ಸುಮ್ಮನೆ ಒಮ್ಮೆ ಅವರ ಚಿತ್ರಗಳ ಹೆಸರುಗಳನ್ನು ನೋಡಿ.‘ಅದ್ದೂರಿ’, ‘ಬಹದ್ದೂರ್‌’, ‘ಭರ್ಜರಿ’, ‘ಪೊಗರು’, ಈಗ ಹೊಸ ಸೇರ್ಪಡೆ ‘ದುಬಾರಿ’. ಎಲ್ಲ ಟೈಟಲ್‌ ಕೊನೆಯಲ್ಲಿ ‘ರ’ ಮಮಕಾರ ಮಾತ್ರ ದೂರವಾಗಿಲ್ಲ. ಅಂದಹಾಗೆ ಇದು ನೆನಪಾಗಿದ್ದು ಮೊನ್ನೆ ‘ದುಬಾರಿ’ ಚಿತ್ರಕ್ಕೆ ಮುಹೂರ್ತ ಮಾಡಿಕೊಂಡಾಗ. ಉದಯ್‌ ಕೆ ಮೆಹ್ತಾ ನಿರ್ಮಾಣ, ನಂದ ಕಿಶೋರ್‌ ನಿರ್ದೇಶನದ ಚಿತ್ರವಿದು. ಆ ಮೂಲಕ ‘ಪೊಗರು’ ಚಿತ್ರದ ನಂತರ ನಂದ ಕಿಶೋರ್‌, ಸಂಗೀತ ನಿರ್ದೇಶಕರಾಗಿ ಚಂದನ್‌ ಶೆಟ್ಟಿಮತ್ತೊಮ್ಮೆ ‘ದುಬಾರಿ’ಯಲ್ಲಿ ಜತೆಯಾಗಿದ್ದಾರೆ.

"

ನಿರ್ಮಾಪಕ ಉದಯ್‌ ಕೆ ಮೆಹ್ತಾ ಅವರ ನಿರ್ಮಾಣದ ಎಲ್ಲ ಚಿತ್ರಗಳ ಮುಹೂರ್ತ ಆಗುವುದು ಬೆಂಗಳೂರಿನ ನವರಂಗ್‌ ಬಳಿ ಇರುವ ಗಣೇಶ ದೇವಸ್ಥಾನದಲ್ಲಿ. ‘ದುಬಾರಿ’ಗೂ ಅಲ್ಲೇ ಮುಹೂರ್ತ ನಡೆಯಿತು. ನಟಿ ತಾರಾ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು. ಹಿರಿಯ ನಟ ದೊಡ್ಡಣ್ಣ ಮುಖ್ಯ ಅತಿಥಿಯಾಗಿ ಹಾಜರಿದ್ದರು. ಲಾಕ್‌ಡೌನ್‌ ನಂತರ ಮುಹೂರ್ತ ಮಾಡಿಕೊಳ್ಳುತ್ತಿರುವ ಮೊದಲ ಸ್ಟಾರ್‌ ಸಿನಿಮಾ ಇದು.

ಈ ತಿಂಗಳ ಕೊನೆ ವಾರದಲ್ಲಿ ಚಿತ್ರೀಕರಣಕ್ಕೆ ಹೊರಡುವ ಪ್ಲಾನ್‌ ತಂಡದ್ದು. ‘ಈ ಸಿನಿಮಾ ಸೆಟ್ಟೇರುವುದಕ್ಕೆ ಸಾಕಷ್ಟುಸಮಯ ಸಿಕ್ಕಿದ್ದರಿಂದ ಈಗಾಗಲೇ ಪ್ರೀ ಪ್ರೊಡಕ್ಷನ್‌ ಕೆಲಸಗಳು ಮುಗಿದಿವೆ. ಚಿತ್ರದ ಕತೆ ಕೂಡ ಅಂತಿಮವಾಗಿದೆ. ಹೀಗಾಗಿ ಚಿತ್ರೀಕರಣಕ್ಕೆ ಹೊರಡಲು ಬೇಕಾದ ಎಲ್ಲ ತಯಾರಿಗಳು ಮುಕ್ತಾಯವಾಗಿದ್ದು, ಧ್ರುವ ಸರ್ಜಾ ಅವರ ಜತೆ ಸಿನಿಮಾ ಮಾಡುತ್ತಿರುವ ಖುಷಿ ಇದೆ. ತುಂಬಾ ಎನರ್ಜಿ ಇರುವ ನಟ. ಇಡೀ ತಂಡ ಸೇರಿ ಒಂದು ಒಳ್ಳೆಯ ಸಿನಿಮಾ ಮಾಡುತ್ತೇವೆಂಬ ಭರವಸೆ ಕೊಡುತ್ತೇವೆ’ ಎನ್ನುತ್ತಾರೆ ಉದಯ್‌ ಕೆ ಮೆಹ್ತಾ.

ಧ್ರುವ ಸರ್ಜಾ ನೀವಂದುಕೊಂಡ ಹಾಗಲ್ಲ..! 

ಈಗಾಗಲೇ 8 ಚಿತ್ರಗಳನ್ನು ನಿರ್ಮಿಸಿರುವ ಉದಯ್‌ ಮೆಹ್ತಾ ಅವರಿಗೆ ‘ದುಬಾರಿ’ 9ನೇ ಸಿನಿಮಾ. ಅದ್ದೂರಿ ವೆಚ್ಚದಲ್ಲಿ ಈ ಚಿತ್ರ ಸಿದ್ಧವಾಗಲಿದ್ದು, ಹಿಂದೆಂದೂ ಕಾಣಿಸದ ರೀತಿಯಲ್ಲಿ ಸ್ಟೈಲಿಶ್‌ ಆಗಿ ಧ್ರುವ ಕಾಣಿಸಿಕೊಳ್ಳಲಿದ್ದಾರಂತೆ. ನಾಯಕಿ ಸೇರಿದಂತೆ ಉಳಿದ ಪಾತ್ರ ವರ್ಗದ ಆಯ್ಕೆ ನಡೆಯಬೇಕಿದೆ. ಬೆಂಗಳೂರು, ಮಂಡ್ಯ ಹಾಗೂ ವಿದೇಶದ ಕೆಲವು ಕಡೆ ಚಿತ್ರೀಕರಣ ನಡೆಯಲಿದೆ. ಶೇಖರ್‌ ಚಂದ್ರು ಕ್ಯಾಮೆರಾ, ಕೆ ಎಂ ಪ್ರಕಾಶ್‌ ಸಂಕಲನ, ಮೋಹನ್‌ ಬಿ ಕೆರೆ ಕಲಾ ನಿರ್ದೇಶನ, ಪ್ರಶಾಂತ್‌ ರಾಜಪ್ಪ ಸಂಭಾಷಣೆ, ಮುರಳಿ ನೃತ್ಯ ನಿರ್ದೇಶನ ಮಾಡಲಿದ್ದಾರೆ. ‘ನಾನು ಮತ್ತೊಮ್ಮೆ ಧ್ರುವ ಸರ್ಜಾ ಅವರಿಗೆ ಸಿನಿಮಾ ಮಾಡುತ್ತಿರುವ ಖುಷಿ ಇದೆ. ಈ ಬಾರಿಯೂ ಒಂದು ಒಳ್ಳೆಯ ಕತೆ ಪ್ರೇಕ್ಷಕರಿಗೆ ಕೊಡುತ್ತೇವೆ. ಉದಯ್‌ ಮೆಹ್ತಾ ಅವರಂತ ಪ್ಯಾಷನ್‌ ನಿರ್ಮಾಪಕರ ಜತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಧೈರ್ಯ’ ಎಂದರು ನಂದ ಕಿಶೋರ್‌. ‘ಎನರ್ಜಿಟಿಕ್‌ ಯೂತ್‌ಫುಲ್‌ ಮೂವೀ ಆಗಲಿದೆ. ಸಿನಿಮಾ ಬಂದ ಮೇಲೆ ಎಲ್ಲವೂ ಮಾತಾಡೋಣ’ ಎಂದಿದ್ದು ಧ್ರುವ ಸರ್ಜಾ. ನಟ ಧರ್ಮ, ಚಂದನ್‌ ಶೆಟ್ಟಿ, ಭರ್ಜರಿ ಚೇತನ್‌, ಮಹೇಶ್‌ ಕುಮಾರ್‌, ಪ್ರಥಮ… ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.