Asianet Suvarna News Asianet Suvarna News

ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಿಸಿದ ಸ್ಟಾರ್ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್!

ದೊಡ್ಡಬಳ್ಳಾಪುರ ಮೂಲದ ಕೆಸಿಎನ್ ಚಂದ್ರಶೇಖರ್ ಅವರದ್ದು ಕೃಷಿ ಕುಟಂಬ. ರೇಷ್ಮೆ ಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದವರು. ಮುಂದೆ ತಮ್ಮ ತಂದೆಯ ಹಾದಿಯನ್ನೇ ಅನುಸರಿಸಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಕೆಸಿಎನ್ ಚಂದ್ರಶೇಖರ್ ಹತ್ತಾರು ಚಿತ್ರಗಳಿಗೆ ನಿರ್ಮಾಣ, ಹಣಕಾಸಿನ ನೆರವು ನೀಡಿದವರು. ಅವರು ಸಹ ನಿರ್ಮಾಪಕರಾಗಿ ಬಂದ ಡಾ ರಾಜ್‌ಕುಮಾರ್ ಅವರ ನಟನೆಯ ‘ಶಂಕರ್‌ಗುರು’ಚಿತ್ರದಿಂದ ಆರಂಭವಾಗಿ, ಪಾಲುದಾರಿಕೆಯಲ್ಲಿ ನಿರ್ಮಿಸಿದ ನಟ ದರ್ಶನ್ ಅಭಿನಯದ ‘ಸಾರಥಿ’ ಚಿತ್ರದವರೆಗೂ ಕೆಸಿಎನ್ ಅವರ ಸಿನಿಮಾ ಪಯಣ ಎವರ್‌ಗ್ರೀನ್ ಹೆಜ್ಜೆಗಳಿಂದ ಕೂಡಿದೆ ಎನ್ನಬಹುದು.

Kannada film actor tribute to producer KCN Chandrashekar vcs
Author
Bangalore, First Published Jun 15, 2021, 3:43 PM IST
  • Facebook
  • Twitter
  • Whatsapp

ಅಪ್ಪನ ಹಾದಿ ತುಳಿದ ಚಂದ್ರಶೇಖರ್

ತಮ್ಮ ತಂದೆ ಕೆಸಿಎನ್ ಗೌಡ ಅವರು ಚಿತ್ರರಂಗಕ್ಕೆ ಬಂದ ಮೇಲೆ ತಂದೆಯ ಹಾದಿಯನ್ನೇ ತುಳಿದ ಚಂದ್ರಶೇಖರ್, ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಚಿಕ್ಕಂದಿನಿಂದಲೂ ಸಿನಿಮಾಗಳ ಬಗ್ಗೆ ಪ್ರೀತಿ ಮತ್ತು ಆಕರ್ಷಣೆ ಇಟ್ಟುಕೊಂಡಿದ್ದ ಕೆಸಿಎನ್ ಆರಂಭದಲ್ಲಿ ಸಹ ನಿರ್ಮಾಪಕರಾದರು. ಆ ನಂತರ ಸ್ವತಂತ್ರವಾಗಿ ನಿರ್ಮಾಣ ಮಾಡುವ ಜತೆಗೆ ಹಲವಾರು ಚಿತ್ರಗಳಿಗೆ -ನಾನ್ಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಬೆನ್ನೆಲುಬಾಗಿ ನಿಂತರು. ಆಗಿನ ಕಾಲಕ್ಕೆ ಕೆಸಿಎನ್ ಚಂದ್ರಶೇಖರ್ ದಿನಕ್ಕೆ ಕನಿಷ್ಠ ಐದು ಚಿತ್ರಗಳಿಗೆ ತಮ್ಮ ಸಂಸ್ಥೆಯಿಂದ -ನಾನ್ಸ್ ನೀಡುತ್ತಿದ್ದ ಖ್ಯಾತಿ ಹೊಂದಿದ್ದರು.

ರಾಜ್‌ಕುಮಾರ್ ಚಿತ್ರದಿಂದ ಪ್ರವೇಶ

ಡಾ. ರಾಜ್‌ಕುಮಾರ್ ನಟನೆಯ ‘ಶಂಕರ್‌ಗುರು’ ಚಿತ್ರಕ್ಕೆ ಸಹ ನಿರ್ಮಾಪಕರಾಗುವ ಮೂಲಕ ನಿರ್ಮಾಣಕ್ಕಿಳಿದ ಕೆಸಿಎನ್ ಅವರು ಮುಂದೆ ‘ಹುಲಿಯ ಹಾಲಿನ ಮೇವು’, ‘ಧರ್ಮ ಯುದ್ಧ’, ‘ಭಕ್ತ eನದೇವ’, ‘ತಾಯಿ’ ಮುಂತಾದ ಚಿತ್ರಗಳಿಗೆ ನಿರ್ಮಾಪಕರಾದರು. ಅಲ್ಲದೆ ‘ಅಂತ’, ‘ಅಜಿತ’, ‘ಇಂದಿನ ಭಾರತ’, ‘ಸ್ನೇಹ ಸಂಬಂಧ’, ‘ಅಸಂಭವ’, ‘ನವಭಾರತ’, ‘ರಾಮರಾಜ್ಯದಲ್ಲಿ ರಾಕ್ಷಸರು’, ‘ಚಂದು’, ‘ಮಸಾಲ’ ಹಾಗೂ ‘ಸಾರಥಿ’ ಮುಂತಾದ ಚಿತ್ರಗಳನ್ನು ಪಾಲುದಾರಿಕೆಯಲ್ಲಿ ನಿರ್ಮಿಸಿದ್ದಾರೆ.

ನಿರ್ಮಾಣ ಸಂಸ್ಥೆಗಳಿಗೂ ಸ್ಟಾರ್ ಪಟ್ಟ

ವಜ್ರೇಶ್ವರಿ ಕಂಬೈನ್ಸ್, ದ್ವಾರಕೀಶ್ ಚಿತ್ರ, ಈಶ್ವರಿ ಪ್ರೊಡಕ್ಷನ್ ಮುಂತಾದವು ಕನ್ನಡದ ಸ್ಟಾರ್ ನಿರ್ಮಾಣ ಸಂಸ್ಥೆಗಳು. ಅವುಗಳ ಸಾಲಿನಲ್ಲಿ ನಿಲ್ಲುವ ಪ್ರಮುಖ ನಿರ್ಮಾಪಕರು ರಾಜ್‌ಕಮಲ್ ಆರ್ಟ್ಸ್‌ನ ಕೆಸಿಎನ್ ಚಂದ್ರಶೇಖರ್.
ಕೆಸಿಎನ್ ಚಂದ್ರಶೇಖರ್ ಸಿನಿಮಾಗಳನ್ನು ನಿರ್ಮಿಸುವ ಮುನ್ನವೇ ಅವರ ತಂದೆ ನಿರ್ಮಾಣದ ‘ಬಂಗಾರದ ಮನುಷ್ಯ’, ‘ಬಭ್ರುವಾಹನ’, ‘ದಾರಿ ತಪ್ಪಿದ ಮಗ’, ‘ಸತ್ಯ ಹರಿಶ್ಚಂದ್ರ’ ಸೇರಿದಂತೆ ಹಲವು ಚಿತ್ರಗಳು ಮೂಡಿ ಬಂದು ಕೆಸಿಎನ್ ಸಂಸ್ಥೆ ಹಾಗೂ ರಾಜ್ ಕಮಲ್ ಆರ್ಟ್ಸ್ ಬ್ಯಾನರ್‌ನ ಜನಪ್ರಿಯತೆ ಹೆಚ್ಚಿಸಿದವು. ಆ ಮೂಲಕ ದಕ್ಷಿಣ ಭಾರತೀಯ ಚಿತ್ರೋದ್ಯಮದಲ್ಲಿ ಬಹು ದೊಡ್ಡ ಛಾಪು ಮೂಡಿಸಿದವರು ಕೆಸಿಎನ್.

ಬಹುಭಾಷಾ ನಿರ್ಮಾಪಕ

ಕೆಸಿಎನ್ ಚಂದ್ರಶೇಖರ್ ಆ ದಿನಗಳಲ್ಲೇ ಬಹುಭಾಷಾ ನಿರ್ಮಾಪಕರಾಗಿ ಗುರುತಿಸಿಕೊಂಡವರು. ಸೂಪರ್‌ಸ್ಟಾರ್ ರಜನಿಕಾಂತ್ ಜತೆಗೆ ಎರಡು ಹಿಂದಿ ಚಿತ್ರಗಳು ಸೇರಿ ತೆಲುಗು ಹಾಗೂ ಬಂಗಾಳಿ ಭಾಷೆಯಲ್ಲಿ ಸಿನಿಮಾ ನಿರ್ಮಿಸಿ ಸೈ ಎನಿಸಿಕೊಂಡಿದ್ದರು. ಒಂದೇ ರೀತಿಯ ಚಿತ್ರಗಳಿಗೆ ಅಂಟಿಕೊಳ್ಳದೆ ಭಕ್ತಿ ಪ್ರಧಾನ, ಸಾಮಾಜಿಕ, ಪೌರಾಣಿಕ, ಕಮರ್ಷಿಯಲ್, ಕಲಾತ್ಮಕ ಹೀಗೆ ಎಲ್ಲ ರೀತಿಯ ಚಿತ್ರಗಳಿಗೂ ನಿರ್ಮಾಣದ ಸಾರಥಿ ಆಗುವ ಮೂಲಕ ವಿಭಿನ್ನ ಚಿತ್ರಗಳ ನಿರ್ಮಾಪಕರಾಗಿದ್ದವರು ಕೆಸಿಎನ್.ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಎಂದೂ ಮರೆಯದ ಹೆಜ್ಜೆಗಳನ್ನು ಮೂಡಿಸಿರುವ ಕೆಸಿಎನ್ ಚಂದ್ರಶೇಖರ್ ನಿರ್ಮಿಸಿದ ಚಿತ್ರಗಳ ಮೂಲಕ ಸದಾ ಜೀವಂತ.

ಕೆಸಿಎನ್ ಚಂದ್ರಶೇಖರ್ ಅವರು ನಿರ್ಮಿಸಿದ ಕಸ್ತೂರಿ ನಿವಾಸ, ದಾರಿ ತಪ್ಪಿದ ಮಗ, ಬಭ್ರುವಾಹನ, ಹುಲಿಯ ಹಾಲಿನ ಮೇವು ಚಿತ್ರಗಳಲ್ಲಿ ಅಪ್ಪಾಜಿ ಅವರು ನಟಿಸಿದ್ದರು. ಕೆಸಿಎನ್ ಚಂದ್ರಶೇಖರ್ ನಮ್ಮ ಕುಟುಂಬಕ್ಕೆ ಆಪ್ತರಾಗಿದ್ದರು. ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ. - ಪುನೀತ್ ರಾಜ್‌ಕುಮಾರ್

ಬಾಲ್ಯದಿಂದಲೂ ನನಗೆ ಕೆಸಿಎನ್ ಚಂದ್ರಶೇಖರ್ ಅಂಕಲ್ ಗೊತ್ತು. ಅವರ ನಿರ್ಮಾಣದ ಸಿನಿಮಾ ಮಾಡಿದ್ದೇನೆ. ಅವರು ತಮ್ಮ ತಾಳ್ಮೆ ಹಾಗೂ ಸಹನೆ ಕಳೆದುಕೊಂಡು ವರ್ತಿಸಿದ್ದನ್ನು ನಾನು ನೋಡಿಲ್ಲ. ಚಿತ್ರರಂಗದ ಪ್ರತಿಯೊಬ್ಬರಿಂದಲೂ ಗೌರವಿಸಲ್ಪಡುತ್ತಿದ್ದ ಅಪರೂಪದ ವ್ಯಕ್ತಿ ಅವರು. ಸೋದರ ಭಾವನೆಯಿಂದ ನಡೆದುಕೊಳ್ಳುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. - ಸುದೀಪ್

ಕನ್ನಡ ಚಿತ್ರರಂಗದ ದಿಗ್ಗಜ ನಿರ್ಮಾಪಕರು ಕೆಸಿಎನ್ ಚಂದ್ರಶೇಖರ್. ಅವರು ಅಗಲಿರುವುದು ದುಃಖದ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.- ದರ್ಶನ್

ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರ ಮತ್ತು ಆತ್ಮೀಯರಾಗಿದ್ದವರು ಕೆಸಿಎನ್ ಚಂದ್ರಶೇಖರ್. ಒಳ್ಳೆಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಿರ್ಮಾಪಕರು. ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ನಷ್ಟ.- ಶಿವರಾಜ್‌ಕುಮಾರ್

ಕೆಸಿಎನ್ ಚಂದ್ರಶೇಖರ್ ಎಂದರೆ ಮೇರು ವ್ಯಕ್ತಿತ್ವ. ಎಲ್ಲರನ್ನು ಜತೆ ಮಾಡಿಕೊಂಡು ಸಾಗುತ್ತಿದ್ದ ವ್ಯಕ್ತಿ. ಅವರು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾಗ ಮೈಸೂರು ದಸರಾ ಮಹೋತ್ಸವಕ್ಕೆ ಇಡೀ ಚಿತ್ರರಂಗವನ್ನು ಜತೆಯಾಗಿ ಕರೆದುಕೊಂಡು ಹೋಗಿದ್ದು ಇನ್ನೂ ನೆನಪಿದೆ. ತಾರತಮ್ಯ ತೋರದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದ ವ್ಯಕ್ತಿ.- ತಾರಾ, ನಟಿ

ನನ್ನ ಮತ್ತು ಕೆಸಿಎನ್ ಚಂದ್ರಶೇಖರ್ ಅವರದ್ದು ೪೦ ವರ್ಷಗಳ ಸ್ನೇಹ. ಅಜಾತ ಶತ್ರು. ಸ್ನೇಹ ಜೀವಿ. ಬೇರೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ನಾನು ಮತ್ತು ಕೆಎಸಿಎನ್ ಪಾಲುದಾರಿಕೆಯಲ್ಲಿ ಸುದೀಪ್ ನಟನೆಯಲ್ಲಿ ‘ಚಂದು’ ಚಿತ್ರವನ್ನು ನಿರ್ಮಿಸಿದ್ದೇವೆ. ಯಾರ ಮೇಲೂ ಜೋರಾಗಿ ಮಾತನಾಡಿದ್ದನ್ನು ನಾನು ನೋಡಲಿಲ್ಲ. ಶ್ರೀಮಂತಿಕೆ ಇದ್ದರೂ ಸರಳವಾಗಿ ಇದ್ದವರು. ಎಲ್ಲರ ಮೆಚ್ಚಿನ ಮತ್ತು ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದರು. - ಸಾ.ರಾ. ಗೋವಿಂದು

ಕನ್ನಡ ಚಿತ್ರರಂಗದ ನಿಜವಾದ ಸಾಧಕರು ಎಂದರೆ ಕೆ ಸಿ ಎನ್ ಚಂದ್ರಶೇಖರ್. ಅವರು ಸಿನಿಮಾ ನಿರ್ಮಾಣಕ್ಕಿಳಿದರೆ ನಾಲ್ಕೈದು ಜನರನ್ನು ಜತೆಗೆ ಸೇರಿಸಿಕೊಳ್ಳುತ್ತಿದ್ದರು. ಸಿನಿಮಾ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಆ ಕಾಲಕ್ಕೆ ತೋರಿಸಿಕೊಟ್ಟವರು. ನನ್ನಂಥವನು ಇವತ್ತು ಚಿತ್ರರಂಗದಲ್ಲಿ ಇದ್ದೇನೆ, ಸಿನಿಮಾ ವ್ಯಾಪಾರ ಮತ್ತು ಸಿನಿಮಾ ನಿರ್ಮಾಣ ಕಲಿತಿದ್ದೇನೆ ಎಂದರೆ ಅದಕ್ಕೆ ಕಾರಣ ಕೆಸಿಎನ್ ಚಂದ್ರಶೇಖರ್. ಅವರು ಕನ್ನಡ ಚಿತ್ರರಂಗದ ವೆರೈಟಿ ಚಿತ್ರಗಳ ನಿರ್ಮಾಪಕರು.- ಎನ್ ಕುಮಾರ್, ನಿರ್ಮಾಪಕರು

ಚಿತ್ರರಂಗದಲ್ಲಿ ಇತಿಹಾಸ ರೂಪಿಸಿದ ನಿರ್ಮಾಪಕರು ನಮ್ಮನ್ನು ಅಗಲಿದ್ದಾರೆ. ಆ ನೋವು, ಅವರಿಲ್ಲ ಎನ್ನುವ ಕೊರತೆಯನ್ನು ಮತ್ತೆ ತುಂಬಲಾಗದು. ಇವತ್ತು ಸಿನಿಮಾ ಮಾಡುತ್ತೇವೆ ಎಂದು ಘೋಷಿಸಿದರೆ ಚಿತ್ರಕ್ಕೆ ಬೇಕಾದ ಬಂಡವಾಳ ಹೂಡಿಕೆ ಆಗುವ ದಾರಿಗಳು ಇವೆ. ಆದರೆ, ಇದ್ಯಾವುದೂ ಇಲ್ಲದಿದ್ದಾಗ ಅಂದರೆ ೬೦-೭೦ ದಶದಲ್ಲಿ ಕೇವಲ ಚಿತ್ರಮಂದಿರಗಳನ್ನೇ ನಂಬಿಕೊಂಡು, ಪ್ರೇಕ್ಷಕರ ಮೇಲೆ ಭರವಸೆ ಇಟ್ಟು ಚಿತ್ರ ಮಾಡಿದವರು. ಎವರ್‌ಗ್ರೀನ್ ಚಿತ್ರಗಳ ನಿರ್ಮಾಪಕ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಇತಿಹಾಸ ಓದಿದರೆ ಅದರಲ್ಲಿ ಕೆಸಿಎನ್ ಚಂದ್ರಶೇಖರ್ ಅವರ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಕಾಣಿಸುತ್ತವೆ. -ಕೆವಿ ಚಂದ್ರಶೇಖರ್, ವಿತರಕ

ಕನ್ನಡ ಚಿತ್ರರಂಗದ ಲೆಜೆಂಡ್ ನಿರ್ಮಾಪಕ ಎಂದರೆ ಕೆಸಿಎನ್ ಚಂದ್ರಶೇಖರ್. ಆಗಿನ ಕಾಲಕ್ಕೆ ಅವರು ನಿರ್ಮಿಸುತ್ತಿದ್ದ ಚಿತ್ರಗಳನ್ನು ಪರಭಾಷೆಯವರು ಕ್ಯೂ ನಿಂತು ತೆಗೆದುಕೊಂಡು ಹೋಗುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಇದ್ದುಕೊಂಡೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಮಟ್ಟಿಗೆ ಸಾಧನೆ ಮಾಡಿದವರು. ಯಾರನ್ನು ಶತ್ರುಗಳನ್ನಾಗಿ ಮಾಡಿಕೊಳ್ಳದ, ಮನುಷ್ಯ ಪ್ರೀತಿಯ ನಿರ್ಮಾಪಕರು. -ಕೆ ಮಂಜು, ನಿರ್ಮಾಪಕ

Follow Us:
Download App:
  • android
  • ios