ಲೂಸಿಯಾ ಪವನ್‌ಕುಮಾರ್‌ ನಿರ್ದೇಶನದ ‘ಯೂ ಟರ್ನ್‌’ ಸಿನಿಮಾ ಫಿಲಿಪ್ಪೀನ್ಸ್‌ ದೇಶದ ಫಿಲಿಪ್ಪಿನೋ ಭಾಷೆಗೆ ರೀಮೇಕ್‌ ಆಗಿದೆ. ಈಗಾಗಲೇ ಚಿತ್ರದ ಪೋಸ್ಟರ್‌ ಕೂಡ ಬಿಡುಗಡೆ ಆಗಿದ್ದು, ಕನ್ನಡ ಸಿನಿಮಾವೊಂದು ಫಿಲಿಪ್ಪೀನ್ಸ್‌ ದೇಶದಲ್ಲಿ ಸದ್ದು ಮಾಡಲು ಸಜ್ಜಾಗಿರುವುದು ಕನ್ನಡದವರ ಖುಷಿಗೆ ಕಾರಣವಾಗಿದೆ.

ದಕ್ಷಿಣಾ ಭಾರತೀಯ ಭಾಷೆಗಳ ಪೈಕಿ ಕನ್ನಡ ಚಿತ್ರಗಳು ಬೇರೆ ಭಾಷೆಗೆ ರೀಮೇಕ್‌ ಆಗುವುದು ತುಂಬಾ ಅಪರೂಪ. ಆದರೆ, ಈಗ ಕನ್ನಡದ ಸಿನಿಮಾ ವಿದೇಶಿ ಭಾಷೆಗೆ ರೀಮೇಕ್‌ ಆಗಿರುವುದು ಕನ್ನಡಿಗರ ಹೆಮ್ಮೆಗೆ ಕಾರಣವಾಗಿ. ಫಿಲಿಪ್ಪಿನೋ ಭಾಷೆಯಲ್ಲೂ ಚಿತ್ರಕ್ಕೆ ‘ಯೂ ಟರ್ನ್‌’ ಎಂದೇ ಹೆಸರಿಡಲಾಗಿದೆ. ಡೆರಿಕ್‌ ಕ್ಯಾಬ್ರಿಡೊ ಎಂಬುವರು ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕಿಮ… ಚುವೊ ಎಂಬುವರು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಸಿಂಹಳ ಭಾಷೆಯಲ್ಲೂ ಬರಲಿದೆ ಕನ್ನಡದ 'ಯೂ ಟರ್ನ್'! 

ಇದೇ ತಿಂಗಳ 30 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೆ ಈಗಾಗಲೇ ‘ಯೂ ಟರ್ನ್‌’ ಸಿನಿಮಾ ತೆಲುಗು, ತಮಿಳು ಭಾಷೆಗೆ ರೀಮೇಕ್‌ ಆಗಿದೆ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್‌ ಹಾಗೂ ರಾಧಿಕಾ ನಾರಾಯಣ್‌ ನಟಿಸಿರುವ ಪಾತ್ರಗಳಲ್ಲಿ ಸಮಂತಾ ಹಾಗೂ ಭೂಮಿಕಾ ನಟಿಸಿದ್ದರು. ಈಗ ವಿದೇಶಿ ಭಾಷೆಯಾದ ಫಿಲಿಪ್ಪಿನೋದಲ್ಲಿ ಕನ್ನಡ ಸಿನಿಮಾ ಯಾವ ರೀತಿ ಪ್ರೇಕ್ಷಕರನ್ನು ಆಕರ್ಷಿಸಲಿದೆ ಎಂಬುದನ್ನು ನೋಡಬೇಕಿದೆ. ದೂರದ ದೇಶಗಳಿಂದ ನಮ್ಮ ನೆಲಕ್ಕೆ ಚಿತ್ರಗಳ ಕತೆಗಳು ಬರುತ್ತಿದ್ದವು. ಈಗ ಅದೇ ದೂರದ ದೇಶಕ್ಕೆ ನಮ್ಮ ನೆಲದ ಕತೆ ಹೋಗಿದೆ ಎಂಬುದು ಖುಷಿ ವಿಚಾರ.