Asianet Suvarna News Asianet Suvarna News

ಹಿಂದಿನ ಚಿತ್ರಗಳಿಂದ ಪಾಠ ಕಲಿತಿರುವೆ: ಮನೋರಂಜನ್‌ ರವಿಚಂದ್ರನ್‌

ಸಾಹೇಬ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾದವರು ಕ್ರೇಜಿಸ್ಟಾರ್‌ ಕುಟುಂಬದ ಕುಡಿ ಮನೋರಂಜನ್‌ ರವಿಚಂದ್ರನ್‌. ಅವರ ನಟನೆಯ ಎರಡು ಚಿತ್ರಗಳು ತೆರೆಗೆ ಬಂದಿವೆ. ಉಳಿದ ಎರಡು ಸಿನಿಮಾಗಳ ಪೈಕಿ ಒಂದು ಶೂಟಿಂಗ್‌ ಮುಗಿಸಿ ಬಿಡುಗಡೆಗೆ ಬಂದಿದ್ದರೆ, ಮತ್ತೊಂದು ಶೂಟಿಂಗ್‌ ಹಂತದಲ್ಲಿದೆ. ಈ ಹೊತ್ತಿನಲ್ಲಿ ಮನೋರಂಜನ್‌ ಹೇಳಿದ್ದೇನು ಎಂಬುದನ್ನು ಅವರ ಮಾತಿನಲ್ಲೇ ಕೇಳಿ.

Manoranjan ravichandran revels interesting facts about mugilpete film
Author
Bangalore, First Published Mar 20, 2020, 9:37 AM IST

ಸಾಫ್ಟ್‌ ಟೈಟಲ್‌,ಮಾಸ್‌ ಲುಕ್‌

ಹೆಸರಿನಿಂದಲೇ ಕುತೂಹಲ ಮೂಡಿಸಿರುವ ಮತ್ತು ನಮ್ಮ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುವ ಭರವಸೆ ನೀಡಿರುವ ಸಿನಿಮಾ ಮುಗಿಲ್‌ ಪೇಟೆ. ಭರತ್‌ ನಾವುಂದ ಜತೆಗೆ

ಮಾಡುತ್ತಿರುವ ಸಿನಿಮಾ. ಎಲ್ಲರೂ ಸ್ನೇಹಿತರೆ. ಹೀಗಾಗಿ ಇದು ಸ್ನೇಹಿತರ ತಂಡ ಸೇರಿ ಮಾಡುತ್ತಿರುವ ಸಿನಿಮಾ ಎನ್ನಬಹುದು. ಈ ಕಾರಣಕ್ಕೆ ಕೊಂಚ ಹೆಚ್ಚೇ ಶ್ರಮ ಹಾಕಿದ್ದೇನೆ. ಚಿತ್ರದ ಹೆಸರು ನೋಡಿದರೆ ಸಾಫ್ಟ್‌ ಅನಿಸಬಹುದು. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರದ ಲುಕ್‌ ಮಾತ್ರ ತುಂಬಾ ಮಾಸ್‌ ಹಾಗೂ ರಗ್‌್ಡ ಆಗಿದೆ. ಈಗಾಗಲೇ ನೀವು ಚಿತ್ರದ ಫಸ್ಟ್‌ ಲುಕ್‌ ನೋಡಿದ್ದರೆ ನನ್ನ ಈ ಮಾತನ್ನು ಒಪ್ಪುತ್ತೀರಿ. ಸಿನಿಮಾ ಆರಂಭಿಸಿದಾಗ ನಮಗೆ ಇದ್ದ ಅಂದಾಜಿಗಿಂತಲೂ ಹೆಚ್ಚಾಗಿಯೇ ಈ ಸಿನಿಮಾ ಮೂಡಿ ಬಂದಿದೆ. ನನಗೆ ಒಂದು ಪಾಸಿಟಿವ್‌ ಭಾವನೆ ಮೂಡಿಸುತ್ತಿರುವ ಕತೆ ಇದು. ಒಂದು ಕಮರ್ಷಿಯಲ್‌ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಚಿತ್ರಗಳಲ್ಲಿವೆ. ಹೀಗಾಗಿ ಇದೊಂದು ಪ್ರೇಮ ಕಾವ್ಯ ಚಿತ್ರ ಅಂತಲೇ ಹೇಳಬಹುದು.

ಹೊಸ ಇಮೇಜ್‌ ಕೊಡಲಿದೆ

ನಿರ್ದೇಶಕ ಭರತ್‌ ನಾವುಂದ ಅವರು ಹೊಸ ರೀತಿಯ ಕತೆಯನ್ನು ಈ ಮುಗಿಲ್‌ ಪೇಟೆ ಮೂಲಕ ಹೇಳಿದ್ದಾರೆ. ನಾನು ಬೇರೆ ಬೇರೆ ರೀತಿಯಲ್ಲಿ ತಯಾರಿ ಮಾಡಿಕೊಂಡು ನಟಿಸಿದ್ದೇವೆ. ಮೊದಲ ಬಾರಿಗೆ ನಾನೇ ಕಾಮಿಡಿ ಮಾಡಿದ್ದೇನೆ. ಎರಡು ಪೇಜ್‌ ಡೈಲಾಗ್‌ ಹೇಳುವ ಜತೆಗೆ ಫೈಟ್‌ ಮಾಡುವ ಒಂದು ಸನ್ನಿವೇಶ ಇದೆ. ಏಕಕಾಲಕ್ಕೆ ಫೈಟ್‌ ಹಾಗೂ ಡೈಲಾಗ್‌ ಹೇಳುವ ದೃಶ್ಯವನ್ನು ಹೇಗೆ ಚಿತ್ರೀಕರಣ ಮಾಡಬೇಕು ಎಂಬುದೇ ದೊಡ್ಡ ಸವಾಲು ಆಗಿದೆ. ಈ ಸಾಹಸ ದೃಶ್ಯ ತುಂಬಾ ರೋಚಕವಾಗಿ ತೆರೆ ಮೇಲೆ ಮೂಡಿ ಬರಲಿದೆ. ಚಿತ್ರದಲ್ಲಿ ನಾಲ್ಕು ಫೈಟ್‌ ಗಳಿವೆ. ಪಕ್ಕಾ ಮನರಂಜನಾತ್ಮಕ ಸಿನಿಮಾ ಇದು. ನಾಯಕಿಯಾಗಿ ಖಯಾದು ಲೋಹರ್‌ ಅವರು ನಟಿಸಿದ್ದಾರೆ. ತೆರೆ ಮೇಲೆ ನಮ್ಮ ಇಬ್ಬರ ಕಾಂಬಿನೇಷನ್‌ ತುಂಬಾ ಚೆನ್ನಾಗಿದೆ. ತಾರಾ, ರಂಗಾಯಣ ರಘು, ಸಾಧು ಕೋಕಿಲಾ, ರಿಷಿ ಹೀಗೆ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ನನಗೆ ಇದು ಹೊಸ ಇಮೇಜ್‌ ಕೊಡುವ ಸಿನಿಮಾ ಎನ್ನುವ ಭರವಸೆಯಂತೂ ಇದೆ.

'ಸಿನಿಮಾ ಡಿಮ್ಯಾಂಡ್‌ ಮಾಡಿದ್ರೆ ಕಿಸ್ಸೂ ಮಾಡ್ಬೇಕು, ಸಿಗರೇಟೂ ಸೇದ್ಬೇಕು'

ಲವ್‌ ನಂತರ ಜೀವನ ಇದೆ

ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿರುವ ‘ಪ್ರಾರಂಭ’ ಚಿತ್ರದ್ದು ಪ್ರೀತಿಯ ನಂತರ ಜೀವನ ಇದೆ ಎಂದು ಹೇಳುವ ಸಂದೇಶವನ್ನು ಒಳಗೊಂಡಿದೆ. ಭಗ್ನ ಪ್ರೇಮಿಗಳು ತುಂಬಾ ಜನ ಇದ್ದಾರೆ. ಪ್ರೀತಿ ಸಿಗದೆ ಲವ್‌ ಫೈಲ್ಯೂರ್‌ ಆದ ಕೂಡಲೇ ಜೀವನ ಮುಗಿಯಿತು ಎಂದುಕೊಳ್ಳುವವರೆ ಹೆಚ್ಚು. ಹಾಗೆ ಅಂದುಕೊಂಡೇ ಸುಂದರವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ, ಪ್ರೀತಿಯಲ್ಲಿ ಸೋತವರಿಗೆ ಅಪ್ಪ- ಅಮ್ಮ, ನೆಂಟರು, ಬಂಧು- ಬಳಗ, ಒಡ ಹುಟ್ಟಿದವರು ಇದ್ದಾರೆ. ಅವರ ಜತೆಗೆ ನಮ್ಮ ಜೀವನ ಇದೆ. ನಿಜ ಹೇಳಬೇಕು ಅಂದರೆ ಪ್ರೀತಿಯ ನಂತರವೇ ದೊಡ್ಡ ಜೀವನ ಇದೆ ಎಂಬುದು ತುಂಬಾ ಆಪ್ತವಾಗಿ ಹೇಳಿರುವ ಸಿನಿಮಾ ಪ್ರಾರಂಭ.

'ಪ್ರಾರಂಭ'ದಿಂದ ರವಿಚಂದ್ರನ್ ಪುತ್ರನಿಗೆ ಶುರುವಾಯ್ತು ಶುಭಾರಂಭ!

ನಂಗೆ ಕಿಸ್‌ ಮಾಡೋಕೆ ಬರಲ್ಲ

ಚಿತ್ರದಲ್ಲಿ ಒಂದೇ ಒಂದು ಫೈಟ್‌ ಇದೆ. ಟೀಸರ್‌ ನಲ್ಲಿ ತೋರಿಸಿರುವಂತೆ ಚಿತ್ರದ ತುಂಬಾ ಕಿಸ್ಸಿಂಗ್‌ ದೃಶ್ಯಗಳು ಇಲ್ಲ. ನನಗೆ ಕಿಸ್‌ ಮಾಡೋದು ಬರಲ್ಲ. ಒಂದೇ ಒಂದು ಕಿಸ್‌ ಮಾಡಿದ್ದೇನೆ. ನಿರ್ದೇಶಕ ಮನು ಕಲ್ಯಾಡಿ ಈ ಚಿತ್ರವನ್ನು ನನ್ನ ನಿರೀಕ್ಷೆಗೆ ತಕ್ಕಂತೆ ರೂಪಿಸಿದ್ದಾರೆ. ಸಿನಿಮಾ ಮುಂದಿನವಾರ ತೆರೆಗೆ ಬರಬೇಕಿತ್ತು. ಆದರೆ, ಕೊರೋನಾ ವೈರಸ್‌ ಭೀತಿ ಇಡೀ ಜಗತ್ತನ್ನೇ ಆವರಿಸಿದೆ. ಇಂಥ ಹೊತ್ತಿನಲ್ಲಿ ಸಿನಿಮಾ ಬಿಡುಗಡೆ ಮಾಡಲಾಗದು. ಎಲ್ಲರ ಅರೋಗ್ಯ ಮುಖ್ಯ ಎನ್ನುವ ಕಾರಣಕ್ಕೆ ನಾವು ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ. ಕೊರೋನಾ ಭೀತಿ ಸಂಪೂರ್ಣವಾಗಿ ತೊಲಗಿದ ಮೇಲೆಯೇ ಪ್ರಾರಂಭ ಚಿತ್ರಮಂದಿರಗಳಿಗೆ ಬರಲಿದೆ.

ಹಿನ್ನೆಲೆ ಬಿಟ್ಟು ನೋಡಿ

ಸಾಮಾನ್ಯವಾಗಿ ಸಿನಿಮಾ ಕುಟುಂಬದ ಹಿನ್ನೆಲೆ ಇರುವವರು ಚಿತ್ರರಂಗಕ್ಕೆ ಬಂದಾಗ ಅವರನ್ನು ಅವರ ಕುಟುಂಬದವರ ಸಾಧನೆಗಳಿಂದ ಗುರುತಿಸುತ್ತಾರೆ. ಆದರೆ, ಹೀಗೆ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮನ್ನು ನೋಡಿದರೆ ನಿರಾಸೆ ಆಗುವುದು ಸಹಜ. ಯಾಕೆಂದರೆ ನಾವು ನಮ್ಮ ಹೆತ್ತವರ ಸಾಧನೆಗಳನ್ನು ಮೀರಿಸಲಾಗದು. ಈಗ ಹೊಸ ಜನರೇಷನ್‌. ಹೊಸದಾಗಿ ಮಾಡಬೇಕಿದೆ. ಹಾಗೆ ಹೊಸತನದಿಂದ ಕೂಡಿ ಚಿತ್ರಗಳ ಮೂಲಕ ಬಂದಾಗ ಪ್ರೇಕ್ಷಕರು ಕೂಡ ಹೊಸ ಕಲಾವಿದನ ಸಿನಿಮಾ ಎಂದುಕೊಂಡೇ ನೋಡಿದರೆ ಇಷ್ಟವಾಗುತ್ತದೆ. ಈಗ ನನ್ನ ಚಿತ್ರವನ್ನೇ ತೆಗೆದುಕೊಳ್ಳಿ, ನಾನು ನಟಿಸಿದ ಸಿನಿಮಾಗಳಲ್ಲಿ ನಮ್ಮ ತಂದೆ ರವಿಚಂದ್ರನ್‌ ಅವರನ್ನು ಹುಡುಕಿದರೆ ಕಷ್ಟವಾಗುತ್ತದೆ. ಯಾಕೆಂದರೆ ನಾನು ಅವರಂತೆ ಮಾಡಲು ಆಗಲ್ಲ. ಹಾಗೆ ನೋಡಿದರೆ ನಮಗೆ ಈ ಹಿನ್ನೆಲೆಯೇ ಒಂದು ರೀತಿಯಲ್ಲಿ ಲಾಭ ಮತ್ತು ನಷ್ಟ. ಇದನ್ನ ನಮ್ಮ ತಂದೆ ಮೊದಲೇ ಹೇಳಿದ್ದರು. ನಿನಗೆ ನಾನೇ ಡಿಸ್‌ ಅಡ್ವಂಟೇಜ್‌, ನಾನೇ ಅಡ್ವಂಟೇಜ್‌ ಎಂದಿದ್ದರು. ನನ್ನ ಮತ್ತು ನನ್ನ ತಮ್ಮನಿಗೂ ಹಾಗೆ ಆಗುತ್ತಿದೆ.

ಆದರೆ, ನಾವು ಅದರಿಂದ ಆಚೆ ಬಂದು ಸಿನಿಮಾ ಮಾಡಬೇಕು. ಹೀರೋಗಳ ಮಕ್ಕಳಿಗೆ ಸುಲಭವಾಗಿ ಅವಕಾಶಗಳು ಸಿಗಲ್ಲ. ಯಾವ ಹಿನ್ನೆಲೆಯೂ ಇಲ್ಲದೆ ಬಂದವರಿಗೆ ಎಷ್ಟುಸಲವಾದರೂ ಸೋಲು ಗೆಲುವಿನಲ್ಲಿ ಕ್ಷಮೆ ಇರುತ್ತದೆ. ಆದರೆ, ನಮಗೆ ಇರಲ್ಲ. ಆ ಒತ್ತಡದಲ್ಲೇ ಸಿನಿಮಾ ಮಾಡುವ ಸವಾಲು ನಮ್ಮದು. ನಾನು ಸ್ವಂತವಾಗಿ ಗುರುತಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಮುಗಿಲ್‌ ಪೇಟೆ, ಪ್ರಾರಂಭ ರೀತಿಯ ಚಿತ್ರಗಳನ್ನು ಮಾಡುತ್ತಿದ್ದೇನೆ.

ತೆರೆ ಮೇಲೆ ಕಿಸ್ ಕೊಡಲು ಮಗನಿಗೆ ಕ್ರೇಜಿ ಗ್ರೀನ್ ಸಿಗ್ನಲ್!

ಹಿಂದಿನ ಚಿತ್ರಗಳು ಕಲಿಸಿದ ಪಾಠ

ನನ್ನ ಮೊದಲ ಚಿತ್ರದಿಂದಲೇ ನಾನು ಪಾಠ ಕಲಿತಿದ್ದೇನೆ. ಸಾಹೇಬ ಸಿನಿಮಾ ನನ್ನ ನಟನನ್ನಾಗಿ ಸ್ವೀಕರಿಸಿದರು. ಬೃಹಸ್ಪತಿ ಸಿನಿಮಾ ತೀರಾ ಕಳಪೆ ಎನಿಸಿತು. ತುಂಬಾ ಕೆಟ್ಟಅನುಭವ ಕೊಟ್ಟಸಿನಿಮಾ ಅದು. ಈ ಕಾರಣಕ್ಕೆ ಕತೆಯೇ ಮುಖ್ಯ. ಹೊಸ ನಿರ್ದೇಶಕರು, ಹಳೆಯ ನಿರ್ದೇಶಕರು ಎಂಬುದು ಮುಖ್ಯವಲ್ಲ. ಜನ ಯಾವ ರೀತಿ ಸಿನಿಮಾಗಳನ್ನು ನೋಡುತ್ತಿದ್ದಾರೆ. ನಾವು ಯಾವ ರೀತಿ ಕತೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ಮುಖ್ಯ. ಹೀಗಾಗಿ ನಾನು ಕತೆಗಳಿಗೆ ಮಹತ್ವ ಕೊಡುತ್ತಿದ್ದೇನೆ. ನಿರ್ದೇಶಕನ ಸ್ಟಾರ್‌ಡಮ್‌ ಅಥವಾ ಹಿನ್ನೆಲೆಗೆ ಅಲ್ಲ. ಹೀಗಾಗಿ ಹೊಸ ನಿರ್ದೇಶಕರಾದರೂ ಭರತ್‌ ನಾವುಂದ ಹಾಗೂ ಮನು ಕಲ್ಯಾಡಿ ಒಳ್ಳೆಯ ಕತೆಗಳನ್ನೇ ನನ್ನ ಮೂಲಕ ಹೇಳುತ್ತಿದ್ದಾರೆ. ಹೀಗಾಗಿ ನನಗೆ ಪ್ರಾರಂಭ ಹಾಗೂ ಮುಗಿಲ್‌ ಪೇಟೆ ಸಿನಿಮಾಗಳ ಮೇಲೆ ದೊಡ್ಡ ನಂಬಿಕೆ ಮತ್ತು ಭರವಸೆ ಇದೆ.

Follow Us:
Download App:
  • android
  • ios