Asianet Suvarna News Asianet Suvarna News

ಬೆಂಗಳೂರಿನಲ್ಲಿ ಡ್ರೈವ್‌ ಇನ್‌ ಥೇಟರ್‌;ನಿಮ್ಮ ಕಾರಿನಲ್ಲೇ ಕೂತು, ನೀವು ಬಯಸಿದ ಚಿತ್ರ ನೋಡಿ!

ಬೆಂಗಳೂರಿಗೆ ಡ್ರೈವ್‌ ಇನ್‌ ಥಿಯೇಟರ್‌ ಹೊಸದಲ್ಲ. 70ರ ದಶಕದಲ್ಲೇ ಬೆಂಗಳೂರಿನಲ್ಲಿ ಇಂಥ ಚಿತ್ರಮಂದಿರ ಇತ್ತು. ಈಗ ಮತ್ತೆ ಅದು ಹೊಸ ರೂಪದಲ್ಲಿ ಬಂದಿದೆ. ಕೊರೋನಾ ಕಾರಣಕ್ಕೆ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದರೆ, ಇತ್ತ ಬಯಲೇ ಚಿತ್ರಮಂದಿರವನ್ನಾಗಿಸಿ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಈ ಹೊಸ ಟ್ರೆಂಡ್‌ ಬೆಂಗಳೂರಿಗೆ ಮತ್ತೆ ಕಾಲಿಟ್ಟಿದ್ದು, ಚಿತ್ರರಂಗವೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅದರ ಸಮಗ್ರ ನೋಟ ಇಲ್ಲಿದೆ.

know about Drive in theatre catch a movie with your pals
Author
Bangalore, First Published Jul 17, 2020, 9:03 AM IST

ಆರ್‌ ಕೇಶವಮೂರ್ತಿ

ಹಳೆಯ ಬಯಲು, ಹೊಸ ಡ್ರೈವ್‌

ಅಮೆರಿಕದ ನ್ಯೂಜೆರ್ಸಿಯಲ್ಲಿ ಮೊದಲು ಡ್ರೈವ್‌ ಇನ್‌ ಥಿಯೇಟರ್‌ ಕಾನ್ಸೆಪ್ಟ್‌ ಪರಿಚಯಿಸಲಾಯಿತು ಎನ್ನಲಾಗುತ್ತಿದೆ. ಕಾರಿನ ಪಾರ್ಕಿಂಗ್‌ ಪ್ರದೇಶವನ್ನು ಸಿನಿಮಾ ಪ್ರದರ್ಶನ ಮಾಡುವ ಬಯಲು ಚಿತ್ರಮಂದಿರದ ವ್ಯವಸ್ಥೆ ಮಾಡುವುದು. 1950 ಹಾಗೂ 1960ರಲ್ಲಿ ಈ ಹೊಸ ಮಾದರಿಯ ಸಿನಿಮಾ ಪ್ರದರ್ಶನ ಹೆಚ್ಚು ಚಾಲ್ತಿಗೆ ಬಂದಿತ್ತು. ಹಾಗೆ ನೋಡಿದರೆ ಇದು ತೀರಾ ಹೊಸದೇನು ಇಲ್ಲ. ಯಾಕೆಂದರೆ ಈ ಡ್ರೈವ್‌ ಇನ್‌ ಥಿಯೇಟರ್‌ನ ಹಳೆಯ ರೂಪವೇ ಟೆಂಟ್‌, ಬಯಲು ರಂಗಮಂದಿರ. ಅಲ್ಲದೆ ಹಳೆಯ ಬಯಲಿನ ಹೊಸ ಥಿಯೇಟರ್‌ ಎನಿಸಿಕೊಂಡಿರುವ ಡ್ರೈವ್‌ ಇನ್‌ ಥಿಯೇಟರ್‌ ಬೆಂಗಳೂರಿಗೂ ಹೊಸದಲ್ಲ.

70ರ ದಶಕದಲ್ಲಿ ಬೆಂಗಳೂರಿನ ಬನ್ನೇರುಘಟ್ಟರಸ್ತೆಯಲ್ಲಿ Bangalore Drive-in theatre ಹೆಸರಿನಲ್ಲಿ ಶುರುವಾಗಿದ್ದ ವ್ಯವಸ್ಥೆ ಕಾರಿನಲ್ಲಿ ಕುಳಿತು ಸಿನಿಮಾ ನೋಡುವಂತೆ ಮಾಡಿತ್ತು. ಆಗಲೇ ಒಂದೊಂದು ಕಾರಿಗೂ ಪ್ರತ್ಯೇಕ ಸ್ಪೀಕರ್‌ ಇತ್ತು. ವಿಶಾಲವಾದ ಪರದೆಯ ಮೇಲೆ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಕಾರು ಇಲ್ಲದೆ ಹಾಗೆ ಬಂದವರಿಗೂ ಸಹ ಪ್ರತ್ಯೇಕ ಸ್ಥಳ ಇತ್ತು. ನಾಲ್ಕೈದು ವರ್ಷ ಈ ಥಿಯೇಟರ್‌ ಚಾಲ್ತಿಯಲ್ಲಿತ್ತು. ಹೆಚ್ಚಿನ ಜಾಗದ ಅವಶ್ಯಕತೆ, ಕ್ವಾಲಿಟಿ ಮುಂತಾದ ಕಾರಣಗಳಿಗೆ ಆಗ ಡ್ರೈವ್‌ ಇನ್‌ ಥಿಯೇಟರ್‌ ಮರೆಯಾಯಿತು. ನಟ ಅನಂತ್‌ನಾಗ್‌ ಅಭಿನಯದ ‘ಪ್ರೇಮಾಯಣ’ ಚಿತ್ರದ ಕೆಲವು ದೃಶ್ಯಗಳನ್ನು ಇದೇ ಬೆಂಗಳೂರು ಡ್ರೈವ್‌ ಇನ್‌ ಥಿಯೇಟರ್‌ ಮುಂದೆ ಚಿತ್ರೀಕರಣ ಮಾಡಲಾಗಿದೆ.

know about Drive in theatre catch a movie with your pals

ಏನೀ ಹೊಸ ವ್ಯವಸ್ಥೆ, ಎಲ್ಲಿದೆ?

ಬೆಂಗಳೂರಿನ ಹೊರಲಯದ ದೇವನಹಳ್ಳಿಯಲ್ಲಿ ಟೋಲ್‌ ಗೇಟ್‌ ಬಳಿಯ ಪ್ರೆಸ್ಟೀಜ್‌ ಕಂಪನಿಗೆ ಸೇರಿದ ಖಾಸಗಿ ಜಾಗದಲ್ಲಿ ಸದ್ದಿಲ್ಲದೆ ಶುರುವಾಗಿದೆ ಈ ಡ್ರೈವ್‌ ಇನ್‌ ಥಿಯೇಟರ್‌. ಇದು ನಾಲ್ಕು ಗೋಡೆಗಳ ಚಿತ್ರಮಂದಿರ ಅಲ್ಲ, ಬಟಾಬಯಲು. ಇಲ್ಲಿ ಸಿನಿಮಾ ಮತ್ತು ಜಾಗ ಮಾತ್ರ ನಮ್ಮದು. ಸೀಟು ಮಾತ್ರ ನಿಮ್ಮದು ಎನ್ನುವುದು ಈ ಡ್ರೈವ್‌ ಇನ್‌ ಥಿಯೇಟರ್‌ನ ಘೋಷಣೆ. ವಿಶಾಲವಾದ ಮೈದಾನ. ಒಂದು ಮೂಲೆಯಲ್ಲಿ ದೊಡ್ಡದಾದ ಅತ್ಯಾಧುನಿಕ ಎಲ್‌ಇಡಿ ಪರದೆ. ಈ ಬಯಲಿನ ಯಾವ ಜಾಗ ಬೇಕಾದರೂ ಮೊದಲೇ ಬುಕ್‌ ಮಾಡಿಕೊಳ್ಳಬಹುದು. ಹಾಗೆ ಬುಕ್‌ ಮಾಡಿಕೊಂಡ ಜಾಗದಲ್ಲಿ ನೀವು ಕಾರ್‌ ಪಾರ್ಕಿಂಗ್‌ ಮಾಡಬಹುದು. ಪಾರ್ಕಿಂಗ್‌ ಮಾಡಿದ ಕಾರಿನಲ್ಲೇ ಕೂತಿದ್ದರೆ ನಿಮ್ಮ ಕಣ್ಣ ಮುಂದಿನ ಪರದೆಯಲ್ಲಿ ಸಿನಿಮಾ ಮೂಡುತ್ತದೆ. ಸೌಂಡ್‌ ಬಗ್ಗೆ ಚಿಂತೆ ಬೇಡ. ಯಾಕೆಂದರೆ ಬ್ಲೂಟೂತ್‌ ಮೂಲಕ ನಿಮ್ಮ ಕಾರಿನ ಸ್ಪೀಕರ್‌ಗಳಿಗೆ ಕನೆಕ್ಷನ್‌ ಮಾಡಿಕೊಡಲಾಗುತ್ತದೆ. ದೃಶ್ಯಗಳನ್ನು ಪರದೆ ಮೇಲೆ ನೋಡಿ ಅದರ ಸಂಭಾಷಣೆಗಳನ್ನು ನಿಮ್ಮ ಕಾರಿನಲ್ಲೇ ಕೇಳಿಸಿಕೊಳ್ಳಬಹುದು.

ಚಿತ್ರಮಂದಿರಗಳು ಮತ್ತೆ ಹೌಸ್‌ಫುಲ್‌ ಆಗುತ್ತವೆ; ಭರವಸೆ ಇಟ್ಟುಕೊಂಡಿರುವ ಚಿತ್ರೋದ್ಯಮ!

ಸುಶೇನ್‌ ಕಕ್ಕರ್‌ ಈ ಡ್ರೈವ್‌ ಇನ್‌ ಥಿಯೇಟರ್‌ ಪ್ರಾಜೆಕ್ಟ್ನ ಮ್ಯಾನೇಜರ್‌. ಇವರ ಸಾರಥ್ಯದಲ್ಲಿ ಇದು ಆರಂಭವಾಗಿದೆ. ಇದೇ ರೀತಿ ಬೆಂಗಳೂರಿನ ಸರ್ಜಾಪುರ ರಸ್ತೆಯ ಎಸ್ಪಿಟಿ ಸ್ಪೋರ್ಟ್‌್ಸ ಅಕಾಡೆಮಿಯಲ್ಲಿ ದೊಡ್ಡ ಪರದೆ ಅಳವಡಿಸಿ ಸಿನಿಮಾ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಅದನ್ನು ಈಗ ಮುಚ್ಚಲಾಗಿದೆ.

ಯಾವಾಗ ಶುರುವಾಗಿದ್ದು, ಎಷ್ಟುಜನಕ್ಕೆ ಅವಕಾಶ?

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಖಾಸಗಿ ಪ್ರದೇಶವೊಂದರಲ್ಲಿ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯೊಂದರ ಮುಂದಾಳತ್ವದಲ್ಲಿ ಜು.3ರಿಂದ ಡ್ರೈವ್‌ ಇನ್‌ ಥಿಯೇಟರ್‌ ಪ್ರದರ್ಶನ ಆರಂಭವಾಗಿದೆ. ಈ ಖಾಸಗಿ ಸಂಸ್ಥೆ ಈ ಹಿಂದೆ ನೆಲಹಾಸು ಮತ್ತು ಟೇಬಲ್‌ ಅಳವಡಿಸಿ ತೆರೆದ ಪ್ರದೇಶದಲ್ಲಿ ಸಿನಿಮಾಗಳನ್ನು ತೋರಿಸುತ್ತಿತ್ತು.

ಕನ್ನಡದ ಮೊದಲ ವಿಡಿಯೋ ಬುಕ್;‌ ಲೈಫ್‌ ಈಸ್‌ ಬ್ಯೂಟಿಫುಲ್‌

ಈ ಖಾಸಗಿ ಕಂಪನಿ ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್‌ ಮಾಡುವ ವ್ಯವಸ್ಥೆ ಮಾಡಿದ್ದು, ಒಂದು ಕಾರಿನಲ್ಲಿ ಮೂವರಿಗೆ ಮಾತ್ರ ಅವಕಾಶ. ಒಂದು ಪ್ರದರ್ಶನಕ್ಕೆ ಒಟ್ಟು 17 ಕಾರುಗಳಿಗೆ ಮಾತ್ರ ಪ್ರವೇಶ. ಒಟ್ಟು 45 ಮಂದಿ ಪ್ರೇಕ್ಷಕರು ಒಂದು ಪ್ರದರ್ಶನಕ್ಕೆ ಹಾಜರಾಗಬಹುದು. ಊಟದ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಹೀಗಾಗಿ ಟಿಕೆಟ್‌ ಹಾಗೂ ಊಟದ ವೆಚ್ಚ ಸೇರಿ ಒಂದು ಕಾರಿಗೆ 1499 ರುಪಾಯಿ. ಇನ್ನೂ ಯಾವ ಸಿನಿಮಾ ಬೇಕು ಎಂಬುದನ್ನು ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಪೋಲ್‌ ಹಾಕಲಾಗುತ್ತದೆ. ಯಾವ ಚಿತ್ರಕ್ಕೆ ಹೆಚ್ಚು ವೋಟ್‌ ಬಂದಿರುತ್ತದೋ ಆ ಚಿತ್ರವನ್ನು ಆ ದಿನ ಪ್ರದರ್ಶನ ಮಾಡಲಾಗುತ್ತದೆ. ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಈ ನಾಲ್ಕೂ ದಿನಗಳಲ್ಲಿ ಪ್ರತಿ ದಿನ ಸಂಜೆ 5 ಗಂಟೆಯಿಂದ ರಾತ್ರಿ 7.30ಕ ವರೆಗೂ ಪ್ರದರ್ಶನ ಇರುತ್ತದೆ.

ಚಿತ್ರಪ್ರದರ್ಶಕರ ಸಂಘ ವಿರೋಧ

ಬಾಗಿಲು ಮುಚ್ಚಿರುವ ಥಿಯೇಟ್‌ಗಳನ್ನು ಕಾಯಲಾಗದೆ ಓಟಿಟಿಯಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಿರುವುದನ್ನೂ ವಿರೋಧಿಸಿಕೊಂಡು ಬರುತ್ತಿರುವ ಸಿನಿಮಾ ಪ್ರದರ್ಶಕರ ಸಂಘಕ್ಕೆ ಈ ಡ್ರೈವ್‌ ಇನ್‌ ಥಿಯೇಟರ್‌ ವ್ಯವಸ್ಥೆಗೂ ವಿರೋಧ ವ್ಯಕ್ತಪಡಿಸಿದೆ. ಸಿನಿಮಾಗಳ ಪ್ರದರ್ಶನ ಕಾಣದ ಚಿತ್ರರಂಗ ಪಾತಾಳಕ್ಕೆ ಇಳಿದಿದೆ. ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಚಿತ್ರರಂಗ ಮತ್ತು ಏಕಪರದೆ ಚಿತ್ರಮಂದಿರಗಳೇ ಉದ್ಯಮದ ದೊಡ್ಡ ಆಸ್ತಿ. ಈಗ ಡ್ರೈವ್‌ ಇನ್‌ ಥಿಯೇಟರ್‌ ಅಥವಾ ಓಟಿಟಿ ಪ್ಲಾಟ್‌ಫಾರಂಗಳು ಬಂದು ಚಿತ್ರಮಂದಿರಗಳನ್ನು ಮತ್ತಷ್ಟುಶಾಶ್ವತವಾಗಿ ಬಾಗಿಲು ಮುಚ್ಚಿಸಲು ಹೊರಟಿವೆ. ಚಿತ್ರಮಂದಿರಗಳು ಬಾಗಿಲು ನೆಲಸಮಗೊಂಡರು ಚಿತ್ರರಂಗವೇ ಬಾಗಿಲು ಹಾಕಿದಂತೆ ಎಂಬುದು ಪ್ರದರ್ಶಕರ ಸಂಘದ ವಾದ.

ಖಾಸಗಿ ಕಂಪನಿಯೊಂದು ಈವೆಂಟ್‌ ಹೆಸರಲ್ಲಿ ಡ್ರೈವ್‌ ಇನ್‌ ಥಿಯೇಟರ್‌ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ತಪ್ಪು. ಈ ಬಗ್ಗೆ ನಾವು ಸರಕಾರದ ಗಮನಕ್ಕೆ ತಂದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಡ್ರೈವ್‌ ಇನ್‌ ಥಿಯೇಟರ್‌ ಮಾಡಬೇಕಾದರೆ ಲೈಸೆನ್ಸ್‌ ತೆಗೆದುಕೊಳ್ಳಬೇಕು. ಅವರು ಆ ರೀತಿ ಏನೂ ಮಾಡಿಲ್ಲ. ಒಂದು ಕಾರಿಗೆ ಸಾವಿರಕ್ಕೂ ಹೆಚ್ಚಿನ ಬೆಲೆ ನಿಗದಿ ಮಾಡಿದ್ದಾರೆ. ನಮಗೂ ಅವಕಾಶ ನೀಡಿದರೆ, ನಾವು ಸಾವಿರ ಜನ ಕೂರುವ ಥಿಯೇಟರ್‌ನಲ್ಲಿ 300 ಜನರಿಗೆ ಟಿಕೆಟ್‌ ನೀಡಿ ಪ್ರದರ್ಶನ ಮಾಡುತ್ತೇವೆ. - ಕೆವಿ ಚಂದ್ರಶೇಖರ್‌ , ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘ

Follow Us:
Download App:
  • android
  • ios