100 ಚಿತ್ರಮಂಗಳಲ್ಲಿ ಸಿನಿಮಾ ತೆರೆಗೆ

ಮಂಸೋರೆ ನಿರ್ದೇಶಿಸಿ, ದೇವರಾಜ್‌ ಆರ್‌ ನಿರ್ಮಾಣ ಮಾಡಿರುವ ‘ಆಕ್ಟ್ 1978’ ಸಿಂಗಲ್‌ ಸ್ಕ್ರೀನ್‌ 60, ಮಲ್ಟಿಪ್ಲೆಕ್ಸ್‌ 40 ಸೇರಿ ಒಟ್ಟು 100 ಪರದೆಗಳಲ್ಲಿ ಬಿಡುಗಡೆಯಾಗಿದೆ. ವಿಶೇಷ ಎಂದರೆ ಚೆನ್ನೈನಲ್ಲೂ ಒಂದು ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದೆ.

ಇದು ಸಾಮಾನ್ಯ ಜನರ ಕತೆ. ಅವರದ್ದೇ ಕತೆಯನ್ನು ಅವರದ್ದೇ ಭಾಷೆಯಲ್ಲಿ ತೆರೆ ಮೇಲೆ ದೃಶ್ಯಗಳ ಮೂಲಕ ಹೇಳಿದ್ದೇವೆ. ಹೀಗಾಗಿ ಜನ ನೋಡಿ ಗೆಲ್ಲಿಸಿದರೆ ಕನ್ನಡದಲ್ಲಿ ಇಂತ ಕಥೆಯಾಧರಿತ ಚಿತ್ರಗಳ ಸಂಖ್ಯೆ ಮತ್ತಷ್ಟುಹೆಚ್ಚುತ್ತದೆ.- ಟಿ ಕೆ ದಯಾನಂದ, ಚಿತ್ರಕಥೆಗಾರ

ಶೇ.30 ಭಾಗ ತುಂಬಿದ ಪ್ರೇಕ್ಷಕರು

ಕೋಲಾರ, ಹಾಸನ ಜಿಲ್ಲೆಗಳ ಹೊರತಾಗಿ ಬೇರೆ ಎಲ್ಲಾ ಕಡೆ ಸಿನಿಮಾ ಬಿಡುಗಡೆಯಾಗಿದೆ. 5 ರಿಂದ 10 ಮಂದಿ ಪ್ರೇಕ್ಷಕರನ್ನು ಮಾತ್ರ ನಿರೀಕ್ಷೆ ಮಾಡಿದ್ದ ಚಿತ್ರತಂಡಕ್ಕೆ ಈಗ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನ ವೀರೇಶ್‌ ಚಿತ್ರಮಂದಿರದಲ್ಲಿ ನ.20ರಂದು ಬೆಳಗ್ಗಿನ ಪ್ರದರ್ಶನ ಹೌಸ್‌ಫುಲ್‌ ಆಗಿದ್ದು, ಮೂರು ಅಥವಾ ನಾಲ್ಕು ಜನ ಬರಬಹುದು ಎಂದು ನಿರೀಕ್ಷಿಸಿದ್ದ ಶಿವಮೊಗ್ಗದ ಚಿತ್ರಮಂದಿರದಲ್ಲಿ ಬೆಳಗ್ಗಿನ ಪ್ರದರ್ಶನಕ್ಕೆ 27 ಜನ ಬಂದಿದ್ದಾರೆ. ಬೆಂಗಳೂರಿನ ಒರಾಯನ್‌ ಮಾಲ್‌ನ ಸ್ಕ್ರೀನ್‌ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಹೀಗೆ ಸಿನಿಮಾ ಪ್ರದರ್ಶನ ಆಗುತ್ತಿರುವ ಎಲ್ಲಾ ಚಿತ್ರಮಂದಿರಗಳಲ್ಲೂ ಶೇ.25ರಿಂದ 30 ಭಾಗದಷ್ಟುಪ್ರೇಕ್ಷಕರು ತುಂಬಿದ್ದಾರೆ. ಈ ಲೆಕ್ಕಾಚಾರ ಚಿತ್ರರಂಗದಲ್ಲಿ ಭರವಸೆ ಚಿಗುರಿಸಿದೆ. ದಿನ ಕಳೆದಂತೆ ಈ ಸಂಖ್ಯೆ ಜಾಸ್ತಿಯಾಗುವ ಲಕ್ಷಣವಿದೆ.

ಎದೆಗೆ ನಾಟುವ ತುಂಬು ಬಸುರಿಯ ನಿಟ್ಟುಸಿರು; ಆಕ್ಟ್‌ 1978 

ಸೆಲೆಬ್ರಿಟಿ ಶೋಗೆ ಹರಿದು ಬಂದ ಜನ

ಬೆಂಗಳೂರಿನ ವೀರೇಶ್‌ ಚಿತ್ರಮಂದಿರದಲ್ಲಿ ನ.19ರಂದು ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ಚಿತ್ರರಂಗದ ಗಣ್ಯರು, ಸಿನಿಮಾ ಪ್ರೇಮಿಗಳು ಸೇರಿದಂತೆ ನೂರಾರು ಮಂದಿ ಆಗಮಿಸಿ ಎಂಟು ತಿಂಗಳ ನಂತರ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಾಕ್ಷಿಯಾದರು. ಲಾಕ್‌ಡೌನ್‌ ನಂತರ ತೆರೆಗೆ ಬರುತ್ತಿರುವ ಕಾರಣ ಇಡೀ ಚಿತ್ರಮಂದಿರವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಸಿನಿಮಾ ಟಿಕೆಟ್‌ ಬುಕ್‌ ಮಾಡುವ ಅತಿ ದೊಡ್ಡ ವೇದಿಕೆ ಎನಿಸಿಕೊಂಡಿರುವ ಬುಕ್‌ ಮೈ ಶೋನಲ್ಲಿ ತಾಂತ್ರಿಕ ದೋಷ ಎದುರಾಗಿದ್ದು, ಟಿಕೆಟ್‌ ಬುಕ್‌ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೂ ತಂದಿದ್ದೇವೆ. ಆದರೂ ನಮ್ಮ ನಿರೀಕ್ಷೆಯಂತೆ ಜನ ಬಂದು ಸಿನಿಮಾ ನೋಡುತ್ತಿದ್ದಾರೆ.- ವೀರೇಂದ್ರ ಮಲ್ಲಣ್ಣ, ಬರಹಗಾರ- ನಿರ್ಮಾಣ ವಿನ್ಯಾಸ

ಸೋಷಿಯಲ್‌ ಮೀಡಿಯಾಗಳಲ್ಲಿ ಹವಾ

ಏಳೆಂಟು ತಿಂಗಳ ನಂತರ ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿರುವ ಸಂತಸವನ್ನು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಚಿತ್ರಮಂದಿರದಲ್ಲಿ ಕೂತು ಟಿಕೆಟ್‌ ಜತೆಗೆ ಸೆಲ್ಫಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ‘ಆಕ್ಟ್ 1978’ ಚಿತ್ರದ ಪ್ರದರ್ಶನವನ್ನು ಮನಸಾರೆ ಎಂಜಾಯ್‌ ಮಾಡುತ್ತಿದ್ದಾರೆ. ಸಿನಿಮಾ ನೋಡಿದವರು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ, ವಿಮರ್ಶೆಗಳನ್ನು ಬರೆದು ಗಮನ ಸೆಳೆಯುತ್ತಿದ್ದಾರೆ.

'ಆ್ಯಕ್ಟ್ 1978 'ಕತೆ ಕೇಳಿದ ಮೇಲೆ ಸಿನಿಮಾ ಒಪ್ಪಿಕೊಳ್ಳದೇ ಇರಲಾಗಲಿಲ್ಲ: ಯಜ್ಞಾ ಶೆಟ್ಟಿ 

ಶುಭ ಕೋರಿದ ಸ್ಟಾರ್‌ಗಳು

ಚಿತ್ರಮಂದಿರಗಳ ಬಾಗಿಲು ತೆರೆಯುವಂತೆ ಮಾಡಿದ ‘ಆಕ್ಟ್ 1978’ ಚಿತ್ರಕ್ಕೆ ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರು, ನಿರ್ದೇಶಕರು ಚಿತ್ರದ ಬಿಡುಗಡೆಗೆ ಶುಭ ಕೋರಿದ್ದಾರೆ. ಸುದೀಪ್‌, ಶಿವರಾಜ್‌ಕುಮಾರ್‌, ದುನಿಯಾ ವಿಜಯ್‌, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್‌, ಪಿ ಶೇಷಾದ್ರಿ, ಬಿಎಸ್‌ ಲಿಂಗದೇವರು, ಪವನ್‌ ಒಡೆಯರ್‌, ಸಂತೋಷ್‌ ಆನಂದ್‌ರಾಮ್‌, ಹೇಮಂತ್‌ ರಾವ್‌, ಕೆ ಎಂ ಚೈತನ್ಯ, ಅನಿತಾ ಭಟ್‌, ನೀತೂ ಶೆಟ್ಟಿಹೀಗೆ ಹಲವರು ಚಿತ್ರದ ಬಿಡುಗಡೆಗೆ ಶುಭ ಕೋರಿದ್ದಾರೆ. ದುನಿಯಾ ವಿಜಯ್‌ ಪ್ರೇಕ್ಷಕರ ಜತೆಗೆ ಚಿತ್ರಮಂದಿರದಲ್ಲೇ ಸಿನಿಮಾ ನೋಡುವ ಮೂಲಕ ಚಿತ್ರಕ್ಕೆ ಸಾಥ್‌ ನೀಡುತ್ತಿದ್ದಾರೆ.

ಲಾಕ್‌ಡೌನ್‌ ನಂತರ ರಿಲೀಸ್‌ ಆಗುತ್ತಿರುವ ಮೊದಲ ಚಿತ್ರ 'ಆಕ್ಟ್ 1978' 

ಚಿತ್ರದಲ್ಲಿ ಯಜ್ಞಾ ಶೆಟ್ಟಿ, ಬಿ ಸುರೇಶ್‌, ಪ್ರಮೋದ್‌ ಶೆಟ್ಟಿ, ಸಂಜಾರಿ ವಿಜಯ್‌, ಸಂಪತ್‌, ಶ್ರುತಿ, ಅಚ್ಯುತ್‌ ಕುಮಾರ್‌, ಅವಿನಾಶ್‌ ಮುಂತಾದವರು ನಟಿಸಿದ್ದಾರೆ.

ಇದೊಂದು ಕಂಟೆಂಟ್‌ ಆಧರಿತ ಸಿನಿಮಾ. ಲಾಕ್‌ಡೌನ್‌ ನಂತರ ಬರುತ್ತಿದ್ದೇವೆ. ಜನರಲ್ಲಿ ಕೊರೋನಾ ಭಯ ಹೋಗಿಲ್ಲ. ಹೀಗಾಗಿ ನಾನು ಪ್ರತಿ ಶೋಗೆ ಐದಾರು ಜನರನ್ನು ಮಾತ್ರ ನಿರೀಕ್ಷೆ ಮಾಡಿದ್ವಿ. ಆದರೆ 20, 30, 50 ಜನ ಸಿನಿಮಾ ನೋಡುತ್ತಿದ್ದಾರೆ. ಸೋಮವಾರ ನಂತರ ಚಿತ್ರದ ನಿರ್ದಿಷ್ಟಫಲಿತಾಂಶ ಗೊತ್ತಾಗಲಿದೆ. - ಮಂಸೋರೆ, ನಿರ್ದೇಶಕ