ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್ 2' ಚಿತ್ರದ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ರಾಕಿ ಭಾಯ್ ಚಿತ್ರ ಯಾವ ಪ್ರಮಾಣಪತ್ರ ಪಡೆದಿದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಸ್ಯಾಂಡಲ್‌ವುಡ್‌ನ (Sandalwood) ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್ 2' (KGF 2) ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾದು ಕುಳಿತಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಆಕ್ಷನ್ ಕಟ್ ಹೇಳಿದ್ದಾರೆ. ಮುಖ್ಯವಾಗಿ 'ಕೆಜಿಎಫ್' (KGF) ಮೊದಲ ಭಾಗ ಮಾಡಿದ ಅಬ್ಬರ ನಮ್ಮೆಲ್ಲರಿಗೂ ಗೊತ್ತಿದೆ. ಇದೀಗ ಭಾಗ 2ರ ಮೂಲಕ ಅದೇ ಅಬ್ಬರ ಮುಂದುವರಿಸೋಕೆ ರಾಕಿ ಭಾಯ್ ಸಜ್ಜಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿತ್ತು. ವಿಶೇಷವಾಗಿ ಟ್ರೇಲರ್ ಸೃಷ್ಟಿ ಮಾಡಿದ ದಾಖಲೆ ತುಂಬಾನೇ ದೊಡ್ಡದು.
ಎಲ್ಲಾ ಭಾಷೆಗಳಲ್ಲಿ 'ಕೆಜಿಎಫ್ 2' ಟ್ರೇಲರ್ ಕೋಟಿ ಕೋಟಿ ವೀಕ್ಷಣೆ ಕಂಡಿದ್ದು, ಇದೀಗ ಚಿತ್ರದ ಸೆನ್ಸಾರ್ (Censor) ಪ್ರಕ್ರಿಯೆ ಮುಗಿದಿದ್ದು, ರಾಕಿ ಭಾಯ್ ಚಿತ್ರ ಯಾವ ಪ್ರಮಾಣಪತ್ರ ಪಡೆದಿದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿದೆ. ಹೌದು! 'ಕೆಜಿಎಫ್ ಚಾಪ್ಟರ್ 2' ಚಿತ್ರವನ್ನು ಸೆನ್ಸಾರ್ ಅಂಗಳದ ಎದುರು ಇಡಲಾಗಿತ್ತು. ಸಿನಿಮಾವನ್ನು ನೋಡಿರುವ ಸೆನ್ಸಾರ್ ಮಂಡಳಿಯವರು (Censor Board) 'ಯು/ಎ' ಪ್ರಮಾಣ ಪತ್ರವನ್ನು (U/A Certificate) ನೀಡಿದ್ದಾರೆ. ಹಾಗಾಗಿ ಈ ಸಿನಿಮಾವನ್ನು ಎಲ್ಲರೂ ವೀಕ್ಷಣೆ ಮಾಡಬಹುದಾಗಿದ್ದು, 12 ವರ್ಷಕ್ಕಿಂತ ಕೆಳಗಿನ ಮಕ್ಕಳು ತಮ್ಮ ತಂದೆ-ತಾಯಿಯ ಜತೆಯಲ್ಲಿ ಈ ಚಿತ್ರವನ್ನು ವೀಕ್ಷಣೆ ಮಾಡಬಹುದಾಗಿದೆ.
ಕೆಜಿಎಫ್ ಪಾತ್ರಗಳ ಡಿಜಿಟಲ್ ಅವತಾರ;ಸಿನಿಮಾ ಜಗತ್ತಿನಲ್ಲೇ ಇದೇ ಮೊದಲು
ಸೆನ್ಸಾರ್ ಮಂಡಳಿಯು ನೀಡಿರುವ ಪ್ರಮಾಣ ಪತ್ರದಲ್ಲಿ ನಮೂದಾಗಿರುವಂತೆ ಮೊದಲ ಭಾಗ 'ಕೆಜಿಎಫ್' ಚಿತ್ರಗಿಂತಲೂ ಚಾಪ್ಟರ್ 2 ಸಿನಿಮಾ ಹದಿಮೂರು ನಿಮಿಷಗಳ ಕಾಲ ಹೆಚ್ಚಿದೆ. 'ಕೆಜಿಎಫ್' ಮೊದಲ ಭಾಗ 2 ಗಂಟೆ 35 ನಿಮಿಷಗಳ ಕಾಲಾವಧಿಯಲ್ಲಿತ್ತು. ಆದರೆ ಚಾಪ್ಟರ್ 2 ಸಿನಿಮಾ 2 ಗಂಟೆ 48 ನಿಮಿಷದ್ದಾಗಿದೆ. ಸದ್ಯ ಯಶ್ ನಟನೆಯ 'ಕೆಜಿಎಫ್ 2' ರಿಲೀಸ್‌ಗೆ ಭರದಿಂದ ಸಿದ್ಧತೆ ನಡೆದಿದೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಆಯಾ ಭಾಷೆಯ ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ.
'ಕೆಜಿಎಫ್: ಚಾಪ್ಟರ್ 2' ಪ್ರಚಾರ ಶುರು: 'ಕೆಜಿಎಫ್ 2' ಚಿತ್ರ ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಯಶ್ ನಟನೆಯ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ (Fans) ಸಖತ್ ನಿರೀಕ್ಷೆ ಇದೆ. ನಿರೀಕ್ಷೆಗೆ ತಕ್ಕ ರೀತಿಯಲ್ಲೇ ಸಿನಿಮಾದ ಪ್ರಮೋಷನ್ (Promotion) ಮಾಡಲಾಗುತ್ತಿದೆ. ಇಡೀ ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡಲು ಸಜ್ಜಾಗಿದೆ. ಈ ಮಧ್ಯೆ ಯಶ್ ಸಿನಿಮಾದ ಪ್ರಮೋಷನ್‌ಗಾಗಿ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ (Viral) ಆಗುತ್ತಿದೆ.
KGF Chapter 2 Trailer: ದಾಖಲೆ ಸೃಷ್ಟಿಸಿದ ಯಶ್-ಪ್ರಶಾಂತ್ ನೀಲ್ ಜೋಡಿ
ಇನ್ನು 'ಕೆಜಿಎಫ್ 2' ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದು ವಿಶ್ವದಾದ್ಯಂತ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು (Vijay Kiragandur) ತಿಳಿಸಿದ್ದಾರೆ. ಕರ್ನಾಟಕದಲ್ಲೇ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ತಮಿಳಿನಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಪ್ರದರ್ಶನ ಕಾಣಲಿದೆ. ಹಾಗೆಯೇ ವಿವಿಧ ಭಾಷೆಯ ಚಿತ್ರಮಂದಿರಗಳ ಸಾವಿರಾರು ಚಿತ್ರಮಂದಿರಗಳಲ್ಲಿ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತಿತರರ ತಾರಾಗಣವಿದೆ.
