ಕಿಚ್ಚ ಸುದೀಪ್ ನಾಯಕತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಮೂರನೇ ಬಾರಿಗೆ ಸಿಸಿಎಲ್ ಕಪ್ ಗೆದ್ದು ಸಂಭ್ರಮಿಸುತ್ತಿದೆ. ಆದರೆ, ಹಿಂದೆ ತಂಡದ ಭಾಗವಾಗಿದ್ದ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.  

ಸೆಲೆಬ್ರಿಟಿ ಕ್ರಿಕೇಟ್ ಲೀಗ್‌ಗೆ ತೆರೆ ಬಿದ್ದಿದ್ದು ಕಿಚ್ಚ ಸುದೀಪ್ ಕ್ಯಾಪ್ಟನ್ ಶಿಪ್​ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದು ಕಪ್ ಎತ್ತಿದೆ. ಮೂರನೇ ಬಾರಿ ಕರ್ನಾಟಕ ಸೆಲೆಬ್ರಿಟಿಗಳ ಟೀಂ ಗೆಲುವು ಸಾಧಿಸಿದೆ. ಅಸಲಿಗೆ 2013-14ರಲ್ಲಿ ಸತತವಾಗಿ ಕರ್ನಾಟಕ ಬುಲ್ಡೋಜರ್ಸ್ ಗೆದ್ದಾಗ ದರ್ಶನ್ ಕೂಡ ತಂಡದ ಜೊತೆಗಿದ್ರು. ಆದ್ರೆ ಮೂರನೇ ಬಾರಿ ಸಿಸಿಎಲ್ ವಿನ್ನರ್ ಆದ ಹೊತ್ತಲ್ಲಿ ದರ್ಶನ್ ಜೈಲಲ್ಲಿ ಡಿನ್ನರ್ ಗಾಗಿ ಪರದಾಡೋ ಸ್ಥಿತಿ ಬಂದಿದೆ.

ಹಿಂದೆ 2 ಬಾರಿ CCL ಗೆದ್ದಾಗ ತಂಡದ ಜೊತೆಗಿದ್ದ ದಾಸ

ಯೆಸ್ ಕರ್ನಾಟಕ ಬುಲ್ಡೋಜರ್ಸ್ ಸೆಲೆಬ್ರಿಟಿ ಕ್ರಿಕೇಟ್ ಲೀಗ್ ಸೀಸನ್-12ನ ಗೆದ್ದು ಬೀಗಿದೆ. ಕಿಚ್ಚ ಸುದೀಪ್ ನಾಯಕತ್ವದ ತಂಡ ಫೈನಲ್​ನಲ್ಲಿ ಬೆಂಗಾಲ್ ತಂಡವನ್ನ ಸೋಲಿಸಿ ಕಪ್ ಮುಡಿಗೇರಿಸಿಕೊಂಡಿದ್ದಾರೆ. ಈ ಸಾರಿ ಸಿಸಿಎಲ್ ತಂಡದಲ್ಲಿದ್ದ ಸ್ಯಾಂಡಲ್​ವುಡ್ ತಾರೆಯರೆಲ್ಲಾ ಸೆಲೆಬ್ರೇಷನ್​ ಮೂಡ್ ನಲ್ಲಿ ಇದ್ದಾರೆ. ಅಸಲಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಹಿಂದೆ 2013 ಮತ್ತು 2014ರಲ್ಲಿ ಕಪ್ ಗೆದ್ದಿತ್ತು. ಆಗ ದರ್ಶನ್ ಕೂಡ ಕರ್ನಾಟಕ ಬುಲ್ಡೋಜರ್ಸ್ ತಂಡ ಭಾಗವಾಗಿದ್ರು.

ಬುಲ್ಡೋಜರ್ಸ್ ಪರ ಬ್ಯಾಟ್ ಬೀಸಿದ್ದ ದರ್ಶನ್!

ಹೌದು ಸಿಸಿಎಲ್ ಆರಂಭಿಕ ಸೀಸನ್​ಗಳಲ್ಲಿ ದರ್ಶನ್ ಕೂಡ ಕರ್ನಾಟಕ ಬುಲ್ಡೋಜರ್ಸ್ ಭಾಗವಾಗಿದ್ರು. ಶಿವರಾಜ್‌ ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಸ್ಯಾಂಡಲ್​ವುಡ್‌ನ ತಾರೆಯರೆಲ್ಲಾ ಸಿಸಿಎಲ್‌ಗೆ ಸಪೋರ್ಟ್ ಮಾಡಿದ್ರು. ಆದ್ರೆ 2011ರಲ್ಲಿ ರಾಜ್ ಕಪ್ ಟೈಂನಲ್ಲಿ ಮೈದಾನದಲ್ಲಿ ನಡೆದ ಜಟಾಪಟಿ ಬಳಿಕ ಸೆಲೆಬ್ರಿಟಿ ಕ್ರಿಕೇಟ್​ ಲೀಗ್‌ನಿಂದ ಕೆಲ ತಾರೆಯರು ಕ್ರಿಕೆಟ್‌ನಿಂದ ದೂರ ಉಳಿದಿದ್ರು. ಆಗ ಕಿಚ್ಚನ ಪರ ನಿಂತುಕೊಂಡ ದೊಡ್ಡ ಸೆಲೆಬ್ರಿಟಿ ಅಂದ್ರೆ ಅದು ದರ್ಶನ್ ಮಾತ್ರ.

2013 ರಲ್ಲಂತೂ ಖುದ್ದು ದರ್ಶನ್ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಿದ್ರು. ದರ್ಶನ್ ಸುದೀಪ್​​ರಷ್ಟು ಒಳ್ಳೆಯ ಕ್ರಿಕೆಟ್ ಪಟು ಅಲ್ಲ. ಆದ್ರೆ ದಾಸ ಮೈದಾನಕ್ಕೆ ಇಳೀತಾನೇ ಅಭಿಮಾನಿಗಳ, ಕೂಗು ಕರತಾಡನಕ್ಕೆ ಇಡೀ ಸಿಸಿಎಲ್ ಅಖಾಡ ದರ್ಶನ್ ಕಡೆ ತಿರುಗಿ ನೋಡಿತ್ತು. ಅದು ದರ್ಶನ್ ಮತ್ತು ಸುದೀಪ್ ಕುಚಿಕುಗಳಾಗಿದ್ದ ಕಾಲ. ಇಬ್ಬರೂ ಒಬ್ಬರ ಹೆಗಲ ಮೆಲೊಬ್ರು ಕೈ ಹಾಕಿಕೊಂಡು ಓಡಾಡ್ತಾ ಇದ್ರು. ಆಗ ಕಿಚ್ಚನ ಜೊತೆಗೆ ಸುದೀಪ್ ಮೈದಾನಕ್ಕೂ ಇಳಿದು ಆಟ ಆಡಿದ್ರು. 2013ರಲ್ಲಿ ಕಪ್ ಗೆದ್ದಾಗ ಕಿಚ್ಚ, ‘ಚಿನ್ನ ದರ್ಶನ್. ಇದು ನಿನಗೆ ಡೆಡಿಕೇಷನ್’ ಅಂದಿದ್ರು.

ಮುಂದೆ ದರ್ಶನ್ ಸಿಸಿಎಲ್​ನಿಂದ ದೂರವುಳಿದರು. 2017ರಲ್ಲಿ ಕಿಚ್ಚನಿಂದಲೂ ದೂರವಾಗಿಬಿಟ್ಟರು. ಆಗ ಕುಚಿಕು ಕುಚಿಕು ಅಂತಿದ್ದವರು. ನಾನೊಂದು ತೀರಾ. ನೀನೊಂದು ತೀರಾ ಅಂತ ಆಗಿಬಿಟ್ಟಿದ್ರು.

ಸದ್ಯ ಸಿಸಿಎಲ್​ನಲ್ಲಿ ಕಿಚ್ಚನನ್ನ ಬಿಟ್ರೆ ಅವರಷ್ಟೇ ಅನುಭವ, ಹಿರಿತನ, ಜನಪ್ರಿಯತೆ ಇರೋ ಮತ್ತೊಬ್ಬ ನಟ ಇಲ್ಲ ಅಂತಲೇ ಹೇಳಬಹುದು. ಆದರೇನಂತೆ ಈ ಬಾರಿಯ ಕರ್ನಾಟಕ ಬುಲ್ಡೋಜರ್ಸ್ ತಂಡ ಯಶಸ್ವಿಯಾಗಿ ಆಟವಾಡಿ ಕಪ್ ತಂದಿದ್ದಾರೆ.

ಅತ್ತ CCL ಆಟ, ಇತ್ತ ಜೈಲಲ್ಲಿ ದಾಸನ ಪರದಾಟ!

ಹೌದು ಈ ಬಾರಿ ಸಿಸಿಎಲ್ ಗೆದ್ದು ಕನ್ನಡ ತಾರೆಯರೆಲ್ಲಾ ಸಕ್ಸಸ್ ಪಾರ್ಟಿ ಮಾಡ್ತಾ ಇದ್ರೆ, ದರ್ಶನ್ ಮಾತ್ರ ಜೈಲಿನಲ್ಲಿ ಕುಳಿತು ಊಟ, ಹಾಸಿಗೆಗಾಗಿ ಪರದಾಡ್ತಾ ಇದ್ದಾರೆ. ರೇಣುಕಾಸ್ವಾಮಿ ಮರ್ಡರ್ ಕೇಸ್​ನಲ್ಲಿ ಎ-2 ಆಗಿರೋ ದರ್ಶನ್ ಜೈಲಿನಲ್ಲಿ ನರಕ ದರ್ಶನ ಮಾಡ್ತಾ ಇದ್ದಾರೆ.

ಅಲೋಕ್ ಕುಮಾರ್ ಜೈಲು ಡಿಜಿಪಿ ಆಗಿ ಬಂದ ಮೇಲೆ ಜೈಲು ನಿಯಮಗಳು ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿವೆ. ಸೋ ದರ್ಶನ್‌ಗೆ ಜೈಲುವಾಸ ಮತ್ತಷ್ಟು ಕಷ್ಟ ತಂದಿದೆ. ಒಟ್ಟಾರೆ ಇಲ್ಲಿ ಸಿಸಿಎಲ್ ಸೆಲೆಬ್ರೇಷನ್​ನಲ್ಲಿ ಖುಷಿ ಖುಷಿಯಾಗಿ ಇರಬೇಕಿದ್ದ ದಾಸ ಜೈಲಲ್ಲಿ ಕೈದಿ ಜೀವನ ನಡೆಸ್ತಾ ಇರೋದು ದುರಂತವೇ ಸರಿ.

ಫಿಲ್ಮ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್.