ಶೆಟ್ರೇ, ಮೊದ್ಲು ಸಿನಿಮಾ ಮಾಡಿ, ಉಳಿದಿದ್ದೆಲ್ಲ ಆಮೇಲೆ.. : ರಕ್ಷಿತ್ ಶೆಟ್ಟಿಗೆ ಫ್ಯಾನ್ಸ್ ಹೀಗ್ಯಾಕಂತಿದ್ದಾರೆ?
ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಇನ್ನೂ ಟೇಕಾಫ್ ಆಗಿಲ್ಲ. ಕೇಳಿದ್ರೆ ರಕ್ಷಿತ್ ಶೆಟ್ಟಿ ಕಡೆಯಿಂದ ಬೇರೆ ಉತ್ತರ ಬಂದಿದೆ. ಬೇರೆ ಕೆಲಸಗಳೆಲ್ಲ ಈ ಜನ್ಮದಲ್ಲಿ ಮುಗಿಯಲ್ಲ, ಮೊದಲು ಸಿನಿಮಾ ಮಾಡಿ ಶೆಟ್ರೇ ಅಂತಿದ್ದಾರೆ ಫ್ಯಾನ್ಸ್.
ರಕ್ಷಿತ್ ಶೆಟ್ಟಿ ಕೆನಡದ ಟೊರಂಟೋದಲ್ಲಿದ್ದಾರೆ. ಇದಲ್ಲಿನ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಶೆಟ್ಟರು ಆಡಿದ ಒಂದು ಮಾತು ಫ್ಯಾನ್ಸ್ ತಲೆ ಕೆಡಿಸಿದೆ. ಮೊದ್ಲು ಸಿನಿಮಾ ಮಾಡಿ ಶೆಟ್ರೇ. ಉಳಿದಿದ್ದೆಲ್ಲ ಆಮೇಲೆ ಅಂತ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಒತ್ತಡ ಹಾಕ್ತಿದ್ದಾರೆ. ಹಾಗೆ ನೋಡಿದರೆ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ ೨' ಬಂದು ಸಾಕಷ್ಟು ಸಮಯ ಆಯ್ತು. ಇಷ್ಟು ಟೈಮ್ ಆದ್ರೂ ಹೊಸ ಸಿನಿಮಾ ಕೆಲಸ ಶುರುವಾದ ಹಾಗಿಲ್ಲ. ಆದರೆ ಶೆಟ್ರ ಬಿಲ್ಡಪ್ ಮಾತ್ರ ಜೋರಾಗಿದೆ ಅಂತ ಫ್ಯಾನ್ಸ್ ಬೇಜಾರಾಗಿದ್ದಾರೆ. ವರ್ಷಗಳ ಹಿಂದೆಯೇ ರಕ್ಷಿತ್ ವಿದೇಶಕ್ಕೆ ಸ್ಕ್ರಿಪ್ಟ್ ಕಂಪ್ಲೀಟ್ ಮಾಡಲಿಕ್ಕೆ ಅಂತಾನೇ ಹೋಗಿದ್ರು. ಇಲ್ಲಿದ್ರೆ ಸುಮ್ನೆ ಯಾರ್ಯಾರೊ ಫೋನ್ ಮಾಡಿ ಡಿಸ್ಟರ್ಬ್ ಮಾಡ್ತಾರೆ. ವಿದೇಶದಲ್ಲಿ ಅಂಥಾ ರಗಳೆಗಳಿರಲ್ಲ ಅಂತ ಫೋನ್ ಸ್ವಿಚಾಫ್ ಮಾಡಿ ತಿಂಗಳಾನುಗಟ್ಟಲೆ ವಿದೇಶದಲ್ಲಿದ್ದರು. ವಿದೇಶದಿಂದ ಬಂದ ಮೇಲೆ ಇನ್ನೇನು ಸಿನಿಮಾ ಟೇಕಾಫ್ ಆಗುತ್ತೆ ಅಂತ ಅಭಿಮಾನಿಗಳು ಎದುರು ನೋಡಿದ್ದೇ ಬಂತು. ಇಲ್ಲೀವರೆಗೆ ಕಮಕ್ ಕಿಮಕ್ ಇಲ್ಲ.
ಇನ್ನೊಂದು ಕಡೆ ಟೊರೆಂಟೋದ ಕನ್ನಡದ ಸಂಘದ ಕಾರ್ಯಕ್ರಮಕ್ಕೆ ರಕ್ಷಿತ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ನಡೆದ ಸಂವಾದ ಕಾರ್ಯಕ್ರಮದಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ವಿಷಯ ಪ್ರಸ್ತಾಪ ಆಗಿದೆ. 'ರಿಚರ್ಡ್ ಆಂಟನಿ' ಸಿನಿಮಾ ಕಥೆ ಇನ್ನು ಪೂರ್ಣ ಆಗಿಲ್ಲ. ಆ ಪಾತ್ರ ಬರೆಯಲು ಹೆಚ್ಚು ಅಧ್ಯಯನ ಬೇಕು. ಅದಕ್ಕಾಗಿ ಊರೂರು ಸುತ್ತಾಡುತ್ತಿದ್ದೀನಿ ಎನ್ನುವ ಅರ್ಥದಲ್ಲಿ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಅಯ್ಯೋ, ಇನ್ನು ಅಧ್ಯಯನದಲ್ಲೇ ಇದ್ದೀರಾ? ಕಥೆ ಬರೆದು ಮುಗಿಸಿ ಚಿತ್ರೀಕರಣ ಶುರು ಮಾಡುವುದು ಯಾವಾಗ? ಸಿನಿಮಾ ತೆರೆಗೆ ಬರೋದು ಯಾವಾಗ? ಎಂದು ಕೇಳುತ್ತಿದ್ದಾರೆ.
'ದಿ ಗರ್ಲ್ ಫ್ರೆಂಡ್' ಪರಿಚಯಿಸಿದ ವಿಜಯ್ ದೇವರಕೊಂಡ; ಹೊರಬಿತ್ತು ರಶ್ಮಿಕಾ ಮಂದಣ್ಣ ಪ್ರೇಮಕಥನ!
ರಿಚರ್ಡ್ ಆಂಟನಿ ಚಿತ್ರದ ಕಥೆ ಬರೆಯಲು ಮುಂದಾದಾಗ ರಕ್ಷಿತ್ ಅವರಿಗೆ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಂಡವಂತೆ. ರಿಚ್ಚಿ ಬೇರೆ ಬೇರೆ ಜಾಗಗಳಿಗೆ ಹೋಗುತ್ತಾನೆ. ಅಲ್ಲಿ ಬೇರೆ ಬೇರೆ ಜನರನ್ನು ಭೇಟಿ ಆಗುತ್ತಾನೆ. ಆದರೆ ತಾನುನು ಕಳೆದ 10 ವರ್ಷಗಳಿಂದ ಯಾವುದೇ ಪಾತ್ರಗಳನ್ನು ಸ್ಟಡಿ ಮಾಡಲಿಲ್ಲ. ಹಾಗಾಗಿ ಈಗ ಬೇರೆ ಬೇರೆ ಜನರನ್ನು ಭೇಟಿ ಮಾಡಿ ಆ ಬಗ್ಗೆ ತಿಳಿದುಕೊಳ್ತಿದ್ದೀನಿ ಅಂತ ತೀವ್ರವಾಗಿ ಅನಿಸಿತಂತೆ. ಹೀಗಾಗಿ ರಕ್ಷಿತ್ ಶೆಟ್ಟಿ ಅಧ್ಯಯನಕ್ಕೆ ಮುಂದಾದರಂತೆ. 'ಮಾಫಿಯಾ ಡಾನ್‌ಗಳ ಕಥೆ ಏನು? ಅವರ ಹಿನ್ನೆಲೆ ಹೇಗಿರುತ್ತದೆ ಗೊತ್ತಿಲ್ಲ. ರಿಚ್ಚಿ ಇವರನ್ನೆಲ್ಲಾ ಭೇಟಿ ಆದರೆ ಹೇಗಿರುತ್ತದೆ ಎನ್ನುವುದನ್ನು ಬರೆಯಬೇಕಿದೆ. ಕಂಡಿತ ಅವರನ್ನು ಭೇಟಿ ಮಾಡಲು ಆಗಲ್ಲ, ಆದರೆ ಅಧ್ಯಯನ ಮಾಡಬಹುದು. ಉಡುಪಿಯಲ್ಲಿ ಒಂದಷ್ಟು ಜನರನ್ನು ನೋಡಿ ಏನಾದರೂ ಬರೆಯಬಹುದು. ಅದೇ ರೀತಿ ದುಬೈ, ಯುಎಸ್‌ಗೆ ಬಂದರೆ ಕೊನೆ ಪಕ್ಷ ಅಲ್ಲಿನ ಜನರನ್ನು ನೋಡಿ ಏನಾದರೂ ವಿಷಯ ಸಿಗಬಹುದು ಎನ್ನುವ ಕಾರಣಕ್ಕೆ ಈ ಸುತ್ತಾಟ' ಎಂದಿದ್ದಾರೆ ರಕ್ಷಿತ್ ಶೆಟ್ಟಿ.
'ಉಳಿದವರು ಕಂಡಂತೆ' ಚಿತ್ರದ ಮುಂದುವರೆದ ಭಾಗ 'ರಿಚರ್ಡ್ ಆಂಟನಿ'. ಇದರಲ್ಲಿ ರಿಚ್ಚಿಯ ಹಿಂದಿನ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ರಕ್ಷಿತ್ ಶೆಟ್ಟಿ. ಇನ್ನು 'ಉಳಿದವರು ಕಂಡಂತೆ' ಸಿನಿಮಾ ಬಂದು 10 ವರ್ಷ ಕಳೆದಿದೆ. ಬಾಕ್ಸಾಫೀಸ್‌ನಲ್ಲಿ ಗೆಲ್ಲದೇ ಇದ್ದರೂ ಆ ಸಿನಿಮಾ ಕನ್ನಡದ ಕ್ಲಾಸ್ ಸಿನಿಮಾ ಅನಿಸಿಕೊಂಡಿದೆ. ಅದೇ ಕಾರಣಕ್ಕೆ ಅಭಿಮಾನಿಗಳು 'ರಿಚರ್ಡ್ ಆಂಟನಿ' ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ ರಕ್ಷಿತ್ ಹೇಳುತ್ತಿರುವುದು ನೋಡಿದರೆ ಇನ್ನೆರಡು ವರ್ಷ ಈ ಸಿನಿಮಾ ಹೊರಬರುವ ಸಾಧ್ಯತೆ ಇಲ್ಲ. ಹೀಗಾದರೆ ಹೇಗೆ ಶೆಟ್ರೇ, ಒಂದು ಸಿನಿಮಾ ಆದ್ಮೇಲೆ ಇಷ್ಟೆಲ್ಲ ಗ್ಯಾಪ್ ಬೇಕಾ ಅಂತ ಫ್ಯಾನ್ಸ್ ಕೇಳ್ತಿದ್ದಾರೆ.
ಲಕ್ಷ್ಮೀನಿವಾಸ ಚಿನ್ನುಮರಿ ಪಾತ್ರಕ್ಕೆ ತಂಗಿ ಬದ್ಲು ಅಕ್ಕ ಬರ್ತಾಳಾ? ನೆಟ್ಟಿಗರಿಗೆ ಡೌಟ್ ಬಂದಿದ್ಯಾಕೆ?
ಈ ಅಧ್ಯಯನ ಮಾಡಿದ್ದು ಸಾಕು, ಸಿನಿಮಾ ಮಾಡಿ. ಈಗಾಗಲೇ ಸಿಕ್ಕಾಪಟ್ಟೆ ಟೈಮ್ ಎಳ್ತಿದ್ದೀರ. ಇನ್ಮೇಲಾದ್ರೂ ಸಿನಿಮಾ ಕೆಲಸ ಶುರು ಮಾಡಿ ಅಂತ ದುಂಬಾಲು ಬೀಳ್ತಿದ್ದಾರೆ. ಆದರೆ ಇದಕ್ಕೆ ರಕ್ಷಿತ್ ರೆಸ್ಪಾನ್ಸ್ ಮಾಡಿಲ್ಲ. ಯಾವುದೇ ಸಿನಿಮಾವನ್ನೂ ತೀವ್ರವಾಗಿ ಮಾಡೋದು ರಕ್ಷಿತ್ ಕ್ರಮ. ಅವರ ಸಿನಿಮಾಗಳಲ್ಲೊಂದು ಹೊಸತನ ಇರುತ್ತೆ. ಅಭಿಮಾನಿಗಳ ನಿರೀಕ್ಷೆ ಹುಸಿಯಾಗಲ್ಲ. ಹೀಗಾಗಿ ಫ್ಯಾನ್ಸ್ ಅವರ ಸಿನಿಮಾಕ್ಕೆ ಜಾತಕ ಪಕ್ಷಿಗಳ ಹಾಗೆ ಕಾಯೋ ಹಾಗಾಗಿದೆ.