ಬೆಂಗಳೂರು(ಮಾ.20): 2008ರಲ್ಲಿ ಕನ್ನಡ ಚಲನಚಿತ್ರ ರಂಗವನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ನಟ ವಿನೋದ್ ಕುಮಾರ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ಮಹತ್ತರವಾದ ತೀರ್ಪು ನೀಡಿದ್ದು, ಅಪರಾಧಿ ನಿರ್ಮಾಪಕ ಗೋವರ್ಧನ ಮೂರ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 

ಶಿಕ್ಷೆಗೂ ಮುನ್ನ ನೇಣಿಗೇರಿಸದಂತೆ ಗೋಗರೆದ ನಿರ್ಭಯಾ ರೇಪಿಸ್ಟ್..!

ಈ ಮೊದಲು ಸೆಷನ್ ಕೋರ್ಟ್‌ನಲ್ಲಿ ಗೋವರ್ಧನ್ ಮೂರ್ತಿ ಸೇರಿ ಏಳು ಮಂದಿ ಪ್ರಕರಣದಿಂದ ಖುಲಾಸೆಗೊಂಡಿದ್ದರು. ಹೀಗಾಗಿ ಸೆಷನ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಸರ್ಕಾರದ ಪರ ವಾದ ಮಂಡಿಸಿದ ಎಸ್ ಪಿಪಿ ಪಿ.ಎಂ. ಶೀಲವಂತರ್‌ ಇದೀಗ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೇ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಅಪರಾಧಿ ಗೋವರ್ಧನ ಮೂರ್ತಿಗೆ ಜೀವಾವಧಿ ಶಿಕ್ಷೆ ಜತೆಗೆ 5 ಲಕ್ಷ ರುಪಾಯಿ ದಂಡ ವಿಧಿಸಲಾಗಿದ್ದು, ದಂಡದ ಮೊತ್ತದಲ್ಲಿ 4.50 ಲಕ್ಷ ರುಪಾಯಿಗಳನ್ನು ವಿನೋದ್ ತಾಯಿಗೆ ನೀಡಲು ಕೋರ್ಟ್ ಆದೇಶಿಸಿದೆ.

ಏನಿದು ಪ್ರಕರಣ..?
2008ರಲ್ಲಿ ಬೆಂಗಳೂರಿನ ಹೊರವಲಯದ ಬಾಗಲೂರಿನ ರೆಸಾರ್ಟ್‌ವೊಂದರಲ್ಲಿ ರಾಮು ನಿರ್ಮಾಣದ ಚಿತ್ರವೊಂದರಲ್ಲಿ ನಟಿಸುತ್ತಿದ್ದ ನಟ ವಿನೋದ್ ಕುಮಾರ್ ಎಂಬಾತನ ಮೇಲೆ ಮಾದೇಸ ಸಿನಿಮಾದ ನಿರ್ಮಾಪಕ ಗೋವರ್ಧನ ಮೂರ್ತಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. 2008ರ ಅಕ್ಟೋಬರ್ 6ರಂದು ಪಾರ್ಟಿ ವೇಳೆ ಕುಡಿದ ಮತ್ತಿನಲ್ಲಿ ವಿನೋದ್ ಕುಮಾರ್‌ ಅವರನ್ನು ಹತ್ಯೆ ಮಾಡಿದ್ದರು. ಆ ಬಳಿಕ ಗೋವರ್ಧನ ಮೂರ್ತಿ ತಲೆ ಮರೆಸಿಕೊಂಡಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದರು. ಇದಾದ ಬಳಿಕ ಸೆಷನ್ ಕೋರ್ಟ್‌ನಲ್ಲಿ ವಿಚಾರಣೆ ನಡೆದು, ಪ್ರಕರಣದಿಂದ ಖುಲಾಸೆಯಾಗಿದ್ದರು.

ಬೆಂಗ್ಳೂರಿನ ಅಪರಾಧ ಲೋಕದ ಮೇಲೆ ಕೊರೋನಾ ಪರಿಣಾಮ ಎಂಥದ್ದು?

ಗೋವರ್ಧನ್ ಮೂರ್ತಿ ಟ್ರ್ಯಾಕ್ ರೆಕಾರ್ಡ್ ಏನು..?
ಸಿನಿಮಾ ನಿರ್ಮಾಣದ ಜತೆಗೆ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದ ಗೋವರ್ಧನ್ ಮೂರ್ತಿ ಟ್ರ್ಯಾಕ್ ರೆಕಾರ್ಡ್‌ ಅಷ್ಟೇನು ಉತ್ತಮವಾಗಿಲ್ಲ. ವಿನೋದ್ ಕುಮಾರ್ ಹತ್ಯೆ ಆರೋಪದಿಂದ ಖುಲಾಸೆಯಾಗಿ ಎರಡು ವರ್ಷಗಳ ಬಳಿಕ ಗೋವರ್ಧನ್ ಮೂರ್ತಿ ಮತ್ತೊಮ್ಮೆ ಸುದ್ದಿಯಾಗಿದ್ದರು. ನಿರ್ಮಾಪಕನ ವಿರುದ್ಧ ಮಹರಾಷ್ಟ್ರ ಮೂಲದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿತ್ತು. ಪ್ರಕರಣ ಕೈಗೆತ್ತಿಕೊಂಡ ಅಶೋಕ್ ನಗರ ಪೊಲೀಸರು ಗೋವರ್ಧನ್ ಮೂರ್ತಿಯನ್ನು ವಶಕ್ಕೆ ಪಡೆದು ಸೆಷನ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಆದರೆ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಪ್ರಕರಣದಿಂದ ಕ್ಲೀನ್ ಚಿಟ್ ಪಡೆದರು. ಇದಾದ ಬಳಿಕ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ಗೋವರ್ಧನ್ ಮೂರ್ತಿ 2017ರಲ್ಲಿ ಮಾಜಿ ಸಾರಿಗೆ ಸಚಿವ ಎಚ್. ಎಂ. ರೇವಣ್ಣ ಅವರ ಸಂಬಂಧಿ ಮಂಜುಳ ಅವರನ್ನು ವಿವಾಹವಾಗಿದ್ದರು.