ಬೆಂಗಳೂರು(ಸೆ.09): ಅಗರ ಕೆರೆ ಪಾರ್ಕ್‌ನಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ನಟಿ ಸಂಯುಕ್ತ ಹೆಗಡೆಯನ್ನು ನಿಂದಿಸಿ, ನಟಿಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಕವಿತಾ ರೆಡ್ಡಿಯನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಮತ್ತೊಬ್ಬ ಆರೋಪಿ ಅನಿಲ್‌ ರೆಡ್ಡಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂಯುಕ್ತ ಹೆಗಡೆ ಕೊಟ್ಟ ದೂರಿನ ಮೇರೆಗೆ ಬಂಧಿಸಿ, ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂಯುಕ್ತಾ ಹೆಗ್ಡೆ ಜೊತೆ ಕಿರಿಕ್‌: ಕ್ಷಮೆ ಕೇಳಿದ ಕವಿತಾ ರೆಡ್ಡಿ!

ಶುಕ್ರವಾರ ಸಂಯುಕ್ತ ಹೆಗಡೆ ಅಗರ ಕೆರೆಯ ವಾಯು ವಿಹಾರ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕವಿತಾ ರೆಡ್ಡಿ ತುಂಡು ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದೀರಾ ಎಂದು ಸಂಯುಕ್ತ ಹೆಗಡೆ ಬಳಿ ಜಗಳ ತೆಗೆದಿದ್ದರು. ಕವಿತಾ ರೆಡ್ಡಿ ಹಾಗೂ ಅನಿಲ್‌ ರೆಡ್ಡಿ ವಿರುದ್ಧ ನಟಿ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಮಂದಿ ಸಂಯುಕ್ತ ಹೆಗಡೆ ಪರ ಧ್ವನಿ ಎತ್ತಿದ್ದರು. ಈ ಬೆನ್ನಲ್ಲೇ ಆರೋಪಿ ಕವಿತಾ ರೆಡ್ಡಿ ಅವರು ನನಗೆ ತಪ್ಪಿನ ಅರಿವಾಗಿದೆ ಎಂದು ಸಂಯುಕ್ತ ಹೆಗಡೆ ಅವರ ಬಳಿ ಕ್ಷಮೆಯಾಚಿಸಿದ್ದರು. ರಾಜೀ ಸಂಧಾನ ಕೂಡ ನಡೆಸಲಾಗಿತ್ತು. ಆದರೆ ಈ ಬಗ್ಗೆ ಸಂಪೂರ್ಣವಾಗಿ ಪ್ರಕರಣ ಹಿಂಪಡೆಯುವ ಬಗ್ಗೆ ಸಂಯುಕ್ತ ಹೆಗಡೆ ಅವರು ಪೊಲೀಸರಿಗೆ ಹೇಳಿಲ್ಲ. ಹೀಗಾಗಿ ಕಾನೂನಿನ ಪ್ರಕಾರ ಆರೋಪಿಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.