Asianet Suvarna News Asianet Suvarna News

Bengaluru International Film Festival: ಮಾ.3 ವಿಶ್ವ ಕನ್ನಡ ಚಲನಚಿತ್ರ ದಿನ: ಸಿಎಂ

*   ಅಂದು ಕನ್ನಡದ ಮೊದಲ ವಾಕ್‌ಚಿತ್ರ ಸತಿ ಸುಲೋಚನ ಬಿಡುಗಡೆ
*   ಕನ್ನಡಚಿತ್ರ ಉಳಿಸಿಕೊಳ್ಳಬೇಕಾದರೆ ವಿಶೇಷ ಎಫೆಕ್ಟ್ ಮಾಡೋದು ಮುಖ್ಯ
*   ಕನ್ನಡ ಭಾಷೆ ಉಳಿವಿಗೆ ಕನ್ನಡ ಚಿತ್ರ ಪೂರಕ: ಬೊಮ್ಮಾಯಿ
 

March 3 World Kannada Movie Day Says CM Basavaraj Bommai grg
Author
Bengaluru, First Published Mar 4, 2022, 4:47 AM IST

ಬೆಂಗಳೂರು(ಮಾ.04): ಕನ್ನಡದ(Kannada) ಪ್ರಪ್ರಥಮ ವಾಕ್‌ ಚಿತ್ರ ಸತಿ ಸುಲೋಚನ 1934ರ ಮಾರ್ಚ್‌ 3ರಂದು ತೆರೆ ಕಂಡ ಸ್ಮರಣಾರ್ಥವಾಗಿ ಮಾರ್ಚ್‌ 3ನ್ನು ‘ವಿಶ್ವ ಕನ್ನಡ ಚಲನಚಿತ್ರ ದಿನ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಘೋಷಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಗುರುವಾರ ಜಿಕೆವಿಕೆ ಆವರಣದ ಡಾ.ಬಾಬು ರಾಜೇಂದ್ರ ಪ್ರಸಾದ್‌ ಸಭಾಂಗಣದಲ್ಲಿ ಯೋಜಿಸಿದ್ದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(13th Bengaluru International Film Festival) (ಮಾ.3ರಿಂದ 10ರ ವರೆಗೆ) ಉದ್ಘಾಟಿಸಿ ಅವರು ಮಾತನಾಡಿದರು.

Kanneri Movie: ನೈಜ ಘಟನೆಯ ಬೆನ್ನೇರಿದ 'ಕನ್ನೇರಿ' ಮಾ.4ರಂದು ರಿಲೀಸ್!

ಮಾರ್ಚ್‌ 3 ಕನ್ನಡ ಚಿತ್ರರಂಗಕ್ಕೆ(Sandalwood) ಐತಿಹಾಸಿಕ ದಿನ. ಏಕೆಂದರೆ, ಇದು ಕನ್ನಡದ ಪ್ರಪ್ರಥಮ ವಾಕ್‌ ಚಿತ್ರ ಬಿಡುಗಡೆಯಾದ ದಿನ. ಈ ದಿನವೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ(Government of Karnataka) ಮಾರ್ಚ್‌ 3ಅನ್ನು ವಿಶ್ವ ಕನ್ನಡ ಚಲನಚಿತ್ರ ದಿನ ಎಂದು ಘೋಷಿಸುತ್ತಿದ್ದೇನೆ. ಅಲ್ಲದೆ, ಇನ್ನು ಮುಂದೆ ಇದೇ ದಿನದಂದು ಅಂತಾರಾಷ್ಟ್ರೀಯ ಚಲಚಿತ್ರೋತ್ಸವ ಆರಂಭಿಸಲಾಗುವುದು ಎಂದು ತಿಳಿಸಿದರು.

ಇಂದಿನ ಡಿಜಿಟಲ್‌ ವಿಶ್ವದಲ್ಲಿ ಎಲ್ಲಿ ಏನು ಬೇಕಾದರೂ ಸೃಷ್ಟಿಸಬಹುದು. ಹಳ್ಳಿಯವರೆಗೂ ಡಿಜಿಟಲ್‌ ತಂತ್ರಜ್ಞಾನ ತಲುಪಿದೆ. ಹಿಂದೆ ಸಿನಿಮಾ(Cinema) ರೀಲ್‌ ಡಬ್ಬವನ್ನು ಸ್ಕೂಟರ್‌ನಲ್ಲಿ ಇರಿಸಿಕೊಂಡು ಬರುತ್ತಿದ್ದರು. ಸ್ಕೂಟರ್‌ ಕೈಕೊಟ್ಟರೆ ಸಿನಿಮಾ ಪ್ರದರ್ಶನ ವಿಳಂಬವಾಗುತ್ತಿತ್ತು. ಇಂದು ಶೂಟಿಂಗ್‌, ಸಿನಿಮಾ, ಸ್ಪೆಷಲ್‌ ಎಫೆಕ್ಟ್ ಸೇರಿದಂತೆ ಎಲ್ಲದರಲ್ಲೂ ತಂತ್ರಜ್ಞಾನ ಬಹಳ ಬದಲಾಗಿದೆ. ಕನ್ನಡ ಚಿತ್ರರಂಗವನ್ನು ಉಳಿಸಿಕೊಳ್ಳಬೇಕಾದರೆ, ವಿಶೇಷ ಎಫೆಕ್ಟ್ ಮಾಡುವುದು ಬಹಳ ಮುಖ್ಯ. ಏಕೆಂದರೆ, ಅಂತಾರಾಷ್ಟ್ರೀಯ ಪೈಪೋಟಿ, ಪಕ್ಕದ ರಾಜ್ಯಗಳ ಪೈಪೋಟಿ ಹಾಗೂ ನಮ್ಮ ಸೀಮಿತ ಸಿನಿಮಾ ವೀಕ್ಷಕರ ನಡುವೆ ಚಲನಚಿತ್ರರಂಗವನ್ನು ಉಳಿಸುವ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ ಎಂದರು.

ಸಿನಿಮಾ ಪ್ರಭಾವಿ ಮಾಧ್ಯಮ:

ಈ ರಾಜ್ಯವನ್ನು ಕಟ್ಟುವಾಗ ಹಲವಾರು ಕ್ಷೇತ್ರಗಳ ಬೆಳವಣಿಗೆಯಲ್ಲಿ ಅಭಿವೃದ್ಧಿ ಮಾಡಬೇಕು. ಕನ್ನಡ, ಕನ್ನಡಚಿತ್ರರಂಗ, ಕನ್ನಡದ ಭವಿಷ್ಯ ಉಳಿಸಲು ಕನ್ನಡಚಿತ್ರ ಅತ್ಯಾವಶ್ಯಕವಾಗಿದೆ. ಸಿನಿಮಾ ಬಹಳ ಪ್ರಭಾವಿ ಮಾಧ್ಯಮ. ಹೀಗಾಗಿ ಇದನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯವಾಗಿದೆ. ಪ್ರಸ್ತುತ ಒಂದೊಂದೆ ಸಿನಿಮಾ ಮಂದಿರ ಮುಚ್ಚುತ್ತಿವೆ. ಚಿತ್ರಮಂದಿರ ಇದ್ದರೆ ಜನ ಬರೋದು, ಸಿನಿಮಾ ನೋಡೋದು. ಹೀಗಾಗಿ ಈ ಬಗ್ಗೆ ವಿಭಿನ್ನ ಚಿಂತನೆಯ ಅಗತ್ಯವಿದೆ. ಹೊಸ ತಂತ್ರಜ್ಞಾನದ ಮೂಲಕ ನಾವು ಪ್ರಯತ್ನಿಸಬೇಕು. ನಮ್ಮ ಪ್ರತಿಭೆಗಳು ಮೊದಲು ನಮ್ಮಲ್ಲೇ ಬಳಕೆ ಮಾಡಿ ಬಳಿಕ ಮುಂದೆ ಹೋಗುವಂತೆ ಮಾಡಬೇಕು. ಸದಾಭಿರುಚಿಯ ಸಿನಿಮಾ ಮಾಡಬೇಕು. ನಮ್ಮ ಜನ ಪರಿವಾರದ ಜತೆ ಕುಳಿತು ನೋಡುವಂತಹ ಸಿನಿಮಾ ಮಾಡಬೇಕು. ಆಗ ಮಾತ್ರ ಚಿತ್ರರಂಗ ಉಳಿಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯು ಸಹಾಯ ಮಾಡಲು ಸಿದ್ಧವಿದೆ. ಈ ಬಗ್ಗೆ ಕುಳಿತು ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದರು.

ಎಲ್ಲರಿಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡಲು ಸಾಧ್ಯವಿಲ್ಲ. ಬೆಂಗಳೂರಿಗೆ ಈ ಗರಿಮೆ ಸಿಕ್ಕಿದ್ದು ನಮ್ಮೆಲ್ಲರ ಹೆಮ್ಮೆ. ಚಿತ್ರರಂಗದ ಹಲವು ಹಿರಿಯ ಪ್ರಯತ್ನ ಫಲವಾಗಿ ಈ ಗರಿಮೆ ಸಿಕ್ಕಿದೆ. ದೇಶದ ಐದು ರಾಜ್ಯಗಳಲ್ಲಿ ಮಾತ್ರ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೆ. ಈ ಪೈಕಿ ಬೆಂಗಳೂರು ನಂಬರ್‌ ಒನ್‌ ಆಗಬೇಕು. ಮುಂದಿನ ದಿನಗಳಲ್ಲಿ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಗುಣಮಟ್ಟದ ಸಿನಿಮಾ ತೆಗೆಯಬೇಕು. ಜನಸಾಮಾನ್ಯರಿಗೆ ಸಾಮಾಜಿಕ ಸಂದೇಶವಿರುವ ಸಿನಿಮಾ ಮಾಡಬೇಕು. ಹಿಂದಿನ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಸಿನಿಮಾಗಳಲ್ಲಿ ಸಾಮಾಜಿಕ ಸಂದೇಶ ಇರುತ್ತಿತ್ತು. ಈ ಹಿಂದೆ ಸೀಮಿತ ತಂತ್ರಜ್ಞಾನದಲ್ಲೇ ಗುಣಮಟ್ಟದ ಸಿನಿಮಾ ಮಾಡುತ್ತಿದ್ದರು. ಹೀಗಾಗಿ ಇಂದಿನ ಸಿನಿಮಾ ತಯಾರಕರು ಹಳೇಯ ಹಾಗೂ ಹೊಸ ತಂತ್ರಜ್ಞಾನದ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ಪ್ರಯತ್ನಿಸಬೇಕು. ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಿನಿಮಾ ರಂಗದವರು ನೋಡಬೇಕು. ಇದರಿಂದ ಹೊಸ ಆಲೋಚನೆಗಳು ಬರುತ್ತವೆ ಎಂದು ಹೇಳಿದರು.

Dhruva Sarja: ಮಂತ್ರಾಲಯಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದ ಆಕ್ಷನ್ ಪ್ರಿನ್ಸ್!

ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ನಿರ್ದೇಶಕ ಪ್ರಿಯದರ್ಶನ್‌, ತೋಟಗಾರಿಕಾ ಸಚಿವ ಮುನಿರತ್ನ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಕಲಾತ್ಮಕ ಸಿನಿಮಾ ನಿರ್ದೇಶಕ ಎಚ್‌.ಎನ್‌.ನರಹರಿರಾವ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಆಯುಕ್ತ ಡಾ. ಪಿ.ಎಸ್‌.ಹರ್ಷ ಮತ್ತಿತರರು ಉಪಸ್ಥಿತರಿದ್ದರು.

ಪ್ರಸಕ್ತ ಸಾಲಿನಲ್ಲಿ ಫಿಲಂ ಸಿಟಿ ಅನುಷ್ಠಾನ

ಮೈಸೂರಿನಲ್ಲಿ(Mysuru) ಒಂದು ಚಲನಚಿತ್ರನಗರಿ(Flim City) ನಿರ್ಮಾಣದ ಆಸೆ ಇದೆ. ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದರಿಂದ ಈ ಬಜೆಟ್‌ನಲ್ಲಿ ಘೋಷಣೆ ಮಾಡಲ್ಲ. ಆದರೆ, 2022-23ನೇ ಸಾಲಿನಲ್ಲಿ ಅನುಷ್ಠಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅಲ್ಲದೆ, ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಹುಟ್ಟೂರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್‌ನಲ್ಲಿ ಶಿಥಿಲಾವಸ್ಥೆಯಲ್ಲಿ ಇರುವ ಅವರ ಮನೆಯನ್ನು ಸ್ಮಾರಕವಾಗಿ ರೂಪಿಸಲು ಹಾಗೂ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ವಾಮ್ಯದ ಕನ್ನಡ ಚಲನಚಿತ್ರ ಅಮೃತೋತ್ಸವ ಭವನದಲ್ಲಿ ಚಿತ್ರ ಮಂದಿರವನ್ನು ನಿರ್ಮಿಸಲು ಎಲ್ಲ ರೀತಿಯ ನೆರವು ಒದಗಿಸುವುದಾಗಿ ಭರವಸೆ ನೀಡಿದರು.

ಹೊಸ ಪ್ರಯೋಗಗಳಿಗೆ ಪ್ರೇರಣೆ: ನಟಿ ಭಾರತಿ

ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್‌ ಮಾತನಾಡಿ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೇರೆ ದೇಶಗಳ ಸಿನಿಮಾ ನೋಡುವುದರಿಂದ ಅವರ ದೃಷ್ಟಿಕೋನ, ತಂತ್ರಜ್ಞಾನ, ಕಥೆ, ಜೀವನಶೈಲಿ, ಹೊಸ ಕಲ್ಪನೆ, ಆಲೋಚನೆ ಎಲ್ಲವನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿದೆ. ಪರಸ್ಪರ ಭಾವನೆಗಳ ವಿನಿಮಮಯ, ಹೊಸ ಪ್ರಯೋಗಗಳಿಗೆ ಪ್ರೇರಣೆಗೆ ಉತ್ತಮ ವೇದಿಕೆಯಾಗಿದೆ. ಈ ಚಿತ್ರೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
 

Follow Us:
Download App:
  • android
  • ios