ಕತೆ, ಚಿತ್ರಕತೆ ಮೂಡುವ ದಾರಿಯ ಬಗ್ಗೆ ಜೋಗಿ ಮಾತು
ನಾಗತಿಹಳ್ಳಿ ಚಂದ್ರಶೇಖರ್ ಅವರ `ಟೆಂಟ್ ಸಿನಿಮಾ’ ಪ್ರತ್ರಿಭಾವಂತರಿಗೆ ಸಿನಿಮಾರಂಗದ ದಾರಿ ಮಾಡಿಕೊಡುತ್ತಿದೆ. ಅಲ್ಲಿನ ವಿದ್ಯಾರ್ಥಿಗಳು ತಾವೇ ನಟಿಸಿ, ನಿರ್ದೇಶಿಸಿದ ಕಿರುಚಿತ್ರವನ್ನು ಕತೆಗಾರ ಜೋಗಿಯವರ ಮುಂದೆ ಪ್ರದರ್ಶಿಸಿದಾಗ ಅವರು ತಮ್ಮ ಅನುಭವದಿಂದ ನೀಡಿದ ಸಲಹೆಗಳು ಹೀಗಿದ್ದವು.
ಅದು ಜನಪ್ರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrashekar) ಅವರ `ಟೆಂಟ್ ಸಿನಿಮಾ’ ಸಂಸ್ಥೆ. ಅಲ್ಲಿನ ಸಿನಿಮಾ ವಿದ್ಯಾರ್ಥಿಗಳೇ ಸೇರಿ ಮಾಡಿದ `ಎಸ್ ಎಂ ಎಸ್’ ಎನ್ನುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಚಿತ್ರ ಮಾಡುವಲ್ಲಿ ವಿದ್ಯಾರ್ಥಿಗಳಿಗೆ ಮೆಂಟರ್ ಆಗಿದ್ದ ನಿರ್ದೇಶಕ ಕೆ.ಎಂ ಚೈತನ್ಯ (KM Chaitanya) ಅವರ ಉಸ್ತುವಾರಿಯಲ್ಲಿ ಮೂಡಿಬಂದ ಚಿತ್ರ ನಿಜಕ್ಕೂ ಕುತೂಹಲಕಾರಿಯಾಗಿಯೇ ಇತ್ತು. ಅದು ಒಂದು ಅಪಹರಣದ ಕುರಿತಾದ ತನಿಖೆಯ ಕತೆ. ಪ್ರದರ್ಶನದ ಬಳಿಕ ಅದರ ಬಗ್ಗೆ ಮಾತನಾಡಿದ ಈಗಿನ ಜನಪ್ರಿಯ ಕತೆಗಾರರಲ್ಲೋರ್ವರಾದ ಪತ್ರಕರ್ತ ಜೋಗಿಯವರ ವಿಮರ್ಶಾತ್ಮಕ ಸಾಲುಗಳು ಇಲ್ಲಿವೆ.
ಶಶಿಕರ ಪಾತೂರು
ಅಪರಾಧದ ಚಿತ್ರದಲ್ಲಿ ತರ್ಕ, ವಾಸ್ತವ ಇದ್ದಷ್ಟು ಮನಸಿಗೆ ಹತ್ತಿರವಾಗುತ್ತದೆ
“ಒಂದು ಅಪರಾಧ (Crime) ಕೃತ್ಯ ನಡೆದಿರುವಲ್ಲಿಂದ ಕತೆ ಶುರುವಾಗಿದೆ. ಆಮೇಲೆ ಪ್ರೇಕ್ಷಕರಿಗೆ ಬೇಕಿರುವುದು ಅದರ ಹಿಂದಿನ ಕಾರಣ ಮತ್ತು ಅದರ ಪತ್ತೆ. ಇದು ದುಡ್ಡಿಗಾಗಿ ಮಾತ್ರ ನಡೆದಿದ್ದ ಅಪಹರಣದ ಕತೆಯಾಗಿದ್ದರೆ ತೀರ ಸಾಮಾನ್ಯವಾಗುವ ಸಾಧ್ಯತೆ ಇತ್ತು. ಆದರೆ ಅದರ ಹಿಂದೆ ಬಡತನ (Poverty), ಕೊರೊನಾ (Covid19) ಮೊದಲಾದ ಕಾರಣಗಳೂ ಇವೆ. ಹಾಗಾಗಿ ಕಿರುಚಿತ್ರವಾದರೂ ಕೂಡ ನಿಗದಿತ ಕಾಲಾವಧಿಯೊಳಗೆ ಕ್ರೈಂ ಸ್ಟೋರಿಯ ಒಳಗೂ ಒಂದು ಭಾವನಾತ್ಮಕ ಎಳೆಯನ್ನು ಸೇರಿಸಲು ಸಾಧ್ಯವಾಗಿದೆ. ಅದೇ ರೀತಿ ಅಪರಾಧ ಪತ್ತೆ ಮಾಡಲು ಬರುವ ಪೊಲೀಸ್ ಅಧಿಕಾರಿ ಒಂದು ರೀತಿಯಲ್ಲಿ ಕತೆಯ ನಾಯಕನೇ ಆಗಿದ್ದರೂ, ಯಾವುದೇ ಕಮರ್ಷಿಯಲ್ ಸಿದ್ಧಮಾದರಿಯ ಸಿನಿಮಾಗಳ ಬಿಲ್ಡಪ್ ನೀಡಿಲ್ಲ ಎನ್ನುವುದು ಖುಷಿಯ ವಿಚಾರ. ತನಿಖೆಯನ್ನು ಕೂಡ ಅಷ್ಟೇ ವಿವರವಾಗಿ, ತರ್ಕಬದ್ಧವಾಗಿ ದೃಶ್ಯಗಳ ಮೂಲಕ ತೋರಿಸಿರುವುದು ತೃಪ್ತಿಕರ. ಯಾಕೆಂದರೆ ಕತೆಯಲ್ಲಿ ಬರೆಯುವ ಹಾಗೆ ಪೊಲೀಸ್ ತನ್ನ ಜಾಣ್ಮೆಯಿಂದ ಪ್ರಕರಣ ಭೇದಿಸಿದ ಎನ್ನುವಷ್ಟು ಸುಲಭದಲ್ಲಿ ಚಿತ್ರದಲ್ಲಿ ತೋರಿಸುವುದು ಸಾಧ್ಯವಿಲ್ಲ. ಹಾಗಾಗಿ ಚಿತ್ರ ಪರಿಣಾಮಕಾರಿಯಾಗಿ ಮೂಡಿ ಬಂದಿದೆ” ಎಂದರು ಜೋಗಿ. ಅವರು `ಎಸ್ ಎಂ ಎಸ್’ ಎನ್ನುವ ಕಿರುಚಿತ್ರ ನೋಡಿ ಮಾತನಾಡುತ್ತಿದ್ದರು.
Dauthers' Dayಗೆ ರಾಧಿಕಾ ಶೇರ್ ಮಾಡಿದ ಫೋಟೋಸ್
ಪರಿಮಿತಿಯಲ್ಲೇ ಪರಮೋಚ್ಛ ಪ್ರಯತ್ನ ಮಾಡಬೇಕು
ಇತ್ತೀಚೆಗೆ ಜನರು ಹೆಚ್ಚು ಒಟಿಟಿ (OTT) ಕಂಟೆಂಟ್‌ಗಳನ್ನು ನೋಡುತ್ತಿದ್ದಾರೆ. ಅದರಲ್ಲಿ ಬರುವಂಥ ಕತೆಗಳನ್ನು ಗಮನಿಸಿದಾಗ `ಎಸ್ ಎಂ ಎಸ್’ ಚಿತ್ರದ ಕಂಟೆಂಟ್ ಮತ್ತು ಮೇಕಿಂಗ್ ಕೂಡ ಅದೇ ಮಟ್ಟದಲ್ಲಿದೆ. ಬಜೆಟ್ ಕೊರತೆಯ ಕಾರಣದಿಂದ ಕೆಲವೊಂದು ವಿಚಾರಗಳಿಗೆ ಲಿಮಿಟೇಶನ್ ಕೂಡ ಇರಬಹುದು. ಉದಾಹರಣೆಗೆ ಇದನ್ನು ಎರಡೇ ದಿನದಲ್ಲಿ ಚಿತ್ರೀಕರಿಸಲಾಗಿದೆ ಎನ್ನುವುದು ದೊಡ್ಡ ಚಾಲೆಂಜ್ ಆಗಿರಬಹುದಾದ ವಿಷಯ. ಆದರೆ ನಿಗದಿತ ಕಾಲಾವಧಿಯಲ್ಲಿ ಅಷ್ಟೊಂದು ಲೊಕೇಶನ್ ಬಳಸಿಕೊಂಡಿರುವುದು ಚಿತ್ರಕ್ಕೆ ಶಕ್ತಿ ನೀಡಿದೆ. ಜೊತೆಗೆ ಅಪಹರಣಕಾರ ಹೇಳಿದ ಪ್ಲ್ಯಾನ್ ಅನ್ನು ಅನಿಮೇಶನ್ ಮೂಲಕ ತೋರಿಸಿರುವುದು ಅಂಥ ಲೊಕೇಶನ್ ಚಿತ್ರೀಕರಣಕ್ಕೆ ಸಿಗದಿರುವ ಕೊರತೆಯಾಗಿರಬಹುದು ಎನ್ನುವ ಭಾವನೆ ಮೂಡಿಸಿಲ್ಲ. ಅದು ಕೂಡ ಸಾಂದರ್ಭಿಕ ಸ್ಕೆಚ್ ಎನ್ನುವಂತೆ ಕಾಣಿಸುತ್ತದೆ ಎಂದು ಕಿರುಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಜೋಗಿ.
ಒಬ್ಬರೇ ಕುಳಿತು ಕತೆ ಬರೆಯಿರಿ!
ಇವತ್ತು ಗಾಂಧಿನಗರದಲ್ಲಿ ಸಿನಿಮಾ ಕತೆ ಬರೆಯುವವರು ತಂಡ ಕಟ್ಟಿಕೊಂಡು ಬರೆಯುತ್ತಾರೆ. ನಾಲ್ಕು ಸಾಲು ಬರೆಯುವುದರೊಳಗೆ ನಾಲ್ಕು ಮಂದಿ ನಾಲ್ಕು ಅಭಿಪ್ರಾಯ ಹೇಳಿದಾಗ ಅದರಲ್ಲಿದ್ದ ನಮ್ಮ ಕತೆ ಸತ್ತು ಹೋಗುತ್ತದೆ. ಇತರರ ಅಭಿಪ್ರಾಯ ಕೇಳುವುದು ತಪ್ಪಲ್ಲ. ಆದರೆ ಅದು ಕತೆಯ ಆರಂಭದಲ್ಲಿ ಅಲ್ಲ, ಮೊದಲು ನಾವು ನಮ್ಮ ಕತೆ ಪೂರ್ತಿ ಮಾಡಿದ ಬಳಿಕ ಇತರರು ಏನು ಬದಲಾವಣೆ ಸೂಚಿಸುತ್ತಾರೆ ಎಂದು ಕೇಳಬಹುದು. ಚಿತ್ರಕತೆಯ ವಿಚಾರದಲ್ಲಿಯೂ ಅಷ್ಟೇ, ಎಲ್ಲದರ ಬಗ್ಗೆ ಮೊದಲು ನಮಗೆ ಒಂದು ಯೋಜನೆ ಇರಬೇಕು. ಪ್ರಯತ್ನ ಪಟ್ಟರೆ ನಾವೇ ಕಲಿಯುವುದು ಕಷ್ಟವಲ್ಲ.
ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಪುತ್ತೂರಿನ ಹುಡುಗ
ಡಾ.ರಾಜ್ ಸಿನಿಮಾಗಳ ಚಿತ್ರಕತೆಯಿಂದ ಸ್ಪೂರ್ತಿ ಪಡೆದೆ
ಇವತ್ತು ಒಬ್ಬಾತ ಮೊದಲ ಬಾರಿ ಸಿನಿಮಾಗೆ ಚಿತ್ರಕತೆ ಬರೆಯಬೇಕು ಎಂದುಕೊಂಡರೆ ಆತನಿಗೆ ಸಾಕಷ್ಟು ಸಿದ್ಧ ಮಾದರಿಗಳು ದೊರಕುತ್ತವೆ. ಆದರೆ ನಾನು ಬರೆಯಲು ಆರಂಭಿಸಿದ ದಿನಗಳಲ್ಲಿ ನನಗೆ ಚಿತ್ರಕತೆ ಬರೆಯಲು ಒಂದು ಮಾದರಿ ಸಿಗುತ್ತಿರಲಿಲ್ಲ. ಆಗ ನಾನು ಡಾ.ರಾಜ್ ಕುಮಾರ್ (Dr Rajkumar) ಅವರ ಜನಪ್ರಿಯ ಸಿನಿಮಾಗಳು ಪ್ರಥಮ ದೃಶ್ಯ ಹೇಗೆ ಆರಂಭವಾಗುತ್ತದೆ? ದೃಶ್ಯದಿಂದ ದೃಶ್ಯಕ್ಕೆ ಏನು ವ್ಯತ್ಯಾಸ ಇರುತ್ತದೆ ಎನ್ನುವುದನ್ನು ಗಮನಿಸಿದೆ. ಆ ಚಿತ್ರಗಳಲ್ಲಿ ಒಂದು ದೃಶ್ಯದಲ್ಲಿರುವ ಪೂರ್ತಿ ಸಂಭಾಷಣೆಗಳನ್ನು ಬರೆದು ಅದು ಎಷ್ಟು ಪುಟಗಳಾಗುತ್ತವೆ ಎಂದು ಗಮನಿಸಿದೆ. ಅದೇ ಅಳತೆಯಲ್ಲಿ ನಾನು ಕೂಡ ಹೊಸದಾಗಿ ದೃಶ್ಯಗಳನ್ನು ಬರೆದು ಜೋಡಿಸಲು ಕಲಿತೆ ಎಂದು ಆಸಕ್ತಿಕರ ವಿಚಾರವೊಂದನ್ನು ಹೊರಗಿಟ್ಟರು ಜೋಗಿ(Jogi). ಒಟ್ಟಿನಲ್ಲಿ ಸಿನಿಮಾ ಮಾಡುವ ಓಟ ಶುರು ಮಾಡುವ ಮೊದಲು ನಮ್ಮ ನೋಟವನ್ನು ಪಕ್ವಗೊಳಿಸಬೇಕು ಎನ್ನುವ ಕಿವಿಮಾತು ಅವರದಾಗಿತ್ತು.
ಪ್ರಮಾಣ ಪತ್ರ ವಿತರಣೆ
ಇದೇ ಸಂದರ್ಭದಲ್ಲಿ ಜೋಗಿಯವರ ಜೊತೆಗೆ ನಿರ್ದೇಶಕ ಕೆ.ಎಂ ಚೈತನ್ಯ ಮತ್ತು ನಾಗತಿಹಳ್ಳಿಚಂದ್ರ ಶೇಖರ್ ಸೇರಿಕೊಂಡು ತರಬೇತಿಯ ಕಾಲಾವಧಿ ಮುಗಿಸಿದ `ಟೆಂಟ್ ಸಿನಿಮಾ’ (Tent Cinema) ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಮೂರು ತಿಂಗಳಲ್ಲಿ ಸಿನಿಮಾ ನಿರ್ದೇಶನ ಮತ್ತು ನಿರ್ಮಾಣದ ತರಬೇತಿ ಮತ್ತು ಅದಕ್ಕೊಂದು ಪ್ರಮಾಣ ಪತ್ರವನ್ನು ಕೂಡ ನೀಡುವ `ಟೆಂಟ್ ಸಿನಿಮಾ’ ಸಿನಿಮಾಸಕ್ತರ ಮೊದಲ ಶಾಲೆ. ಇಲ್ಲಿ ಚಲನಚಿತ್ರ ಕಥಾ ರಚನೆ (Script Writing), ಛಾಯಾಗ್ರಹಣ (Photography), ಸಂಕಲನ (Editing), ನಿರ್ಮಾಣ ಸಿದ್ಧತೆ (Pre Production), ಚಿತ್ರೀಕರಣ (Shooting), ತಾಂತ್ರಿಕ ಜೋಡಣೆ, ಚಲನಚಿತ್ರ ಬಿಡುಗಡೆ, ವಿತರಣೆ (Distribution) ಮತ್ತು ಮಾರಾಟದ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ಹಾಗಾಗಿ ಒಂದು ವಿಭಾಗಕ್ಕೆ ಮಾತ್ರ ಸೀಮಿತವಾಗಿರದ ಈ ಕೋರ್ಸ್ ಹೆಚ್ಚು ಪ್ರಯೋಜನಕಾರಿ ಎಂದರೆ ತಪ್ಪಿಲ್ಲ.
ಸುವರ್ಣ ಶಿಕ್ಷಣದಲ್ಲಿ ಕಾಲೇಜು ದಿನಗಳ ಬಗ್ಗೆ ಮಾತನಾಡಿದ ಗಣೇಶ್