ಪ್ರಕರಣದಲ್ಲಿ ಗೋವರ್ಧನಮೂರ್ತಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ (ಬಾಗಲೂರು ಪೊಲೀಸರು) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಪುರಸ್ಕರಿಸಿದ ಹಿರಿಯ ನ್ಯಾಯಮೂರ್ತಿ ಎಸ್‌.ಎನ್‌. ಸತ್ಯನಾರಾಯಣ ಮತ್ತು ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ವಿಭಾಗೀಯ ನ್ಯಾಯಪೀಠ 237 ಪುಟಗಳ ತೀರ್ಪನ್ನು ಶುಕ್ರವಾರ ಪ್ರಕಟಿಸಿತು.

ಘಟನೆ ನಡೆದ ಕ್ಷಣದಿಂದಲೇ ಆರೋಪಿ 15 ದಿನ ಕಾಲ ಕೇರಳದಲ್ಲಿ ತಲೆಮರಿಸಿಕೊಂಡಿದ್ದರು. ಈ ನಡತೆ ಕೊಲೆ ಎಸಗಿರುವುದನ್ನು ಪುಷ್ಟೀಕರಿಸುತ್ತದೆ. ಗೋವರ್ಧನ ಮೂರ್ತಿ ಹೊಂದಿದ್ದ ಪರವಾನಗಿಯುತ ಗನ್‌ನಿಂದಲೇ ಗುಂಡು ಹಾರಿದೆ. ಆ ಗನ್‌ನ ಗುಂಡಿಗೂ ವಿನೋದಕುಮಾರ್‌ ಮೃತದೇಹದಲ್ಲಿ ದೊರೆತ ಗುಂಡು ಒಂದೇ ಆಗಿದೆ. ಪ್ರತ್ಯಕ್ಷದರ್ಶಿ ಶಂಕರ ರೆಡ್ಡಿ ಮೃತನನ್ನು ಆಸ್ಪತ್ರೆ ಸಾಗಿಸಿದ್ದು, ಗೋವರ್ಧನ್‌ ಮೂರ್ತಿಯೇ ವಿನೋದ್‌ಕುಮಾರ್‌ಗೆ ಗುಂಡು ಹಾರಿಸಿದರೆಂದು ಹೇಳಿಕೆ ನೀಡಿದ್ದರು. ಗೋವರ್ಧನಮೂರ್ತಿ ತನಗೆ ಗುಂಡು ಹಾರಿಸಿರುವುದಾಗಿ ವಿನೋದಕುಮಾರ್‌ ಮರಣಪೂರ್ವ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಪ್ರಕರಣದಲ್ಲಿ ಗೋವರ್ಧನ ಮೂರ್ತಿ ತಪ್ಪಿತಸ್ಥನಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ಹಾಗೂ .5 ಲಕ್ಷ ದಂಡ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದಲ್ಲಿ ಗೋವರ್ಧನಮೂರ್ತಿ ವಿರುದ್ಧ ಆರೋಪಗಳನ್ನು ಪ್ರಾಸಿಕ್ಯೂಷನ್‌ ಪೂರಕ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸಿದೆ. ಪ್ರಾಸಿಕ್ಯೂಷನ್‌ ಒದಗಿಸಿದ ಸಾಕ್ಷ್ಯಾಧಾರಗಳನ್ನು ಕೂಲಂಕಷವಾಗಿ ಪರಿಗಣಿಸಿ ಪುರಸ್ಕರಿಸಿರುವ ಹೈಕೋರ್ಟ್‌, ಗೋವರ್ಧನಮೂರ್ತಿಯನ್ನು ದೋಷಿಯಾಗಿ ದೃಢಪಡಿಸಿಕೊಂಡು ಜೀವಾವಧಿ ಶಿಕ್ಷೆ ವಿಧಿಸಿದೆ.-ವಿ.ಎಂ.ಶೀಲವಂತ್‌, ರಾಜ್ಯ ಸರ್ಕಾರಿ ಅಭಿಯೋಜಕರು.

ದಂಡ ಮೊತ್ತದಲ್ಲಿ .4.5 ಲಕ್ಷಗಳನ್ನು ಮೃತನ ತಾಯಿಗೆ ಪಾವತಿಸಬೇಕು. ಉಳಿದ .50 ಸಾವಿರವನ್ನು ಸರ್ಕಾರಕ್ಕೆ ಪಾವತಿಸಬೇಕು. ಕೂಡಲೇ ಬಾಗಲೂರು ಪೊಲೀಸರು ಗೋವರ್ಧನ ಮೂರ್ತಿಯನ್ನು ಬಂಧಿಸಿ, ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ನ್ಯಾಯಾಲಯ ಎಲ್ಲಾ ಕಾನೂನು ಪ್ರಕ್ರಿಯೆ ಪೂರೈಸಿ, ದೋಷಿಯನ್ನು ಜೈಲಿಗೆ ಕಳುಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸ್ಯಾಂಡಲ್‌ವುಡ್ ನಟನ ಹತ್ಯೆ ಮಾಡಿದ ನಿರ್ಮಾಪಕ ಗೋವರ್ಧನ ಮೂರ್ತಿಗೆ ಜೀವಾವಧಿ ಶಿಕ್ಷೆ..!

ಭಾವಿ ಮಾವನ ಮುಂದೆಯೇ ಗುಂಡು

ನಗರದ ಎಲ್‌ಜಿ ರೋಸ್‌ ಹೆರಿಟೆಜ್‌ನಲ್ಲಿ 2008ರ ಅ.7ರಂದು ಗೋವರ್ಧನ ಮೂರ್ತಿ ಔತಣಕೂಟ ಏರ್ಪಡಿದ್ದು, ವಿನೋದ್‌ ಕುಮಾರ್‌ ಹಾಗೂ ಆತನ ಭಾವಿ ಮಾವ ಶಂಕರರೆಡ್ಡಿ ಭಾಗಿಯಾಗಿದ್ದರು. ಶಂಕರ್‌ ರೆಡ್ಡಿ ಮತ್ತು ಗೋವರ್ಧನ್‌ ಮೂರ್ತಿ ನಡುವೆ ಭೂ ವ್ಯವಹಾರ ಸಂಬಂಧ ಜಗಳ ನಡೆದಿತ್ತು. ಇದರಿಂದ ಶಂಕರರೆಡ್ಡಿ ಮುನಿಸಿಕೊಂಡು ಹೊರಗೆ ಬಂದಾಗ ಅವರೊಂದಿಗೆ ಹೊರಟಿದ್ದ ವಿನೋದ್‌ಕುಮಾರ್‌ಗೆ ಪಾನಮತ್ತನಾಗಿದ್ದ ಗೋವರ್ಧನ ಮೂರ್ತಿ ತನ್ನ ಗನ್‌ನಿಂದ ಗುಂಡು ಹಾರಿಸಿದ್ದರು. ಗಾಯಗೊಂಡ ವಿನೋದ್‌ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಾಗಲೂರು ಪೊಲೀಸರು ತನಿಖೆ ನಡೆಸಿ ಗೋವರ್ಧನ ಮೂರ್ತಿ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು.

ಗೋವರ್ಧನ ಮೂರ್ತಿಯನ್ನು ಖುಲಾಸೆಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ 2012ರ ಡಿ.26ರಂದು ಆದೇಶಿಸಿತ್ತು. ಅದನ್ನು ರದ್ದುಪಡಿಸಲು ಕೋರಿ 2013ರ ಜೂ.14ರಂದು ಬಾಗಲೂರು ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು. 2020ರ ಫೆ.17ರಂದು ವಿಚಾರಣೆ ಪೂರ್ಣಗೊಳಿಸಿದ್ದ ಕಾಯ್ದಿರಿಸಿದ್ದ ತೀರ್ಪುನ್ನು ಹೈಕೋರ್ಟ್‌ ಪ್ರಕಟಿಸಿದೆ. ಬಾಗಲೂರು ಪೊಲೀಸರ ಪರ ರಾಜ್ಯ ಸರ್ಕಾರಿ ಅಭಿಯೋಕ ವಿ.ಎಂ.ಶೀಲವಂತ್‌ ವಾದ ಮಂಡಿಸಿದ್ದರು.