ಅಪ್ಪು ನಿಧನದ ಬಳಿಕ ಇಳಿಯಿತು ಐಪಿಎಸ್ ಅಧಿಕಾರಿ ಅಹಂ!

ಐಪಿಎಸ್ ಅಧಿಕಾರಿ ಹರಿಶೇಖರನ್ ಬಿಚ್ಚಿಟ್ಟ ಅಪ್ಪು ರಹಸ್ಯವಿದು. ತಮಿಳು ಯೂ ಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಪ್ಪು ಸಿಂಪ್ಲಿಸಿಟಿ ಎತ್ತಿ ಹಿಡಿದ ಪೊಲೀಸ್. 

Karnataka IPS officer Hari Shekaran speaks about simplicity of sandalwood actor Puneeth Rajkumar

ನಟ ಪುನೀತ್ ರಾಜ್‌ಕುಮಾರ್ ಅಗಲಿ ವರ್ಷಗಳಾದರೂ ಅವರ ನೆನಪು ಅಭಿಮಾನಿಗಳಿಂದ ಮರೆಯಾಗಿಲ್ಲ. ವಿನಯತೆ, ಸರಳತೆಯ ಸಾಕಾರಮೂರ್ತಿಯಂಥ ಅಪ್ಪು ಬಗ್ಗೆ ಮಾತನಾಡಿದವರಿಲ್ಲ. ಅವರ ಒಡನಾಟ ನೆನಪಿಸಿಕೊಂಡವರು ನೂರಾರು ಮಂದಿ. ಇಗೋ ಇಲ್ಲದ ಅಪ್ಪು ಸರಳತೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಅಪ್ಪು ಬಗ್ಗೆ ತಪ್ಪಾಗಿ ಭಾವಿಸಿದ್ದ ಅಧಿಕಾರಿಯ ಅಹಂ ಇಳಿಸಿದ್ದನ್ನೂ ಹೇಳಿಕೊಂಡಿದ್ದಾರೆ. ಅವರು ಬೇರಾರು ಅಲ್ಲ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹರಿಶೇಖರನ್. 

ತಮಿಳುನಾಡು ಮೂಲದ ಪಿ. ಹರಿಶೇಖರನ್ ಹಲವು ವರ್ಷಗಳಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹರಿಶೇಖರನ್, ತಮಿಳು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಪುನೀತ್ ರಾಜ್‌ಕುಮಾರ್ ಜತೆಗಿನ ಒಡನಾಟ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಪುನೀತ್ ನನ್ನ ಇಗೋ ಅಳಿಸಿ ಹಾಕಿದರು’ ಎನ್ನುವ ಮೂಲಕ, ತಮ್ಮ ನಡವಳಿಕೆ ಹಾಗೂ ಅಪ್ಪು ವಿನಯತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಪ್ಪು ಬಗ್ಗೆ ಎಲ್ಲೂ ಹೇಳಿಕೊಳ್ಳದಂತಹ ವಿಚಾರವನ್ನು ಹರಿಶೇಖರನ್​ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಅವರ ಮಾತುಗಳಲ್ಲೇ ಕೇಳಿ, ಓವರ್ ಟು ಹರಿಶೇಖರನ್.
 

ಪುನೀತ್ ಅಭಿಮಾನಿಗಳಲ್ಲಿ ನಾನು ದೊಡ್ಡ ಅಭಿಮಾನಿ: ರಾಜ್‌ ಬಿ. ಶೆಟ್ಟಿ

'ಪುನೀತ್ ಅಗಲಿಕೆ ನನ್ನನ್ನು ಬಹಳ ಕದಲಿಸಿಬಿಟ್ಟಿತು. ಪುನೀತ್‌ ರಾಜ್‌ಕುಮಾರ್ ಇಷ್ಟು ದೊಡ್ಡ ನಟ ಎನ್ನುವುದು ನನಗೆ ಗೊತ್ತಿರಲಿಲ್ಲ.  ಅಪ್ಪು ದೊಡ್ಡ ಸ್ಟಾರ್ ಎಂದು ಹೇಳಲಾ? ಸಹೋದರನ ರೀತಿ ಇದ್ದರು ಎನ್ನಲಾ? ಯಾವಾಗಲೂ ನನ್ನನ್ನು ಪ್ರೀತಿಯಿಂದ ಸಾಹೇಬ್ರೆ, ಸಾಹೇಬ್ರೆ ಎಂದು ಕರೆಯುತ್ತಿದ್ದರು. ಕೆಲ ವರ್ಷಗಳ ಹಿಂದೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಆರಂಭಿಸಲು ನನಗೆ ಸೂಚನೆ ಬಂದಿತ್ತು. ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮಕ್ಕೆ ಬಂದರೆ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಚೆನ್ನಾಗಿರುತ್ತದೆ ಎಂದು ನಮ್ಮ ಸಿಬ್ಬಂದಿ ಒಬ್ಬರು ಹೇಳಿದರು. ನಾನು ಸರಿ ಎಂದು ಒಪ್ಪಿದೆ. ನನ್ನ ಪರವಾಗಿ ನಮ್ಮ ಇನ್‌ಸ್ಪೆಕ್ಟರ್ ಹೋಗಿ ಅಪ್ಪುಅವರನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿ ಬಂದಿದ್ದರು. ಆದ್ರೆ ಅಪ್ಪು ಕಾರ್ಯಕ್ರಮಕ್ಕೆ ತಮ್ಮ ಸಮ್ಮತಿ ಸೂಚಿಸಿದ್ದರು ಅಷ್ಟೇ ಅಲ್ಲ, ‘ಹರಿಶೇಖರನ್​ ಸರ್ ಕರೆದ್ರಾ? ಹಾಗಿದ್ದರೆ ನಾನು ಬರ್ತೀನಿ’ ಎಂದು ನಮ್ಮ ಇನ್‌ಸ್ಪೆಕ್ಟರ್ ಬಳಿ ಹೇಳಿದ್ದರಂತೆ. ‘ನಾನಂತೂ ಕರೆದಿಲ್ಲ. ಒಂದು ಫೋನ್ ಕೂಡ ಮಾಡಲಿಲ್ಲ. ನನ್ನ ಒಳ ಮನಸ್ಸಿನಲ್ಲಿ ಬೇಸರವಾಗುತ್ತಿತ್ತು. ನಾನು ಆಹ್ವಾನಿಸಬೇಕಿತ್ತು. ತಪ್ಪು ಮಾಡಿದೆ ಎಂದು ಇವತ್ತಿಗೂ ಅನಿಸುತ್ತದೆ,’. 

ಅಂದು ನಿಗದಿತ ಸಮಯಕ್ಕೆ ಬಂದ ಪುನೀತ್​, ನನ್ನನ್ನು ನೋಡುತ್ತಲೇ ಸರ್, ಹೇಗಿದ್ದೀರಾ? ಚೆನ್ನಾಗಿದ್ದೀರಾ? ಎಂದು ಮಾತನಾಡಿಸಿದರು. ನಿಜ ಹೇಳ್ತೀನಿ, ನಾನೇ ಆಗಿದ್ದರೂ ಹಾಗೆ ಹೋಗುತ್ತಿರಲಿಲ್ಲ. ಯಾರೋ ಬಂದು ಕರೆದರೆ ನಾನು ಯಾವುದೇ ಕಾರ್ಯಕ್ರಮಕ್ಕೂ ಹೋಗಲ್ಲ. ಆದರೆ, ಅಪ್ಪು ಯಾವುದೇ ಇಗೋ ಇಲ್ಲದೇ ಬಂದು ನನಗೆ ಶೇಕ್ ಹ್ಯಾಂಡ್ ಮಾಡಿ ಮಾತನಾಡಿಸಿದರು.' ‘ಸರ್ ನಾನು ನಿಮ್ಮ ಅಭಿಮಾನಿ. ನಿಮ್ಮ ರನ್ನಿಂಗ್ ಹೇಗಿದೆ ಸರ್’ ಎಂದು ಕೇಳಿದರು. ನನಗೋ ಮಹಾಶ್ಚರ್ಯ.  50 ನಿಮಿಷಗಳಲ್ಲಿ 10 ಕಿಲೋ ಮೀಟರ್ ಮ್ಯಾರಥಾನ್ ಓಡಿದ್ದೆ. ಆದರೆ, ನನ್ನ ಬಗ್ಗೆ ಅಪ್ಪುಗೆ ಬಹಳ ತಿಳಿದಿತ್ತು. ಆಪ್ತರಂತೆ ಮಾತನಾಡಿಸುತ್ತಿದ್ದರು. ನನಗೆ ಆ ಕ್ಷಣಕ್ಕೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ನಾನು ಖುಷಿಯಿಂದ ಮಾತನಾಡಿಸಿದೆ. ‘ನೀವು ವರ್ಕ್‌ಔಟ್ ಮಾಡೋದು ಯಾವ ಜಿಮ್ ಸರ್, ಅದೇ ಜಿಮ್‌ಗೆ ಬರ್ತೀನಿ ಅಂದಿದ್ರು.’

ಹುಷಾರಾಗಿರು ಮಗನೇ ಅಂದಿದ್ರಾ ರಾಯರು; ಪುನೀತ್ ವಿಡಿಯೋ ಬಗ್ಗೆ ಮುರಳಿ ಮೋಹನ್ ಹೇಳಿಕೆ ವೈರಲ್

‘ಏನ್ ಸರ್, ಮನೆ ಕಟ್ಟಿಸಿದ್ದೀರಂತೆ. ಕರೆಯಲೇ ಇಲ್ಲ’ ಎಂದು ಕೇಳಿದರು. ನಾನು ಏನು ಹೇಳುವುದು ಅಂತ ಗೊತ್ತಿಲ್ಲದೇ, ಸುಳ್ಳು ಹೇಳಿದೆ. ಕೋವಿಡ್ ಟೈಮ್‌ ಅಲ್ಲಿ ಯಾರನ್ನು ಕರೆಯಲು ಆಗಲಿಲ್ಲ ಸಾರಿ ಎಂದೆ. ಅದಕ್ಕವರು ಪರವಾಗಿಲ್ಲ ಬಿಡಿ ಸರ್, ಮನೆಗೆ ಬರ್ತೀನಿ, ಪಾರ್ಟಿ ಮಾಡೋಣ ಬಿಡಿ ಎಂದರು.  ಅಣ್ಣನಂತೆ, ಸ್ನೇಹಿತನಂತೆ ವಿನಮ್ರತೆಯಿಂದ ಮಾತನಾಡಿಸುತ್ತಿದ್ದರು. 

ಈಗ ಇದನ್ನೆಲ್ಲಾ ನೆನಪಿಸಿಕೊಂಡರೆ ಈಗ ನನ್ನ ಮನಸ್ಸಿಗೆ ಬೇಸರವಾಗುತ್ತದೆ. ಅಪ್ಪುನ ಮನೆಗೆ ಕರೆಯಲೇ ಇಲ್ಲವಲ್ಲ ಎಂದು ನೋವಾಗುತ್ತದೆ.  ಇದೆಲ್ಲ ಆದ ಬಳಿಕ ಜಿಮ್‌ನಲ್ಲಿ ಸಿಗುತ್ತಿದ್ದರು. ಬಂದ ಕೂಡಲೇ ಗುಡ್‌ಮಾರ್ನಿಂಗ್ ಸರ್, ಹೇಗಿದ್ದೀರಾ ಸರ್, ಎಂದು ಮಾತನಾಡಿಸುತ್ತಿದ್ದರು. ನಾನು ಒಂದು ದಿನ ಕೂಡ ಅವರನ್ನು ನೋಡಿದ ಕೂಡಲೇ ನಾನಾಗಿಯೇ ಮಾತನಾಡಿಸಲಿಲ್ಲ, ವಿಶ್ ಮಾಡಲಿಲ್ಲ. 

ಅದಾದ ಬಳಿಕವೂ ಪುನೀತ್, ನನ್ನನ್ನು ಜಿಮ್‌ನಲ್ಲಿ ಹುಡುಕಿ ಬಂದು ವಿಶ್ ಮಾಡುತ್ತಿದ್ದರು. ನಾನು ಕೆಲವೊಮ್ಮೆ ಅಪ್ಪುನ ನೋಡಿಯೂ ನೋಡದಂತೆ ಇದ್ದಾಗಲೂ, ಅವರಾಗಿಯೇ ಬಂದು ವಿಶ್ ಮಾಡಿ ಮಾತನಾಡಿಸುತ್ತಿದ್ದರು. ನನ್ನ ಮಗ ಕೂಡ ಅದೇ ಜಿಮ್‌ಗೆ ಬರ್ತಿದ್ದ. ನಾನು ಜಿಮ್‌ಗೆ ಹೋಗದ ದಿನ ಅವನ ಬಳಿಯೂ ನನ್ನ ಬಗ್ಗೆ ಅಪ್ಪು ವಿಚಾರಿಸುತ್ತಿದ್ದರು. ಈ ಮೂಲಕ ಪ್ರತಿ ಬಾರಿಯೂ ನನ್ನ ಇಗೋ ಹೊಡೆದು ಹಾಕುತ್ತಿದ್ದರು.
 
ಅಪ್ಪು ಅಗಲಿದ ಮೇಲೆ ಅಭಿಮಾನಿಗಳ ಪ್ರೀತಿ ನೋಡಿದಾಗ, ನಾನು ಅಪ್ಪುಗೆ ಗೌರವ ನೀಡಲಿಲ್ಲ ಎನಿಸಿ ಮನಸ್ಸು ಭಾರವಾಗುತ್ತದೆ. 

ಅಪ್ಪು ಕೊನೆಯುಸಿರೆಳೆದು 2 ವರ್ಷವಾಗುತ್ತಾ ಬಂತು. ಇನ್ನು ಜನರು ಅವರ ಸಮಾಧಿಗೆ ಭೇಟಿ ನೀಡ್ತಿದ್ದಾರೆ. ಇದರರ್ಥ, ಅಪ್ಪು ಗಳಿಸಿದ ಜನರ ಪ್ರೀತಿ ಕಡಿಮೆ ಏನಲ್ಲ. ತಮಿಳುನಾಡಿನಲ್ಲಿ ಎಂಜಿಆರ್‌ ಗಳಿಸಿದ ಹೆಸರು, ಜನಪ್ರಿಯತೆಯನ್ನು ಕರ್ನಾಟಕದಲ್ಲಿ ಪುನೀತ್ ರಾಜ್‌ಕುಮಾರ್ ಸಂಪಾದಿಸಿದ್ದರು. ಅಪ್ಪು ಸಾವಿನ ಬಳಿಕ ನನ್ನ ಪತ್ನಿಗೆ ಈ ಎಲ್ಲ ವಿಷಯ ಹೇಳಿದಾಗ, ತುಂಬಾ ನೊಂದುಕೊಂಡಳು. ‘ನೀವು ತಪ್ಪು ಮಾಡಿಬಿಟ್ಟಿರಿ. ಮನೆಗೆ ಊಟಕ್ಕೆ ಕರೆಯಬಹುದಿತ್ತು ಎಂದು ಪೇಚಾಡಿಕೊಂಡಳು. ಆದರೆ ನಾನು ಊಟಕ್ಕೆ ಕರೆಯಲಿಲ್ಲವೇ ಎಂಬ ನೋವು ಈಗಲೂ ಕಾಡುತ್ತಿದೆ.

ಛಾಯಾಗ್ರಾಹಕರಿಗೆ ಹಂಪಿ ನೆಚ್ಚಿನ ತಾಣ: ಪವರ್‌ ಸ್ಟಾರ್‌ ಪುನೀತ್‌ಗೂ ಇಷ್ಟದ ಸ್ಥಳ

ಆ ಮನುಷ್ಯ ಏನೆಲ್ಲಾ ಸಹಾಯ ಮಾಡಿದ್ದರು. ಯಾವುದನ್ನು ತೋರಿಸಿಕೊಳ್ಳಲಿಲ್ಲ. ದೇವರು ಕೊಟ್ಟಿದ್ದನ್ನು ಇಲ್ಲದವರಿಗೆ ಕೊಡಬೇಕು. ಅಪ್ಪು ಆ ಕೆಲಸ ಮಾಡಿದ್ದರು. ಒಬ್ಬ ನಟ ಇಷ್ಟು ದೊಡ್ಡದಾಗಿ ಅಭಿಮಾನ ಸಂಪಾದಿಸಬಹುದು ಎಂದು ನಾನು ಊಹಿಸಿರಲಿಲ್ಲ.'

ಪುನೀತ್​, ಎಂದಿಗೂ ನಾನು ದೊಡ್ಡ ನಟ ಎಂದು ಬೀಗುತ್ತಿರಲಿಲ್ಲ. ನಾನು ಡಾ. ರಾಜ್‌ಕುಮಾರ್ ಮಗ ಎಂದು ತೋರಿಸಿಕೊಳ್ಳುತ್ತಿರಲಿಲ್ಲ. ನಾನೊಬ್ಬ ಐಪಿಎಸ್ ಆಫಿಸರ್. ನನ್ನಂಥ ಸಾವಿರ ಜನರಿದ್ದಾರೆ. ನಾನೊಬ್ಬನೇ ಅವರಿಗೆ ಗೊತ್ತಿದ್ದ ಆಫೀಸರ್ ಏನಲ್ಲ. ಆದರೂ, ನನ್ನನ್ನು ಕಂಡಾಗ ಗೌರವ, ಪ್ರೀತಿಯಿಂದ ತಲೆಬಗ್ಗಿಸಿ ಮಾತನಾಡುತ್ತಿದ್ರು.

‘ನನ್ನೊಂದಿಗೆ ತಮಿಳಲ್ಲಿ  ಚೆನ್ನಾಗಿ ಮಾತನಾಡುತ್ತಿದ್ದರು. ನಾನು ತಮಿಳುನಾಡಲ್ಲಿ ಹುಟ್ಟಿ ಬೆಳೆದಿದ್ದು ಸರ್,  ಆ ಹೋಟೆಲ್‌ನಲ್ಲಿ ಆ ಊಟ ಚೆನ್ನಾಗಿರುತ್ತೆ, ಇದು ಚೆನ್ನಾಗಿರುತ್ತೆ ಎನ್ನುತ್ತಿದ್ದರು. 25 ವರ್ಷದಲ್ಲಿ ಸಾಕಷ್ಟು ತನಿಖೆ ನಡೆಸಿದ್ದೀರಿ, ಸಾಕಷ್ಟು ಕೇಸ್ ನೋಡಿರುತ್ತೀರಾ. ಇಂಟರೆಸ್ಟಿಂಗ್ ಕೇಸ್​ ಬಗ್ಗೆ ಹೇಳಿ ಸಾರ್​ ಎನ್ನುತ್ತಿದ್ದರು. ಆದರೆ ನಾನು ಮಾತ್ರ, ಇದ್ಯಾವುದನ್ನು ಗಂಭೀರವಾಗಿ ತೆಗೆದುಕೊಂಡೇ ಇರಲಿಲ್ಲ,’ ಎಂದು ಹರಿಶೇಖರನ್ ವೇದನೆಯಿಂದ ಮಾತು ನಿಲ್ಲಿಸಿದ್ರು.

Latest Videos
Follow Us:
Download App:
  • android
  • ios