ವೀಲ್‌ಚೇರ್ ಮೇಲೆ ಬಂದು ಆರೋಗ್ಯ ಕೇಂದ್ರ ಕಾಮಗಾರಿ ವೀಕ್ಷಿಸಿದ ಡಾ. ಎಂ ಲೀಲಾವತಿ!
ಜಮೀನು ಮಾರಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಡಾ.ಎಂ.ಲೀಲಾವತಿ. 50 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣದ ಕಾಮಗಾರಿ ವೀಕ್ಷಣೆ ಮಾಡಿದ ಹಿರಿಯ ಜೀವ.
ವರದಿ : ಟಿ.ಮಂಜುನಾಥ, ಹೆಬ್ಬಗೋಡಿ
ನೆಲಮಂಗಲ (ಮೇ 5) : ಕನ್ನಡ ಚಿತ್ರರಂಗದ ಹಿರಿಯ ಮೇರು ನಟಿ, ಡಾ ಲೀಲಾವತಿ ತಮ್ಮ ಒಂದೊಂದು ಬೆವರು ಹನಿಯಿಂದ ಸಂಪಾದನೆ ಮಾಡಿದ್ದ ಆಸ್ತಿಯನ್ನ ತಾವು ನೆಲೆಸಿರುವ ಗ್ರಾಮಕ್ಕಾಗಿ ಏನನ್ನಾದರೂ ಮಾಡಬೇಕೆಂದು 86ರ ಇಳಿ ವಯಸ್ಸಿನಲ್ಲಿ ತಮ್ಮ ಅನಾರೋಗ್ಯದ ನಡುವೆಯೂ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ತಮ್ಮ ಸ್ವಂತ ಜಮೀನು ಮಾರಿ, ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹಿರಿಯ ನಟಿ ಲೀಲಾವತಿರವರು ವೀಲ್ ಚೇರ್ ಮೇಲೆ ಬಂದು ಕಾಮಗಾರಿ ವೀಕ್ಷಿಸುವ ಮೂಲಕ ಇಂದಿನ ನಟ-ನಟಿಯರಿಗೆ ಮಾದರಿಯಾಗುವ ಕೆಲಸಕ್ಕೆ ಮುಂದಾಗಿದ್ದಾರೆ.
70ರ ದಶಕದಲ್ಲಿ ಬೆಳ್ಳಿ ಪರದೆ ಮೇಲೆ ಮಿಂಚಿದ ಹೆಸರಾಂತ ನಾಯಕ ನಟಿ, ನೂರಾರು ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನ ಅಭಿನಯಿಸಿದ ಕನ್ನಡದ ಮೇರು ನಟಿ ಡಾ.ಎಂ.ಲೀಲಾವತಿ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ಸುಮಾರು 10 ವರ್ಷಗಳ ಹಿಂದೆ ಸಣ್ಣದೊಂದು ಆಸ್ಪತ್ರೆ ನಿರ್ಮಾಣ ಮಾಡಿದ್ದ ಡಾ.ಎಂ.ಲೀಲಾವತಿಯವರು, ಇಂದು ಮತ್ತೊಂದು ಪ್ರಾಥಮಿಕ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಾಯಿ ಲೀಲಾವತಿ ಅಮ್ಮನವರ ಆಸೆಯಂತೆ ಚೆನೈನಲ್ಲಿರುವ ತಮ್ಮ ಸ್ವಂತ ಜಮೀನನ್ನು ಮಾರಿದ ನಟ ವಿನೋದ್ ರಾಜ್ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುತಿದ್ದಾರೆ. ಆ ಆಸ್ಪತ್ರೆ ಕಾಮಗಾರಿಯನ್ನ 86 ಈ ಇಳಿ ವಯಸ್ಸಿನಲ್ಲಿ ಅನಾರೋಗ್ಯದ ಮಧ್ಯೆಯೂ ಬಂದು ವೀಕ್ಷಣೆ ಮಾಡಿ ಸಮಾಜಕ್ಕೆ ತಮ್ಮದೇ ರೀತಿಯಲ್ಲಿ ಒಂದು ಸಂದೇಶ ನೀಡಿದ್ದಾರೆ.
Leelavathi And Vinod Raj: ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಲೀಲಾವತಿ ನಿರ್ಧಾರ
ಇನ್ನೂ ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿರುವ ಡಾ.ಲೀಲಾವತಿಯವರ ಆರೋಗ್ಯ ಕೊಂಚ ಕ್ಷೀಣಿಸಿದ್ದು ಮಗ ನಟ ವಿನೋದ್ ರಾಜ್ ತಾಯಿಯ ಆಸೆಯಂತೆ ಎಲ್ಲಾ ಕೆಲಸವನ್ನ ಮಾಡುತಿದ್ದಾರೆ. ಅತೀ ಶೀಘ್ರವಾಗಿ ಕಾಮಗಾರಿಯನ್ನ ಮುಗಿಸಿ ಗಡಿ ಪ್ರದೇಶದ ಸೋಲದೇವನಹಳ್ಳಿ ಭಾಗದ ಹತ್ತಾರು ಹಳ್ಳಿಯ ಜನರ ನೆರವಿಗಾಗಿ ಆರೋಗ್ಯ ಇಲಾಖೆಯ ಸುಪರ್ದಿಗೆ ಈ ಆಸ್ಪತ್ರೆಯನ್ನ ಕಟ್ಟಿಸಿ ನೀಡುವುದಾಗಿ ನಟ ವಿನೋದ್ ರಾಜ್ ತಿಳಿಸಿದ್ದಾರೆ.
ಒಟ್ಟಾರೆ ಸಮಾಜದ ಏಳಿಗೆಗಾಗಿ ಈ ಇಳಿ ವಯಸ್ಸಿನಲ್ಲಿ ಹಾಗೂ ನಿರಂತರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರ ಯೋಗಕ್ಷೇಮದ ಬಗ್ಗೆ ಕಾಳಜಿ ನಿಜಕ್ಕೂ ಈ ನಾಡಿಗೆ ಮಾದರಿಯಾಗಿದ್ದರೆ ತಾಯಿ ತಕ್ಕ ಮಗನಾದ ವಿನೋದರಾಜ್.