Asianet Suvarna News Asianet Suvarna News

ಜೀವನದಲ್ಲಿ ಎಲ್ಲದಕ್ಕೂ ಒಂದು ಸ್ಟಾಂಡರ್ಡ್‌ ಸೆಟ್‌ ಮಾಡೋದು ನನ್ನ ಗುರಿ: ಯಶ್‌

 ಮಾಡಕಾಗಲ್ಲ ಅಂತ ಕೋಟ್ಯಂತರ ಜನ ಅಂದುಕೊಂಡಿದ್ದ ಕೆಲಸವನ್ನು ಮಾಡುವುದು ಮತ್ತು ಮಾಡಿದ ಅಂತ ಅನ್ನಿಸಿಕೊಳ್ಳುವುದು ಸಕ್ಸಸ್‌ |  ಕೆಲಸ ಆಗಬೇಕು ಅಂತ ನಮ್ಮನ್ನು ಬದಲಾಯಿಸದಂತೆ. ನಾವು ಇರೋದೇ ಹೀಗೆ ಅಂತ ಖುಷಿಯಾಗಿ ಬದುಕುವುದು ನನಗಿಷ್ಟ : ಯಶ್ 

 

KGF 2 Yash exclusive interview with Kannada prabha on his birthday January 08
Author
Bengaluru, First Published Jan 8, 2020, 8:52 AM IST
  • Facebook
  • Twitter
  • Whatsapp

ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮಾಡಿ. ನಾನು ನನ್ನ ಪ್ರೊಫೆಷನ್‌ಗೆ ಏನು ಬೇಕೋ ಅದನ್ನು ಮಾಡುತ್ತಿದ್ದೇನೆ. ಕನ್ನಡ ಸಿನಿಮಾ ಅಂದ್ರೆ ಇದು ಅಂತ ಎದೆ ತಟ್ಟಿಕೊಂಡು ಹೇಳುವ ಹಾಗೆ ಮಾಡುತ್ತೇನೆ ಎಂದು ಹೇಳಿದ್ದೆ. ಅದನ್ನು ಮಾಡಿದ್ದೇನೆ: ಇದು ಯಶ್ ಮಾತುಗಳು. ಕನ್ನಡ ಪ್ರಭ ಜೊತೆ ಯಶ್ ಎಕ್ಸ್‌ಕ್ಲೂಸಿವ್ ಸಂದರ್ಶನವಿದು! 

1. ನಿಮ್ಮ ಪಯಣದ ಹತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಿ ಹೋದವು?

ಬದಲಾವಣೆಯೊಂದೇ ಶಾಶ್ವತ. ಕೆಲವು ಬದಲಾವಣೆಗಳು ಸಹಜವಾಗಿ ನಡೆಯುತ್ತದೆ. ಇನ್ನು ಕೆಲವನ್ನು ಬದಲಾವಣೆಯ ದಿಕ್ಕಿಗೆ ನಾವು ತಿರುಗಿಸಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಜಾತ್ರೆ ನಡೆಯುತ್ತದೆ ಅಥವಾ ಯಾವುದೋ ಒಂದು ಕಾರ್ಯಕ್ರಮ ಇದೆ ಅನ್ನುವುದನ್ನು ತಮಟೆ ಮೂಲಕ ತಿಳಿಸುತ್ತಿದ್ದರು. ಅದೊಂದು ಕಮ್ಯುನಿಕೇಷನ್‌ ಆಗಿತ್ತು. ಇವತ್ತಿನ ದಿನ ಕಮ್ಯುನಿಕೇಷನ್‌ ಅನ್ನುವುದು ಬೇರೆ ಹಂತಕ್ಕೆ ಹೋಗಿದೆ. ಒಮ್ಮೊಮ್ಮೆ ನಾನು ಕಮ್ಯುನಿಕೇಟ್‌ ಮಾಡದೇ ಇದ್ರೂ ಏನೋ ಕಮ್ಯುನಿಕೇಟ್‌ ಆಗುತ್ತಾ ಇರುತ್ತದೆ.

ಈಗ ಕಮ್ಯುನಿಕೇಷನ್‌ಗೆ ಒಂದು ಚೆಂದದ ವಿನ್ಯಾಸ ಬೇಕು. ನಾನು ಇಂಡಸ್ಟ್ರಿಯಲ್ಲಿದ್ದು ನನ್ನ ಸೋಲು, ನನ್ನ ಸಮಸ್ಯೆ ಹೇಳುತ್ತಾ ಹೋದಾಗ ಅದು ಇಂಡಸ್ಟ್ರಿಯ ಸೋಲು ಅನ್ನುವಂತೆ ಭಾಸವಾಗುತ್ತಿರುತ್ತದೆ. ಯಾವುದೇ ಉದ್ಯಮದಲ್ಲಿ ಸರಿ ತಪ್ಪುಗಳು ಮನುಷ್ಯ ಮಾಡುತ್ತಾನೆಯೇ ಹೊರತು ಉದ್ಯಮ ಅಲ್ಲ. ಉದ್ಯಮ ಸರಿಯಾಗಿಯೇ ಇರುತ್ತದೆ. ಅಲ್ಲಿ ಯಾರು ಕೆಲಸ ಮಾಡುತ್ತಿರುತ್ತಾರೋ ಅವರು ಆ ಉದ್ಯಮವನ್ನು ಒಂದೋ ಬೆಳೆಸುತ್ತಾರೆ ಇಲ್ಲವೇ ತಪ್ಪುಗಳನ್ನೇ ಮಾಡಿ ಹಾಳು ಮಾಡುತ್ತಾರೆ. ಈಗ ಹಾಲಿವುಡ್‌ನಲ್ಲಿ ಯಾರೋ ಒಬ್ಬ ಸಿನಿಮಾ ಮಾಡುತ್ತಾನೆ. ಏನೋ ಒಂದು ಕಂಡುಹಿಡಿಯುತ್ತಾನೆ. ಉಳಿದವರು ಒಂದಷ್ಟುಮಂದಿ ಅದನ್ನೇ ಅಡಾಪ್ಟ್‌ ಮಾಡುತ್ತಾರೆ.

ಈಗ ಫೇಸ್‌ಬುಕ್‌ ಕಂಡುಹಿಡಿದವನಿಗೆ ಇರುವ ಸ್ಪಷ್ಟತೆ ಗ್ರೌಂಡ್‌ ಲೆವೆಲ್‌ನಲ್ಲಿ ಅದನ್ನು ಬಳಸುವವರಿಗೆ ಇರುವುದಿಲ್ಲ. ಹಾಗಾಗಿ ಸಿನಿಮಾ ಮಾಡುವ ನಾವು ಯಾವ ಲೆವೆಲಲ್ಲಿ ಇದ್ದೀವಿ ಅಂತ ನೋಡಿಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ಹಾಲಿವುಡ್‌ಗೆ ಕಂಪೇರ್‌ ಮಾಡಿಕೊಂಡು ಮಾತಾಡಿದಾಗ ಕೀಳರಿಮೆ ಉಂಟಾಗುತ್ತದೆ. ನಮಗೆ ಏನನ್ನಿಸಿತು ಅಂದ್ರೆ ಎಲ್ಲಾ ಸೇಮ್‌ ಅಲ್ವಾ ಅಂತ. ಅಲ್ಲಿ ಸ್ಟುಡಿಯೋ ಇದೆ, ಇಲ್ಲೂ ಇದೆ. ಅಲ್ಲಿ ಕ್ಯಾಮೆರಾ ಇದೆ, ಇಲ್ಲೂ ಇದೆ. ಹಾಗಾದರೆ ನಾವು ಯಾಕೆ ಆಥರ ಸಿನಿಮಾ ಮಾಡೋಕಾಗಲ್ಲ? ಅಂಥಾ ಒಳ್ಳೆಯ ತಂತ್ರಜ್ಞರು ಇಲ್ಲೂ ಇದ್ದಾರೆ. ಅಲ್ಲಿನಷ್ಟೇ ಪ್ರತಿಭಾವಂತರು ಇಲ್ಲೂ ಇದ್ದಾರೆ. ಅದೇ ಥರ ಯೋಚನೆ ಮಾಡಿ ಸಕ್ಸಸ್‌ ಕೊಡ್ತಾ ಕೊಡ್ತಾ ಎಲ್ಲವೂ ಬದಲಾಗುತ್ತಾ ಬಂತು.

ಯಶ್ ಬರ್ತ್ ಡೇ ಸಮಾರಂಭಕ್ಕೆ ಉಚಿತ ಬಸ್: ರಾಕಿಭಾಯ್ ನೋಡುವುದನ್ನು ಮಿಸ್ ಮಾಡ್ಕೊಬೇಡಿ

2. ಯಾವ ಥರದ ಯೋಚನೆಗಳು ಬೇಕು?

ಪರ್ಸೆಪ್ಷನ್‌ ಮುಖ್ಯ. ಯಾರೂ ಇಲ್ಲಿ ಬರಬೇಡಿ, ನಮ್ಮ ಸಿನಿಮಾಗೆ ತೊಂದ್ರೆ ಆಗುತ್ತದೆ ಅಂತ ಹೇಳುವುದಕ್ಕಿಂತ ನಮ್ಮ ಸಿನಿಮಾ ಯಾವ ಹಂತದಲ್ಲಿರಬೇಕು ಅಂದ್ರೆ ಇಲ್ಲಿ ಬರೋಕೆ ಬೇರೆಯವರು ಯೋಚ್ನೆ ಮಾಡಬೇಕು. ನನ್ನ ಪ್ರಕಾರ ನಮ್ಮ ಸಿನಿಮಾ ನೋಡಿ ಅನ್ನುವುದು ಒಳ್ಳೆಯ ವಿಚಾರ ಅಲ್ಲ. ಈಗ ಒಬ್ಬ ಐಫೋನ್‌ ಕಂಡು ಹಿಡಿದ. ಅವರು ಅದನ್ನು ಪ್ಲೀಸ್‌ ತಗೊಳ್ಳಿ ಅಂತ ಹೇಳುವುದಿಲ್ಲ. ಇದರಲ್ಲಿ ಇಂತಿಂಥಾ ಫೀಚರ್‌ಗಳಿವೆ, ಮಜಾ ಇರತ್ತೆ ಎನ್ನುತ್ತಾರೆ ಅಷ್ಟೇ. ನಿಮಗೆ ಫೆಸಿಲಿಟಿ ಬೇಕು ಅಂದ್ರೆ ಖರ್ಚು ಮಾಡಬೇಕು. ಸಿನಿಮಾ ಕೂಡ ಹಾಗೆಯೇ. ನಾನು ಎಂಟರ್‌ಟೇನ್‌ ಮಾಡೋಕೆ ಇಲ್ಲಿ ನಿಂತಿದ್ದೀನಿ. ಇಂಥದ್ದೊಂದು ಪ್ರೊಡಕ್ಟ್ ಮಾಡಿದ್ದೀನಿ. ಆ ಪ್ರಾಡಕ್ಟ್ ಎಂಜಾಯ್‌ ಮಾಡಬೇಕು ಅಂದ್ರೆ ನೋಡು. ಆಗ ಅವನು ಯೋಚ್ನೆ ಮಾಡ್ತಾನೆ, ಎಂಜಾಯ್‌ ಮಾಡೋ ಥರ ಇದ್ಯಾ ಇಲ್ವಾ ಅಂತ. ಅಷ್ಟೇ.

ನನ್ನಲ್ಲಿ ತಪ್ಪಿಟ್ಟುಕೊಂಡು ಜನ ಸಿನಿಮಾ ನೋಡಲ್ಲ ಅಂದ್ರೆ ಹೇಗೆ.. ಜನ ಬೇರೆ ಭಾಷೆ, ಇಂಗ್ಲಿಷ್‌ ಸಿನಿಮಾ ನೋಡ್ತಾರೆ ಅಂದ್ರೆ ಆ ಥರ ನಾವು ಸಿನಿಮಾ ಕೊಡ್ತಿಲ್ಲ ಅಂತರ್ಥ. ಅವರು ಯಾವತ್ತೂ ಸರಿಯೇ ಇರುತ್ತಾರೆ. ಅವರಿಗೆ ಬೇಕಾದ್ದು ಕೊಡಬೇಕು ಅಂದ್ರೆ ಟೈಮ್‌ ಬೇಕು. ನಿಧಾನಕ್ಕೆ ಸಕ್ಸಸ್‌ ಕೊಡುತ್ತಾ ಕೊಡುತ್ತಾ ಈ ಮಟ್ಟಿಗೆ ಬಂದಿದ್ದೇವೆ. ಹೀಗೆಲ್ಲಾ ಆದಾಗ ಪರ್ಸೆಪ್ಷನ್‌ ಬದಲಾಗುತ್ತದೆ ಅಂತ ಅಂದುಕೊಂಡಿದ್ದೆ. ಅದು ಆಗಿದೆ.

2. ಮೊದಲು ಕಲಾವಿದರು ಬೇರೆ ಭಾಷೆಗಳಿಗೆ ಹೋಗುತ್ತಿದ್ದರು, ಈಗ ಸಿನಿಮಾ ಹೋಗುತ್ತಿದೆ...

ನಟ ಹೋಗುವುದು ವೈಯಕ್ತಿಕ. ಅದೂ ಒಂದು ಸಾಧನೆಯೇ. ಸಿನಿಮಾ ಹೋಗುತ್ತದೆ ಅಂದ್ರೆ ಅದು ಉದ್ಯಮ ಹೋದ ಹಾಗೆ. ನಮ್ಮ ಉದ್ಯಮಕ್ಕೆ ಆ ಅವಶ್ಯಕತೆ ಇತ್ತು. ಇದು ನಾವು ಮಾಡುತ್ತಿದೇವೆ ಅಂತಲ್ಲ. ಆಗುತ್ತಿದೆ. ಈಗ ಸಬ್‌ಟೈಟಲ್‌ ಕಾಲ. ಬೇರೆ ಬೇರೆ ಭಾಷೆಯ ಸೀರೀಸ್‌ಗಳನ್ನು, ಸಿನಿಮಾಗಳನ್ನು ಜನ ನೋಡುತ್ತಿದ್ದಾರೆ. ಬೇರೆ ಬೇರೆ ದೇಶಗಳ, ಭಾಷೆಯ ಸಿನಿಮಾವನ್ನೇ ನೋಡುತ್ತಿದ್ದಾರೆ ಅಂದ್ರೆ ನಮ್ಮ ದೇಶದ ಭಾಷೆಗಳ ಬೇಲಿಯನ್ನು ದಾಟದೇ ಇದ್ದರೆ ಹೇಗೆ. ದಾಟಬಹುದು ಅಂತ ರಾಜಮೌಳಿಯವರು ತೋರಿಸಿಕೊಟ್ಟರು. ನಮಗೂ ಪ್ರಯತ್ನ ಮಾಡಬೇಕು ಅಂತ ಇತ್ತು. ಮಾಡಿದ್ವಿ. ನಮ್ಮದು ಏನು ಅಂದ್ರೆ ನಾವು ಮೈನಸ್‌ನಿಂದ ಹೋದವರು. ಐದು ಮೆಟ್ಟಿಲು ಹತ್ತಿದವನಿಗೆ ಹತ್ತು ಮೆಟ್ಟಿಲು ಹತ್ತುವುದು ಸುಲಭ. ಆದರೆ ಮೆಟ್ಟಿಲು ಎಲ್ಲಿದೆ ಅಂತಲೇ ಗೊತ್ತಿರಲಿಲ್ಲ ನಮಗೆ.

ರಾಕಿಭಾಯ್ ಬರ್ತಡೇಗೆ ಅಭಿಮಾನಿಗಳಿಂದ ಸಮಾಜ ಸೇವೆ; ಫೋಟೋಗಳೇ ಎಲ್ಲಾ ಹೇಳ್ತವೆ!

ಮೆಟ್ಟಿಲಿಗೆ ಸೇರಿಸ್ತಾನೇ ಇರಲಿಲ್ಲ ನಮ್ಮನ್ನು. ನಾವು ಮೆಟ್ಟಿಲು ಕಟ್ಟಿಕೊಂಡು, ಮೆಟ್ಟಿಲಾಗುತ್ತಾ, ಆಮೇಲೆ ಮೆಟ್ಟಿಲು ಹತ್ತಬೇಕಿತ್ತು. ಅದು ಸಾಧ್ಯವಾಗಿದೆ. ನಮ್ಮ ಮುಂದಿನ ಗುರಿ ಗ್ಲೋಬಲ್‌. ಯೂಟ್ಯೂಬಲ್ಲಿ ನಮ್ಮ ಸಿನಿಮಾಗೆ ಎಲ್ಲೆಲ್ಲಿಂದಲೋ ಪ್ರತಿಕ್ರಿಯೆಗಳು ಬರುತ್ತವೆ. ಎಲ್ಲರೂ ನೋಡುತ್ತಾರೆ. ಇದೆಲ್ಲಾ ದೊಡ್ಡ ಬ್ಯುಸಿನೆಸ್ಸು. ಅವರಿಗೂ ಪ್ರೊಡಕ್ಟುಗಳು ಬೇಕು. ನಾವು ಅದಕ್ಕೆ ತಕ್ಕಂತೆ ಅಡಾಪ್ಟ್‌ ಆಗಬೇಕು. ಪಕ್ಕದಲ್ಲಿರುವ ಥಿಯೇಟರ್‌ನಲ್ಲಿ ಏನಾಗುತ್ತಿದೆ ಅಂತ ನೋಡ್ತಾ ಕೂತರೆ ಆಗೋದಿಲ್ಲ.

3. ಕಾನ್ಫಿಡೆನ್ಸ್‌ ಲೆವೆಲ್‌ ಹೇಗೆ ಡೆವಲಪ್‌ ಮಾಡಿಕೊಂಡ್ರಿ...

ಹಂತಹಂತವಾಗಿ ಬಂದಿದ್ದು ಎಲ್ಲವೂ. ಮೊದಲು ನಾನು ಬದುಕಬೇಕು ಅಂತ ಇರುತ್ತದೆ. ಬೆಂಗಳೂರಿಗೆ ಬಂದು ಮನೆಗೆ ವಾಪಸ್‌ ಹೋಗದೆ ಇರಬೇಕು ಅಂದ್ರೆ ದುಡೀಬೇಕು. ಆಮೇಲೆ ನಾಟಕ, ಸೀರಿಯಲ್‌ಗಳಲ್ಲಿ ನಟನೆ. ಅದಾದ ಮೇಲೆ ಹೀರೋ ಆಗಬೇಕು ಅನ್ನಿಸುತ್ತದೆ. ಒಂದು ದೊಡ್ಡ ಹಿಟ್‌ ಕೊಡಬೇಕು. ಸೂಪರ್‌ ಹಿಟ್‌ ಸಿನಿಮಾ ಮಾಡಬೇಕು. ಆಮೇಲೆ ಬೇರೆ ಭಾಷೆಯವರು ನೋಡುವ ಥರ ಆಗಬೇಕು. ಹೀಗೆಲ್ಲಾ ಇರುತ್ತದೆ. ಹಂತಹಂತವಾಗಿ ನಿಮ್ಮ ಗೋಲ್‌ ಬದಲಾಗುತ್ತದೆ. ಆದರೆ ಮನೋಭಾವ ಒಂದೇ. ದೊಡ್ಡದಾಗಿ ಬೆಳೆಯಬೇಕು. ಸಕ್ಸಸ್‌ನ ಎಂಜಾಯ್‌ ಮಾಡಿಕೊಂಡು ಕೂತರೆ ದೊಡ್ಡ ಸಕ್ಸಸ್‌ ಸಿಗೋದಿಲ್ಲ.

4. ನೀವು ಸಕ್ಸಸ್‌ ಹ್ಯಾಂಡಲ್‌ ಮಾಡಿದ ರೀತಿ ಚೆನ್ನಾಗಿತ್ತು ಅನ್ನಿಸುತ್ತದೆ...

ಸಕ್ಸಸ್‌ಗೆ ಅಟ್ಯಾಚ್‌ ಆಗಲು ನನಗೆ ಇಷ್ಟವಿಲ್ಲ. ನಾನು ಸಕ್ಸೆಸ್ಸನ್ನು ಹ್ಯಾಂಡಲ್‌ ಮಾಡಲಿಲ್ಲ. ಸಕ್ಸಸ್‌ ನನ್ನ ಸುತ್ತ ಇರಬೇಕು ಅಂತ ಬಯಸಲಿಲ್ಲ ಅಷ್ಟೇ. ಯಾಕೆಂದರೆ ಸಕ್ಸಸ್‌ ಕೆಳಗೆ ಎಳೆಯುವ ಸಾಧ್ಯತೆ ಇರುತ್ತದೆ. ಆದರೆ ನನಗೆ ದೊಡ್ಡ ಸಕ್ಸಸ್‌ ಬೇಕು. ಉದಾಹರಣೆಗೆ ಒಂದು ಕಾರ್‌ ತಗೋಬೇಕು ಅಂತ ಆಸೆ ಆಗುತ್ತದೆ. ತಗೋತೇವೆ. ಗಾಡಿ ಓಡಿಸುತ್ತೇವೆ. ಮೂರು ದಿನ ಆದ ಮೇಲೆ, ಒಂದು ಸ್ಕ್ರಾಚ್‌ ಬೀಳೋವರೆಗೆ ಅಷ್ಟೇ. ಮೆಟೀರಿಯಲಿಸ್ಟಿಕ್‌ ವಸ್ತುಗಳು ನನ್ನ ಎಕ್ಸೈಟ್‌ ಮಾಡಲ್ಲ. ಮಾಡಕಾಗಲ್ಲ ಅಂತ ಕೋಟ್ಯಂತರ ಜನ ಅಂದುಕೊಂಡಿದ್ದ ಕೆಲಸವನ್ನು ಮಾಡುವುದು ಮತ್ತು ಮಾಡಿದ ಅಂತ ಅನ್ನಿಸಿಕೊಳ್ಳುವುದು ಸಕ್ಸಸ್‌.

ಅದರಿಂದಾಗುವ ಲಾಭಗಳನ್ನು ನೋಡುವುದಲ್ಲ. ಇದನ್ನ ಮಾಡೋ ಮಾಡ್ತಾನೆ ಅಂತ ಜನ ನಂಬಿಕೆ ಇಟ್ಟು ಮಾಡ್ದ ಗುರು ಅಂತನ್ನಿಸಿಕೊಳ್ಳೋದಿದೆಯಲ್ಲ ಅದು ಸಕ್ಸಸ್‌. ಅದೆಲ್ಲಾ ಮೀರಿ, ನನ್ನೊಳಗೆ ನಡೀತಾ ಇರೋ ಒಂದು ಹೋರಾಟಕ್ಕೆ ಜಯ ಸಿಗಬೇಕು. ಸವಾಲುಗಳೇ ಇಲ್ಲದಿದ್ದರೆ ಕಷ್ಟ. ನೀವು ಹೋಗಿ ಜೈಸಿಕೊಳ್ಳುತ್ತೇನೆ ಅಂದುಕೊಂಡು ಮಾಡಿದರೆ ಅದಕ್ಕೆ ತಕ್ಕಂತೆ ಮನಸ್ಸು, ದೇಹ ಎಲ್ಲಾ ಒಗ್ಗುತ್ತದೆ. ಸಕ್ಸಸ್‌ ನನಗೆ ಇಂಧನ ಇದ್ದಂತೆ. ಅಷ್ಟೇ.

ರಾಖಿ ಭಾಯ್‌ ಹುಟ್ಟುಹಬ್ಬದ ದಿನಾನೇ 'ಈ' ನಿರ್ಧಾರಕ್ಕೆ ಬಂದ್ರಾ ಪ್ರಶಾಂತ್ ನೀಲ್!

5. ನಿಮ್ಮ ಪ್ರಯತ್ನ. ಮ್ಯಾನರಿಸಂ, ಎಟಿಕೆಟ್‌, ಏನೇನಿರಬೇಕೋ ಅದೆಲ್ಲಾ ಮಾಡುತ್ತೀರಲ್ಲ.. ಅದು ಹೇಗಾಯಿತು..

ಪ್ರಕೃತಿಯಿಂದ ನಾವು ಕಲಿಯಬೇಕು. ಈಗ ನನ್ನ ಮಕ್ಕಳು ಎಲ್ಲವನ್ನೂ ಅಚ್ಚರಿಯಿಂದ ನೋಡುತ್ತಾರೆ. ಹೊಸ ವಿಷಯ ಕಲಿಯುತ್ತಿದ್ದಾರೆ. ನಾನು ಅದನ್ನು ನೋಡುತ್ತೇನೆ. ಆದರೆ ಮುಂದೆ ಎಲ್ಲವೂ ಬದಲಾಗುತ್ತದೆ. ಬದಲಾವಣೆ ಆಗಲೇಬೇಕು. ಯಾವುದು ಬೆಳೆಯುವುದಿಲ್ಲವೋ ಅದು ಬಿದ್ದು ಹೋಗುತ್ತದೆ. ನೀವು ಒಂದು ದಾರಿ ಹಿಡಿಯಬೇಕು. ಆಮೇಲೆ ಕಲಿಯುವುದು ಖುಷಿ. ಕಲಿಕೆ ಖುಷಿ ಕೊಡುತ್ತದೆ. ಮನುಷ್ಯ ಕಲಿಯುತ್ತಾ ಇರಬೇಕು ಮತ್ತು ವೈಯಕ್ತಿಕವಾಗಿ ಏನೋ ಬದಲಾವಣೆ ನಡೆಯುತ್ತಿರಬೇಕು. ನನಗಿದು ಸಾಕು ಅಂತ ಹೇಳಬಾರದು. ವೈ ನಾಟ್‌ ಎಂದು ಮುಂದೆ ಸಾಗಬೇಕು.

ಇಡೀ ದಿನ ಸೂಟ್‌ ಹಾಕಿಕೊಂಡೇ ಇರಬೇಕು ಅಂತೇನಿಲ್ಲ. ಪಂಚೆ ಉಟ್ಟಾಗಲೂ ನಮ್ಮತನ ಕಾಣಿಸಬೇಕು. ಅದೆಲ್ಲಾ ಕಲಿತುಕೊಳ್ಳುತ್ತಾ ಹೋದಾಗ ಚೆನ್ನಾಗಿರುತ್ತದೆ. ನಾನು ಒಬ್ಬ ಶೆಫ್‌ ಆಗಿದ್ದು ತುಂಬಾ ಒಳ್ಳೆಯ ಅಡುಗೆ ಮಾಡುತ್ತಿದ್ದರೂ ನೀಟ್‌ನೆಸ್‌ ಮೇಂಟೇನ್‌ ಮಾಡಿಲ್ಲ ಎಂದಾದರೆ ಎಷ್ಟೇ ರುಚಿಯಿದ್ದರೂ ಎಲ್ಲರಿಗೂ ಇಷ್ಟವಾಗದೇ ಇರಬಹುದು. ಅದೇ ನೀಟಾಗಿ ಪ್ರೆಸೆಂಟ್‌ ಮಾಡಿದಾಗ ಎಲ್ಲರೂ ಸಮಾಧಾನದಿಂದ ನೋಡುತ್ತಾರೆ, ತಿನ್ನುತ್ತಾರೆ.

6. ಎಲ್ಲಿದ್ದೀರಿ ಯಶ್‌ ಎಂದು ಕೇಳುತ್ತಿದ್ದರು. ಈಗಲೂ ಆ ಪ್ರಶ್ನೆ ಇದೆ, ಆದರೆ ಕೇಳುವ ರೀತಿ ಬೇರೆಯಾಗಿದೆ!

ಆಗಲೂ ನಾನು ಹೇಳಿದ್ದು ಒಂದೇ ಮಾತು. ಈಗಲೂ ಹೇಳುವುದು ಅದನ್ನೇ. ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮಾಡಿ. ನಾನು ನನ್ನ ಪ್ರೊಫೆಷನ್‌ಗೆ ಏನು ಬೇಕೋ ಅದನ್ನು ಮಾಡುತ್ತಿದ್ದೇನೆ. ನನ್ನ ಉದ್ಯಮ ಚೆನ್ನಾಗಿರಬೇಕು ಅಂದುಕೊಂಡೆ. ಕನ್ನಡ ಸಿನಿಮಾ ಅಂದ್ರೆ ಇದು ಅಂತ ಎದೆ ತಟ್ಟಿಕೊಂಡು ಹೇಳುವ ಹಾಗೆ ಮಾಡುತ್ತೇನೆ ಎಂದು ಹೇಳಿದ್ದೆ. ಅದನ್ನು ಮಾಡಿದ್ದೇನೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಎಲ್ಲಾ ಸಮಸ್ಯೆಯನ್ನು ಸರಿ ಮಾಡುವುದಕ್ಕೆ ನಾನು ಪ್ರಧಾನಮಂತ್ರಿಯೂ ಅಲ್ಲ, ಮುಖ್ಯಮಂತ್ರಿಯೂ ಅಲ್ಲ.

ಕೆಲವೊಮ್ಮೆ ನಾವು ನಮ್ಮ ಜವಾಬ್ದಾರಿ ತೋರಿಸಬೇಕಾಗುತ್ತದೆ. ಯಾವಾಗ ಏನು ಮಾತಾಡಬೇಕೋ ಆಗ ನಾವು ಮಾತಾಡುತ್ತೇವೆ. ಯಾವಾಗ ಏನಾದರೂ ಕೆಲಸ ಮಾಡಬೇಕೋ ಆಗ ಅದಕ್ಕೆ ಬೇಕಾದ ಕೆಲಸ ಮಾಡುತ್ತೇನೆ.

7. ಪಾಲಿಟಿಕ್ಸ್‌ ಬರುವ ಯೋಚನೆ ಇದೆಯೇ?

ಪಾಲಿಟಿಕ್ಸ್‌ ಅಂದ್ರೆ ಕೆಲಸ ಅಷ್ಟೇ. ಎಲ್ಲಾ ಇದೆ ನಮ್ಮ ದೇಶದಲ್ಲಿ. ಆದರೆ ಮನಸ್ಥಿತಿ ಸರಿ ಇಲ್ಲ. ಕೆಲಸ ಮಾಡಬೇಕಾದೋರು ಮಾಡೋ ಕೆಲಸ ಸರಿಯಾಗಿ ಮಾಡಲ್ಲ. ಬೇರೆ ದೇಶದಲ್ಲಿ ಕಸ ಜೇಬಲ್ಲಿ ಹಾಕಿಕೊಂಡು ಡಸ್ಟ್‌ಬಿನ್‌ಗೆ ಹಾಕುವ ನಾವು ಇಲ್ಲಿ ಮಾತ್ರ ಎಲ್ಲಿ ಬೇಕಲ್ಲಿ ಕಸ ಬಿಸಾಕುತ್ತೇವೆ. ಹಾಗಾಗಿ ಮನಸ್ಥಿತಿ ಸರಿ ಹೋಗಬೇಕು. ಅದನ್ನು ಸರಿ ಮಾಡೋದು ಹೇಗೆ? ಮನಸ್ಥಿತಿ ಸರಿ ಮಾಡಲು ಬೇಕಾದಾಗ ಏನಾದರೂ ಹೇಳಬೇಕಿದ್ದರೆ ಹೇಳುತ್ತೇನೆ. ಕೆಲಸ ಮಾಡಬೇಕೋ ಮಾಡುತ್ತೇನೆ. ಅದು ಬಿಟ್ರೆ ಪಾಲಿಟಿಕ್ಸ್‌ ನನ್ನ ಪ್ಯಾಷನ್‌ ಅಲ್ಲ.

8. ಜನ ನಿಮ್ಮಲ್ಲಿ ಲೀಡರ್‌ಶಿಪ್‌ ಕಾಣುತ್ತಿದ್ದಾರೆ..

ಲೀಡರ್‌ ಅನ್ನುವುದು ವ್ಯಕ್ತಿತ್ವ, ಹುದ್ದೆ ಅಲ್ಲ. ಲೀಡರ್‌ ಆಗಲು ಹುದ್ದೆ ಬೇಕಿಲ್ಲ. ಹುದ್ದೆ ಅನ್ನುವುದು ವೃತ್ತಿ. ಈಗ ನಾನು ಲೀಡರ್‌ ಆದರೆ ನಾನು ಏನು ನಂಬುತ್ತೇನೋ ಅದನ್ನು ಮಾಡುತ್ತೇನೆ. ನಾನು ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬಹುದು ಎಂದು ನಂಬಿದಾಗ ಮಾತ್ರ ನಾನು ಲೀಡರ್‌ ಆಗಿ ಬರಬೇಕು. ಜನ ಲೀಡರ್‌ ಅಂತ ಭಾವಿಸುತ್ತಿದ್ದಾರೆ, ನಾನು ಲೀಡರ್‌ ಆಗಬೇಕು ಅಂತ ಹೊರಟರೆ ಆಗ ಲೀಡರ್‌ ಆಗಿ ಉಳಿಯುವುದಿಲ್ಲ.

8. ಕಾಂಪಿಟಿಷನ್‌ ನನಗಿಷ್ಟಅಂದಿದ್ರಿ...

ಎರಡು ವಿಧ ಇದೆ ಕಾಂಪಿಟಿಷನ್‌ನಲ್ಲಿ. ಒಂದು ಇಂಟರ್‌ನಲ್‌. ಇನ್ನೊಂದು ಎಕ್ಸಟರ್ನಲ್‌. ಇಂಟರ್‌ನಲ್‌ ಅಂದ್ರೆ ನಾನು ನನ್ನನ್ನು ಗೆಲ್ಲಬೇಕು. ಎಕ್ಸಟರ್ನಲ್‌ ಅಂದ್ರೆ ಬೇರೆಯವರ ಜತೆ ಕಾಂಪಿಟ್‌ ಮಾಡೋದು. ಕಾಂಪಿಟಿಷನ್‌ ಇಲ್ಲದೇ ಇರುವ ಕ್ಷೇತ್ರವೇ ಇಲ್ಲ. ಪ್ರತಿಯೊಬ್ಬರೂ ಅವರವರ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ. ನಾನು ಯಾರ ಜೊತೆಗೆ ಕಾಂಪಿಟ್‌ ಮಾಡಲ್ಲ ಅನ್ನುವುದು ಸತ್ಯ. ಅದರ ಜತೆಗೆ ನನಗೆ ಕಾಂಪಿಟಿಟರ್‌ಗಳು ಇದ್ದಾರೆ. ನನಗೆ ಸ್ಪರ್ಧಿಗಳು ಇಷ್ಟ. ಅವರು ಸ್ಪರ್ಧೆಗೆ ನಿಂತಾಗ ನಮ್ಮ ಮನಸ್ಸಲ್ಲಿ ಆಯ್ತು ಬನ್ರೋ ಅಂತ ಇರತ್ತಲ್ಲ ಹಾಗೆ. ಅದು ನೆಗೆಟಿವ್‌ ಅಂತಲ್ಲ. ಎಲ್ಲರೂ ಅವರವರ ಮಟ್ಟಿಗೆ ಬೆಸ್ಟ್‌ ಆಗಿರುತ್ತಾರೆ. ನಾವು ಏನು ಅಂತ ನಮಗೆ ಗೊತ್ತಿರುತ್ತಲ್ಲ.

ಈಗ ಹತ್ತು ಜನ ಓಡುತ್ತಿರುವಾಗ ಒಂಭತ್ತು ಜನ ಬಿದ್ದು ಹೋದರೆ ನಾನು ರೇಸ್‌ ಗೆದ್ದರೆ ಏನು ಬಂತು. ಒಂಭತ್ತು ಜನರನ್ನು ದಾಟಿ ಸೋಲಿಸಿ ದಾಖಲೆ ವೇಗದಲ್ಲಿ ಗುರಿ ಮುಟ್ಟಿದಾಗ ಚಾಂಪಿಯನ್‌ ಅನ್ನುತ್ತಾರೆ. ನನಗೆ ಚಾಂಪಿಯನ್‌ ಆಗುವ ಆಸೆ. ಹೊಸ ದಾಖಲೆ ಸೃಷ್ಟಿಸುವುದರ ಕಡೆಗೆ ನನ್ನ ಗಮನ. ಆಗ ಅವರು ಇವನನ್ನ ಬಿಟ್ಟು ಬಿಡ್ರಪ್ಪ ಅಂದ್ಕೋಬೇಕು.

9. ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳು ಈಗ ಪ್ರಾಬಲ್ಯ ಸಾಧಿಸಿವೆ...

ಕಡ್ಲೆಕಾಯಿ ಕೊಡೋಕೆ ಬಂದವನು ಎರಡೆರಡು ಕೊಡುತ್ತಾ ಹೋಗುತ್ತಾನೆ. ಎರಡು ಕಡ್ಲೆ ತಿಂದ ಮೇಲೆ ಇನ್ನೂ ತಿನ್ನಬೇಕು ಅನ್ನಿಸುತ್ತದೆ. ಅದೇ ಥರ ನಾವು ಥಿಯೇಟರ್‌ನಲ್ಲಿ ಎಕ್ಸ್‌ಪೀರಿಯನ್ಸ್‌ ಮಾಡುವಂತಹ ಸಿನಿಮಾಗಳನ್ನು ಮಾಡಬೇಕು. ಸಿನಿಮಾ ಒಂದು ಎಕ್ಸ್‌ಪೀರಿಯನ್ಸ್‌. ಅದೊಂದು ಅನುಭವ ಆದಾಗ ವರ್ಕ್ ಆಗುತ್ತದೆ. ಅದರ ಜತೆಗೆ ಓಟಿಟಿ ಕೂಡ ಒಂದು ಬ್ಯುಸಿನೆಸ್‌. ಒಂದಕ್ಕೊಂದು ಪೂರಕವಾಗಿ ಬೆಳೆಯೋ ಥರ ಇದ್ದಾಗ ಎಲ್ಲವೂ ಒಳ್ಳೆಯದೇ.

10. ಕೆಜಿಎಫ್‌ 2 ನಂತರ ಏನು?

ಕೆಲಸ ಮಾಡುತ್ತಿದ್ದೇನೆ. ಹೇಳುತ್ತೇನೆ. ನಿಮ್ಮನ್ನೆಲ್ಲಾ ಸರ್ಪೈಸ್‌ ಮಾಡಬೇಕು ಅನ್ನೋ ಆಸೆ ನಂಗೆ. ಹಾಗಾಗಿ ನೀವು ಕಾಯಬೇಕು.

11. ಪ್ಲಾನಿಂಗ್‌ ನಡೀತಿದೆ?

ಪ್ಲಾನ್‌ ಮಾಡದೇ ಕೂರುವವನಲ್ಲ. ಕಾರಲ್ಲಿ ಸಾಗುವಾಗ ನಾನು ಯಾವ ಸ್ಪೀಡಲ್ಲಿ ಹೋಗಬೇಕು ಅಂತ ಯೋಚಿಸಲ್ಲ. ಆದರೆ ಎಲ್ಲಿ ಹೋಗಬೇಕು ಅನ್ನುವ ಗುರಿ ಇರುತ್ತದೆ.

12. ಈ ಹತ್ತು ವರ್ಷಗಳಲ್ಲಿ ಮಿಸ್‌ ಮಾಡಿಕೊಂಡಿದ್ದೇನು?

ಏನೂ ಇಲ್ಲ. ನಂಗೆ ಪಾನಿಪುರಿ ತಿನ್ನಬೇಕು ಅನ್ನಿಸುತ್ತದಾ, ಹೋಗಿ ತಿಂತೀನಿ. ಏನ್‌ ಮಹಾ ಆಗತ್ತೆ. ಹತ್ತು ಜನ ಫೋಟೋ ಬೇಕು ಅಂತ ಕೇಳಬಹುದು. ತುಂಬಾ ಜನ ಕೇಳುತ್ತಾರೆ, ಬಹಳ ಜನ ಫೋಟೋ ತೆಗೆಯೋಕೆ ಬರ್ತಾರಲ್ಲ, ತೊಂದ್ರೆ ಆಗಬಹುದಲ್ಲ ನಿಮಗೆ ಅಂತ. ಯಾವೋನ್‌ ಹೇಳಿದ್ದು, ಅವರು ಬರದೇ ಇದ್ರೆ ತೊಂದ್ರೆ ಆಗತ್ತೆ ಅಂತ ನಾನು ಹೇಳುತ್ತೇನೆ. ಇಷ್ಟುಜನ ಪ್ರೀತಿಯಿಂದ ನೋಡುತ್ತಾರೆ ಅನ್ನುವುದೇ ದೊಡ್ಡ ವಿಷಯ. ಆದರೆ ನನ್ನ ಬೈಕಲ್ಲಿ ಚೇಸ್‌ ಮಾಡಿಕೊಂಡು ಬರುತ್ತಾರೆ. ಅದು ನನಗೆ ಕೋಪ ಬರುತ್ತದೆ. ಸ್ಪೀಡಾಗಿ ಬಂದ್ರೆ ಅವರಿಗೆ ಏನಾದರೂ ಆದ್ರೆ ಅನ್ನೋದು ನನಗೆ ಭಯ.

ಕಳೆದುಕೊಂಡೇ ಅನ್ನುವುದು ಏನೂ ಇಲ್ಲ. ಕಳೆದುಕೊಂಡಿರುವುದೇ ಆಗಿದ್ದರೆ ಇನ್ನೊಬ್ಬರಿಗೆ ಅಡ್ಜಸ್ಟ್‌ ಆಗಬೇಕಾದ ಪರಿಸ್ಥಿತಿ ಕಳೆದುಕೊಂಡಿದ್ದೇನೆ. ಈಗ ಬೇರೆಯವರು ನನಗೆ ಅಡ್ಜಸ್ಟ್‌ ಆಗಬೇಕಷ್ಟೇ. ಅದು ಅನಿವಾರ್ಯತೆ ಆಗಿಬಿಟ್ಟಿದೆ.

13. ಮುಂದಿನ ಹತ್ತು ವರ್ಷಗಳಲ್ಲಿ ಏನು?

ನಾನು ಯಾವಾಗಲೂ ಐದು ವರ್ಷದ ಪ್ಲಾನ್‌ ಇಟ್ಟುಕೊಳ್ಳುತ್ತೇನೆ. ಮೊದಲು ನಾನು ಪ್ಲಾನ್‌ ಹೇಳುತ್ತಿದ್ದೆ. ಈಗ ಎಷ್ಟುಮೆಚ್ಯುರಿಟಿ ಬಂದಿದೆ ಅಂದ್ರೆ ಆ ಪ್ಲಾನ್‌ ಹೇಳುವ ಅವಶ್ಯಕತೆ ಇಲ್ಲ ಅನ್ನಿಸುತ್ತದೆ.

- ಸಂದರ್ಶನ: ಜೋಗಿ, ರಾಜೇಶ್ ಶೆಟ್ಟಿ 

Follow Us:
Download App:
  • android
  • ios