ಕೆಜಿಎಫ್ 2 ಮೂಲಕ ವಿಶ್ವಾದ್ಯಂತ ಜನಪ್ರಿಯ ಆಗಿರುವ ನಟ ಯಶ್. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇಂಗ್ಲೀಷ್ ಬರದ ತನಗೆ ಇಂಗ್ಲೀಷ್ ಕಲಿಸಿ, ಲೈಫಲ್ಲಿ ಹೇಗಿದ್ರೆ ಚಂದ ಅಂತ ತಿಳಿಸಿಕೊಟ್ಟ ರಾಧಿಕಾಗೆ ಥ್ಯಾಂಕ್ಸ್ ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ಇದೀಗ ಗೋವಾದ ಬೀಜ್‌ನಲ್ಲಿ ರಾಧಿಕಾ ಪಂಡಿತ್ (Radhika Pandith) ಹಾಗೂ ಮಕ್ಕಳಾದ ಐರಾ (Ayra), ಯಥರ್ವ ಜೊತೆಗೆ ಹಾಲಿಡೇ ಮೂಡ್‌ನಲ್ಲಿದ್ದಾರೆ. ಕೆಜಿಎಫ್ 2 ಸಿನಿಮಾ ರಿಲೀಸ್‌ನ ಗಡಿಬಿಡಿ, ಪ್ರಚಾರದ ಓಡಾಟ, ಬಿಡುಗಡೆಯ ಟೆನ್ಶನ್‌ಗಳಿಂದ ಕಳಚಿಕೊಂಡು ಗೋವಾದಲ್ಲಿ ಫ್ಯಾಮಿಲಿ ಟೈಮ್ (Family time) ಎನ್‌ಜಾಯ್ ಮಾಡುತ್ತಿದ್ದಾರೆ. ಇನ್ನೊಂದೆಡೆ KGF 2 ಇಂಗ್ಲೆಂಡ್‌ನ ಮಾಂಚೆಸ್ಟರ್ ಫುಟ್ ಬಾಲ್ ಕ್ಲಬ್‌ನಲ್ಲೂ (Mancity f c) ಸಖತ್ ಹವಾ ಎಬ್ಬಿಸಿದೆ, ಫೇಮಸ್ ಬ್ರಾಂಡ್ ಅಮೂಲ್ (Amul)ತನ್ನ ಬ್ರಾಂಡ್‌ಗೆ ರಾಕಿಭಾಯ್ ಕಾರ್ಟೂನ್ ಬಳಸಿಕೊಂಡಿದೆ. ಜಗತ್ತಲ್ಲಿ ಹೀಗೆಲ್ಲ ಬೆಳವಣಿಗೆಗಳು ಆಗುತ್ತಿರುವಾಗ ಯಶ್ ಮಾತ್ರ ಇವೆಲ್ಲದರ ಗೊಡವೆಯಲ್ಲಿ ಇದ್ದ ಹಾಗಿಲ್ಲ. ಇಷ್ಟೂ ದಿನ ಸಿನಿಮಾ ಕಾರಣಕ್ಕೆ ಕಳೆದುಕೊಂಡಿದ್ದ ಫ್ಯಾಮಿಲಿ ಟೈಮ್ ಮತ್ತೆ ಸಿಕ್ಕ ಖುಷಿಯಲ್ಲಿದ್ದಾರೆ.
KGF2 ಯಶಸ್ಸಿನ ಖುಷಿಯಲ್ಲಿ ಯಶ್; ಮಕ್ಕಳ ಜೊತೆ ಸಮುದ್ರತೀರದಲ್ಲಿ ಆಟವಾಡುತ್ತಿರುವ ರಾಕಿಂಗ್ ದಂಪತಿ
ಯಶ್ ಅವರಿಗೆ ರಾಧಿಕಾ ಪಂಡಿತ್ ಅಂದರೆ ಬರೀ ಪತ್ನಿ ಮಾತ್ರ ಅಲ್ಲ, ಆಕೆ ಎಲ್ಲರಿಗಿಂತ ಮಿಗಿಲಾದ ಫ್ರೆಂಡ್, ಮಾರ್ಗದರ್ಶಿ. ರಾಧಿಕಾ ತನ್ನ ಬದುಕಿನಲ್ಲಿ ಬಂದ ಮೇಲೆ ಏನೆಲ್ಲ ಬದಲಾವಣೆಗಳಾದವು, ತನ್ನಲ್ಲಿ ಎಷ್ಟೆಲ್ಲ ಚೇಂಜಸ್ ಆಯ್ತು ಅಂತ ಯಶ್ ಹೇಳಿಕೊಂಡಿದ್ದಾರೆ.
'ನಾನು ರಾಧಿಕಾ ಗಂಡ ಹೆಂಡತಿ ಅನ್ನೋದಕ್ಕಿಂತ ಹೆಚ್ಚಾಗಿ ಫ್ರೆಂಡ್ಸ್ (Friends). ನಮ್ಮಿಬ್ಬರ ಕೆರಿಯರ್ ಜೊತೆಗೇ ಶುರುವಾಯ್ತು. ನಾವಿಬ್ಬರೂ ಒಂದು ಸೀರಿಯಲ್ ಮೂಲಕ ಮನರಂಜನಾ ಜಗತ್ತಿಗೆ ಎಂಟ್ರಿ ಕೊಟ್ಟೆವು. ಆರಂಭದಲ್ಲಿ ನಮ್ಮ ನಡುವೆ ಮಾತುಕತೆ ಇರಲಿಲ್ಲ. ಅವಳು ಯಾರ ಗೊಡವೆಗೂ ಹೋಗದ, ತನ್ನ ಪಾಡಿಗೆ ತಾನಿರುವ ಹುಡುಗಿ. ತಾನಾಯ್ತು, ತನ್ನ ಕೆಲಸ ಆಯ್ತು ಅಂತಿದ್ದ ಹುಡುಗಿಯನ್ನು ಇಷ್ಟಪಟ್ಟು ಮದುವೆ ಆದದ್ದೇ ಸಾಹಸ. ಸುಮಾರು 8 ವರ್ಷ ಸ್ನೇಹಿತರೂ, ಪ್ರೇಮಿಗಳೂ ಆಗಿದ್ದು ಮದುವೆ ಆದ್ವಿ. ಇಬ್ಬರು ಮಕ್ಕಳೂ ಆದರು. ಅವಳು ನನ್ನ ಬದುಕಿಗೊಂದು ಅರ್ಥ, ಯುನಿಕ್‌ನೆಸ್ (Uniqueness) ಕೊಡುತ್ತಾ ಬಂದಳು' ಎನ್ನುತ್ತಾರೆ ಯಶ್.
ಪತ್ನಿಯ ಬಗ್ಗೆ ತುಂಬ ಮನಸ್ಸಿಂದ ಮಾತನಾಡುವ ಯಶ್ ರಾಧಿಕಾ ತನ್ನಲ್ಲಿ ತಂದ ಬದಲಾವಣೆಗಳ ಬಗ್ಗೆಯೂ ಹೇಳ್ತಾರೆ. 'ನಾನೊಂಥರ ಲೋಕಲ್ ಹುಡುಗ. ನನಗೆ ಸರಿಯಾಗಿ ಮಾತನಾಡೋಕೆ ಬರೋದು ಕನ್ನಡ ಮಾತ್ರ. ನಾನಿವತ್ತು ಈ ಮಟ್ಟಿಗಾದರೂ ಇಂಗ್ಲೀಷ್ ಮಾತನಾಡುತ್ತೇನೆ ಅಂದರೆ ಅದಕ್ಕೆ ಕಾರಣ ರಾಧಿಕಾ. ಅವಳು ನನಗೆ ಇಂಗ್ಲೀಷ್ ಬಳಕೆ ಕಲಿಸಿದಳು. ಒಟ್ಟಾರೆ ಇದ್ದ ನನ್ನ ಬಿಹೇವಿಯರ್‌ಅನ್ನು ಗೌರವಯುತವಾಗಿ ಬದಲಾಯಿಸಿದಳು. ಯಾವ ಕಡೆ ಹೇಗಿರಬೇಕು ಅನ್ನೋ ಮ್ಯಾನರ್ಸ್ (Manners) ಕಲಿಸಿದ್ದೂ ಅವಳೇ. ಅವಳೂ ಒಬ್ಬ ನಟಿ, ಕೇವಲ ನಟಿ ಮಾತ್ರ ಅಲ್ಲ, ಪ್ರತಿಭಾವಂತೆ ಅಂತ ಹೆಸರಾದವಳು. ಅಂಥವಳು ಸದ್ಯ ಆಕ್ಟಿಂಗ್‌ನಿಂದ ಬ್ರೇಕ್ ತಗೊಂಡು ಮಕ್ಕಳನ್ನು, ಮನೆಯನ್ನು ನೋಡಿಕೊಳ್ಳುತ್ತಿದ್ದಾಳೆ. ಈ ಮಕ್ಕಳನ್ನು ನೋಡಿಕೊಳ್ಳೋದು ಸುಲಭ ಅಂತ ನಮಗೆ ಮೇಲ್ನೋಟಕ್ಕೆ ಅನಿಸುತ್ತೆ. ಆದರೆ ನನಗೆ ಒಂದ್ ಹದಿನೈದು ನಿಮಿಷ ಮಕ್ಕಳನ್ನು ನೋಡ್ಕೊಳ್ಳಬೇಕಾದ್ರೆ ಸುಸ್ತಾಗುತ್ತೆ. ಅವಳು ತನ್ನೆಲ್ಲ ಸಮಯವನ್ನು ಮಕ್ಕಳಿಗೇ ಕೊಡ್ತಾಳೆ ಅಂದರೆ ಅವಳಿಗೆಷ್ಟು ಸುಸ್ತಾಗಬೇಡ.. ನಾನು ಹೀಗೆ ಸಿನಿಮಾದಲ್ಲಿ ಬ್ಯುಸಿ ಇದ್ದೀನಿ. ಮದುವೆ, ಮಕ್ಕಳು ಆಗಿರದಿದ್ರೆ ಅವಳೂ ಬ್ಯುಸಿ ನಟಿಯಾಗಿರುತ್ತಿದ್ದಳು. ಆ ಮಟ್ಟಿನ ಬೇಡಿಕೆ ಅವಳಿಗಿತ್ತು. ಆದರೆ ಅದೆಲ್ಲ ಬಿಟ್ಟು ಮಕ್ಕಳ, ಮನೆಯ ದೇಖಾರೇಖಿ ನೋಡಿಕೊಳ್ತಾಳೆ ಅಂದರೆ ಅವಳ ತ್ಯಾಗ(Sacrifice) ಎಷ್ಟು ದೊಡ್ಡದು' ಅಂತಾರೆ.
ಕಲೆಕ್ಷನ್‌ನಲ್ಲಿ ವಿಶ್ವದಲ್ಲೇ 2 ಸ್ಥಾನಕ್ಕೇರಿದ ಕೆಜಿಎಫ್-2, ಇತಿಹಾಸ ಸೃಷ್ಟಿಸಿದ ರಾಕಿಂಗ್ ಭಾಯ್.!
ಜೊತೆಗೆ ಇನ್ನೊಂದು ಮುಖ್ಯವಾದ ವಿಚಾರವನ್ನೂ ಹೇಳ್ತಾರೆ. 'ನಾನು ಹೊರಗಿನವರ ಮಾತಿಗೆಲ್ಲ ತಲೆಕೆಡಿಸಿಕೊಳ್ಳೋದಿಲ್ಲ. ಆದರೆ ತೀರಾ ಆತ್ಮೀಯರಿಂದ ನೋವಾದರೆ ಚಿಪ್ಪೊಳಗೆ ಸೇರಿಕೊಂಡು ಬಿಡ್ತೀನಿ. ಅದರಿಂದ ಹೊರಗೆ ಬರೋದಕ್ಕೇ ಹೋಗಲ್ಲ. ಅದೇ ನೋವಲ್ಲೇ ಸಮಯ ದೂಡುತ್ತಿರುತ್ತೇನೆ. ನನ್ನನ್ನು ಈ ನೋವಿಂದ ಆಚೆ ತರೋಕೆ ಆಗೋದು ರಾಧಿಕಾ ಒಬ್ಬಳಿಂದ ಮಾತ್ರ. ಇದಕ್ಕಿಂತ ಇನ್ನೇನು ಬೇಕು' ಎನ್ನುತ್ತಾರೆ ರಾಕಿ ಭಾಯ್.
ರಾಕಿಭಾಯ್ ಮಾತನ್ನು ಕೇಳಿದರೆ ಅವರ ರಾಧಿಕಾ ಸಂಬಂಧ ಎಷ್ಟು ಗಾಢವಾದದ್ದು ಅನ್ನೋದು ಗೊತ್ತಾಗುತ್ತೆ.
