ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿ ಮದುವೆಯಾಗಲು ಬಂದ ಜೋಡಿ

ನಾವಿಬ್ಬರು ಅಪ್ಪು ಅವರ ಅಪ್ಪಟ ಅಭಿಮಾನಿಗಳು. ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಹಾಗಾಗಿ ನಾವು ಇಲ್ಲೇ ಮದುವೆಯಾಗಲು ನಿಚ್ಚಯ ಮಾಡಿದ್ದೇವೆ. ಸಮಾಧಿ ಮುಂದೆ ಮದುವೆಯಾದರೆ ಅಪ್ಪು ಅವರಿಗೆ ಗೌರವ ನೀಡಿದ ಹಾಗೇ ಆಗುತ್ತೆ.

lovers marriage in kanteerava studio front of Puneeth RajKumar tomb

ಬೆಂಗಳೂರು (ನ.06): ಕಂಠೀರವ ಸ್ಟುಡಿಯೋದಲ್ಲಿರುವ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar)​ ಸಮಾಧಿ ಮುಂದೆ ಜೋಡಿಯೊಂದು ಮದುವೆಯಾಗಲು ನಿರ್ಧರಿಸಿದೆ. ಬಳ್ಳಾರಿಯ ಗುರು ಪ್ರಸಾದ ಹಾಗೂ ಗಂಗಾ ಜೋಡಿ ಅಪ್ಪು ಸಮಾಧಿ ಎದುರು ಮದುವೆಯಾಗುವುದಕ್ಕೆ ನಿರ್ಧರಿಸಿದೆ. ಎರಡು ವರ್ಷದಿಂದ ಪ್ರೀತಿ ಮಾಡುತ್ತಿರುವ ಈ ಜೋಡಿಗಳು ಈಗಾಗಲೇ ಶಿವರಾಜ್‌ಕುಮಾರ್ (Shiva Rajkumar) ಹಾಗೂ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಬಳಿ ಅನುಮತಿ ಕೇಳಿದ್ದು, ದೊಡ್ಮನೆ ಮಕ್ಕಳು ಮದುವೆ ಮಾಡಿಕೊಳ್ಳುವುದಕ್ಕೆ ಅನುಮತಿ ಕೊಟ್ಟಿದ್ದಾರೆ ಎನ್ನಲಾಗಿದೆ. ಪುನೀತ್ ಅವರ ಅಕಾಲಿಕ ಅಗಲಿಕೆಯಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ.

ನಾವಿಬ್ಬರು ಅಪ್ಪು ಅವರ ಅಪ್ಪಟ ಅಭಿಮಾನಿಗಳು. ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಹಾಗಾಗಿ ನಾವು ಇಲ್ಲೇ ಮದುವೆಯಾಗಲು ನಿಚ್ಚಯ ಮಾಡಿದ್ದೇವೆ. ಸಮಾಧಿ ಮುಂದೆ ಮದುವೆಯಾದರೆ ಅಪ್ಪು ಅವರಿಗೆ ಗೌರವ ನೀಡಿದ ಹಾಗೇ ಆಗುತ್ತೆ. ಇನ್ನು ನಾವಿಬ್ಬರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ಪುನೀತ್ ಸರ್ ಅಂದ್ರೆ ನಮಗೆ ತುಂಬಾ‌ ಇಷ್ಟ. ನಮ್ಮ ಕುಟಂಬಸ್ಥರಿಂದ ಮದುವೆಗೆ ಯಾವುದೇ ಅಡ್ಡಿಯಿಲ್ಲ. ಇಬ್ಬರ ಕುಟುಂಬದವರ ಒಪ್ಪಿಗೆ ಇದೆ. ಹೀಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಾಳಿ ಸಮೇತ ಸಮಾಧಿ ಬಳಿ ಬಂದಿರುವ ನವ ಜೋಡಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.

ಪುನೀತ್​ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ

ಇನ್ನು ಕೋಟ್ಯಂತರ ಅಭಿಮಾನಿಗಳನ್ನು ಪುನೀತ್ ಅವರು ಅಗಲಿದ್ದಾರೆ. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅಪ್ಪು ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಪುನೀತ್ ಕುಟುಂಬಕ್ಕೆ ಸಿನಿಮಾ ರಂಗದ ಗಣ್ಯರು, ರಾಜಕಾರಣಿಗಳು ಸಾಂತ್ವನ ಹೇಳಿದ್ದಾರೆ. ಹಾಗೂ ಅವರ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ದೊಡ್ಡದಿದೆ. ಪ್ರತಿ ದಿನ 20 ಸಾವಿರಕ್ಕೂ ಅಧಿಕ ಜನರು ಕಂಠೀರವ ಸ್ಟುಡಿಯೋ ಆವರಣಕ್ಕೆ ಬಂದು ಪುನೀತ್​ ರಾಜ್​ಕುಮಾರ್​ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಕೂಡ ಬಂದು ನಮನ ಸಲ್ಲಿಸುತ್ತಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಸಮಾಧಿ ದರ್ಶನ ಪಡೆಯಲು ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಪರಭಾಷೆಯ ಅನೇಕ ಸೆಲೆಬ್ರಿಟಿಗಳು ಸಹ ಭೇಟಿ ನೀಡುತ್ತಿದ್ದಾರೆ. 

ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಸಂಜೆ 6 ಗಂಟೆಗೆ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ದೀಪ ಬೆಳಗಿಸುವ ಮೂಲಕ ಅಗಲಿದ ಪುನೀತ್‌ಗೆ ಗೌರವ ನಮನ ಅರ್ಪಿಸಲಿದ್ದಾರೆ. ರಾಜ್ಯದ ಎಲ್ಲ ಚಿತ್ರಮಂದಿರಗಳು, ಪ್ರೇಕ್ಷಕರು, ಅಭಿಮಾನಿಗಳಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ನಟ ಪುನೀತ್‌ ರಾಜ್‌ಕುಮಾರ್‌ ಅವರ ಪುಣ್ಯತಿಥಿಯನ್ನು ನ.8ರಂದು ನಡೆಸಲು ಡಾ.ರಾಜ್‌ಕುಮಾರ್‌ ಕುಟುಂಬದವರು ನಿರ್ಧರಿಸಿದ್ದಾರೆ. 

ವೈಕುಂಠದಲ್ಲಿ ಅಪ್ಪಾಜಿಗೆ ಪುನೀತ್ ರಾಜ್‌ಕುಮಾರ್ ಸರ್‌ಪ್ರೈಸ್‌!

ಪುನೀತ್‌ ಅಗಲಿದ 11ನೇ ದಿನಕ್ಕೆ ಪುಣ್ಯತಿಥಿ ನಡೆಯಲಿದ್ದು, ಕುಟುಂಬದವರು, ನೆಂಟರು, ಸ್ನೇಹಿತರು ಹಾಗೂ ಆಪ್ತರು ಈ ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ದಿನದ ಕಾರ್ಯವು ಕೇವಲ ಕುಟುಂಬದವರ ಸಮ್ಮುಖದಲ್ಲೇ ಖಾಸಗಿಯಾಗಿ ನಡೆಯಲಿದೆ ಎಂದು ತಿಳಿದು ಬಂದಿದೆ. ನ.9ರಂದು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಪುಣ್ಯ ತಿಥಿಯ ಅಂಗವಾಗಿ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಚಿತ್ರರಂಗದ ಎಲ್ಲ ವಿಭಾಗದವರು ಕೂಡ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

"

Latest Videos
Follow Us:
Download App:
  • android
  • ios