'ಆ್ಯಕ್ಟ್ 1978 'ಕತೆ ಕೇಳಿದ ಮೇಲೆ ಸಿನಿಮಾ ಒಪ್ಪಿಕೊಳ್ಳದೇ ಇರಲಾಗಲಿಲ್ಲ: ಯಜ್ಞಾ ಶೆಟ್ಟಿ
‘ಆ್ಯಕ್ಟ್ 1978’ ಚಿತ್ರ ಇಂದು ಬಿಡುಗಡೆಯಾಗಿದೆ. ಈ ಚಿತ್ರದ ಪೋಸ್ಟರ್‌ನಲ್ಲಿ ಮೈಗೆ ಬಾಂಬ್ ಸುತ್ತಿಕೊಂಡ ತುಂಬು ಗರ್ಭಿಣಿಯಾಗಿ ಬೆಚ್ಚಿಬೀಳಿಸಿದ್ದಾರೆ ಯಜ್ಞಾ ಶೆಟ್ಟಿ. ಸಿನಿಮಾ ಬಗ್ಗೆ, ತನ್ನ ಪಾತ್ರದ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.
ಬೆಂಗಳೂರು (ನ. 20): ‘ಆ್ಯಕ್ಟ್ 1978’ ಚಿತ್ರದ ಪೋಸ್ಟರ್‌ನಲ್ಲಿ ಮೈಗೆ ಬಾಂಬ್ ಸುತ್ತಿಕೊಂಡ ತುಂಬು ಗರ್ಭಿಣಿಯಾಗಿ ಬೆಚ್ಚಿಬೀಳಿಸಿದ್ದಾರೆ ಯಜ್ಞಾ ಶೆಟ್ಟಿ. ಸಿನಿಮಾ ಬಗ್ಗೆ, ತನ್ನ ಪಾತ್ರದ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.
- ಆ್ಯಕ್ಟ್ ಚಿತ್ರದ ನಿಮ್ಮ ಪೋಸ್ಟರ್ ನೋಡಿದ್ರೆ, ಭಯ, ಆತಂಕದ ಜೊತೆಗೆ ಹತ್ತಾರು ಯೋಚನೆಗಳನ್ನು ಹುಟ್ಟಿಸುವಂತಿದೆ. ಏನಿದರ ಹಿನ್ನೆಲೆ?
ಇದೊಂದು ಥ್ರಿಲ್ಲರ್ ಜಾನರ್‌ನಲ್ಲಿರುವ ಸಿನಿಮಾ. ಒಬ್ಬ ತುಂಬು ಗರ್ಭಿಣಿ ಹೊಟ್ಟೆಗೆ ಬಾಂಬ್ ಕಟ್ಕೊಂಡಿದ್ದಾಳೆ. ಕೈಯಲ್ಲಿ ಗನ್ ಇದೆ, ಜೊತೆಗೆ ವಾಕಿಟಾಕಿ. ಸರ್ಕಾರಿ ಕಚೇರಿಯ ಹಿನ್ನೆಲೆಯಲ್ಲಿದೆ. ಇದನ್ನೆಲ್ಲ ಗಮನಿಸಿದ್ರೆ ತಿಳಿಯುತ್ತೆ, ಆಕೆ ಇಡೀ ಸನ್ನಿವೇಶವನ್ನು ತನ್ನ ಕೈಗೆ ತಗೊಂಡಿದ್ದಾಳೆ ಅಂತ. ತುಂಬು ಗರ್ಭಿಣಿಯಾಗಿ ಅವಳೇ ದುರ್ಬಲ ಸ್ಥಿತಿಯಲ್ಲಿರುವಾಗ ಇಂಥದ್ದೊಂದು ರಿಸ್ಕ್ ಯಾಕೆ ತಗೊಂಡಳು ಅನ್ನೋದೇ ಕತೆ.
ಜನರ ಸಿಟ್ಟು, ಅವರ ನೋವು ಸಿನಿಮಾ ಆಗಿದೆ: ಅಕ್ಟ್ 1978 ಸಿನಿಮಾ ಬಗ್ಗೆ ಮಂಸೊರೆ ಮಾತು
- ಇದು ಕೆಲವೊಮ್ಮೆ ಕಹಾನಿಯ ಹಾಗೆ, ಮತ್ತೆ ಕೆಲವೊಮ್ಮೆ ‘ಎ ವೆಡ್ನಸ್ ಡೇ’ ಸಿನಿಮಾದ ಎಳೆಯಂತೆ ಕಾಣುತ್ತೆ. ಏನಾದ್ರೂ ಲಿಂಕ್ ಇದೆಯಾ?
ಇಲ್ಲ. ಈ ಪೋಸ್ಟರ್ ನೋಡಿದ್ರೆ ಬೇರೆ ಬೇರೆ ಸಿನಿಮಾಗಳಿಗೆ ಕನೆಕ್ಟ್ ಆಗಿರೋ ರೀತಿ ಕಾಣೋದು ಸಹಜ. ಆ ಥರ ಏನೂ ಇಲ್ಲ. ಈ ಸಿನಿಮಾದಲ್ಲೊಂದು ಸಾಮಾಜಿಕ ಸಂದೇಶ ಇದೆ.
- ಮತ್ತೇನಿದೆ ಸಿನಿಮಾದಲ್ಲಿ, ನೀವು ಶುರುವಿಂದ ಕೊನೆಯವರೆಗೂ ಗರ್ಭಿಣಿಯಾಗಿಯೇ ಇರುತ್ತೀರಾ?
ಆಕೆಗೆ ವ್ಯವಸ್ಥೆಯ ಬಗ್ಗೆ ರೋಷವಿದೆ, ನೋವಿದೆ. ಸಹನೆಯ ಹಂತವನ್ನು ದಾಟಿ ಅವಳು ಮುಂದೆ ಬಂದಿದ್ದಾಳೆ ಅನ್ನೋದು ಈಗಾಗಲೇ ಗೊತ್ತಾಗಿರುತ್ತೆ. ಸರ್ಕಾರಿ ಆಫೀಸ್‌ಗಳಲ್ಲೊಂದು ಶ್ರೇಣೀಕೃತ ವ್ಯವಸ್ಥೆ ಇರುತ್ತೆ. ಸಾಕಷ್ಟುಮಂದಿ ಈ ವ್ಯವಸ್ಥೆಯಿಂದ ನೋವು, ಅವಮಾನ, ಕಷ್ಟಅನುಭವಿಸಿರುತ್ತಾರೆ. ಆ ಮಟ್ಟದಲ್ಲಿ ಈ ಹೆಣ್ಮಗಳು ರೊಚ್ಚಿಗೇಳಬೇಕಿದ್ರೆ ಅವಳು ಎಂಥಾ ಸನ್ನಿವೇಶ ಫೇಸ್ ಮಾಡಿರಬಹುದು ಯೋಚಿಸಿ.
- ಪಾತ್ರ ನಿಭಾಯಿಸೋದು ಸವಾಲಾಗಿತ್ತಾ?
ಖಂಡಿತಾ. ತುಂಬು ಗರ್ಭಿಣಿಯೊಬ್ಬಳ ನೋವು, ಅವಳಿಗಾಗುವ ತ್ರಾಸವನ್ನು ಊಹಿಸಿ ಅಭಿನಯಿಸೋದು ಸವಾಲೇ ಸರಿ. ಶುರುವಲ್ಲಿ ನನ್ನನ್ನು ಈ ಸಿನಿಮಾಕ್ಕೆ ಕರೆದಾಗ ಒಪ್ಪಿಕೊಂಡಿರಲಿಲ್ಲ. ಯಾಕೆಂದರೆ ನನ್ನ ಮದುವೆ ಟೈಮ್‌ನಲ್ಲಿ ಶೂಟಿಂಗ್ ಶೆಡ್ಯೂಲ್ ಇತ್ತು. ಆದರೆ ಮನ್ಸೋರೆ ಅವರು ನೀವು ಫಸ್ಟ್ ಕತೆ ಕೇಳಿ ಅಂದರು. ಈ ಕತೆ ಕೇಳಿದ ಮೇಲೆ ಸಿನಿಮಾ ಒಪ್ಪಿಕೊಳ್ಳದಿರಲು ಸಾಧ್ಯವಾಗಲಿಲ್ಲ. ಕತೆ ಕೇಳಿದ ತಕ್ಷಣ ಒಪ್ಪಿಕೊಂಡೆ. ನನ್ನ ಮದುವೆಗೆ ಸಮಸ್ಯೆ ಆಗದ ಹಾಗೆ ಶೂಟಿಂಗ್ ಮುಗಿಸಿ ಕೊಟ್ಟರು.
- ಥಿಯೇಟರ್‌ನಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಏನನಿಸುತ್ತೆ?
ನಮಗೆ ಆತಂಕ, ಟೆನ್ಶನ್ ಇದ್ದೇ ಇದೆ. ಆದರೆ ಜನ ಥಿಯೇಟರ್‌ಗೆ ಬರುವ ಬಗ್ಗೆ ಖಾತ್ರಿ ಇಲ್ಲದ ಇಂಥಾ ಸನ್ನಿವೇಶದಲ್ಲೂ ಸಿನಿಮಾವನ್ನು ಬಿಡುಗಡೆ ಮಾಡುವ ನಿರ್ಮಾಪಕ, ನಿರ್ದೇಶಕರ ಧೈರ್ಯದ ಬಗ್ಗೆ ಹೆಮ್ಮೆ ಅನಿಸುತ್ತೆ.
- ಮನ್ಸೋರೆ ಅವರ ನಾತಿ ಚರಾಮಿ ಹಲವು ರಾಷ್ಟ್ರಪ್ರಶಸ್ತಿಗಳಿಗೆ ಭಾಜನವಾಯ್ತು, ಅವರ ಸಿನಿಮಾಗಳಲ್ಲಿ ಒಂದು ಯುನಿಕ್‌ನೆಸ್ ಇರುತ್ತೆ ಅಂತಾರೆ. ಈ ಸಿನಿಮಾದಲ್ಲೂ ಆ ಮಾತು ನಿಜವಾಗಿದೆ ಅನ್ಸುತ್ತಾ?
ಈ ಸಿನಿಮಾವನ್ನು ಪ್ರಶಸ್ತಿಗಾಗಿ ಅವರು ಮಾಡಲಿಲ್ಲ. ಬಹಳ ಸೆನ್ಸಿಟಿವ್ ಆಗಿ ಮಾಡಿದ್ದಾರೆ. ಪ್ರಶಸ್ತಿ ಪಡೆಯುವ ಅರ್ಹತೆ ಖಂಡಿತಾ ಇದೆ.
- ಯಜ್ಞಾ ಶೆಟ್ಟಿಅವರು ಇನ್ನು ಮೇಲೆ ಇಂಥಾ ಪ್ರಯೋಗಶೀಲ ಚಿತ್ರಗಳನ್ನೇ ಆಯ್ಕೆ ಮಾಡುತ್ತಾರಾ?
ಈವರೆಗೆ ಮಾಡಿದ್ದೂ ಅದನ್ನೇ ತಾನೇ. ವರ್ಷಕ್ಕೊಂದು ಸಿನಿಮಾ ಮಾಡಿದ್ರೂ ತೃಪ್ತಿ ಕೊಡುವಂತಿರಬೇಕು ಅಂತ ನಂಬಿದವಳು ನಾನು.
- ಮದುವೆ, ಮುಂಬೈ ವಾಸದ ನಡುವೆ ಒಂದು ಕನ್ನಡ ಸಿನಿಮಾ, ಹೇಗನಿಸುತ್ತೆ?
ಹಿಂದೆ ಮಂಗಳೂರಿಂದ ಬೆಂಗಳೂರಿಗೆ ಬರುತ್ತಿದ್ದೆ. ಈಗ ಮುಂಬೈಯಿಂದ. ಬರೀ 1 ಗಂಟೆಯ ಜರ್ನಿ. ಉಳಿದಂತೆ ಮುಂಬೈ ಬದುಕು ಚೆನ್ನಾಗಿದೆ. ಮನೆಯಲ್ಲಿ ಎಲ್ಲರೂ ನನ್ನ ಪೋಸ್ಟರ್ ನೋಡಿ ಮೆಚ್ಚುಗೆಯ ಮಾತಾಡಿದ್ದಾರೆ. ಹ್ಯಾಪಿ ಅಷ್ಟೇ.
- ಪ್ರಿಯಾ ಕೆರ್ವಾಶೆ