ನಟಿ ಮಿಲನಾ ನಾಗರಾಜ್‌ ಈಗ ‘ಲವ್‌ ಮಾಕ್ಟೆಲ್‌’ ಚಿತ್ರದ ಭರ್ಜರಿ ಸಕ್ಸಸ್‌ನ ಸಂಭ್ರಮದಲ್ಲಿದ್ದಾಗಲೇ ಲಾಕ್‌ಡೌನ್‌ಗೆ ಸಂಕಷ್ಟಶುರುವಾಗಿದೆ. ಅವರೀಗ ತಮ್ಮ ಸ್ವಂತ ಊರು ಹಾಸನಕ್ಕೆ ಹೋಗಿ ಹಲವು ದಿನ ಕಳೆದಿದೆ. ಸದ್ಯಕ್ಕೆ ಲಾಕ್‌ಡೌನ್‌ ದಿನಗಳನ್ನು ಅಲ್ಲಿಯೇ ಕಳೆಯುತ್ತಿರುವ ಅವರು, ತಮ್ಮ ಅಂತರಂಗದ ಮಾತುಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.

1.ಲಾಕ್‌ಡೌನ್‌ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?

ಬೆಳಗ್ಗೆ ಯೋಗ ಜತೆಗೆ ವಾಕಿಂಗ್‌ ಮಾಮೂಲು. ಅದರ ಜತೆಗೀಗ ‘ಲವ್‌ ಮಾಕ್ಟೇಲ್‌ 2’ ಚಿತ್ರದ ಸ್ಕಿ್ರಪ್ಟ್‌ ವರ್ಕ್ ಶುರುವಾಗಿದೆ. ಹೆಚ್ಚಿನ ಸಮಯ ಅದರಲ್ಲೇ ಹೋಗುತ್ತಿದೆ. ಆದ್ರೂ ನಾವೆಲ್ಲ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿದವರು. ಈಗ ಮನೆಯಲ್ಲಿ ಕೂಡಿ ಹಾಕಿದಂತಾಗಿದೆ.

2. ಈ ದಿನಗಳಲ್ಲಿ ನೀವು ಅತಿ ಹೆಚ್ಚು ಬಳಸುವ ಆ್ಯಪ್‌ ಯಾವುದು, ಯಾಕೆ?

ವಾಟ್ಸಾಪ್‌, ಇನ್‌ಸ್ಟಾಗ್ರಾಮ್‌ ನಾನೀಗ ಅತೀ ಹೆಚ್ಚು ಬಳಕೆ ಮಾಡುತ್ತಿರುವ ಆ್ಯಪ್‌. ವಾಟ್ಸಾಪ್‌ ಮಾಮೂಲು ಬಿಡಿ, ಇನ್‌ಸ್ಟಾಗ್ರಾಮ್‌ಅನ್ನು ಸಾಮಾನ್ಯವಾಗಿ ಫೋಟೋ ಹಾಕಲು, ಇಲ್ಲವೇ ಯಾರೆಲ್ಲ ಹೇಗೆ ಫೋಟೋಸ್‌ ಹಾಕುತ್ತಿದ್ದಾರೆನ್ನುವ ಕುತೂಹಲಕ್ಕೆ ಸುಮ್ನೆ ಕುಳಿತಾಗಲೂ ನೋಡುತ್ತಿರುತ್ತೇನೆ.

ಹುಡುಗರ ಕ್ರಶ್‌ 'ನಿಧಿಮಾ'; ರಿಯಲ್‌ ಲೈಫಲ್ಲೂ ಮಿಲನಾ ಹೀಗೆನಾ?

3. ಒಂಟಿತನವನ್ನು ಹೇಗೆ ಎದುರಿಸುತ್ತಿದ್ದೀರಿ?

ಲಾಕ್‌ಡೌನ್‌ ಆದಾಗಿನಿಂದ ನಾನು ಮನೆಯಲ್ಲೇ ಇದ್ದೇನೆ. ಎಲ್ಲಿಗೂ ಹೋಗಿಲ್ಲ. ಹಾಗಂತ ಯಾವುದೇ ಕ್ಷಣ ಒಂಟಿತನ ಕಾಡಿಲ್ಲ. ಸ್ವಲ್ಪ ಬೋರ್‌ ಆದ್ರೂ ಅಮೆಜಾನ್‌ ಪ್ರೈಮ್‌ ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ನೋಡುತ್ತಿರುತ್ತೇನೆ. ಅದೇ ಅಲ್ವಾ ನಮ್ಗೆ ಈಗಿರುವ ಮನರಂಜನೆಯ ಮಾರ್ಗ.

4. ಇತ್ತೀಚೆಗೆ ನಿಮ್ಗೆ ತೀರಾ ಬೇಸರ ತರಿಸಿದ ಅಥವಾ ಕಣ್ಣೀರು ತರಿಸಿದ ಘಟನೆ ಯಾವುದು?

ಅಂತದ್ದೇನು ಇಲ್ಲ. ಸಾಮಾನ್ಯವಾಗಿ ಅಂತಹ ಯಾವುದೇ ಘಟನೆ ನೋಡೋದಿಕ್ಕೆ ಹೋಗೋದಿಲ್ಲ. ಆದ್ರೂ ಈ ಕೊರೋನಾ ಎನ್ನುವ ಮಹಾ ಮಾರಿ ಸೃಷ್ಟಿಸುತ್ತಿರುವ ಸಾವು- ನೋವು ನೋಡಿದಾಗ ಆತಂಕದ ಜತೆಗೆ ನೋವು ಆಗುತ್ತಿದೆ. ಅದು ಬಿಟ್ಟರೆ, ನಮ್ಮ ಸಿನಿಮಾ ‘ಲವ್‌ ಮಾಕ್ಟೆಲ್‌’ ಏನಾದ್ರೂ ಸೋತಿದ್ರೆ, ಅದೇ ದೊಡ್ಡ ದುಃಖ ಆಗಿರುತ್ತಿತ್ತು. ಅದೃಷ್ಟಚೆನ್ನಾಗಿದೆ. ಗೆದ್ದ ಖುಷಿಯಿದೆ.

5. ಲಾಕ್‌ಡೌನ್‌ ಮುಗಿದು ಆಚೆ ಬಂದ ಮೇಲೆ ಮೊದಲು ಮಾಡುವ ಕೆಲಸ ಯಾವುದು?

‘ಲವ್‌ ಮಾಕ್ಟೇಲ್‌ 2’ ಚಿತ್ರದ ಕೆಲಸ ಶುರುವಾಗಲಿವೆ. ನಾವು ಆಗಸ್ಟ್‌ ತಿಂಗಳಿಂದ ಶೂಟಿಂಗ್‌ ಶುರು ಮಾಡೋಣ ಅಂತಂದುಕೊಂಡಿದ್ದೆವು. ಆದ್ರೆ ಈಗ ಲಾಕ್‌ಡೌನ್‌ ಮುಗಿದು, ಕೆಲಸ ಶುರುವಾಗಬೇಕಾದ್ರೆ ಇನ್ನಷ್ಟುದಿನ ಬೇಕು. ಕಾಯಬೇಕಿದೆ.