- ಚಿತ್ರರಂಗದ ಮೇಲಿನ ಕೊರೋನಾ ಪರಿಣಾಮಕ್ಕೆ ಇದು ನಿರ್ಮಾಪಕರೊಬ್ಬರು ಕೊಟ್ಟಪ್ರತಿಕ್ರಿಯೆ.

ಮಾ.14 ರಿಂದಲೇ ಚಿತ್ರಮಂದಿರಗಳು ಹಾಗೂ ಮಾಲ್‌ಗಳು ಬಂದ್‌ ಆಗುವುದರ ಜತೆಗೆ ಚಿತ್ರೋದ್ಯಮದ ಚಟುವಟಿಕೆಗಳೇ ಸ್ತಬ್ದವಾದ ಪರಿಣಾಮ ಒಂದೇ ಒಂದು ವಾರಕ್ಕೆ ಚಿತ್ರರಂಗ ಬರೋಬ್ಬರಿ 50 ರಿಂದ 60 ಕೋಟಿ ರೂ.ನಷ್ಟಅನುಭವಿಸಿದೆ ಎನ್ನುತ್ತಿವೆ ಮೂಲಗಳು. ಅದು ಇನ್ನು ನಿಲ್ಲುವ ಹಾಗೆ ಕಾಣುತ್ತಿಲ್ಲ. ರಾಜ್ಯದ ಆರ್ಥಿಕತೆಯನ್ನೇ ನುಂಗಿ ನೀರು ಕುಡಿಯುವ ಹಾಗೆ, ಚಿತ್ರೋದ್ಯಮದ ಆರ್ಥಿಕತೆಯನ್ನು ನುಂಗಲು ಹೊಂಚು ಹಾಕಿದೆ. ಕೊರೋನಾ ವೈರಸ್‌ ಹರಡುವ ಭೀತಿ ನಿಯಂತ್ರಣಕ್ಕೆ ಬಾರದ ಪರಿಣಾಮ ಚಿತ್ರಮಂದಿರ ಹಾಗೂ ಮಾಲ್‌ಗಳ ಮೇಲಿನ ನಿರ್ಬಂಧ ಎರಡನೇ ವಾರಕ್ಕೂ ಮುಂದುವರೆದಿದೆ. ಯಥಾಪ್ರಕಾರ ಎರಡನೇ ವಾರವೂ ರಾಜ್ಯಾದ್ಯಂತ ಚಿತ್ರಮಂದಿರಗಳು, ಮಾಲ್‌ಗಳು ಬಂದ್‌ ಆಗುತ್ತಿವೆ. ಸಹಜವಾಗಿಯೇ ಚಿತ್ರೀಕರಣ ಸೇರಿದಂತೆ ಚಿತ್ರೋದ್ಯಮದ ಎಲ್ಲಾ ಚಟುವಟಿಕೆಗಳಿಗೂ ಇದರ ಬಿಸಿ ತಟ್ಟಲಿದೆ.

ಸಂಗೀತ ಲೋಕಕ್ಕೆ ಮರಳಿದ ಅರ್ಜುನ, ಮತ್ತೆ ಸಿಗಲಿದೆ ರಸದೌತಣ

ಅಲ್ಲಿಗೆ ಎರಡನೇ ವಾರಕ್ಕೂ ನಷ್ಟದ ಹೊಡೆತ ಬೀಳಲಿದೆ. ಅಲ್ಲಿಗೆ ಕನ್ನಡ ಚಿತ್ರರಂಗವೂ ಅಂದಾಜು 100 ಕೋಟಿ ರೂ. ನಷ್ಟಅನುಭವಿಸುವುದು ಗ್ಯಾರಂಟಿ ಎನ್ನುತ್ತಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.

‘ಇದನ್ನು ಹೀಗೆ ಅಂತ ಹೇಳೋದಿಕ್ಕೆ ಆಗುತ್ತಿಲ್ಲ. ಸದ್ಯಕ್ಕೆ ಮಾ.31ರವರೆಗೂ ನಿರ್ಬಂಧದ ಗಡುವು ಇದೆ. ಅಲ್ಲಿ ತನಕವೂ ಚಿತ್ರಮಂದಿರಗಳು, ಮಾಲ್‌ಗಳ ಜತೆಗೆ ಚಿತ್ರೋದ್ಯಮದ ಎಲ್ಲಾ ಚಟುವಟಿಕೆಗಳು ಬಂದ್‌ ಆಗುತ್ತಿವೆ. ಅದೆಲ್ಲ ಲೆಕ್ಕ ಹಾಕಿಕೊಂಡರೆ ನಷ್ಟಪ್ರಮಾಣದ ಅಧಿಕವಾಗಲಿದೆ. ಎರಡನೇ ವಾರಕ್ಕೆ ಅಂದಾಜು 100 ಕೋಟಿ ರೂ. ನಷ್ಟಆಗಬಹುದು. ಅಲ್ಲಿಂದ ಮುಂದುವರೆದರೆ ಆ ಪ್ರಮಾಣ 150 ಕೋಟಿ ರೂ. ಗೂ ಹೆಚ್ಚಾಗಬಹುದು’ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌.

1. ಚಿತ್ರರಂಗಕ್ಕೆ ಇದು ದಾಖಲೆ ನಷ್ಟ

85 ವರ್ಷಗಳ ಇತಿಹಾಸವುಳ್ಳ ಕನ್ನಡ ಚಿತ್ರರಂಗಕ್ಕೆ ನಷ್ಟಅನ್ನೋದು ಹೊಸತಲ್ಲ. ಆಗಾಗ ಇಂತಹ ನಷ್ಟಗಳನ್ನು ಕಂಡುಂಡು ಬೆಳೆಯುತ್ತಾ ಬಂದಿದೆ. ವರನಟ ಡಾ. ರಾಜ್‌ಕುಮಾರ್‌ ಅವರನ್ನು ದಂತಚೋರ ವೀರಪ್ಪನ್‌ ಅಪಹರಿಸಿದ್ದ ವೇಳೆ ಸತತ ಎರಡು ವಾರಗಳ ಕಾಲ ಕನ್ನಡ ಚಿತ್ರೋದ್ಯಮ ಸ್ತಬ್ಧವಾಗಿತ್ತು. ಚಿತ್ರಮಂದಿರಗಳಲ್ಲಿ ಪ್ರದರ್ಶನ ಇರಲಿಲ್ಲ. ಶೂಟಿಂಗ್‌ ಸೇರಿ ಚಿತ್ರೋದ್ಯಮದ ಚಟುವಟಿಕೆಗಳೇ ಬಂದ್‌ ಆಗಿದ್ದವು. ಇದರ ಪರಿಣಾಮ ಆಗಲೂ ಚಿತ್ರರಂಗ ಅಪಾರ ನಷ್ಟಕಂಡಿತ್ತು. ಆ ಬಗ್ಗೆ ನಿರ್ದಿಷ್ಟಲೆಕ್ಕಾಚಾರ ಇಲ್ಲವಾದರೂ, ಒಂದು ಅಂದಾಜಿನ ಪ್ರಕಾರ 25 ಕೋಟಿಗೂ ಹೆಚ್ಚು ನಷ್ಟಆಗಿತ್ತೆನ್ನುವುದನ್ನು ಹಿರಿಯ ನಿರ್ಮಾಪಕರೊಬ್ಬರು ನೆನಪಿಸಿಕೊಳ್ಳುತ್ತಾರೆ. ಆನಂತರ ವಿವಿಧ ಬೇಡಿಕೆಗಳ ಈಡೇರಿಕೆಗೆ ನಡೆದ ಒಂದು ದಿನಗಳ ಬಂದ್‌ ಆಚರಣೆಗಳ ಪರಿಣಾಮದಿಂದಾಗಿಯೂ ಚಿತ್ರರಂಗ ನಷ್ಟಕಂಡಿದೆ. ಆದರೆ ಕೊರೋನಾ ದಾಖಲೆ ಸೃಷ್ಟಿಸಿದೆ. ಕನ್ನಡ ಚಿತ್ರರಂಗ ಎಂದೂ ಕಂಡರಿಯದ ಹಾಗೆ ಭಾರಿ ನಷ್ಟಕ್ಕೆ ಮುನ್ನುಡಿ ಬರೆದಿದೆ.

2. ನಷ್ಟಅನ್ನೋದು ಬರೀ ಕಲೆಕ್ಷನ್‌ ಮಾತ್ರ ಅಲ್ಲ.

ಒಂದು ಸಿನಿಮಾ ನಿರ್ಮಾಣದ ಹಿಂದೆ ಹತ್ತಾರು ಕ್ಷೇತ್ರಗಳಲ್ಲಿ ಹಣ ಹೂಡಿಕೆ ಆಗುತ್ತೆ. ಬರೀ ಸ್ಟಾರ್‌ ನಟರ ಸಂಭಾವನೆ, ಶೂಟಿಂಗ್‌ ಖರ್ಚುವೆಚ್ಚ ಎನ್ನುವುದಷ್ಟೇ ಅಲ್ಲ.

ಲೈಟ್‌ಬಾಯ್‌, ಕ್ಲಾಪ್‌ ಬಾಯ್‌, ಸಹಾಯಕ ನಿರ್ದೇಶಕರು, ವಸ್ತ್ರ ವಿನ್ಯಾಸಕರು, ವಾಹನ ಚಾಲಕರು ಸೇರಿದಂತೆ ನೂರಾರು ಕಾರ್ಮಿಕರು ವಿವಿಧ ಬಗೆಯಲ್ಲಿ ಚಿತ್ರೀಕರಣದಲ್ಲಿ ಕೆಲಸ ಮಾಡುತ್ತಾರೆ. ಚಿತ್ರೋದ್ಯಮದ ಚಟುವಟಿಕೆ ನಿಂತರೆ ಅವರಿಗೆಲ್ಲ ಉದ್ಯೋಗವೇ ಇಲ್ಲದಂತಾಗುತ್ತದೆ. ವಾಹನ ಸಾರಿಗೆ, ಹೋಟೆಲ್‌ ಉದ್ಯಮ ಇತ್ಯಾದಿ ಬಗೆಯಲ್ಲಿ ಹಣದ ವಹಿವಾಟು ನಿಲ್ಲುತ್ತದೆ. ನಿರ್ಮಾಪಕರಿಗೆ ಹಣ ಉಳಿದರೂ, ಉದ್ಯಮಕ್ಕೆ ಇದು ಬಾರೀ ಹೊಡೆತ ನೀಡಲಿದೆ. ಹಾಗೆಯೇ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಿಂತರೂ ಅಷ್ಟೇ ಪ್ರಮಾಣದ ಆರ್ಥಿಕ ನಷ್ಟಚಿತ್ರಮಂದಿರದ ಮಾಲೀಕರಿಗೂ, ವಿತರಕರಿಗೂ ಹಾಗೂ ನಿರ್ಮಾಪಕರಿಗೂ ಆಗಲಿದೆ.

3. 800 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಬಂದ್‌

ಕೊರೋನಾ ಪರಿಣಾಮ ಇವತ್ತು ರಾಜ್ಯದಲ್ಲಿ ಮಲ್ಚಿಪ್ಲೆಕ್ಸ್‌ ಹಾಗೂ ಏಕಪರದೆಯ ಚಿತ್ರಮಂದಿರ ಸೇರಿದಂತೆ ಒಟ್ಟು 800ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ಪ್ರದರ್ಶನ ಬಂದ್‌ ಆಗಿದೆ. ಪ್ರತಿಯೊಂದು ಸ್ಕ್ರೀನ್‌ಗಳಲ್ಲೂ ದಿನಕ್ಕೆ 4 ಶೋ ಸಿನಿಮಾ ಪ್ರದರ್ಶನ ನಡೆಯುತ್ತಿದ್ದವು. ಒಂದು ಸ್ಕ್ರೀನ್‌ನಲ್ಲಿ ದಿನವೊಂದಕ್ಕೆ ಕನಿಷ್ಟ1 ರಿಂದ 2 ಲಕ್ಷ ರೂ. ಕಲೆಕ್ಷನ್‌ ಮಾಮೂಲು. ಸ್ಟಾರ್‌ ಸಿನಿಮಾಗಳಾದರೆ ಇದರ ಪ್ರಮಾಣ ದುಪ್ಪಟ್ಟು. ಹಾಗೆಯೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಇದು ಇನ್ನಷ್ಟುಹೆಚ್ಚೇ ಇರುತ್ತದೆ. ಹಾಗಾಗಿಯೇ ಸ್ಟಾರ್‌ ಸಿನಿಮಾಗಳು ದಿನವೊಂದಕ್ಕೆ ಕೋಟಿಗಳ ಲೆಕ್ಕದಲ್ಲಿ ಕಲೆಕ್ಷನ್‌ ಮಾಡುವುದು ನಿಮಗೂ ಗೊತ್ತು. ಆದರೆ ಕೊರೋನಾ ಪರಿಣಾಮದಿಂದ ಈಗ ಚಿತ್ರಮಂದಿರಗಳು, ಮಾಲ್‌ಗಳು ಫುಲ್‌ ಬಂದ್‌ ಆಗಿವೆ. ಹೆಚ್ಚು ಕಡಿಮೆ ಸಿನಿಮಾ ಕಲೆಕ್ಷನ್‌ನಲ್ಲಿಯೇ ಚಿತ್ರರಂಗಕ್ಕೆ ಹತ್ತಾರು ಕೋಟಿ.ರೂ ನಷ್ಟಆಗಿದೆ. ಇನ್ನಿಲ್ಲವೆಂದರೂ ಒಂದು ವಾರಕ್ಕೆ 10 ಕೋಟಿ ರೂ. ಕಲೆಕ್ಷನ್‌ ನಷ್ಟಈ ವಾರದಲ್ಲಿ ಆಗಿರಬಹುದು ಎನ್ನುತ್ತಾರೆ ಚಿತ್ರಮಂದಿರದ ಮಾಲೀಕ ನರಸಿಂಹಲು.

ಕೊರೋನಾ ಸಂಕಷ್ಟ ದೂರವಾಗಲು ನೆನ​ಪಿ​ರಲಿ ಪ್ರೇಮ್‌ ಉರುಳು ಸೇವೆ

4. ಕಣ್ಣೀರಿನಲ್ಲಿ ಕೈ ತೊಳೆದರು !

ಕಳೆದ ಶುಕ್ರವಾರ ರಿಲೀಸ್‌ ಆದ ಸಿನಿಮಾಗಳ ಕತೆ ಅಧೋಗತಿ. ಈ ಸಿನಿಮಾಗಳ ನಿರ್ಮಾಣಕ್ಕೆ ಬಂಡವಾಳ ಹಾಕಿದವರಿಗೆ ಈಗ ದೇವರೇ ಗತಿ ಎನ್ನುವಂತಾಗಿರುವುದು ದುರಂತ. ಕಳೆದ ವಾರ ಚಂದನವನದಲ್ಲಿ ‘ಶಿವಾರ್ಜುನ’, ‘5 ಅಡಿ 7ಅಂಗುಲ’, ‘ನರಗುಂದ ಬಂಡಾಯ’ಹಾಗೂ ‘ಒಂದು ಶಿಕಾರಿಯ ಕತೆ ’ ಸೇರಿದಂತೆ ಐದು ಚಿತ್ರಗಳು ಬಿಡುಗಡೆ ಆಗಿದ್ದವು. ಇವು ತೆರೆ ಕಂಡ ಮರುದಿನವೇ ಕೊರೋನಾ ವೈರಸ್‌ ಹರಡುವ ಭೀತಿಯ ಪರಿಣಾಮ ಚಿತ್ರಮಂದಿರಗಳು ಹಾಗೂ ಮಾಲ್‌ಗಳು ಬಂದ್‌ ಆದವು. ದುರಾದೃಷ್ಟಎನ್ನುವುದು ಈ ಸಿನಿಮಾಗಳ ನಿರ್ಮಾಪಕರಿಗೆ ಒದ್ದುಕೊಂಡು ಬಂತು. ಆ ಸಿನಿಮಾಗಳ ನಿರ್ಮಾಪಕರು ಕಲೆಕ್ಷನ್‌ ಎನ್ನುವುದನ್ನೆ ಕಂಡಿರಲಿಲ್ಲ. ಆಗಲೇ ಕೊರೋನಾ ಹೊಡೆತ ಬಿತ್ತು. ಇವತ್ತು ಅವರೆಲ್ಲ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಮೇಲ್ನೋಟಕ್ಕೆ ಜನರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಬಂಧಕ್ಕೆ ಬದ್ದರಾಗಲೇ ಬೇಕು ಅಂತ ಅವರು ಹೇಳಿಕೊಂಡರೂ, ಬಡ್ಡಿಗೆ ಹಣ ತಂದು ಸಿನಿಮಾ ಮಾಡಿದ ಅವರಿಗೀಗ ನಿದ್ದೆಯೇ ಇಲ್ಲ.

ಏನ್‌ ಮಾಡೋದು, ಎಲ್ಲರಿಗೂ ಆಗಿದ್ದು ನಮಗೂ ಆಗುತ್ತಿದೆ. ಜನರ ಆರೋಗ್ಯ ಮುಖ್ಯ. ನಾವೇನೋ ಸಿನಿಮಾ ಮಾಡಿ, ಚಿತ್ರಮಂದಿರಕ್ಕೆ ಜನರು ಬರಬೇಕು ಅಂತೀವಿ. ಆದ್ರೆ ಇವತ್ತು ಪರಿಸ್ಥಿತಿ ಹಾಗಿಲ್ಲ. ಬಂದಿದ್ದು ಅನುಭವಿಸಲೇಬೇಕು. -ಶಿವಾರ್ಜುನ್‌, ನಿರ್ಮಾಪಕ

5. ಬಡ್ಡಿಗೆ ಹಣ ತಂದು ಸಿನಿಮಾ ಮಾಡಿದವರ ಕತೆ ಏನು?

ಇವತ್ತು ಕನ್ನಡ ಸಿನಿಮಾಗಳ ನಿರ್ಮಾಣ ಕೋಟಿ , ಕೋಟಿ ರೂ. ಗಳ ಮೇಲಿದೆ. ಸ್ಟಾರ್‌ ಒಬ್ಬರ ಸಿನಿಮಾ ಅಂದ್ರೆ ಹತ್ತಾರು ಕೋಟಿ.ರೂ ಬಂಡವಾಳ ಹೂಡಲೇಬೇಕು. ಇಷ್ಟುಪ್ರಮಾಣದಲ್ಲಿ ಹಣ ಖರ್ಚು ಮಾಡಲು ಕೈ ಹಾಕುವ ನಿರ್ಮಾಪಕರು ಫೈನಾನ್ಸ್‌ಗಳ ಮೊರೆ ಹೋಗುವುದು ಅಷ್ಟೇ ಸಹಜ. ಈಗ ಸಿನಿಮಾ ಮಾಡಿರುವ ಅದೆಷ್ಟೋ ಮಂದಿ ನಿರ್ಮಾಪಕರು ಒಂದಲ್ಲೊಂದು ರೂಪದಲ್ಲಿ ಬಡ್ಡಿಗೆ ಹಣ ತಂದು ಸಿನಿಮಾ ಮೇಲೆ ಹಾಕಿದ್ದಾರೆ. ಅವರಿಗೆಲ್ಲ ತಾವು ನಿರ್ಮಾಣ ಮಾಡುವ ಸಿನಿಮಾ ನಿಗದಿತ ಅವಧಿಗೆ ತಯಾರಾಗಿ ಬಿಡುಗಡೆಯಾಗಲೇಬೇಕು. ಯಾಕಂದ್ರೆ ಅವರು ಬಡ್ಡಿಗೆ ತಂದ ಹಣ ಹಿಂತಿರುಗಿಸುವುದಕ್ಕೆ ಇರುವ ಸೀಮಿತ ಗಡುವು ಅದು. ಒಂದು ವೇಳೆ ಆ ಸಿನಿಮಾ ನಿಗದಿತ ಸಮಯಕ್ಕೆ ರಿಲೀಸ್‌ ಆಗದೆ ಮುಂದಕ್ಕೆ ಹೋದರೆ, ಬಡ್ಡಿ ದುಪ್ಪಟ್ಟು ಆಗುತ್ತದೆ. ಆಮೇಲೆ ಅದನ್ನು ತೀರಿಸುವುದಕ್ಕಾಗಿಯೇ ನಿರ್ಮಾಪಕ ಹೆಣಗಾಡಬೇಕಾಗುತ್ತದೆ. ಈಗ ಇಂತಹ ಸಂಕಷ್ಟದಲ್ಲಿ ಕೊರೋನಾ ವೈರಸ್‌ ಹರಡುವ ಭೀತಿ ಚಿತ್ರೋದ್ಯಮಕ್ಕೆ ಅಪ್ಪಳಿಸಿದೆ. ಸಿನಿಮಾ ರಿಲೀಸ್‌ ದಿನಾಂಕಗಳು ಏರುಪೇರಾಗಿವೆ. ಎಷ್ಟುಜನ ನಿರ್ಮಾಪಕರಿಗೆ ಇದು ಸಂಕಷ್ಟತಂದೊಡ್ಡಿದೆ.