ಮಗನ ಸಿನಿಮಾ ನೋಡಿ ಭಾವುಕರಾದ ಮಾಸ್ಟರ್ ಆನಂದ್ ದಂಪತಿ. ಸಿನಿಮಾ ಮೆಚ್ಚಿದ ವೀಕ್ಷಕರು.... 

ಕೊರೋನಾ ವೈರಸ್ ಮೂರನೇ ಅಲೆ, 50% ಸೀಟಿಂಗ್ ಚಿಂತೆ ನಡುವೆಯೂ ಅದ್ಭುತ ಕನ್ನಡ ಸಿನಿಮಾವೊಂದು ಬಿಡುಗಡೆ ಆಗಿದೆ. ಅದುವೇ DNA. ಮಾಸ್ಟರ್ ಆನಂದ್ ಮಗ ಕೃಷ್ಣ ಚೈತನ್ಯಾ, ಅಚ್ಯುತ್ ಕುಮಾರ್, ಎಸ್ತರ್ ನೊರೋನ್ಹಾ ಮತ್ತು ಯಮುನಾ ನಟಿಸಿದ್ದಾರೆ. ಮೊದಲ ದಿನವೇ ಮೊದಲ ಶೋನಲ್ಲಿ ಮಗನ ಸಿನಿಮಾ ನೋಡಿ ಪೋಷಕರು ಭಾವುಕರಾಗಿದ್ದಾರೆ.

'ಸಿನಿಮಾ ನೋಡಿ ನಾವು ಫುಲ್ ಅಳೋದೆ. ಒಂದು ಕಡೆ ಅವರದ್ದೇ (ಪತ್ನಿ) ಸೌಂಡ್. ಅವಳು ಮುಖ ಒರಸಿಕೊಂಡು ಅತ್ತು ಅತ್ತು ಮುಖ ಎಲ್ಲಾ ಊದಿಕೊಂಡಿದೆ. ಹಣೆಗೆ ಬೊಟ್ಟು ಕೂಡ ಇಲ್ಲ. ಅಷ್ಟು ಎಮೋಷನಲ್ ಸಿನಿಮಾ ಇದು. ಸಿನಿಮಾದಲ್ಲಿ ತಾಯಿ ಪಾತ್ರ ಮಾಡಿದ್ದಾರಲ್ವಾ ಅವರಿಬ್ರೂ ಗ್ರೇಟ್. ಹೇಗಿದೆ ಸಿನಿಮಾ ಅಂತ ಕೇಳಿದ್ರು ನಾನು ಹೇಳಿದೆ ಈ ಮೊಸರು ಕಡಿಯುವಾಗ ಎರಡು ದಾರ ಬೇಕು ಆಗ ಚೆನ್ನಾಗಿ ಬೆಣ್ಣೆ ಬರುತ್ತೆ ಇಬ್ರು ಕಡ್ದು ಕಡ್ದು ನಮ್ಮ ಕಣ್ಣಿಂದ ಅಷ್ಟು ನೀರು ತರ್ಸಿಬಿಟ್ರು' ಎಂದು ಮಾಸ್ಟರ್ ಆನಂದ್ ಭಾವುಕರಾದರು. 

'ಇದು ತುಂಬಾ ಎಮೋಷನಲ್ ಸಿನಿಮಾ. ಏಕೆಂದರೆ DNA ಅನ್ನೋದು ಎಲ್ಲಾ ತಂದೆ ತಾಯಿಗೂ ತುಂಬಾನೇ ಕನೆಕ್ಟ್ ಆಗುವ ವಿಚಾರ. ಈ ವಿಚಾರ ಪ್ರಕಾಶ್ ಸರ್ ತೆರೆ ಮೇಲೆ ತಂದಿರುವುದು ಹೇಳೋಕೆ ಆಗೋಲ್ಲ ಅಷ್ಟು ಚೆನ್ನಾಗಿದೆ. ಪ್ರತಿಯೊಬ್ಬ ತಂದೆ ತಾಯಿನೂ ಈ ಸಿನಿಮಾ ನೋಡಬೇಕು. ಹೆರುವುದು ದೊಡ್ಡದೇ ಸಾಕುವುದು ಅದಕ್ಕಿಂತ ದೊಡ್ಡದು. ಸಿನಿಮಾ ನೋಡಿ ಹೊರ ಬಂದ್ಮೇಲೆ ಒಂದು ಸೆಕೆಂಡ್ ಇವನು ನನ್ನ ಮಗ ಅಲ್ಲ ಅಂದು ಬಿಟ್ರೆ? ಸಾಧ್ಯನೇ ಇಲ್ಲ ಅವರು ನನ್ನ ಮಕ್ಕಳೇ ಅನ್ನೋ ಮಟ್ಟಕ್ಕೆ ಸಿನಿಮಾ ಕನೆಕ್ಟ್‌ ಆಗುತ್ತೆ' ಎಂದು ಆನಂದ್ ಪತ್ನಿ ಯಶಸ್ವಿನಿ ಹೇಳಿದ್ದಾರೆ.

DNA Film Review: ಸೆಂಟಿಮೆಂಟಿಗೆ ಮಾಡರ್ನ್ ಟಚ್

'ನನ್ನ ಸ್ನೇಹಿತರು ಒಬ್ಬರು ಹೇಳ್ತಿದ್ರು ಸರ್ ನಿಮಗೆ ಈ ಸಮಸ್ಯೆನೇ ಇಲ್ಲ ಸರ್, ಯಾರ್ ನೋಡಿದ್ರು ಇವನು ನಿಮ್ಮ ಮಗ ಅವಳು ನಿಮ್ಮ ಮಗಳು ಅಂತ ಯಾವ ಜಾತ್ರೆಯಲ್ಲೂ ಕರೆದುಕೊಂಡು ಬಂದು ಬಿಡ್ತಾರೆ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನನ್ನ ತಂದೆ ನನ್ನ ಜೊತೆ ಬರ್ತಿದ್ರು ಈಗಲೂ ಅವರೇ ನನ್ನ ಮಗನ ಜೊತೆ ಹೋಗುತ್ತಿದ್ದಾರೆ. ಈ ಸಿನಿಮಾ ಮೆಂಟರ್‌ಶಿಪ್‌ ಸಂಪೂರ್ಣ ನನ್ನ ತಂದೆ ಅವರೇ ಮಾಡಿದ್ದು. ನಾನು ನಿರ್ದೇಶಕರಿಗೆ ಹೇಳಿದ್ದೆ ಲೋಕೇಷ್‌ಗೆ ನಾನು ಬರೋಲ್ಲ ಸರ್. ನಮ್ಮ ಅಪ್ಪಂಗೂ ಹೇಳಿದೆ ನಾನು ಬಂದ್ರೆ ಅಪ್ಪ ಇದ್ದಾರೆ ಅಂತ concentration ಆ ಕಡೆ ಈ ಕಡೆ ಆಗಬಹುದು ಅಂತ. ನೀವು ಸಿನಿಮಾ ಕಂಪ್ಲೀಟ್ ಮಾಡಿ ನಾನು ಒಬ್ಬ ಪ್ರೇಕ್ಷಕನಾಗಿ ಥಿಯೇಟರ್‌ನಲ್ಲಿ ಸಿನಿಮಾ ನೋಡ್ತೀನಿ ಅಂದಿದ್ದೆ.ನಾನು ಇವನ ಡಬ್ಬಿಂಗ್‌ಗೆ ಕೂಡ ಹೋಗಿಲ್ಲ ನಾನು' ಎಂದು ಆನಂದ್ ಹಾಸ್ಯ ಮಾಡಿದ್ದಾರೆ. 

'ಸಿನಿಮಾ ಒಪ್ಪಿಕೊಂಡಾಗ ಅಪ್ಪ ಸಜೆಸ್ಟ್‌ ಮಾಡಿದ್ದು ಒಂದೇ ನೀನು ಶೂಟಿಂಗ್ ಎಲ್ಲಿಯೇ ಹೋದರೂ ಡೈರೆಕ್ಟರ್ ಮತ್ತು ಕ್ಯಾಮೆರಾ ಮ್ಯಾನ್ ಹೇಳಿದನ್ನೇ ಮಾಡು ಅಂತ. ಚಿತ್ರೀಕರಣಕ್ಕೆ ತಾತ ಜೊತೆಗೆ ಬರುತ್ತಿದ್ದರು ಅವರು ಫುಲ್ ಚಿಲ್ ಕೂಲ್ ಆದರೆ ನಾನು ಸರಿಯಾಗಿ ಮಾಡದಿದ್ದರೆ ಬೈಯೋರು' ಎಂದು ಮಾ. ಕೃಷ್ಣ ಮಾತನಾಡಿದ್ದಾನೆ. 

ಜಪಾನ್ ಭಾಷೆಯಲ್ಲಿ 2013ರಲ್ಲಿ ಬಂದ ‘ಲೈಕ್ ಫಾದರ್ ಲೈಕ್ ಸನ್’ ಸಿನಿಮಾ ನೋಡಿದ್ದರೆ ‘ಡಿಎನ್‌ಎ’ (DNA) ಸಿನಿಮಾದ ಕತೆ ಏನು ಅನ್ನೋದು ಆರಂಭದಲ್ಲೇ ಗೊತ್ತಾಗುತ್ತದೆ. ಸಿನಿಮಾಕ್ಕೆ ಡಿಎನ್‌ಎ ಅನ್ನೋ ಹೆಸರಿದ್ದರೂ, ಡಿಎನ್‌ಎ ಬದಲಾದ್ದರಿಂದ ಆಗುವ ಪರಿಣಾಮದ ಬಗೆಗೆ ಇರುವ ಚಿತ್ರವಿದು.