ಆರ್‌ ಕೇಶವಮೂರ್ತಿ

ಜನಸಾಮಾನ್ಯರ ಪಾಲಿಗೆ ವ್ಯವಸ್ಥೆ ನಿರ್ಲಕ್ಷ್ಯ ಎಂಬುದು ನಡು ರಸ್ತೆ ಉಬ್ಬಿನಂತೆ(ಸ್ಪೀಡ್‌ ಕಟ್‌). ಅದು ಎಲ್ಲರಿಗೂ ಕಾಣುತ್ತಿರುತ್ತದೆ. ಅದು ಒಂದಲ್ಲಾ ಒಂದು ಬಾರಿ ಎಲ್ಲರಿಗೂ ತೊಂದರೆ ಕೊಡುತ್ತಲೇ ಇರುತ್ತದೆ. ಕೆಲವರು ಅದನ್ನು ನೋಡಿ ದಾಟಿಕೊಂಡು ಹೋಗುತ್ತಾರೆ, ಕೆಲವರು ನೋಡಿ ಬೈಯ್ದುಕೊಳ್ಳುತ್ತಾರೆ, ಇನ್ನೂ ಕೆಲವರು ಆ ಸ್ಪೀಡ್‌ ಕಟ್‌ಗೆ ಶಾಪ ಹಾಕುತ್ತಾರೆ. ಆದರೆ, ಯಾರೋ ಒಬ್ಬರು ಮಾತ್ರ ರಸ್ತೆ ಉಬ್ಬಿಗೆ ಚಿಕಿತ್ಸೆ ಮಾಡಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ. ಹೀಗೆ ಸಾಮಾನ್ಯ ಹೆಣ್ಣೊಬ್ಬಳು ರಸ್ತೆ ಉಬ್ಬಿನ ರೂಪದಲ್ಲಿರುವ ಭ್ರಷ್ಟವ್ಯವಸ್ಥೆಗೆ ಬಿಸಿ ಮುಟ್ಟಿಸಲು ಹೊರಟರೆ ಏನಾಗುತ್ತದೆ ಎಂಬುದು ಮನ ಮುಟ್ಟಿಸುತ್ತಾರೆ ಮಂಸೋರೆ ಮತ್ತು ಅವರ ತಂಡ.

ಸ್ಯಾಂಡಲ್‌ವುಡ್ ಬಾದ್‌ಶಾ ಮೆಚ್ಚಿದ ‘ಆಕ್ಟ್ 1978’ ಚಿತ್ರ

ಇಲ್ಲಿ ಸಾಮಾನ್ಯ ಹೆಣ್ಣಿನ ಪಾತ್ರದಲ್ಲಿ ನಾವೆಲ್ಲ ನಿಂತರೆ ‘ಆಕ್ಟ್ 1978’ ಯಾರದ್ದೋ ಕತೆಯಲ್ಲ, ಅದು ನಮ್ಮದೇ ಜೀವನ, ನೋವಿನ ವ್ಯಥೆಯಾಗಿ ನಮ್ಮೆದುರೇ ದೃಶ್ಯಗಳಾಗಿ ತೆರೆದುಕೊಳ್ಳುತ್ತದೆ. ಎಲ್ಲರಿಗೂ ಗೊತ್ತಿರುವ ತೀರಾ ಸಾಮಾನ್ಯ ಕತೆಯನ್ನು ಅಷ್ಟೇ ಸರಳವಾಗಿ ತೆರೆಗೆ ಅಳವಡಿಸುವುದು ತುಂಬಾ ಸವಾಲು. ಒಂದು ದೃಶ್ಯ ಅಥವಾ ಒಂದು ಡೈಲಾಗ್‌ನಲ್ಲಿ ಹೇಳಿ ಮುಗಿಸಬಹುದಾದ ಕತೆಯೊಂದನ್ನು ಅನಗತ್ಯ ಅಬ್ಬರಗಳು ಇಲ್ಲದೆ, ಅದೇ ಸಂದರ್ಭದಲ್ಲಿ ಸಿನಿಮಾ ತಿರುವುಗಳನ್ನೋ ಒಳಗೊಂಡು ನಿರೂಪಿಸಿರುವುದು ಈ ಚಿತ್ರದ ಪ್ಲಸ್‌ ಪಾಯಿಂಟ್‌. ಆ ಮಟ್ಟಿಗೆ ನಿರ್ದೇಶಕ ಮಂಸೋರೆ ಇಲ್ಲಿ ಬದಲಾಗಿದ್ದಾರೆ. ಅದಕ್ಕೆ ಸಂಭಾಷಣೆ ಹಾಗೂ ಚಿತ್ರಕತೆಯಲ್ಲಿ ತೊಡಗಿಸಿಕೊಂಡಿರುವ ಟಿ ಕೆ ದಯಾನಂದ ಹಾಗೂ ವೀರೇಂದ್ರ ಮಲ್ಲಣ್ಣ ಅವರ ಶ್ರಮ ಬೆನ್ನೆಲುಬಾಗಿ ನಿಂತಿದೆ.

ಭ್ರಷ್ಟತೆಯ ವಿರುದ್ಧ ಬೆಳ್ಳಿತೆರೆ ಹಿಂದಿನಿಂದಲೂ ಸಾಕಷ್ಟುಸಂದರ್ಭಗಳಲ್ಲಿ ಗರ್ಜಿಸುತ್ತ ಬಂದಿದೆ. ‘ಚಕ್ರವ್ಯೂಹ’, ‘ಅಂತ’, ‘ವಿಷ್ಣು ಸೇನೆ’, ‘ಇಂಡಿಯನ್‌’ ಹಾಗೂ ‘ಅನ್ನಿಯನ್‌’ ಹೀಗೆ ಒಂದಿಷ್ಟುಚಿತ್ರಗಳನ್ನು ಗುರುತಿಸಬಹುದು. ಹೀರೋ ಕೇಂದ್ರಿತ ರೆಬೆಲ್‌ ಕತೆ ಅಥವಾ ಡೈಲಾಗ್‌ಗಳನ್ನು ಹೇಳಿರುವ ಈ ಚಿತ್ರಗಳಿಗಿಂತಲೂ ‘ಆಕ್ಟ್ 1978’ ಭಿನ್ನವಾಗಿ ನಿಲ್ಲುತ್ತದೆ ಎಂದರೆ ಅದಕ್ಕೆ ಕಾರಣ ಮುರಿದು ಬಿದ್ದ ಜೋಪಡಿಯಂತಿರುವ ಬಿ ಸುರೇಶ್‌ ಅವರ ಕನ್ನಡಕದೊಳಗಿನ ಮೌನ, ಗೀತಾ ಪಾತ್ರಧಾರಿ ಯಜ್ಞಾ ಶೆಟ್ಟಿಅವರ ಒಡಲ ನೋವು. ಗೀತಾಳ ಒಡಲು ಬಸುರಿಯ ಉಸಿರು, ನೋಡುಗನ ಎದೆಗೆ ತೀಕ್ಷ$್ಣವಾಗಿ ನಾಟುತ್ತದೆ. ಒಂದು ಕೈಯಲ್ಲಿ ಹೊಟ್ಟೆಹಿಡಿದುಕೊಂಡು ಎದುರಿಸಿರು ಬಿಡುತ್ತ ಶೌಚಾಲಯದತ್ತ ಹೆಜ್ಜೆ ಹಾಕುವಾಗ ‘ಯಜ್ಞಾ ಶೆಟ್ಟಿಎಂಥ ಪಾತ್ರ ಮಾಡಿದ್ದಾರಲ್ಲ’ ಎನ್ನುವ ಉದ್ಘಾರ ನೋಡುಗನಿಂದ ಹೊರಡುತ್ತದೆ. ಬಹುಶಃ ನಿರ್ದೇಶಕನ ಚಿತ್ರದ ಉದ್ದೇಶ ಗೆಲ್ಲುವುದು ಇಲ್ಲೇ.

'ಆ್ಯಕ್ಟ್ 1978 'ಕತೆ ಕೇಳಿದ ಮೇಲೆ ಸಿನಿಮಾ ಒಪ್ಪಿಕೊಳ್ಳದೇ ಇರಲಾಗಲಿಲ್ಲ: ಯಜ್ಞಾ ಶೆಟ್ಟಿ 

ನ್ಯಾಯಕ್ಕಾಗಿ ಸರ್ಕಾರಿ ಕಚೇರಿ ಮುಂದೆ ಮಹಾತ್ಮ ಗಾಂಧಿ ರೂಪದಲ್ಲಿ ವ್ಯಕ್ತಿಯೊಬ್ಬ 317 ದಿನಗಳಿಂದ ಮೌನವಾಗಿ ಪ್ರತಿಭಟಿಸುತ್ತಿದ್ದಾರೆ. ಅದೇ ಕಚೇರಿಯೊಳಗೆ 30 ವರ್ಷದ ತುಂಬು ಗರ್ಭಿಣಿ ತನ್ನ ದೇಹಕ್ಕೆ ಬಾಂಬ್‌ ಕಟ್ಟಿಕೊಂಡು ಇಡೀ ವ್ಯವಸ್ಥೆಯನ್ನು ಹೈಜಾಕ್‌ ಮಾಡಿದ್ದಾಳೆ. ಗಾಂಧಿ ಹೊರಗಿದ್ದಾರೆ, ಬಾಂಬ್‌- ಪಿಸ್ತೂಲು ಹಿಡಿದ ಮಹಿಳೆ ಒಳಗಿದ್ದಾಳೆ. ಇಲ್ಲಿ ಯಾವುದು ಸರಿ ಎನ್ನುವವರು ಅಥವಾ ಸರ್ಕಾರಿ ಕಚೇರಿಗಳಲ್ಲಿ ಈಗಲೂ ಇಂಥ ವ್ಯವಸ್ಥೆ ಇದಿಯಾ ಎಂದು ಕೇಳುವವರು ಒಮ್ಮೆ ಈ ಚಿತ್ರವನ್ನು ನೋಡಿ.

ತಾಂತ್ರಿಕವಾಗಿ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುವುದು ಛಾಯಾಗ್ರಾಹಕ ಸತ್ಯ ಹೆಗಡೆ ಕ್ಯಾಮೆರಾ ಕಣ್ಣು ಹಾಗೂ ಕಲಾ ನಿರ್ದೇಶಕ ಸಂತೋಷ್‌ ಪಾಂಚಾಲ್‌ ಕಲಾ ನಿರ್ದೇಶನ. ಸಿನಿಮಾ ಆರಂಭದಲ್ಲೇ ಬರುವ ಜಯಂತ್‌ ಕಾಯ್ಕಿಣಿ ಬರೆದಿರುವ ಹಾಡು, ಇಡೀ ಚಿತ್ರದ ಜೀವಂತಿಕೆಯನ್ನು ಹೇಳುತ್ತದೆ. ಆ ಜೀವಂತಿಕೆಯೊಳಗಿನ ಕಷ್ಟವನ್ನು ಹೇಳುವುದು ಮಾತ್ರ ಗೀತಾಳ ಪಾತ್ರ. ಪಿಡಿ ಸತೀಶ್‌, ರಾಘು ಶಿವಮೊಗ್ಗ, ಅಶ್ವಿನ್‌, ಪ್ರಮೋದ್‌ ಶೆಟ್ಟಿ, ಸಂಚಾರಿ ವಿಜಯ್‌, ನಂದ, ಶರಣ್ಯ ಅವರ ಪಾತ್ರಗಳು ‘ಆಕ್ಟ್ 1978’ ಚಿತ್ರದಲ್ಲಿನ ಒಂದೊಂದು ಪುಟ. ಲಾಕ್‌ಡೌನ್‌ ನಂತರ ಬಂದ ಮೊದಲ ಸಿನಿಮಾ ಎನ್ನುವ ಸಿಂಪಥಿ, ಥಿಯೇಟರ್‌ಗಳ ಬಾಗಿಲು ತೆಗೆಸಿದ ಚಿತ್ರ ಎನ್ನುವ ಹೆಮ್ಮೆಯ ಆಚೆಗೂ ನೋಡಬೇಕಾದ ಸಿನಿಮಾ ಇದು.

ಜನರ ಸಿಟ್ಟು, ಅವರ ನೋವು ಸಿನಿಮಾ ಆಗಿದೆ: ಆಕ್ಟ್ 1978 ಸಿನಿಮಾ ಬಗ್ಗೆ ಮಂಸೋರೆ ಮಾತು

ಚಿತ್ರ: ಆಕ್ಟ್ 1978

ತಾರಾಗಣ: ಯಜ್ಞಾ ಶೆಟ್ಟಿ, ಬಿ ಸುರೇಶ್‌, ಅವಿನಾಶ್‌, ಅಚ್ಯುತ್‌ ಕುಮಾರ್‌, ದತ್ತಣ್ಣ, ಶ್ರುತಿ, ಸಂಚಾರಿ ವಿಜಯ್‌, ಪ್ರಮೋದ್‌ ಶೆಟ್ಟಿ, ಶೋಭರಾಜ್‌, ಪಿಡಿ ಸತೀಶ್‌, ಅಶ್ವಿನ್‌, ನಂದ.

ನಿರ್ದೇಶನ: ಮಂಸೋರೆ

ನಿರ್ಮಾಣ: ದೇವರಾಜ್‌ ಆರ್‌

ಛಾಯಾಗ್ರಾಹಣ: ಸತ್ಯ ಹೆಗಡೆ

ಸಂಗೀತ: ರಾಹುಲ್‌ ಶಿವಕುಮಾರ್‌, ರೋನಾಡ ಬಗ್ಗೇಶ್‌

ರೇಟಿಂಗ್‌: 4