Dhruva Sarja: ಮಂತ್ರಾಲಯಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದ ಆಕ್ಷನ್ ಪ್ರಿನ್ಸ್!
ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಅವರು 'ಮಾರ್ಟಿನ್' ಶೂಟಿಂಗ್ ಕೆಲಸದಿಂದ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಆ ಬಿಡುವಿನಲ್ಲಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.

ನಟ ಧ್ರುವ ಸರ್ಜಾ (Dhruva Sarja) ಗುರುವಾರ (ಮಾ.03) ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ (Mantralaya Temple) ಭೇಟಿ ನೀಡಿದ್ದು, ರಾಯರ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭದೇಂದ್ರ ತೀರ್ಥರ ಆಶೀರ್ವಾದ ಪಡೆದು ಧ್ರುವ ಸರ್ಜಾ ಧನ್ಯರಾಗಿದ್ದಾರೆ.
ಮಂತ್ರಾಲಯದಲ್ಲಿ ಧ್ರುವ ಸರ್ಜಾ ರಾಯರ ವೃಂದಾವನ ದರ್ಶನ ಪಡೆದರು. ನಂತರ ಮಠದ ಪ್ರಾಂಗಣದಲ್ಲಿ ನಡೆದ ಹರಕೆ ರಥೋತ್ಸವದಲ್ಲಿ ಭಾಗಿಯಾಗಿ ರಥವನ್ನ ಎಳೆಯುವ ಮೂಲಕ ಹರಕೆಯನ್ನ ತೀರಿಸಿದರು.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಧ್ರುವ ಸರ್ಜಾಗೆ ಆಶೀರ್ವಚನ ನೀಡಿದರು. ಗುರುರಾಯರು ತಪಸ್ಸು ಮಾಡಿದ ಸ್ಥಳ ರಾಯಚೂರು ತಾಲೂಕಿನ ಗಾಣಧಾಳದ ಪಂಚಮುಖಿ ಆಂಜನೇಯ ದೇವಾಲಯಕ್ಕೂ ಭೇಟಿ ನೀಡಿ ಪಂಚಮುಖಿ ಆಂಜನೇಯ ದರ್ಶನವನ್ನು ಧ್ರುವ ಪಡೆದರು.
ಧ್ರುವ ಸರ್ಜಾ ಮಂತ್ರಾಲಯಕ್ಕೆ ಭೇಟಿ ನೀಡಿದ ಸಂದರ್ಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಮಂತ್ರಾಲಯದಲ್ಲಿ ಅವರನ್ನು ಕಂಡ ಅಭಿಮಾನಿಗಳು (Fans) ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ. ಸೆಲ್ಫಿಗೆ (Selfie) ಪೋಸ್ ನೀಡುವ ಮೂಲಕ ಅಭಿಮಾನಿಗಳನ್ನು ಧ್ರುವ ಖುಷಿಪಡಿಸಿದ್ದಾರೆ.
ಸದ್ಯ 'ಪೊಗರು' ಸಿನಿಮಾದ ಬಳಿಕ ಅವರ 'ಮಾರ್ಟಿನ್' (Martin) ಚಿತ್ರದ ಕೆಲಸಗಳಲ್ಲಿ ಧ್ರುವ ಸರ್ಜಾ ತೊಡಗಿಕೊಂಡಿದ್ದಾರೆ. ಎ.ಪಿ. ಅರ್ಜುನ್ (AP Arjun) ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಇನ್ನು 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಸರ್ಜಾ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಅವರು ಜಿಮ್‌ನಲ್ಲಿ ಫುಲ್ ವರ್ಕೌಟ್ ಕೂಡಾ ಮಾಡುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ನಟಿ ವೈಭವಿ ಶಾಂಡಿಲ್ಯ (Vaibhavi Shandilya) ಕಾಣಿಸಿಕೊಂಡಿದ್ದು, ಉದಯ್ ಕೆ.ಮೆಹ್ತಾ (Uday K.Mehta) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.