ಕೊರೋನಾ ಸಂಕಷ್ಟಶುರುವಾದ ಮೇಲೆ ಸಂಯುಕ್ತಾ ಹೊರನಾಡು ಕೊರೋನಾ ವಾರಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವಶ್ಯಕತೆ ಇರುವವರಿಗೆ ಶಕ್ತಿ ಮೀರಿ ಬೆಡ್‌, ಆಕ್ಸಿಜನ್‌ ಒದಗಿಸುತ್ತಿದ್ದಾರೆ. ಹಗಲು, ರಾತ್ರಿ ಜನರಿಗಾಗಿ ದುಡಿಯುತ್ತಿದ್ದಾರೆ. ಕಷ್ಟಕಾಲದಲ್ಲಿ ಜನರಿಗೆ ನೆರವಾಗುತ್ತಿರುವ ನಟಿ ಹೇಳಿದ ಅನುಭವ ಕಥನ ಇಲ್ಲಿದೆ. ಜನರು ಇನ್ನಾದರೂ ಹೊರಗೆ ಓಡಾಡುವುದನ್ನು ನಿಲ್ಲಿಸಿ.

ನಿರೂಪಣೆ: ಪ್ರಿಯಾ ಕೆರ್ವಾಶೆ

ಪ್ರತೀ ದಿನ ನಾನಾ ಬಗೆಯ ಅನುಭವಗಳು. ನಿನ್ನೆ ರಾತ್ರಿ ಒಬ್ರಿಗೆ ಬಹಳ ಸೀರಿಯಸ್‌ ಇತ್ತು. ಬೆಡ್‌ ಎಲ್ಲೂ ಸಿಕ್ತಿರಲಿಲ್ಲ. ಕೊನೇಗೆ ಒಂದು ಆಸ್ಪತ್ರೆಯಲ್ಲಿ ಬೆಡ್‌ ಅರೇಂಜ್‌ ಮಾಡಿದ್ವಿ. ಅವ್ರನ್ನು ಆಂಬ್ಯುಲೆನ್ಸ್‌ನಲ್ಲಿ ಅಲ್ಲಿಗೆ ಕರ್ಕೊಂಡು ಹೋಗ್ಬೇಕು ಅಂತನ್ನುವಾಗ ಅರ್ಧದಾರಿಯಲ್ಲೇ ತೀರ್ಕೊಂಡರು. ಯೋಚಿಸುವಷ್ಟೂಟೈಮ್‌ ಇರಲಿಲ್ಲ, ಹಾಸ್ಪಿಟಲ್‌ನವರ ಹತ್ರ ಮಾತಾಡಿ ನೆಕ್ಸ್ಟ್‌ಕ್ಯೂನಲ್ಲಿದ್ದ ಹುಡುಗಿಗೆ ಆ ಬೆಡ್‌ ಸಿಗೋ ಹಾಗೆ ಮಾಡಿದೆ. ಆ ಹುಡುಗಿಯನ್ನು ಐಸಿಯುಗೆ ಹಾಕಿ ಇನ್ನೇನು ಟ್ರೀಟ್‌ಮೆಂಟ್‌ ಶುರು ಮಾಡ್ಬೇಕು ಅನ್ನುವಷ್ಟರಲ್ಲಿ ಅವಳೂ ತೀರ್ಕೊಂಡಳು! ಕೆಲವು ಮನೆಗಳಲ್ಲಿ ಅಪ್ಪ, ಅಮ್ಮ ಇಬ್ಬರನ್ನೂ ಕಳೆದುಕೊಂಡ ತಬ್ಬಲಿ ಮಕ್ಕಳಿದ್ದಾರೆ. ಇಂಥಾ ಮಕ್ಕಳಿಗೆ ಹತ್ತಾರು ಅಪಾಯಗಳು ಕಾಡುತ್ತಿವೆ. ಅವರನ್ನು ಆ ಅಪಾಯದಿಂದ ಪಾರು ಮಾಡೋದು ಚಾಲೆಂಜಿಂಗ್‌.

ಏಳೆಂಟು ಗ್ರೂಪ್‌ ಇದೆ

ಸದ್ಯಕ್ಕೆ ಮನೆಯಿಂದಲೇ ಕೊರೋನಾ ರೋಗಿಗಳ ಸಹಾಯಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ. ನಮ್ಮದು ಏಳೆಂಟು ಕೊರೋನಾ ವಾಲೆಂಟಿಯರ್ಸ್‌ ಗ್ರೂಪ್‌ ಇದೆ. ಒಂದೊಂದು ಗ್ರೂಪ್‌ನಲ್ಲೂ ಕನಿಷ್ಟ40 ರಿಂದ 50 ಜನ ವಾಲಂಟಿಯರ್ಸ್‌ ಇದ್ದಾರೆ. ಈ ಮೂಲಕ ಅವಶ್ಯಕತೆ ಇದ್ದವರಿಗೆ ಆಕ್ಸಿಜನ್‌, ಬೆಡ್‌, ಪ್ಲಾಸ್ಮಾ, ಔಷಧಿ ಇತ್ಯಾದಿ ಒದಗಿಸುತ್ತಿದ್ದೇವೆ. ಕೆಲವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ಮತ್ತೊಂದಿಷ್ಟುಜನ ಪಾಸ್‌ ಪಡೆದು ಸೇವೆಗೆ ನಿಂತಿದ್ದಾರೆ.

ಅವಶ್ಯಕತೆ ಇರುವವರು ಸೋಷಿಯಲ್‌ ಮೀಡಿಯಾದಲ್ಲಿ ಟ್ಯಾಗ್‌ ಮಾಡಿ

ಅವಶ್ಯಕತೆ ಇರುವವರು ಸೋಷಿಯಲ್‌ ಮೀಡಿಯಾದಲ್ಲಿ ನನಗೆ ಟ್ಯಾಗ್‌ ಮಾಡಿ ಏನು ಸಹಾಯ ಬೇಕು ಅಂತ ಉಲ್ಲೇಖಿಸಬೇಕು. ನಮ್ಮ ಅಷ್ಟೂಗ್ರೂಪ್‌ಗಳು ಎಲ್ಲಿ ಆ ಸೌಲಭ್ಯ ಇದೆ ಅಂತ ಪತ್ತೆ ಮಾಡಿ ಆ ವ್ಯಕ್ತಿಯ ಸಂಪರ್ಕದಲ್ಲಿ ಇರುತ್ತಾರೆ. ರಾಮಯ್ಯ ಆಸ್ಪತ್ರೆಯ ರಕ್ಷಾ ರಾಮಯ್ಯ ಅವರ ಜೊತೆಗೆ ಸಂಪರ್ಕದಲ್ಲಿದ್ದೇನೆ. ಮೃತ ಪಡುವವರ ಸಂಖ್ಯೆ ಸಿಕ್ಕಾಪಟ್ಟೆಏರುತ್ತಿದೆ. ಸ್ಮಶಾನಗಳಲ್ಲಿ ಸ್ಥಳಾವಕಾಶ ಸಿಗುತ್ತಿಲ್ಲ. ನಮ್ಮ ಬನಶಂಕರಿ ಚಿತಾಗಾರದಲ್ಲಿ 60 ಜನರ ಅಂತ್ಯಸಂಸ್ಕಾರ ಮಾಡಬಹುದು. ಆದರೆ ಅಲ್ಲಿ ಕೇವಲ 32 ಜನರ ಅಂತ್ಯ ಸಂಸ್ಕಾರಕ್ಕಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ಕಮಿಷನರ್‌ ಹತ್ರ ಮಾತಾಡಿದೆ. ಅವರು ಸರಿಪಡಿಸುವ ಭರವಸೆ ನೀಡಿದ್ದಾರೆ.

ಲಾಕ್‌ಡೌನ್‌ನಲ್ಲಿಯೂ ಮಾನವೀಯತೆ ಮೆರೆದ ನಟಿ; ಬೀದಿ ಶ್ವಾನಗಳಿಗೆ ಊಟ ವ್ಯವಸ್ಥೆ!

ಸಾವು ನೋವು ನೋಡಿ, ಊಟ ಸೇರುತ್ತಿಲ್ಲ

ಇಷ್ಟೆಲ್ಲ ಸಾವು ನೋವುಗಳನ್ನು ಕಂಡು ಒಂದು ತುತ್ತು ಊಟ ಒಳಗಿಳಿಯಲ್ಲ. ಇಷ್ಟಾದ್ರೂ ನಾವು ಬಡತನ ರೇಖೆಗಿಂತ ಕೆಳಗಿನ ಜನರು, ಸ್ಲಮ್‌ ಜನರನ್ನು ತಲುಪೋದಕ್ಕಾಗಲ್ಲ ಅನ್ನುವ ಬೇಸರ ಇದೆ. ಅವರ ಸಹಾಯಕ್ಕೆ ಒಂದು ಆ್ಯಪ್‌ ಮಾಡುತ್ತೇವೆ. ಆ ಆ್ಯಪ್‌ ಮೂಲಕ ಒಂದಿಷ್ಟುಜನ ವಾಲಂಟಿಯರ್ಸ್‌ ಬಡ ಜನರಿರುವ ಕಡೆಗೇ ಹೋಗಿ ಟೆಸ್ಟ್‌ ಮಾಡಿ ಪಾಸಿಟಿವ್‌ ಇದ್ರೆ ಮೆಡಿಸಿನ್‌, ಸಮಸ್ಯೆ ಇನ್ನಷ್ಟುಗಂಭೀರವಿದ್ದರೆ ಆಸ್ಪತ್ರೆಗೆ ಸೇರಿಸೋದು ಇತ್ಯಾದಿ ಕೆಲಸ ಮಾಡುತ್ತೇವೆ. ಆದರೆ ಪಾಸಿಟಿವ್‌ ಬಂದಿದೆ ಅಂತ ಗೊತ್ತಾದ ತಕ್ಷಣ ಆ ಜನ ಓಡಿಹೋಗ್ತಾರೆ, ತಪ್ಪಿಸಿಕೊಂಡು ತಿರುಗ್ತಾರೆ. ಇದೇ ಭಯ. ಎಲ್ಲವೂ ಸರಿ ಹೋಗುವ ದಿನಕ್ಕಾಗಿ ಕಾಯುತ್ತಿದ್ದೇವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona