ಕೊರೋನಾ ಬಗ್ಗೆ ಉಡಾಫೆ ಬೇಡ, ಹುಷಾರಾಗಿರಿ ಎಂದು ಗಾಯಕ, ಸಂಗೀತ ನಿರ್ದೇಶಕ ಗುರುಕಿರಣ್ ಜನರಿಗೆ ಹೇಳಿದ್ದಾರೆ. ತಮ್ಮ ಕುಟುಂಬ ಕೊರೋನಾದಿಂದ ಗೆದ್ದೆ ಕತೆಯನ್ನು ವಿವರಿಸಿದ್ದಾರೆ. 

‘ಮಗ ಸ್ಪೋಟ್ಸ್‌ರ್‍ ಈವೆಂಟ್‌ನಲ್ಲಿ ಭಾಗವಹಿಸಿದ್ದ. ಅವನಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡವು. ಆಗ ಮನೆಯಲ್ಲೇ ಐಸೋಲೇಟ್‌ ಮಾಡಿದೆವು. ಅವನಿಂದ ನನ್ನನ್ನೂ ಸೇರಿಸಿ ಮನೆಯ ಅಷ್ಟೂಜನರಿಗೆ ಕೊರೋನಾ ಬಂತು’ ಎಂದು ತಮ್ಮ ಕೋವಿಡ್‌ ಅನುಭವಗಳನ್ನು ಬಿಚ್ಚಿಡುತ್ತಾರೆ ಸಂಗೀತ ನಿರ್ದೇಶಕ ಗುರುಕಿರಣ್‌. ಅವರಿಗೆ ಕೋವಿಡ್‌ ಕಾಣಿಸಿಕೊಂಡು ಹದಿನೈದು ದಿನ ಕಳೆದಿವೆ. ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಸುಸ್ತಿನಿಂದ ಇನ್ನೂ ಹೊರಬಂದಿಲ್ಲ. ಅವರು ಕನ್ನಡಪ್ರಭ ಜೊತೆಗೆ ತಮ್ಮ ಕೋವಿಡ್‌ ಅನುಭವಗಳನ್ನು ಹಂಚಿಕೊಂಡರು.

ಕಣ್ಣೆದುರೇ ಜನ ಸಾಯ್ತಿದ್ರೂ ಏನೂ ಮಾಡಲಾಗದ ಅಸಹಾಯಕತೆ: ಸಂಯುಕ್ತಾ ಹೊರನಾಡು

‘ವ್ಯಕ್ತಿ ಎಷ್ಟೇ ಗಟ್ಟಿಮುಟ್ಟಾಗಿದ್ರೂ ಕೊರೋನಾ ಹೊಡೆದು ಮಲಗಿಸುತ್ತೆ. ಕೆಲವು ದಿನ ಮಲಗಿದಲ್ಲಿಂದ ಮೇಲೇಳಲಿಕ್ಕೂ ಆಗದಷ್ಟುಸುಸ್ತು. ಮೊದಲ ಸುತ್ತಿನಲ್ಲಿ ಜ್ವರ, ವಿಪರೀತ ಸುಸ್ತು, ಮೈಕೈ ನೋವು ಇತ್ಯಾದಿ ಲಕ್ಷಣಗಳಿದ್ದರೆ, ಎರಡನೇ ಸುತ್ತಿನಲ್ಲಿ ನ್ಯುಮೋನಿಯಾ, ಶ್ವಾಸಕೋಶದಲ್ಲಿ ಇನ್‌ಫೆಕ್ಷನ್‌ ಇತ್ಯಾದಿ ಸಮಸ್ಯೆ ಆಗುತ್ತದೆ. ಮೊದಲನೇ ಸುತ್ತಿಗೇ ಚೇತರಿಸಿಕೊಂಡರೆ ಓಕೆ. ನನ್ನ ಪತ್ನಿಗೆ ಶ್ವಾಸಕೋಶದಲ್ಲಿ ಸೂಕ್ಷ್ಮ ಇನ್‌ಫೆಕ್ಷನ್‌ ಆಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದೆವು. ಆಗಾಗ ಮಾನಿಟರ್‌ ಮಾಡುತ್ತಾ, ಸರಿಯಾಗಿ ಔಷಧೋಪಚಾರ ಸಿಕ್ಕ ಕಾರಣ ಈಗ ಅವರೂ ಚೇತರಿಸಿಕೊಂಡಿದ್ದಾರೆ. ಆದರೆ ನಿರ್ಮಾಪಕ ರಾಮು ಅವರಿಗೆ ಈ ಹಂತದಲ್ಲಿ ಟ್ರೀಟ್‌ಮೆಂಟ್‌ ಲೆವೆಲ್‌ ಅನ್ನೂ ಮೀರಿ ಶ್ವಾಸಕೋಶದ ಇನ್‌ಫೆಕ್ಷನ್‌ ಹೆಚ್ಚಾಗಿದ್ದು ಪ್ರಾಣಕ್ಕೇ ಎರವಾಯ್ತು’ ಎನ್ನುತ್ತಾರೆ ಗುರುಕಿರಣ್‌.

‘ಮನೆಯವರಿಗೆಲ್ಲ ಕೋವಿಡ್‌ ಬಂದಾಗ ಯಾರನ್ನು ಯಾರು ನೋಡಿಕೊಳ್ಳೋದು ಹೇಳಿ. ಪುಣ್ಯಕ್ಕೆ ನಮಗೆಲ್ಲ ಸ್ನೇಹಿತರಿಂದ, ನಮ್ಮ ಕೆಲಸಗಾರರಿಂದ ಸಕಾಲಕ್ಕೆ ನೆರವು ಒದಗಿಬಂತು. ಅದೃಷ್ಟವಶಾತ್‌ ನಮ್ಮ ಮನೆ ಸಹಾಯಕರಿಗೆ ಕೋವಿಡ್‌ ಬಂದಿಲ್ಲ. ಈ ಸಮಯದಲ್ಲಿ ಮಾನಸಿಕವಾಗಿಯೂ ಜರ್ಜರಿತರಾಗುತ್ತಾ ಹೋಗುತ್ತೇವೆ. ಅದು ಮತ್ತೊಂದು ಕಷ್ಟ. ಮನೆಯಲ್ಲಿ ಮಗನಿಗೆ ಟೆಸ್ಟ್‌ ಮಾಡಿದಾಗ ಪಾಸಿಟಿವ್‌ ರಿಸಲ್ಟ್‌ ಬಂತು. ನಮ್ಮಲ್ಲಿ ಲಕ್ಷಣ ಕಾಣಿಸಿಕೊಂಡಾಗ ನಾವೂ ಟೆಸ್ಟ್‌ ಮಾಡಿಸಿಕೊಂಡೆವು. ಸಮಸ್ಯೆಯ ಗಂಭೀರತೆ ಹೆಚ್ಚಿರುವ ಮೂವರು ಆಸ್ಪತ್ರೆಗೆ ದಾಖಲಾದರು. ನಾನು ಇನ್ನಿಬ್ಬರು ಮನೆಯಲ್ಲೇ ಐಸೋಲೇಶನ್‌ನಲ್ಲಿದ್ದೆವು. ಕೆಲವರು ಆರಂಭದಲ್ಲೇ ಟೆಸ್ಟ್‌ ಮಾಡಿಸಿಕೊಳ್ಳೋದಿಲ್ಲ. ತೀವ್ರತೆ ಹೆಚ್ಚಾದಾಗ ಆಸ್ಪತ್ರೆಗೆ ಎಡತಾಕುತ್ತಾರೆ. ಇದೇ ಕಾರಣಕ್ಕೆ ಸಾವು, ನೋವುಗಳು ಹೆಚ್ಚಾಗುತ್ತಿವೆ. ದಯಮಾಡಿ, ಕೊರೋನಾದ ಲಕ್ಷಣಗಳು ಕಾಣಸಿಕೊಂಡರೆ ತಕ್ಷಣವೇ ಹೋಗಿ ಟೆಸ್ಟ್‌ ಮಾಡಿಸಿಕೊಳ್ಳಿ. ನಿಮ್ಮ ಜೀವ ಮಾತ್ರವಲ್ಲ, ಇತರರ ಬದುಕನ್ನೂ ಉಳಿಸಿದ ಪುಣ್ಯ ನಿಮಗೆ ಸಿಗುತ್ತದೆ’ ಎಂದು ವಿನಂತಿಸುತ್ತಾರೆ ಗುರುಕಿರಣ್‌.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona