ದಿವಂಗತ ಗೆಳೆಯನ ಕೊನೆ ಆಸೆ ಈಡೇರಿಸಿದ  'ಉಸಿರು' ತಂಡ. ಬುಡಕಟ್ಟು ಜನರ ಈ ತೊಂದರೆ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲವೇ? 

ರಸ್ತೆ ಅಪಘಾತದಿಂದ ಕೊನೆಯುಸಿರೆಳೆದ ನಟ ಸಂಚಾರಿ ವಿಜಯ್, ಕೊರೋನಾ ವಾರಿಯರ್‌ ಆಗಿ ಕವಿರಾಜ್‌ ಅವರ 'ಉಸಿರು' ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಸಭೆಯೊಂದರಲ್ಲಿ ಬುಡಕಟ್ಟು ಜನರ ಬಗ್ಗೆ ಚರ್ಚಿಸಿ ಮನವಿಯೊಂದನ್ನು ಮುಂದಿಟ್ಟಿದ್ದರು.

ನಾಗರಹೊಳೆ ಅಭಯಾರಣ್ಯದಲ್ಲಿರುವ ಬುಡಕಟ್ಟು ಜನರ ಗುಡಿಸಲುಗಳ ಮೇಲ್ಛಾವಣಿಗೆ ಹಾಕಲಾಗಿರುವ ಟಾರ್ಪಲಿನ್ ಹರಿದು ಹೋಗಿದೆ, ಹೀಗಾಗಿ ಅವರಿಗೆ ಹೊಸ ಟಾರ್ಪಲಿನ್ ಹಾಕಿಸಿಕೊಡಬೇಕು ಎಂದಿದ್ದರು. ಈ ಕೆಲಸ ನಡೆಯುವ ಮುನ್ನವೇ ಸಂಚಾರಿ ನಿಧನರಾದರು. 

ಜನರಿಗೆ ಸಹಾಯ ಮಾಡಬೇಕೆಂದು ವಿಜಯ್ ದಿನಕ್ಕೆ 10 ಮೆಸೇಜ್ ಮಾಡುತ್ತಿದ್ದರು: ಕವಿರಾಜ್ 

ಹೀಗಾಗಿ ಉಸಿರು ತಂಡ, ಗೆಳೆಯನ ಕೊನೆ ಆಸೆಯನ್ನು ಈಡೇರಿಸಬೇಕು ಎಂದು ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿ ಗುಡಿಸಲುಗಳ ಅಳತೆಯನ್ನು ಮೂರು ವಾರದ ಹಿಂದೆಯೇ ತೆಗೆದುಕೊಂಡು ಹೋಗಿದ್ದರು. ಮತ್ತೆ ಉಸಿರು ತಂಡದ ಸದಸ್ಯರ ಜೊತೆ ಕಾಡಿಗೆ ಭೇಟಿ ನೀಡಿದ ತಂಡ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳ ನೆರವಿನಿಂದ ಹೊಸ ಟಾರ್ಪಲಿನ್‌ ಹಾಕಿಸಿದ್ದಾರೆ. ಈ ಮೂಲಕ ಸಂಚಾರಿ ವಿಜಯ್ ಕೊನೆ ಆಸೆಯನ್ನು ಈಡೇರಿಸಿದ್ದಾರೆ. 

ಎಲ್ಲರೂ ಫುಡ್ ಕಿಟ್, ಆಕ್ಸಿಜನ್, ಬೆಡ್ ಚಿಂತೆಯಲ್ಲಿದ್ದಾಗ ವಿಜಯ್‌ಗೆ ಇಂಥ ಯೋಚನೆ ಬಂದಿರುವುದು ಗ್ರೇಟ್. ಯಾರೂ ಗಮನ ಹರಿಸದ ವಿಚಾರದೆಡೆ ವಿಜಯ್ ಗಮನಹರಿಸಿದ್ದರು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.