ಲಾಗೊಂದ್‌ ಲವ್‌ಸ್ಟೋರಿ ಸಿನಿಮಾಗೆ ಎಡಿಟರ್‌ ಆಗಿ ಕೆಲಸ ಮಾಡಿದೆ. ಆಮೇಲೆ ಉಳಿದವರು ಕಂಡಂತೆ, ಬಹುಪರಾಕ್‌, ಕಿರಿಕ್‌ಪಾರ್ಟಿ, ಆಪರೇಷನ್‌ ಅಲಮೇಲಮ್ಮ ಚಿತ್ರಕ್ಕಾಗಿ ದುಡಿದೆ. ನಿರ್ದೇಶಕನಾಗುವ ಹಂಬಲವನ್ನು ರಕ್ಷಿತ್‌ ಜತೆ ಹಂಚಿಕೊಂಡೆ. ಬದುಕು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ.

ಅವನೇ ಶ್ರೀಮನ್ನಾರಾಯಣ ನಿಮಗೆ ಯಾಕೆ ಮುಖ್ಯ?

ನನ್ನ ಮನೆ ಇರುವುದು ಬೆಂಗಳೂರಿನಲ್ಲೇ. ಆದರೆ ಈ ಸಿನಿಮಾ ಶುರುವಾದ ಮೂರು ವರ್ಷದಲ್ಲಿ ಹತ್ತು ಬಾರಿ ಮನೆಗೆ ಹೋಗಿರಬಹುದು. ಇಲ್ಲೇ ಆಫೀಸ್‌ ಪಕ್ಕದಲ್ಲಿ ರೂಮ್‌ ಮಾಡಿಕೊಂಡು ಇದ್ದೇನೆ. ಈ ಸಿನಿಮಾ ನನಗೆ ಭಾವನಾತ್ಮಕವಾಗಿ ತುಂಬಾ ಹತ್ತಿರದ ಸಿನಿಮಾ. ಮೂರು ವರ್ಷ ಎಲ್ಲವನ್ನೂ ಈ ಚಿತ್ರಕ್ಕಾಗಿ ಅರ್ಪಿಸಿದ್ದೇವೆ. ಹೇಗೆ ಕೆಲಸ ಮಾಡಿದ್ದೀವಿ ಅಂತ ಸಿನಿಮಾ ರಿಲೀಸ್‌ ಆದ ಮೇಲೆ ಜನರು ಹೇಳಬೇಕು. ಅದಕ್ಕಾಗಿ ಕಾಯುತ್ತಿದ್ದೇವೆ.

ರಕ್ಷಿತ್‌ ಶೆಟ್ಟಿಯವರನ್ನು ಹೇಗೆ ಕಂಟ್ರೋಲ್‌ ಮಾಡಿದಿರಿ?

ಅವರನ್ನು ಕಂಟ್ರೋಲ್‌ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾರಾಯಣ ಹೇಗಿರುತ್ತಾನೆ, ಹೇಗೆ ನಡೆಯುತ್ತಾನೆ ಅನ್ನುವುದು ಗೊತ್ತಿದ್ದದ್ದೇ ಅವರಿಗೆ. ಅವರೇ ಬರೆದಿರುವ ಕತೆ ಇದು. ನನಗೆ ಶೂಟಿಂಗ್‌ ಶುರುವಾದ ಮೂರು ದಿನ ಆದ ಮೇಲೆ ನಾರಾಯಣ ಅರ್ಥವಾದ. ಅಷ್ಟುವಿಭಿನ್ನವಾದ ಪಾತ್ರ ಅದು.

ಆದರೆ ಎಲ್ಲಿ ಹದ ತಪ್ಪುತ್ತಿದೆ, ಎಷ್ಟುಹದ ಬೇಕು ಅಂತ ಹೇಳುವ ಜವಾಬ್ದಾರಿ ನನಗಿತ್ತು. ಅದನ್ನು ನಿಭಾಯಿಸಿದ್ದೇನೆ. ಅಲ್ಲದೇ ಶೂಟಿಂಗ್‌ ಸ್ಪಾಟ್‌ನಲ್ಲೇ ಚರ್ಚೆ ಮಾಡಿ ತುಂಬಾ ಇಂಪ್ರೂವೈಸ್‌ ಮಾಡಿದ್ದೇವೆ. ಈ ಚಿತ್ರದಲ್ಲಿ ರಕ್ಷಿತ್‌, ಶಾನ್ವಿ, ಬಾಲಾಜಿ ಮನೋಹರ್‌ ಸೇರಿದಂತೆ ಎಲ್ಲರೂ ಅದ್ಭುತ ಕಲಾವಿದರು ಸಿಕ್ಕಿದ್ದಾರೆ. ಒಳ್ಳೊಳ್ಳೆಯ ಟೆಕ್ನಿಷಿಯನ್ಸ್‌ ಜತೆ ಕೆಲಸ ಮಾಡಿದ್ದೀನಿ ಅನ್ನುವುದು ನನ್ನ ಅದೃಷ್ಟಮತ್ತು ಹೆಮ್ಮೆ.

- ರಾಜೇಶ್ ಶೆಟ್ಟಿ