ಸ್ಯಾಂಡಲ್‌ವುಡ್‌ನ ಭಾರಿ ಬೇಡಿಕೆಯ ಸಂಗೀತ ನಿರ್ದೇಶಕ ರವಿ ಬಸ್ರೂರು ಲಾಕ್‌ಡೌನ್‌ ದಿನಗಳಲ್ಲಿ, ಬೆಂಗಳೂರಿನ ತಮ್ಮ ಸ್ಟುಡಿಯೋದಲ್ಲಿ ಕುಳಿತು ಕೀ ಬೋರ್ಡ್‌ ಮೇಲೆ ಕೈಯಾಡಿಸುತ್ತಾ ಹೊಸ ಟ್ಯೂನ್‌ ಹಾಕುತ್ತಿರಬಹುದು ಎಂದುಕೊಂಡರೆ, ಅವರು ಮಾತ್ರ ತಮ್ಮ ಊರಾದ ಉಡುಪಿ ಜಿಲ್ಲೆಯ ಬಸ್ರೂರಿನಲ್ಲಿ ತಂದೆಯ ಅಕ್ಕಸಾಲೆಯಲ್ಲಿ ಕೈಯಲ್ಲಿ ಸುತ್ತಿಗೆ ಹಿಡಿದುಕೊಂಡು ಕಾದ ಕಬ್ಬಿಣವನ್ನು ಹದ ಮಾಡುತಿದ್ದಾರೆ.

ತನ್ನಿಬ್ಬರು ಮಕ್ಕಳಿಗೆ ರಜೆ ಸಿಕ್ಕುತ್ತಿದ್ದಂತೆ ಅವರನ್ನು ಅಜ್ಜಿ ಮನೆಗೆ ಕರೆದುಕೊಂಡು ಬಂದಿದ್ದ ರವಿ, ಬೆಂಗಳೂರಿಗೆ ಹಿಂತಿರುಗಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಘೋಷಣೆಯಾಯಿತು. ಅಂದಿನಿಂದ ಹೆಂಡತಿ ಮಕ್ಕಳೊಂದಿಗೆ ಊರಲ್ಲೇ ಇದ್ದಾರೆ.

ಕುಲುಮೆ ಮಾಡಿ 35ರೂ. ಸಂಪಾದಿಸಲು ಹುಟ್ಟೂರಿಗೆ ಹೊರಟ ಖ್ಯಾತ ನಿರ್ದೇಶಕ!

ವಿಶ್ವಕರ್ಮ ಸಮುದಾಯದ ಅವರು ಬಾಲ್ಯದಲ್ಲಿ ತಂದೆಯೊಂದಿಗೆ ತಮ್ಮ ಸಮುದಾಯದ ಎಲ್ಲ ಕಸುಬನ್ನು ಕಲಿತವರು. ಅವರಿಗೆ ಮರದ ಕೆಲಸವೂ ಗೊತ್ತು, ಕಬ್ಬಿಣದ ಕೆಲಸ ಗೊತ್ತು, ಹಿಂದೆ ಬೆಳ್ಳಿಯ ಕೆಲಸವನ್ನೂ ಮಾಡಿದ್ದರು.

ಸುಂದರ ಕಲ್ಲಿನ ವಿಗ್ರಹಗಳನ್ನೂ ಕೆತ್ತಿದ್ದರು. ಕಟ್ಟಡದ ಗಾರೆ-ಕಾಂಕ್ರೀಟ್‌ ಕೆಲಸಕ್ಕೂ ಹೋಗಿದ್ದರು. ಕೆಲಕಾಲ ಪ್ರಿಂಟಿಂಗ್‌ ಪ್ರೆಸ್ಸೊಂದರಲ್ಲೂ ದುಡಿದಿದ್ದರು. ಟೈಲರಿಂಗೂ ಮಾಡಿದ್ದರು. ಅವರ ಬದುಕೂ ಒಳ್ಳೆಯ ಸಿನಿಮಾದಂತೆ ಬಹಳ ಇಂಟರೆಸ್ಟಿಂಗ್‌ ಆಗಿದೆ.

ಕೆಜಿಎಫ್‌ ಸಿನಿಮಾದ ಮೆಗಾ ಯಶಸ್ಸಿನ ನಂತರ ಈಗ ಕನ್ನಡ ಮಾತ್ರವಲ್ಲದೇ ಅಕ್ಕಪಕ್ಕ ರಾಜ್ಯಗಳ ಸಿನಿಮಾರಂಗದಲ್ಲಿಯೂ ಚರ್ಚೆಯಾಗುತ್ತಿರುವ ರವಿ ಬಸ್ರೂರು, ಸಿನಿಮಾ ರಂಗವೇ ಸ್ತಬ್ಧವಾಗಿರುವುದರಿಂದ ಈಗ ಏನು ಮಾಡುತಿದ್ದಾರೆ ನೋಡೋಣ ಎಂದು ಅವರಿಗೆ ಕರೆ ಮಾಡಿದಾಗ ಅವರು ಮನೆ ಹತ್ತಿರ ಗಾರೆ ಕೆಲಸ ಮಾಡುತ್ತಿದ್ದರು. ಊರಲ್ಲಿ ಸ್ವಂತ ಸ್ಟುಡಿಯೊವೊಂದನ್ನು ಅವರು ನಿರ್ಮಿಸುತ್ತಿದ್ದಾರೆ.

ರವಿ ಅವರದ್ದು ಸುಮ್ಮನೇ ಕೂರುವ ಜಾಯಮಾನವೇ ಅಲ್ಲ. ಅವರ ಕೈಯಲ್ಲೀಗ 3 ಸಿನಿಮಾಗಳಿವೆ. ಮನೆಯಲ್ಲಿದ್ದುಕೊಂಡೇ ಅವುಗಳಿಗೆ ಟ್ಯೂನ್‌ ಹಾಕುವ ಕೆಲಸವೂ ನಡೆಯುತ್ತಿದೆ. ಜತೆಗೆ ಮೊನ್ನೆ ಕೆಲವು ದಿನ ತಂದೆಯ ಅಕ್ಕಸಾಲೆಯಲ್ಲಿ ಕತ್ತಿ, ಹಾರೆ ಇತ್ಯಾದಿಗಳನ್ನು ಹದಗೊಳಿಸಿದರು. ಒಂದಷ್ಟುದಿನ ಬೆಳ್ಳಿಯಲ್ಲಿ ದೇವರ ಪ್ರಭಾವಳಿಯ ಕೆಲಸವನ್ನೂ ಮಾಡಿದರು. ನಡುವೆ ಮರದ ಕೆಲಸಕ್ಕೂ ಕೈಹಾಕಿದ್ದರು.

ವಿಜಯಪ್ರಕಾಶ್‌ ಈಗ ಫುಲ್‌ಟೈಮ್‌ ಫ್ಯಾಮಿಲಿ ಮ್ಯಾನ್‌; ಮನೆಯಲ್ಲಿ ಏನೆಲ್ಲಾ ಮಾಡ್ತಾರೆ ನೋಡಿ!

ರವಿ ಈಗ ಇದೆಲ್ಲ ಬೇಕಾ ಎಂದು ಕೇಳಿದರೇ, ನಾನು ನಮ್ಮ ಹಿರಿಯರು ಮಾಡುತ್ತಿದ್ದ ಕುಲಕಸುಬನ್ನು ಮರೆತ್ತಿಲ್ಲ. ಮರೆಯಲೂ ಬಾರದು, ಅದರ ಬಗ್ಗೆ ನಾಚಿಕೆಪಟ್ಟುಕೊಳ್ಳಲೂಬಾರದು, ಬದಲಿಗೆ ಹೆಮ್ಮೆಪಟ್ಟುಕೊಳ್ಳಬೇಕು ಎನ್ನುತ್ತಾರೆ.

ಗಾರೆ ಕೆಲ್ಸದ ಹಣದಿಂದ ಬೆಂಗ್ಳೂರಿಗೆ ಹೋದೆ

ಗಾರೆ ಕೆಲಸದಿಂದಲೇ ನನ್ನ ಕನಸು ನನಸಾಗಿದ್ದು, ಸಂಗೀತ ನಿರ್ದೇಶನ ಮಾಡಬೇಕು, ಅದಕ್ಕೆ ಬೆಂಗಳೂರಿಗೆ ಹೋಗಬೇಕು ಎಂದು ದೊಡ್ಡ ಕನಸಿತ್ತು. ಆದರೆ ಕೈಯಲ್ಲಿ ಹಣ ಇರಲಿಲ್ಲ. ಆಗ 1 ವಾರ ಕಾಲ ಗಾರೆ ಕೆಲಸಕ್ಕೆ ಹೋಗಿ, ಸಿಕ್ಕಿದ ಸಂಬಳ ತಗೊಂಡು ಬೆಂಗಳೂರಿಗೆ ಹೋದೆ. ಈಗ ಈ ಹಂತಕ್ಕೆ ಬಂದಿದ್ದೇನೆ ಎನ್ನುತ್ತಾರೆ ರವಿ.

ನಮ್ಮ ಹಿರಿಯರು ಮಾಡುತ್ತಿದ್ದ ಕುಲಕಸುಬನ್ನು ಮರೆತ್ತಿಲ್ಲ. ಮರೆಯಲೂಬಾರದು, ಅದರ ಬಗ್ಗೆ ನಾಚಿಕೆಪಟ್ಟುಕೊಳ್ಳಬಾರದು, ಬದಲಿಗೆ ಹೆಮ್ಮೆ ಪಟ್ಟುಕೊಳ್ಳಬೇಕು.

- ರವಿ ಬಸ್ರೂರು